ಸಿಂದಗಿ- ದೇಶದ ಪ್ರತಿ ಕೃಷಿ ವಿಶ್ವವಿದ್ಯಾಲಯಗಳು ಅನ್ನ ದೇಗುಲವಾಗಿ ಕಾರ್ಯನಿರ್ವಹಿಸುತ್ತಿವೆ. ಈ ದೇಶದಲ್ಲಿ ಕೃಷಿ ಕ್ರಾಂತಿಯಾದಾಗ ಮಾತ್ರ ಭಾರತ ದೇಶ ಅತ್ಯಂತ ಬಲಿಷ್ಠ ರಾಷ್ಟ್ರವಾಗುತ್ತದೆ ಎಂದು ಖ್ಯಾತ ಕೃಷಿ ವಿಜ್ಞಾನಿ ಪದ್ಮಶ್ರೀ ಡಾ. ಎಸ್ ಅಯ್ಯಪ್ಪನ್ ಹೇಳಿದರು.
ಅವರು ಪಟ್ಟಣದ ಸಾರಂಗಮಠ ಪೂಜ್ಯಶ್ರೀ ಚನ್ನವೀರ ಮಹಾಸ್ವಾಮೀಜಿ ಪ್ರತಿಷ್ಠಾನದಿಂದ ದೇಶದ ಶ್ರೇಷ್ಠ ವಿಜ್ಞಾನಿಗಳಿಗೆ ಖ್ಯಾತ ಖಗೋಳ ತಜ್ಞ ಭಾಸ್ಕರಾಚಾರ್ಯರ-2 ಹೆಸರಿನ ಮೇಲೆ ಮಾಡುವ ಭಾಸ್ಕರ ರಾಷ್ಟ್ರೀಯ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.
ಮುಂಬರುವ ದಿನಗಳಲ್ಲಿ ನಮಗೆ ಚಿನ್ನ ಸಿಗುತ್ತದೆ ಹೊರತು ಅನ್ನ ಸಿಗುವುದಿಲ್ಲ.ರೈತರನ್ನು ನಾವು ಯಾವತ್ತೂ ರೈತರೆಂದು ಕರೆಯಬಾರದು ಅವರು ಕೃಷಿ ಋಷಿಗಳಾಗಿದ್ದಾರೆ.
ಕೃಷಿ ಇಲ್ಲದೆ ಬದುಕಿಲ್ಲ ಅನ್ನದಾತ ನಿಲ್ಲದೆ ಜೀವವಿಲ್ಲ. ಸರ್ಕಾರ ಸಮಾಜ ಸಂಘ ಸಂಸ್ಥೆಗಳು ಅನ್ನದಾತನಿಗೆ ಗೌರವವನ್ನು ನೀಡಬೇಕು. ದೇಶದ ಪ್ರಗತಿ ಕೃಷಿ ಮೇಲೆ ಮತ್ತು ಅನ್ನದಾತನ ಮೇಲೆ ಅವಲಂಬಿತವಾಗಿದೆ. ಎಲ್ಲ ಕ್ಷೇತ್ರಗಳಿಗಿಂತ ಕೃಷಿ ಕ್ಷೇತ್ರ ಅತ್ಯಂತ ಪವಿತ್ರವಾಗಿದೆ. ಮಣ್ಣಿನ ವಾಸನೆ ಮಣ್ಣಿನ ಸಂಬಂಧ ಮಣ್ಣಿನ ಸಂಪರ್ಕ ನಮಗೆ ಹೆಚ್ಚಾದಷ್ಟುಬದುಕಿನಲ್ಲಿ ಹೆಚ್ಚು ಅನುಭವ ಮೂಡುತ್ತದೆ. ಮಾಧ್ಯಮ ಮತ್ತು ಸಮೂಹ ಸಂವಹನಗಳು ರೈತರಿಗೆ ಹೆಚ್ಚು ಅನುಕೂಲವನ್ನು ಮಾಡಿಕೊಡುವುದರಿಂದ ಇಂದು ರೈತ ಅತ್ಯಂತ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿದ್ದಾನೆ. ಬರುವ ಬದಲಾವಣೆಯಾಗುತ್ತಿರುವ ವಾತಾವರಣದ ಏರುಪೇರುಗಳ ಮಧ್ಯದಲ್ಲಿ ಅನ್ನದಾತ ಅತ್ಯಂತ ಸಂಕಷ್ಟಕ್ಕೆ ಸಿಲುಕುತ್ತಿದ್ದಾನೆ. ಈ ನಿಮ್ಮ ಮಕ್ಕಳನ್ನು ಹೆಚ್ಚು ಹೆಚ್ಚು ಕೃಷಿ ಜ್ಞಾನ ಮತ್ತು ಆ ಕ್ಷೇತ್ರದ ಕಡೆಗೆ ಕ್ಷೇತ್ರದ ಕಡೆಗೆ ಗಮನಹರಿಸುವಂತೆ ಮಾಡಬೇಕಾಗಿದ್ದು ಅತ್ಯಂತ ಮುಖ್ಯವಾಗಿದೆ ಎಂದರು.
ಈ ವೇಳೆ ಕೊಡಗು ವಿಶ್ವವಿದ್ಯಾಲಯದ ಕುಲಪತಿ ಡಾ. ಅಶೋಕ್ ಆಲೂರ್ ಮಾತನಾಡಿ, ಕೃಷಿ ವಿಜ್ಞಾನಿ ಡಾ. ಎಸ್. ಅಯ್ಯಪ್ಪನ್ ಅವರು ಕೃಷಿ ಕ್ಷೇತ್ರದ ಸದ್ಗುರುವಾಗಿ ಅನೇಕ ರೈತರ ಬಾಳನ್ನ ಬೆಳಗಿ ಮಾರ್ಗದರ್ಶನ ನೀಡಿದವರು. ಈ ಕ್ಷೇತ್ರದಲ್ಲಿ ಅವರು ಪರುಷ ಲೋಹವಾಗಿ ಕಾರ್ಯನಿರ್ವಹಿಸಿದ್ದಾರೆ. ಸಿಂದಗಿ ಸಾರಂಗಮಠ ಅವರನ್ನು ಗುರುತಿಸಿ ಭಾಸ್ಕರ ರಾಷ್ಟ್ರೀಯ ಪ್ರಶಸ್ತಿ ನೀಡುತ್ತಿರುವುದು ಕೃಷಿ ಕ್ಷೇತ್ರದ ದೊಡ್ಡ ಶಕ್ತಿಗೆ ನೀಡಿದಂತಹ ಪ್ರಶಸ್ತಿಯಾಗಿದೆ ಎಂದು ಶ್ಲಾಘಿಸಿದರು.
ಈ ಸಂದರ್ಭದಲ್ಲಿ ವಿಜಯಪುರ ಕೃಷಿ ವಿಶ್ವವಿದ್ಯಾಲಯದ ಡಾ. ಭೀಮಪ್ಪ, ಕೃಷಿ ವಿಜ್ಞಾನಿ ಡಾ. ಎಸ್. ಅಯ್ಯಪ್ಪನ್ ಅವರ ಧರ್ಮಪತ್ನಿ ಉಮಾ ಅಯ್ಯಪ್ಪನ್ ಮಾತನಾಡಿದರು.
ಸಮಾರಂಭದ ಸಾನ್ನಿಧ್ಯ ವಹಿಸಿದ ಡಾ. ಪ್ರಭು ಸಾರಂಗದೇವ ಶಿವಾಚಾರ್ಯರು ಆಶೀರ್ವಚನ ನೀಡಿದರು.
ವೇದಿಕೆ ಮೇಲೆ ಕೊಣ್ಣೂರು ಹೊರಗಿನ ಕಲ್ಯಾಣ ಮಠದ ಡಾ. ವಿಶ್ವ ಪ್ರಭುದೇವ ಶಿವಾಚಾರ್ಯರು, ಕನ್ನೊಳ್ಳಿ ಹಿರೇಮಠದ ಶ್ರೀ ಸಿದ್ದಲಿಂಗ ಶಿವಾಚಾರ್ಯರು, ಶಾಸಕ ಅಶೋಕ್ ಮನಗೂಳಿ, ಮಾಜಿ ಶಾಸಕರಾದ ರಮೇಶ್ ಭೂಸನೂರ್, ಅರುಣ್ ಶಹಾಪುರ್, ಕೃಷಿ ತಜ್ಞ ರಾದ ಡಾ. ರವೀಂದ್ರ ಬೆಳ್ಳಿ, ಡಾ. ಬಿ ಎನ್.ಮೋಟಗಿ, ಡಾ. ಅಶೋಕ್ ಸಜ್ಜನ್, ವಿವೇಕಾನಂದ ಹಿರೇಮಠ, ಸಂಸ್ಥೆಯ ನಿರ್ದೇಶಕರಾದ ಅಶೋಕ್ ವಾರದ್, ಅಶೋಕ್ ಮಸಳಿ, ಗಂಗಾಧರ್ ಜೋಗುರ್ ಹ.ಮ.ಪೂಜಾರಿ, ಡಾ. ಬಿ. ಜಿ. ಮಠ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಡಾ. ರವಿ ಗೋಲಾ ಮತ್ತು ಪೂಜಾ ಹಿರೇಮಠ್ ನಿರೂಪಿಸಿದರು. ಡಾ ಶರಣಬಸವ ಜೋಗುರ್ ಸ್ವಾಗತಿಸಿ ಪ್ರಾಸ್ತಾವಿಕ ವಾಗಿ ಮಾತನಾಡಿದರು.