ಎಲ್ಲದಕ್ಕೂ ಹೂಂ ಎನ್ನುವ ಸ್ವಭಾವ ಬಹಳ ಜನರಲ್ಲಿ ಬೇರೂರಿದೆ. ಹೀಗಾಗಿ ಅವರೆಲ್ಲ ಹೌದಪ್ಪಗಳಾಗಿದ್ದಾರೆ. ಪ್ರತಿಯೊಂದು ಕೆಲಸಕ್ಕೂ ಹೂಂ ಎಂದು ಒತ್ತಡ ಆತಂಕವನ್ನು ಅನಾಯಾಸವಾಗಿ ತಾವೇ ಮೈ ಮೇಲೆ ಎಳೆದುಕೊಳ್ಳುತ್ತಾರೆ. ಯಾವುದಕ್ಕೂ ಇಲ್ಲ ಎಂದು ಹೇಳಿ ರೂಢಿಯೇ ಇಲ್ಲ. ಇಲ್ಲ ಎಂದು ಹೇಳುವುದು ಅಗೌರವ ಎಂದೇ ಭಾವಿಸಿದ್ದೇವೆ. ನನಗೀಗ ತಾವು ಹೇಳಿದ ಕೆಲಸ ಮಾಡಲಾಗುವುದಿಲ್ಲ. ನಾನು ಬೇರೊಂದು ಕಾರ್ಯದಲ್ಲಿ ಮಗ್ನನಾಗಿದ್ದೇನೆ ಎಂದು ಹೇಳಿದರೆ ಎದುರಿಗಿನವರು ನಮ್ಮನ್ನು ತಪ್ಪಾಗಿ ತಿಳಿಯುತ್ತಾರೆಂದು ನಾವೇ ತಪ್ಪಾಗಿ ಅರ್ಥೈಸಿಕೊಂಡು ಬಿಡುತ್ತೇವೆ. ಹೂಂ ಎಂದು ಎಲ್ಲ ಕಾರ್ಯಗಳನ್ನು ಒಪ್ಪಿಕೊಳ್ಳುವುದು ಸೌಜನ್ಯತೆಯ ಲಕ್ಷಣ. ಆಂಗ್ಲ ನುಡಿಯಂತೆ ಸೌಜನ್ಯವು ಶತ್ರುವನ್ನು ಗೆಲ್ಲುತ್ತದೆ ಎಂಬುದೇನೋ ನಿಜ. ಮ್ಯಾಂಟಿಗೋ ಹೇಳುವಂತೆ ಸೌಜನ್ಯಕ್ಕೆ ವೆಚ್ಚವೇನೂ ಹಿಡಿಯುವುದಿಲ್ಲ, ಆದರೆ ಸೌಜನ್ಯವು ಎಲ್ಲವನ್ನೂ ಕೊಂಡುಕೊಳ್ಳುತ್ತದೆಂಬ ಮಾತು ಅಷ್ಟೇ ದಿಟ.
ಅಪಮಾನಕರ ಸಂಗತಿ ಅಲ್ಲ.
ಒಲ್ಲೆ ಬೇಡ ಎಂದು ಹೇಳುವುದು ಅಪಮಾನಕರ ಎಂಬ ಹುರುಳಿಲ್ಲದ ನಂಬಿಕೆಯಲ್ಲಿ ಬಿದ್ದು ನರಳುವವರನ್ನು ನೋಡುತ್ತೇವೆ ಅವರಿಂದ ಪಾಠ ಕಲಿಯದೇ ನಾವೂ ಅದೇ ಬಲೆಯಲ್ಲಿ ಬೀಳಲು ಹವಣಿಸುತ್ತೇವೆ. ದಾಕ್ಷಿಣ್ಯಕ್ಕೆ ಬಿದ್ದು ಬೇಡ ಒಲ್ಲೆ ಎನ್ನದೇ ಒಪ್ಪಿಕೊಂಡ ಸಂಗತಿಗಳು ನುಂಗಲಾರದ ತುತ್ತಾಗಿ ಪರಿಣಮಿಸುತ್ತವೆ. ಎಂಬುದು ಅನುಭವಿಸಿದವರಿಗೆ ಗೊತ್ತು. ಬಲವಂತಕ್ಕೆ ಬಲಿಪಶುಗಳಾಗುವುದಕ್ಕಿಂತ ನಿರ್ದಾಕ್ಷಿಣ್ಯದಿಂದ ಮಾತನಾಡುವುದು ಒಳಿತು. ದಾಕ್ಷಿಣ್ಯಕ್ಕೆ ಒತ್ತು ಕೊಟ್ಟರೆ ಬಲಿಯಾಗುವಿರಿ. ಆಲಿವರ್ ಗೋಲ್ಡ್ ಸ್ಮಿತ್ ಹೇಳಿದಂತೆ ಸಹೃದಯತೆ ಕರುಣೆ ಹೊಂದಿದ ವ್ಯಕ್ತಿಯನ್ನು ಸಮಾಜ ಸದಾ ಗುರುತಿಸುತ್ತದೆ. ಹೀಗಾಗಿ ಸಹೃದಯತೆಯನ್ನು ಮೆರೆಯಿರಿ ಹೊರತು ದಾಕ್ಷಿಣ್ಯದ ಹೊರೆ ಹೊತ್ತು ಬೇಸರಿಸಿಕೊಂಡು, ನಿಮ್ಮ ಮನದ ಪ್ರಶಾಂತತೆಯನ್ನು ಕಳೆದುಕೊಳ್ಳದಿರಿ.
ಹೌದಪ್ಪಗಳಾಗಬೇಡಿ
ಪ್ರತಿಯೊಂದಕ್ಕೂ ಹೂಂ ಎನ್ನುವ ಹೌದು ಎಂದು ಗೋಣು ಅಲ್ಲಾಡಿಸಿ ಹೌದಪ್ಪ (ಎಸ್ ಮ್ಯಾನ್)ಗಳಾಗಲು ಕಾರಣಗಳು ಅನೇಕ. ಅವುಗಳಲ್ಲಿ ಧೈರ್ಯವಿಲ್ಲದಿರುವುದೂ ಒಂದು. ನಮಗ್ಯಾಕೆ ಉಸಾಬರಿ? ಹೂಂ ಎಂದರೆ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡಂತೆ ಎಂಬ ಜಾಯಮಾನ. ಒಲ್ಲೆ ಇಲ್ಲ ಬೇಡ ಎಂದರೆ ಗುಂಪಿನಿಂದ ಹೊರ ಹೋಗಬೇಕಾಗುತ್ತೆ. ಎಲ್ಲರೊಂದಿಗೆ ಗೋವಿಂದ ಅಂದರೆ ಮುಗಿದು ಹೋಯಿತು. ಅತಿ ಮುಖ್ಯ ಕಾರಣವೆಂದರೆ ಎಲ್ಲರಲ್ಲಿಯೂ ತಾನು ವಿಭಿನ್ನ ವಿಶಿಷ್ಟ ಎಂದು ಗುರುತಿಸಿಕೊಳ್ಳಲು ಹೇಳುವ ಎಲ್ಲ ಕೆಲಸಗಳನ್ನು ಒಪ್ಪಿಕೊಳ್ಳುವುದು. ಯಾವ ಕೆಲಸವನ್ನು ಪೂರ್ಣಗೊಳಿಸದೇ ಒದ್ದಾಡುವುದು. ಒಂದು ಸಂಗತಿ ನೆನಪಿರಲಿ ಎಲ್ಲವನ್ನೂ ಮಾಡಲು ಹೋದರೆ ಯಾವುದನ್ನೂ ಪೂರ್ಣ ಮಾಡಲಾಗುವುದಿಲ್ಲ. ಯಶಸ್ವಿ ವ್ಯಕ್ತಿ ಎಂದು ಕರೆಸಿಕೊಳ್ಳಲು ಪ್ರಯತ್ನಿಸಿ ಅಪಮಾನಕ್ಕೀಡಾಗುವ ಪ್ರಸಂಗಗಳೇ ಹೆಚ್ಚಾಗುವವು.ಇಂಥವರನ್ನು ಕಂಡೇ “ಯಶಸ್ವಿಯಾಗಲು ಪ್ರಯತ್ನಿಸಬೇಡಿ, ಅದಕ್ಕೆ ಬದಲು ಮೌಲ್ಯವುಳ್ಳ ಘನತೆ ವ್ಯಕ್ತಿಯಾಗಲು ಪ್ರಯತ್ನಿಸಿ.” ಎಂದು ಅಲ್ಬರ್ಟ್ ಐನ್ ಸ್ಟೀನ್ ಹೇಳಿರಬಹುದು.
ನಯವಾಗಿ ನಿರಾಕರಿಸಿ
ನೀವು ನಿಗದಿತ ಸಮಯದಲ್ಲಿ ಮಾಡಲೇಬೇಕಾದ ಕಾರ್ಯದಲ್ಲಿ ಮಗ್ನರಾದಾಗ ಬೇರೆಯವರು ತಮ್ಮ ಯಾವುದೇ ಕೆಲಸ ಹೇಳಿದರೆ ನನ್ನಿಂದ ಈಗ ತಾವು ಹೇಳಿದ ಕೆಲಸ ಮಾಡಲು ಸಾಧ್ಯವಾಗುವುದಿಲ್ಲವೆಂದು ನಯವಾಗಿ ನಿರಾಕರಿಸಿ. ಊಟ ತಿಂಡಿ ವಿಷಯಗಳಲ್ಲೂ ನಿಮಗೆ ಬಲವಂತ ಮಾಡಿ ಬಡಿಸುವಾಗ, ಮತ್ತಷ್ಟು ತಿನ್ನುವಂತೆ ಒತ್ತಾಯಿಸಿದಾಗ, ಹೊಟ್ಟೆ ತುಂಬಿದೆ ಸಾಕು ಎಂದು ನಿರಾಕರಿಸಿ. ಪಾರ್ಟಿಗಳಲ್ಲಿ ನಿಮ್ಮ ಗೆಳೆಯ/ತಿಯರು ನಿಮ್ಮ ಅಭಿರುಚಿಗೆ ಹೊಂದದ ಆಹಾರಗಳನ್ನು ಪೇಯಗಳನ್ನು ತಿನ್ನಲು ಆಗ್ರಹ ಪಡಿಸಿದರೆ, ನಿರ್ಭಿಡೆಯಿಂದ ನಾನು ಒಲ್ಲೆ ಎಂದು ಹೇಳಿ. ನಿಮ್ಮತನವನ್ನು ಕಾಪಾಡಿಕೊಳ್ಳಿ. ಯಾರದೋ ಇಷ್ಟಕ್ಕೆ ನಿಮ್ಮ ಇಷ್ಟದ ವಿರುದ್ಧ ನಡೆದುಕೊಳ್ಳಬೇಡಿ.
ನಿರ್ದಾಕ್ಷಿಣ್ಯವಾಗಿ ವರ್ತಿಸಿ.
ನೇರ ಮಾತುಗಾರರಿಗೆ ಗೆಳೆಯರು ಕಡಿಮೆ. ನೇರವಾಗಿ ಮುಚ್ಚು ಮರೆಯಿಲ್ಲದೇ ಮಾತನಾಡುವವರಿಂದ ಬಹಳ ಜನ ದೂರವಿರಲು ಬಯಸುತ್ತಾರೆ. ಅವರೊಂದಿಗೆ ಇರುವುದರಿಂದ ಯಾವಾಗ ಮಾನ ಹರಾಜು ಹಾಕುತ್ತಾರೋ ಎನ್ನುವ ಭಯ ಕಾಡುತ್ತದೆ.ಕಡ್ಡಿ ತುಂಡು ಮಾಡಿದಂತೆ ಮಾತನಾಡುವವರೊಂದಿಗೆ ಸ್ನೇಹದ ಹಸ್ತ ಚಾಚುವುದು ವಿರಳ. ನಿದಾಕ್ಷಿಣ್ಯವಾಗಿ ಮಾತನಾಡಿಯೂ ಸ್ನೇಹಿತರನ್ನು ಉಳಿಸಿಕೊಳ್ಳಬಹುದು ಗಳಿಸಿಕೊಳ್ಳಬಹುದು. ಅದು ನೀವು ಉಪಯೋಗಿಸುವ ಪದಗಳು ಮಾತನಾಡುವ ದಾಟಿ ಮತ್ತು ತೋರುವ ಕಾಳಜಿಯ ಮೇಲೆ ಅವಲಂಬಿತವಾಗಿರುತ್ತದೆ.ಇಲ್ಲಿ ಬಹಳ ಮುಖ್ಯವಾದ ವ್ಯತ್ಯಾಸವೆಂದರೆ ಭಾವನಾತ್ಮಕ ವ್ಯತ್ಯಾಸ.
ವರ್ಚಸ್ಸು ಹೆಚ್ಚಿಸಿಕೊಳ್ಳಿ
ಬಂಧು ಬಾಂಧವರಲ್ಲಿ ಸಮಾಜದಲ್ಲಿ ನನ್ನ ವರ್ಚಸ್ಸು ತುಂಬಾ ಚೆನ್ನಾಗಿದೆ. ಯಾರೂ ಯಾವುದೂ ಸಹಾಯ ಕೇಳಿದರೂ ಇಲ್ಲ, ಆಗದು ಎಂದು ಹೇಳಿದರೆ ನನ್ನ ವರ್ಚಸ್ಸಿಗೆ ದಕ್ಕೆ ಬರುತ್ತದೆ. ಇಲ್ಲ ಎಂದು ಹೇಳಿದರೆ ಅವರಿಗೆಲ್ಲ ಅತೃಪ್ತಿಯಾಗುತ್ತದೆ. ಆಗಲ್ಲ ಎಂದರೆ ಅವರಿಗೆ ಕೋಪ ಬರುತ್ತದೆ ಎಂದೆಲ್ಲ ನೀವೇ ಭಾವಿಸಿ ನನ್ನಿಂದಾಗದು, ಇಲ್ಲ ಎಂದು ಮನಸ್ಸು ಕೂಗಿ ಹೇಳಿದರೂ ಅದರ ಮಾತಿಗೆ ಸೊಪ್ಪು ಹಾಕದೇ ಸಂಕೋಚಪಟ್ಟುಕೊಂಡು ಕೋಲೆತ್ತಿನ ತರಹ ಗೋಣು ಹಾಕಿ ಬಿಡುತ್ತೀರಿ. ನಂತರ ನಿನ್ನಿಂದ ಅವರಿಗೆಲ್ಲ ಸಂಪೂರ್ಣ ನೆರವು ಪೂರೈಸಲಾಗದೇ ಗೋಳಾಡುವ ಪ್ರಸಂಗ ಎದುರಾಗುತ್ತದೆ. ಸಹಾಯ ನಿರೀಕ್ಷಿಸಿದವರಿಗೆ ನಿರಾಸೆ ಉಂಟಾಗಿ ನಿಮ್ಮನ್ನು ಹಾಡಿ ಹರಿಸುತ್ತಾರೆ. ಇದೆಲ್ಲಕ್ಕಿಂತ ಇಲ್ಲ- ಆಗದು- ನಾನು ಒಲ್ಲೆ ಎಂದು ನೇರವಾಗಿ ಹೇಳಿದರೆ ನಿಮ್ಮ ವ್ಯಕ್ತಿತ್ವದ ವರ್ಚಸ್ಸು ಇನ್ನಷ್ಟು ಹೆಚ್ಚಾಗುತ್ತದೆ.
ನಿಸ್ಸಂಕೋಚವಾಗಿ ತಿಳಿಸಿ
ಹತ್ತು ಜನರೊಂದಿಗಿದ್ದಾಗ ಅವರ ಹಾಗೆ ನಡೆದುಕೊಳ್ಳದಿದ್ದರೆ ಸಾಮರಸ್ಯತೆ ಇಲ್ಲ ಸಮನ್ವಯತೆ ಕೊರತೆ ಇದೆ ಎಂದುಕೊಳ್ಳುತ್ತಾರೆ ಎಂದು ಅವರ ಮುಲಾಜಿಗೆ ಒಳಗಾಗಿ ಕುಡಿಯುವುದು ತಿನ್ನುವುದು ಸೇದುವುದಕ್ಕೆ ಹೂಂ ಎನ್ನದಿರಿ. ಕೂಡಿ ನಡೆಯುವಾಗ ಬಾಳುವಾಗ ಸಾಮರಸ್ಯತೆ ಸಮನ್ವಯತೆ ಮುಖ್ಯ ನಿಜ. ಹಾಗಂತ ನಿಮ್ಮ ವ್ಯಕ್ತಿತ್ವಕ್ಕೆ ದಕ್ಕೆ ತರುವಂಥ ದುಷ್ಕೃತ್ಯಗಳಿಗೆ ಗಟ್ಟಿಯಾಗಿ ಒಲ್ಲೆ ಎಂದು ಹೇಳಿ. ಇಂಥ ಜನರಿಗೆ ತಪ್ಪು ಅಭಿಪ್ರಾಯಗಳಿಗೆ ಎಡೆ ಮಾಡಿಕೊಡದಂತೆ ಸ್ಪಷ್ಟವಾಗಿ ನಿಸ್ಸಂಕೋಚವಾಗಿ ತಿಳಿಸಿ ಬಿಡಿ. ಇದರಿಂದ ಬೇರೆಯವರೂ ತಮ್ಮ ತಪ್ಪನ್ನು ತಿದ್ದಿಕೊಳ್ಳುವ ಸಾಧ್ಯತೆ ಇದೆ.ಇತರರೊಂದಿಗೆ ಕೆಲಸ ಮಾಡುವಾಗ ಸ್ನೇಹ ಸ್ಪೂರ್ತಿ ಸಮನ್ವಯತೆಗಳಿಂದ ಸೇರಿಕೊಳ್ಳಿ. ನೀವು ಸ್ನೇಹಪರ ಭಾವನೆಗಳನ್ನು ವ್ಯಕ್ತ ಪಡಿಸುವ ರೀತಿಯಲ್ಲಿ ಎದುರಿಗಿನವರು ಅರ್ಥ ಮಾಡಿಕೊಳ್ಳುತ್ತಾರೆ. ಮನೆಯಲ್ಲಿ ನಿಮ್ಮ ಸಹೋದರ/ರಿಗೆ ಚಿಕ್ಕ ಮಕ್ಕಳಿಗೂ ಖಚಿತವಾಗಿ ನಿರ್ದಿಷ್ಟವಾಗಿ ನಿರ್ದಾಕ್ಷಿಣ್ಯವಾಗಿ ಬೇಡ ಎಂದು ಹೇಳಲು ಕಲಿಸಿ ಮಾರ್ಗದರ್ಶನ ನೀಡಿ. ಹೀಗೆ ಕಲಿಸಿಕೊಡುವುದರಿಂದ ಮುಂದಾಗುವ ನೋವುಗಳು ತಪ್ಪುತ್ತವೆ.
ಇಲ್ಲ ಆಗದು ನಾನು ಒಲ್ಲೆ ಎಂದು ಹೇಳದಿರುವುದು ಸಣ್ಣ ತಪ್ಪು ಎಂದು ನಿರ್ಲಕ್ಷಿಸಬೇಡಿ. ದೊಡ್ಡ ಹಡಗನ್ನು ಸಣ್ಣ ರಂಧ್ರವೇ ಮುಳುಗಿಸುತ್ತದೆ. ಬುದ್ಧಿವಂತಿಕೆಯಿದ್ದರೆ ಅಂದುಕೊಂಡದ್ದನ್ನು ಸಾಧಿಸಲು ಸಾಧ್ಯ.ಇತರರು ನಿನಗೆ ಇಲ್ಲ-ಆಗದು ಎಂದು ಹೇಳಿದಾಗಲೂ ಒಪ್ಪಿಕೊಳ್ಳುವ ಗುಣ ಬೆಳೆಸಿಕೊಳ್ಳಿ. ಎಲ್ಲದಕ್ಕೂ ಇಲ್ಲ ಆಗದು ಎಂಬುದನ್ನು ಕಲಿಯಬೇಡಿ.ಇಲ್ಲ ಎಂದು ಹೇಳುವುದು ಮತ್ತು ನಕಾರಾತ್ಮಕವಾಗಿ ಸ್ಪಂದಿಸುವುದು ಎರಡೂ ಒಂದೇ ಅಲ್ಲ ಎಂಬುದು ನೆನಪಿನಲ್ಲಿರಲಿ. ಅಗತ್ಯತೆ ಬಿದ್ದಾಗ ಇತರರ ನೆರವಿಗೆ ದಾವಿಸಿ. ಸಂಕಷ್ಟದಲ್ಲಿರುವವರ ಮೊರೆಗೆ ಕಿವಿಗೊಡುವುದನ್ನು ಮರೆಯದಿರಿ.
ಜಯಶ್ರೀ ಜೆ. ಅಬ್ಬಿಗೇರಿ, ಬೆಳಗಾವಿ