ಬೆಳಗಾವಿ: ಬೆಳಗಾವಿ-ಶಬರಿಮಲೆ ಕೊಲ್ಲಂ ನಡುವೆ ವಿಶೇಷ ರೈಲು ಸಂಚಾರಕ್ಕೆ ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಅವರು ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.
ಸೋಮವಾರ ಡಿ-09 ರಂದು ಬೆಳಗಾವಿ ರೈಲು ನಿಲ್ದಾಣದಲ್ಲಿ ಬೆಳಗಾವಿಯಿಂದ ಶಬರಿಮಲೆಗೆ ತೆರಳುವ ವಿಶೇಷ ರೈಲು ಸಂಚಾರಕ್ಕೆ ಚಾಲನೆ ನೀಡಿ ಮಾತನಾಡಿದ ಸಂಸದ ಈರಣ್ಣ ಕಡಾಡಿ ಅವರು ದೇಶದ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಶಬರಿಮಲೆಗೆ ಕರ್ನಾಟಕದಿಂದ ಪ್ರತಿ ವರ್ಷ ಲಕ್ಷಾಂತರ ಭಕ್ತರು ಯಾತ್ರೆ ಕೈಗೊಳ್ಳುತ್ತಾರೆ. ಜಿಲ್ಲೆಯಿಂದಲೂ ಸುಮಾರು 50 ಸಾವಿರಕ್ಕೂ ಅಧಿಕ ಭಕ್ತರು ಅಯ್ಯಪ್ಪ ದರ್ಶನಕ್ಕೆ ಹೋಗುತ್ತಿದ್ದಾರೆ. ಅಯ್ಯಪ್ಪ ಸ್ವಾಮಿ ಭಕ್ತರ ಅನುಕೂಲಕ್ಕಾಗಿ ಈ ವಿಶೇಷ ರೈಲು ವಾರಕ್ಕೊಮ್ಮೆ ಜನವರಿ 13, 2025 ರವರೆಗೆ ಸಂಚರಿಸಲಿದೆ. ಶಬರಿಮಲೆಗೆ ಪ್ರಯಾಣಿಸುವ ಜಿಲ್ಲೆಯ ಯಾತ್ರಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಬೆಳಗಾವಿ ರೈಲ್ವೇ ಸ್ಟೇಷನ್ ಮಾಸ್ಟರ್ ದಶರಥ ಕುಮಾರ, ಉಪ ರೈಲ್ವೆ ನಿಲ್ದಾಣ ವ್ಯವಸ್ಥಾಪಕ ಅವರಾದಕರ, ರೈಲ್ವೆ ವಾಣಿಜ್ಯ ನೀರಿಕ್ಷಕ ಅಭಿನವ ಕುಮಾರ ಸೇರಿದಂತೆ ಶಬರಿಮಲೆಗೆ ಪ್ರಯಾಣಿಸುವ ಬೆಳಗಾವಿ ಹಾಗೂ ಸುತ್ತಮುತ್ತಲಿನ ಜಿಲ್ಲೆಯ ಯಾತ್ರಾರ್ಥಿಗಳು ಉಪಸ್ಥಿತರಿದ್ದರು.