spot_img
spot_img

ವಿಮರ್ಶೆ ; ಹಾಸನದಲ್ಲಿ ಶಿವ ಸಂಚಾರ ತಂಡದ ಬಂಗಾರದ ಮನುಷ್ಯ ನಾಟಕ

Must Read

- Advertisement -

ಹಾಸನದ ಶ್ರೀ ಬಸವೇಶ್ವರ ಕಲ್ಯಾಣ ಮಂಟಪದ ಹೊರ ಆವರಣದಲ್ಲಿ ಶಿವಶಂಚಾರ ತಂಡದಿಂದ ಶನಿವಾರ ಪ್ರದರ್ಶಿತವಾದ ಬಂಗಾರದ ಮನುಷ್ಯ ನಾಟಕ ಹಲವು ಆಯಾಮಗಳಿಂದ ಗಮನ ಸೆಳೆಯಿತು. ಪ್ರಸಿದ್ದ ಕಾದಂಬರಿಕಾರ ಟಿ.ಕೆ.ರಾಮರಾವ್ ಕಾದಂಬರಿ ಆಧಾರಿತ ಬಂಗಾರದ ಮನುಷ್ಯ ಒಂದು ಕಾಲಘಟ್ಟದಲ್ಲಿ ಸಾರ್ವತ್ರಿಕವಾಗಿ ಮೆಚ್ಚುಗೆ ಗಳಿಸಿದ ಚಲನಚಿತ್ರ. ಗ್ರಾಮ್ಯ ಬದುಕಿನ ಮತ್ತು ಮಾನವ ಸಂಬಂಧಗಳ ಸೊಗಸಾದ ಚಿತ್ರಣದ ಈ ಚಿತ್ರ ಡಾ. ರಾಜಕುಮಾರ್ ಅವರಿಗೆ ಅಪಾರ ಜನಪ್ರಿಯತೆ ತಂದುಕೊಟ್ಟಿತ್ತಲ್ಲದೇ ಬೆಂಗಳೂರಿನ ಸ್ಟೇಟ್ಸ್ ಚಿತ್ರಮಂದಿರದಲ್ಲಿ ಒಂದು ವರ್ಷಕ್ಕೂ ಹೆಚ್ಚು ದಿನ ಓಡಿ ಕನ್ನಡ ಚಿತ್ರರಂಗದಲ್ಲಿ ಅಪೂರ್ವ ದಾಖಲೆ ನಿರ್ಮಿಸಿತು.

ಸಾಮಾಜಿವಾಗಿಯೂ ಚಿತ್ರ ರೋಲ್ ಮಾಡಲ್ ಆಗಿ ಪ್ರಭಾವ ಬೀರಿತ್ತು. ಓದಿ ವಿದ್ಯಾವಂತರಾದವರು ಪಟ್ಟಣದಿಂದ ಹಳ್ಳಿಗೆ ಮರಳಿ ವ್ಯವಸಾಯ ಕಾಯಕದಲ್ಲಿ ಪ್ರಗತಿ ಸಾಧಿಸಿದ ಹಲವು ರೈತ ಮಕ್ಕಳಿಗೆ ಇದು ಮಾರ್ಗದರ್ಶಿಯೂ ಹೌದು. ಸಿದ್ದಲಿಂಗಯ್ಯ ನಿರ್ದೇಶನದ ಈ ಚಿತ್ರದಲ್ಲಿ ರಾಜಕುಮಾರ್ ರೈಲಿನಿಂದ ಇಳಿದು ಊರಿನತ್ತ ಬರುವಾಗ ನಗುನಗುತಾ ನಲಿ ಏನೇ ಆಗಲಿ.. ಎಂದು ಪ್ರಾರಂಭವಾಗುವ ಈ ಹಾಡು ದೃಶ್ಯ ಎಷ್ಟು ಸಾರಿ ನೋಡಿದರೂ ಕೇಳಿದರೂ ಬೇಸರವಾಗುವುದಿಲ್ಲ. ಎಂತಹ ಅರ್ಥಪೂರ್ಣ ಹಾಡಿದು! ಏರುಪೇರಿನ ಜೊತೆಯಲ್ಲಿ ಜೀವನ..ಹಾಡಿನ ಎಳೆ ಹಿಡಿದು ಸಿನಿಮಾ ಸಾಗಿದಂತೆ ನಾಟಕವೂ ಇದೇ ಹಾಡಿನೊಂದಿಗೆ ಪ್ರಾರಂಭವಾಗುತ್ತದೆ.
ಭಾರತ ಕೃಷಿ ಪ್ರಧಾನ ದೇಶ. ಆ ಕಾಲಕ್ಕೆ ಶೇ.೭೦ರಷ್ಟು ಕೃಷಿಕರ ದೇಶವೆಂದು ಪಠ್ಯದಲ್ಲಿ ಓದಿದ್ದೆವು.

ಒಕ್ಕಲಿಗೆ ಒಕ್ಕದಿರೆ ಜಗವೆಲ್ಲ ಬಿಕ್ಕುವುದು ಎಂದಿದ್ದಾನೆ ಸರ್ವಜ್ಞ. ಪದವಿ ಪಡೆದು ರಾಜೀವ ಊರಿಗೆ ಮರಳಿದರೆ ಅಲ್ಲಿ ಬಾವ ತೀರಿಕೊಂಡಿದ್ದಾನೆ. ಅಕ್ಕನ ಸಂಕಷ್ಟಕ್ಕೆ ಮರುಗಿ ರಾಜೀವ ತಾನೇ ಮನೆಯ ಜವಾಬ್ದಾರಿ ಹೊರುತ್ತಾನೆ. ಜೀವನೋಪಾಯಕ್ಕೆ ಕೃಷಿ ಕಾಯಕಕ್ಕೆ ಇಳಿಯುತ್ತಾನೆ. ವಾರಕ್ಕೆ ಭಾವ ಕೊಟ್ಟಿದ್ದ ೨ ಎಕರೆ ಭೂಮಿಯನ್ನು ಹೊನ್ನನಿಂದ ಬಲವಂತವಾಗಿ ಬಿಡಿಸಿಕೊಡುವಲ್ಲಿ ಹೊಡೆದಾಟ ದೃಶ್ಯವು ನಾಟಕದಲ್ಲಿ ಬರುತ್ತದೆ. ನೇಗಿಲು ಹಿಡಿದು ಎಂದೂ ಉತ್ತು ಬಿತ್ತಿ ಬೆಳೆಯದವನು ಮಂಟಿ ಭೂಮಿಯನ್ನು ರಾಚೂಟಪ್ಪನಿಂದ ಸಾಲ ಮಾಡಿ ಖರೀದಿಸಿ ಫಲವತ್ತಾದ ಹಸಿರು ಭೂಮಿಯಾಗಿಸಿ ಬಿತ್ತಿ ಬೆಳೆದು ಅಕ್ಕನ ಇಬ್ಬರು ಗಂಡು ಮಕ್ಕಳ ಓದಿಗೆ ನೆರವಾಗಿ ಅವರ ಬದುಕಿನ ದಡ ಸೇರಿಸುತ್ತಾನೆ. ನಗರದಿಂದ ಹಳ್ಳಿಗೆ ಬಂದು ನೆಲೆಯೂರುವ ರಾಜೀವ ಮಾದರಿ ರೈತನಾಗಿ ಗುರುತಿಸಿಕೊಂಡರೆ ಹಳ್ಳಿ ಹುಡುಗ ಕೇಶವ ಪಟ್ಟಣ ಸೇರಿ ಕೆಟ್ಟು ಶೋಕಿಗೆ ಬೀಳುತ್ತಾನೆ. ಈ ನಡುವೆ ರಾಜೀವನ ಮದುವೆಯೂ ಒಂದು ಸೆಸ್ಪನ್ಸ್ ಆಗಿರುತ್ತದೆ. ನಾನು ವಿದ್ಯಾರ್ಥಿ ದಿನಗಳಲ್ಲಿ ಟಿ.ಕೆ.ರಾಮರಾವ್ ಅವರ ಕಾದಂಬರಿ ಓದಿ ಪ್ರಭಾವಿತನಾಗಿದ್ದೆ. ಸಸ್ಪೆನ್ಸ್ ಅವರ ಕಾದಂಬರಿಗಳ ವಿಶೇಷವಾಗಿ ಕುತೂಹಲಭರಿತವಾಗಿ ಓದಿಸಿಕೊಳ್ಳುತ್ತಿದ್ದವು.

- Advertisement -

ರಾಜೀವ ತನ್ನ ಅಕ್ಕನ ಮಕ್ಕಳ ಓದು ಮುಗಿದು ಉದ್ಯೋಗ ಹಿಡಿಯುವ ಹೊತ್ತಿಗೆ ತನ್ನ ಮದುವೆಯನ್ನು ಮುಗಿಸಿಕೊಂಡು   ಬಂದು ಮೂವರ ಮದುವೆ ಒಟ್ಟಿಗೆ ನಡೆಯುತ್ತದೆ. ಕೇಶವನ ಪತ್ತೇದಾರಿಕೆಯಲ್ಲಿ ಮನೆಯಲ್ಲಿ ಸ್ಫೋಟಗೊಳ್ಳುವ ಮತ್ತೊಂದು ಹೆಣ್ಣು ರಾಜೀವನ ಹೆಂಡತಿಯೇ..? ಎಂಬ ರಹಸ್ಯ ಕಡೆಯಲ್ಲಿ ಬಯಲಾಗುವ ಹೊತ್ತಿಗೆ ತ್ಯಾಗ ಜೀವಿ ರಾಜೀವನ ಜೀವನ ದುರಂತಕ್ಕೆ ತಲುಪಿರುತ್ತದೆ. ರಾಜೀವ ತನ್ನದಲ್ಲದ ಮನೆ, ಜಮೀನು ತೊರೆದು ಊರು ತೊರೆದು ಎಲ್ಲಿಗೋ ಹೋಗುವಲ್ಲಿ ನಾಟಕವೂ ದುಖಾಂತ್ಯದೊಂದಿಗೆ ಸಮಾಪ್ತಿಯಾಗುತ್ತದೆ. ಒಂದು ಆದರ್ಶ ಪಾತ್ರದ ಒಳ್ಳೆಯತನಕ್ಕೆ ಪ್ರೇಕ್ಷಕ ಒಂದು ತೊಟ್ಟು ಕಣ್ಣೀರು ಹರಿಸಿ ಉತ್ತಮ ಪ್ರಯೋಗಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಾನೆ. ಬಂಗಾರದ ಮನುಷ್ಯ ಸಿನಿಮಾ ನೋಡಿದವರಿಗೆ ಮತ್ತೇ ಕಥೆಯನ್ನು ವಿಸ್ತರಿಸುವ ಅಗತ್ಯವಿಲ್ಲವೆನಿಸುತ್ತದೆ. ನೋಡದಿರುವ ಈಗಿನ ಯುವಕರು ಈಗಲೂ ಯೂಟ್ಯೂಬ್‌ನಲ್ಲಿ ನೋಡಿ ನಿಮಗೆ ಈ ಚಿತ್ರ ಬದುಕಿಗೆ ಮಾರ್ಗದರ್ಶಿಯಂತು ಹೌದು. ನಿಮಗೆ ಆಸ್ತಿಯಾಗಿ ಜಮೀನು ಇದ್ದರೆ ಅತ್ತ ಗಮನಹರಿಸಿ. ಏಕೆಂದರೆ ನಾವು ಕಳೆದುಕೊಂಡವರು.

ಇತ್ತ ಕಾದಂಬರಿಯೊಂದು ಸಿನಿಮವಾಗಿ ಜನಮನ್ನಣೆ ಗಳಿಸಿದ್ದರಲ್ಲಿ ಬಂಗಾರದ ಮನುಷ್ಯ ಅಂದು ಯುವಕರಿಗೆ ರೋಲ್ ಮಾಡಲ್ ಆಗಿತ್ತು. ಪಿ.ಬಿ.ಧುತ್ತರಗಿ ಅವರ ಜನಪ್ರಿಯ ಕಂಪನಿ ನಾಟಕ ಸಂಪತ್ತಿಗೆ ಸವಾಲ್ ಒಂದು ಯಶಸ್ವಿ ಸಿನಿಮವಾಗಿ ಯಶಸ್ತು ಕಂಡಿದೆ. ಇಲ್ಲಿ ಕಾದಂಬರಿಯನ್ನು ಪತ್ರಕರ್ತ ಗಣೇಶ ಅಮೀನಗಡ ರಂಗ ರೂಪಾಂತಾರ ಮಾಡಿದ್ದರೆ ಸಿನಿಮಾ ಕಾದಂಬರಿ ಎರಡನ್ನೂ ಒಳಗೊಂಡು ಒಂದು ಮಾದರಿ ನಾಟಕವಾಗಿ ನಿರ್ದೇಶಿಸಿದ್ದಾರೆ ವೈ.ಡಿ.ಬದಾಮಿಯವರು. ರಾಜೀವನ ಪಾತ್ರ ನಿರ್ವಹಿಸಿದ ಶಿವಮೊಗ್ಗ ಜಿಲ್ಲೆಯ ಕುಂಚೇನಹಳ್ಳಿ ತಾಂಡದ ದಿನೇಶ್ ನಾಯ್ಕ ಜಿ. ಅವರಿಗೆ ರಾಜಕುಮಾರ ಅವರ ಅಭಿನಯ ಅನುಕರಣೆಯೇ ರೋಲ್ ಮಾಡಲ್. ರಾಜಕುಮಾರ ಪ್ರಭಾವದಲ್ಲೇ ಪಾತ್ರವನ್ನು ನಿಭಾಯಿಸುವ ಇವರು ಕಡೆಯಲ್ಲಿ ರಾಜೀವ ಊಟ ಮಾಡುವಾಗ ಕೇಶವ (ಕೊಪ್ಪಳ ಜಿಲ್ಲೆಯ ಸಂತೋಷ್ ಮೋಹನ್ ಕಲಾಲ್) ಆಸ್ತಿಯಲ್ಲಿ ಪಾಲು ಕೇಳಿ ರಾಜೀವನನ್ನು ಅವಮಾನಿಸುವಾಗಿನ ದೃಶ್ಯದಲ್ಲಿ ನಾಯ್ಕರ ಭಾವಾಭಿನಯ ರಾಜಕುಮಾರ್ ನೆನಪಿಸುತ್ತದೆ. ಬಂಗಾರದ ಮನುಷ್ಯ ಸಿನಿಮಾ ಹಾಡುಗಳು ಸಂದರ್ಭೋಚಿತವಾಗಿ ನಾಟಕಕ್ಕೆ ಬಳಕೆಯಾಗಿ ನಾಟಕಕ್ಕೆ ಲವಲವಿಕೆ ತುಂಬಿ ಹಾಡು ನೃತ್ಯ ರಂಜಿಸುತ್ತವೆ. ಬಾಳ ಬಂಗಾರ ನೀನು.. ಹಾಡು ಇಲ್ಲಿ ಸಮೂಹ ನೃತ್ಯ ಮತ್ತು ಪ್ರೇಮದ ಸೆಳತ ಎರಡೂ ಆಗಿ ಮೂಡಿಬಂದರೆ ಆಹಾ ಮೈಸೂರು ಮಲ್ಲಿಗೆ.. ಹಾಡು ಜಾತ್ರೆ ವೈಭವ, ಸಮೂಹ ಅಭಿನಯದಲ್ಲಿ ದೋಣಿ ನಡೆಸುವ ದೃಶ್ಯ ಪ್ರೇಕ್ಷಕರ ಚಪ್ಪಾಳೆಗೆ ಪಾತ್ರವಾಗುತ್ತದೆ. ಬಂಗಾರದ ಮನುಷ್ಯ ಚಿತ್ರದ ರಾಜೀವಪ್ಪನ ಪಾತ್ರ ವಜ್ರಮುನಿಯ ನಿಂದಿಸುವ ಹಂಗಿನ ಮಾತಿಗೆ ನೊಂದು ಚಪ್ಪಲಿಯನ್ನು ಅಲ್ಲಿಯೇ ಬಿಟ್ಟು ಎಲ್ಲಿಗೋ ಹೋಗುವ ದೃಶ್ಯ ಪ್ರೇಕ್ಷಕರ ಮನಕಲಕಿದರೆ ನಾಟಕದಲ್ಲಿ ರಾಜೀವನ ಅಣ್ಣ ರಾಮಚಂದ್ರ (ಗದಗ ಜಿಲ್ಲೆಯ ಭಾಸ್ಕರ್ ಹಿತ್ತಲಮನಿ) ಬಾವ ಸತ್ತಾಗ ಹೆಂಡತಿಯ ವಕ್ರಬುದ್ಧಿಗೆ ಅಕ್ಕ ಶಾರದ (ಮಂಡ್ಯ ಜಿಲ್ಲೆಯ ಭಾಗ್ಯಮ್ಮ) ಕಷ್ಟಕ್ಕೆ ನೆರವಾಗದನು, ಶಾರದ ಅಣ್ಣನ ಮನೆಗೆ ಬಂದಾಗ ಅತ್ತಿಗೆ ಛಾಯ (ಹಾವೇರಿಯ ನಾಗರತ್ನ ಚೆನ್ನಯ್ಯ ಹಿರೇಮಠ್) ಅನ್ನವನ್ನು ಹಾಕದೇ ಕಳುಹಿಸಿದವಳು ಇಬ್ಬರೂ ಮುಂದೆ ಅದೇ ಅಕ್ಕನ ಮಗ ಕೇಶವನಿಗೆ ಮಗಳನ್ನು ಕೊಡಲು ಬಂದು ಅಣ್ಣನಾಗಿ ರಾಮಚಂದ್ರ ತಮ್ಮ ರಾಜೀವನ ಕಾಲಿಗೆ ಬಿದ್ದು ಅಂಗಲಾಚುವ ದೃಶ್ಯ ಮನಕಲಕುತ್ತದೆ. ಮೇಲೆ ಹೋದವರು ಕೆಳಗೆ ಇಳಿಯಬೇಕು ಅಹಂ ಅಹಂಕಾರ ಎಂದಿಗೂ ಒಳಿತಲ್ಲ ಎಂದು ಸಾಂಕೇತಿಸಿದೆ. ಅಂದು ಸಾಲ ಕೊಟ್ಟವರು ಯಾವ ರೀತಿ ಕಾಡಿಸಿ ಪೀಡಿಸಿ ಆಸ್ತಿ ಬರೆಸಿಕೊಂಡು ಊರ ಜನರ ಕೆಂಗಣ್ಣಿಗೆ ಗುರಿಯಾಗಿ ಸತ್ತಾಗ ಹೊರಲು ನಾಲ್ಕು ಜನ ಬಾರದ ದೃಶ್ಯ ಭೂತಯ್ಯನ ಮಗ ಅಯ್ಯುನಲ್ಲಿ ಕಾಣುತ್ತೇವೆ. ಇದು ಕೂಡ ಸಿದ್ಧಲಿಂಗಯ್ಯನವರ ನಿರ್ದೇಶನದ ಚಿತ್ರವೇ. ಇಲ್ಲಿ ರಾಜೀವನಿಗೆ ಸಾಲ ಕೊಟ್ಟ ರಾಚೂಟಪ್ಪ (ಹಾವೇರಿಯ ಆಕಾಶ ಜಿ) ಊರಿನ ಮಾದರಿ ಸಾಹುಕಾರನಾಗಿ ಗೋಚರಿಸಿದರೆ ಭೂತಯ್ಯ ಹೆಮ್ಮಾರಿಯಾಗಿ ಕಾಣುತ್ತಾನೆ. ಹಾಸನ ತಾ. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷ ಕಟ್ಟಾಯ ಶಿವಕುಮಾರ್ ಮತ್ತು ಎಲ್ಲಾ ಮುಖಂಡರು ಹಾಸನಕ್ಕೆ ಶಿವಸಂಚಾರ ತಂಡ ಕರೆಸಿ ಪ್ರೇಕ್ಷಕರಿಗೆ ಉತ್ತಮ ನಾಟಕ ತೋರಿಸಿದ್ದು ಶ್ಲಾಘನೀಯ.

ಗೊರೂರು ಅನಂತರಾಜು, ಹಾಸನ.
ಮೊ: ೯೪೪೯೪೬೨೮೭೯.
ವಿಳಾಸ: ಹುಣಸಿನಕೆರೆ ಬಡಾವಣೆ, ೨೯ನೇ ವಾರ್ಡ್, ೩ನೇ ಕ್ರಾಸ್, ಹಾಸನ-೫೭೩೨೦೧.

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ 

  ಧನಕನಕ‌ ನವರತ್ನ ನಿನ್ನೊಡವೆಯಲ್ಲಬಿಡು ನಿನ್ನೊಡವೆಯೆಂಬುವುದು ಜ್ಞಾನರತ್ನ ಈ ರತ್ನ ಧರಿಸಿದೊಡೆ ಲೋಕದಲಿ‌ ನಿನಗಿಂತ ಸಿರಿವಂತರಾರಿಲ್ಲ - ಎಮ್ಮೆತಮ್ಮ ||೧೩೧|| ಶಬ್ಧಾರ್ಥ ಧನಕನಕ = ಹಣ ಬಂಗಾರ. ನವರತ್ನ = ಒಂಬತ್ತು ಹರಳು ತಾತ್ಪರ್ಯ ಗಳಿಸಿರುವ ಹಣ‌...
- Advertisement -

More Articles Like This

- Advertisement -
close
error: Content is protected !!
Join WhatsApp Group