ಧನಕನಕ ನವರತ್ನ ನಿನ್ನೊಡವೆಯಲ್ಲಬಿಡು
ನಿನ್ನೊಡವೆಯೆಂಬುವುದು ಜ್ಞಾನರತ್ನ
ಈ ರತ್ನ ಧರಿಸಿದೊಡೆ ಲೋಕದಲಿ ನಿನಗಿಂತ
ಸಿರಿವಂತರಾರಿಲ್ಲ – ಎಮ್ಮೆತಮ್ಮ ||೧೩೧||
ಶಬ್ಧಾರ್ಥ
ಧನಕನಕ = ಹಣ ಬಂಗಾರ. ನವರತ್ನ = ಒಂಬತ್ತು ಹರಳು
ತಾತ್ಪರ್ಯ
ಗಳಿಸಿರುವ ಹಣ ಬಂಗಾರ ವಜ್ರವೈಢೂರ್ಯ ಮುಂತಾದ
ಬೆಲೆ ಬಾಳುವ ಹರಳುಗಳು ನಿನ್ನ ನಿಜವಾದ ಅಲಂಕಾರದ
ಒಡವೆಗಳಲ್ಲ. ನಿನ್ನ ನಿಜವಾದ ಒಡವೆ ಜ್ಞಾನರತ್ನ. ಅದನ್ನು
ಪಡೆದುಕೊಂಡರೆ ಮತ್ತೆ ಬೇರೆ ಒಡವೆಗಳ ಅವಶ್ಯಕತೆಯಿಲ್ಲ.
ಅದುವೆ ನಿಜವಾದ ರತ್ನ. ನಹಿ ಜ್ಞಾನೇನ ಸದೃಶ್ಯಂ ಎಂದು
ಗೀತೆಯಲ್ಲಿ ಹೇಳಲಾಗಿದೆ. ಅಂದರೆ ಜ್ಞಾನಕ್ಕೆ ಸಮವಾದುದು ಜಗತ್ತಿನಲ್ಲಿ ಬೇರೊಂದಿಲ್ಲ. ಜ್ಞಾನವೆಂದರೆ ಪುಸ್ತಕದಲ್ಲಿರುವ
ವಿಷಯವಲ್ಲ. ನಿನ್ನ ಆತ್ಮಜ್ಞಾನವೆ ನಿಜವಾದ ಜ್ಞಾನ. ಅಂಥ
ಜ್ಞಾನವನ್ನು ಪಡೆದುಕೊಂಡರೆ ನಿನಗಿಂತ ಸಿರಿವಂತರು
ಜಗತ್ತಿನಲ್ಲಿ ಯಾರು ಇಲ್ಲ. ಅದಕ್ಕೆ ಸರ್ವಜ್ಞ ಹೀಗೆ ಹೇಳಿದ್ದಾನೆ.
ಜ್ಞಾನದಿಂದಲಿ ಇಹವು| ಜ್ಞಾನದಿಂದಲಿ ಪರವು|ಜ್ಞಾನವಿಲ್ಲದಲೆ ಸಕಲವೂ ತನಗಿದ್ದು| ಹಾನಿ ಕಾಣಯ್ಯ ಸರ್ವಜ್ಞ|| ಜ್ಞಾನದಿಂದ
ಇಹಪರದಲ್ಲಿ ಸುಖ ಸಕಲ ಸಂಪತ್ತು ಮತ್ತು ಅದಿಲ್ಲದಿದ್ದರೆ
ಬೇರೆ ಸಂಪತ್ತು ಇದ್ದರೂ ಹಾನಿಕರ ಎಂಬುದು ಆತನ ವಾದ.
ಜ್ಞಾನಕ್ಕಿಂತ ಮೇಲು ಮತ್ತೊಂದಿಲ್ಲ.ಆ ಜ್ಞಾನವೇ ಮೇಲಾದುದು.
ಅಂಥ ಜ್ಞಾನವನ್ನು ಗಳಿಸಿಕೊಂಡ ಮಹಾಜ್ಞಾನಿ ಧನಿಕಗಿಂತಲು ಮೇಲು. ಅಲ್ಲಮ ಪ್ರಭುಗಳು ಹೀಗೆ ಹೇಳುತ್ತಾರೆ.ನಿನ್ನ ಒಡವೆ ಎಂಬುದು ಜ್ಞಾನರತ್ನ. ಅಂತಪ್ಪ ದಿವ್ಯರತ್ನವ ಕೆಡಗುಡದೆ ಆ ರತ್ನವ ನೀನು ಅಲಂಕರಿಸಿದೆಯಾದಡೆ ನಿನ್ನಿಂದ ಬಿಟ್ಟು ಸಿರಿವಂತರಿಲ್ಲ .
ರಚನೆ ಮತ್ತ ವಿವರಣೆ
ಎನ್.ಶರಣಪ್ಪ ಮೆಟ್ರಿ
ಮೊ: 9449030990