ಮೂಡಲಗಿ:ಯುವಕರು ದೇಶದ ಪ್ರಗತಿಯಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತಾರೆ. ಯುವಜನಾಂಗವನ್ನು ಯಾವುದೇ ದೇಶದ ಶಕ್ತಿಯ ಮೂಲವಾಗಿ ಪರಿಗಣಿಸಲಾಗುತ್ತದೆ. ಅವರು ನವೀನ ಆಲೋಚನೆಗಳು, ಶ್ರೇಷ್ಠ ಸಾಮರ್ಥ್ಯಗಳು ಮತ್ತು ನಿರ್ಣಾಯಕ ಕಾರ್ಯಾಚರಣೆಯೊಂದಿಗೆ ಸಮಾಜದ ಆರ್ಥಿಕ, ಸಾಮಾಜಿಕ, ಮತ್ತು ರಾಜಕೀಯ ವ್ಯವಹಾರಗಳಲ್ಲಿ ಮಹತ್ವದ ಬದಲಾವಣೆಗಳನ್ನು ತರಲು ಸಿದ್ಧರಾಗಿರುತ್ತಾರೆ. ಯಾವ ವ್ಯಕ್ತಿ ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢನಾಗಿರುತ್ತಾನೆಯೋ ಅವನು ತನ್ನ ನಿರ್ಭಿತ ನಡೆಯಿಂದ ಏನು ಬೇಕಾದದ್ದನ್ನು ಸಾಧಿಸಬಹುದು. ಏಕೆಂದರೆ ಸದೃಢವಾದ ದೇಹದಲ್ಲಿ, ಸದೃಢವಾದ ಮನಸ್ಸಿರುತ್ತದೆ ಎಂಬ ಮಾತು ಸತ್ಯ ಎಂದು ರಮೇಶ ಎಸ್. ಬಿರಾದಾರ ಹೇಳಿದರು.
ತಾಲೂಕಿನ ಕಮಲದಿನ್ನಿ ಗ್ರಾಮದಲ್ಲಿ ವಿಶೇಷ ವಾರ್ಷಿಕ ಶಿಬಿರ ಕಾರ್ಯಕ್ರಮ ಜರುಗಿತು. ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಪ್ರತಿಷ್ಠಿತ ಮೂಡಲಗಿ ಶಿಕ್ಷಣ ಸಂಸ್ಥೆಯ ಶ್ರೀ ಶಿವಬೋಧರಂಗ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದ ಎನ್.ಎಸ್.ಎಸ್. ಘಟಕದ ವತಿಯಿಂದ ‘ದತ್ತು ಗ್ರಾಮ ಕಮಲದಿನ್ನಿ’ಯಲ್ಲಿ ನಡೆಯುತ್ತಿರುವ ‘ವಿಶೇಷ ವಾರ್ಷಿಕ ಶಿಬಿರ 2024 -25′ ರ ನಾಲ್ಕನೇ ದಿನದಂದು ” ದೇಶದ ಪ್ರಗತಿಯಲ್ಲಿ ಯುವಕರ ಪಾತ್ರ” ಎಂಬ ವಿಷಯದ ಮೇಲೆ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಅತಿಥಿಯಾಗಿ ಆಗಮಿಸಿ ಮಾತನಾಡಿದರು.
ಯಾವ ದೇಶದಲ್ಲಿ ಯುವಕರು ಶಕ್ತಿಶಾಲಿ ಮತ್ತು ಸೃಜನಾತ್ಮಕತೆಯಿಂದ ಕೂಡಿರುತ್ತಾರೆಯೋ ಅಂಥ ದೇಶದ ಅಭಿವೃದ್ಧಿಯಲ್ಲಿ ಯುವಕರ ಪಾತ್ರ ಬಹಳಷ್ಟು ಇರುತ್ತದೆ. ಭವ್ಯ ಭಾರತದ ಪ್ರಗತಿಯಲ್ಲಿ ಉತ್ತಮ ಭವಿಷ್ಯವನ್ನು ರೂಪಿಸಲು ಸಹಕಾರಿಯಾಗುವಂತೆ ಯುವಕರಿಗೆ ಉತ್ತಮ ಆರೋಗ್ಯ, ಉತ್ತಮ ಶಿಕ್ಷಣ ಮತ್ತು ತರಬೇತಿಯನ್ನು ಒದಗಿಸಬೇಕಾಗಿದೆ.’ಯುವಶಕ್ತಿ’ ದೇಶದ ಶಕ್ತಿ ‘ ಎಂಬುದರಲ್ಲಿ ಎರಡು ಮಾತಿಲ್ಲ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿ. ಎಚ್. ರೆಡ್ಡಿ ವಹಿಸಿದ್ದರು. ಅತಿಥಿಗಳಾಗಿ ಆಗಮಿಸಿದವರು
ಶ್ರೀಮಂತ ಹುಚರಡ್ಡಿ, ರಾಮಣ್ಣ ಪಾಟೀಲ, ಬಿ.ಜಿ. ಗಡಾದ, ಎಲ್. ಎಂ. ಪಂಚಗಾಂವಿ, ಎಲ್.ಆರ್. ಧರ್ಮಟ್ಟಿ, ಎಚ್. ಎಂ. ಹತ್ತರಗಿ, ಎಸ್. ಕೆ. ಹಿರೇಮಠ, ಎನ್.ಎಸ್.ಎಸ್ ಕಾರ್ಯಕ್ರಮ ಅಧಿಕಾರಿಗಳು ಉಪಸ್ಥಿತರಿದ್ದರು.