ಸತಿಸುತರು ಧನಕನಕ ಮನೆಮಹಡಿ ಹೊಲಗದ್ದೆ
ಮಾನವನ ಪೀಡಿಸುವ ಮಾಯೆಯಲ್ಲ
ಬೇಕೆಂದು ಹಾತೊರೆವ ಮನಸಿನೊಳಗಿರುವಂಥ
ಮಹದಾಸೆ ಮಹಾಮಾಯೆ – ಎಮ್ಮೆತಮ್ಮ
ಶಬ್ಧಾರ್ಥ. ಸತಿಸುತರು = ಹೆಂಡತಿ ಮಕ್ಕಳು . ಪೀಡಿಸು = ಕಾಡಿಸು
ತಾತ್ಪರ್ಯ
ಹೆಂಡತಿಮಕ್ಕಳು, ಹಣ ಚಿನ್ನ, ಮನೆಮಾರು, ಆಸ್ತಿಪಾಸ್ತಿ,
ಮಾನವನನ್ನು ಕಾಡಿಸುವ ಮಾಯೆಯಲ್ಲ . ಮನುಷ್ಯ ಅವುಗಳನ್ನು ಪಡೆಯಲು ಮನಸಿನಲ್ಲಿ ಆಸೆ ಮಾಡುವುದೆ ಮಾಯೆ. ಅದು ಬರಿ ಮಾಯೆಯಲ್ಲ ಮಹಾಮಾಯೆ.
ಅದಕ್ಕೆ ಶರಣರು ಇವು ಯಾವು ಮಾಯೆಯಲ್ಲ, ಮನದ
ಮುಂದಣ ಆಸೆಯೆ ಮಾಯೆ ಎಂದು ಹೇಳಿದ್ದಾರೆ. ಜೀವನ
ನಡೆಸಲು ಹೆಣ್ಣು ಹೊನ್ನು ಮಣ್ಣು ಬೇಕು. ಆದರೆ ಅವುಗಳನ್ನು
ದುರಾಸೆ ಮಾಡಿ ಅನ್ಯಾಯ ಮಾರ್ಗದಿಂದ ಪಡೆಯುವುದು
ಇದೆಯಲ್ಲ ಅದು ನಿಜವಾದ ಮಾಯೆ. ಸಿದ್ಧರಾಮೇಶ್ವರ
ತನ್ನದೊಂದು ವಚನದಲ್ಲಿ ಹೀಗೆ ಹೇಳುತ್ತಾನೆ.ಭಕ್ತನ ಮನ ಹೆಣ್ಣಿನೊಳಗಾದರೆ ವಿವಾಹವಾಗಿ ಕೊಡುವದು,ಭಕ್ತನ ಮನ ಮಣ್ಣಿನೊಳಗಾದರೆ ಕೊಂಡು ಆಲಯ ಮಾಡುವರು,ಭಕ್ತನ ಮನ ಹೊನ್ನಿನೊಳಗಾದರೆ ಬಳಲಿ ದೊರಕಿಸುವುದು ನೋಡಾ
ಕಪಿಲ ಸಿದ್ಧ ಮಲ್ಲಿಕಾರ್ಜುನ. ಅಂದರೆ ಧರ್ಮಮಾರ್ಗದಿಂದ
ಹೆಣ್ಣನ್ನು ಮದುವೆಯಾಗುವುದು ಮತ್ತು ಹಣವನ್ನು ದುಡಿದು
ಗಳಿಸುವುದು ಮತ್ತು ನಿವೇಶನ ಕೊಂಡು ಮನೆ ಕಟ್ಟುವುದು.
ಹಾಗಾದರೆ ಅವು ನಮಗೆ ಮಾಯೆಯಾಗಿ ಕಾಡುವುದಿಲ್ಲ. ಆದರೆ ಅಧರ್ಮದಿಂದ ದುರಾಸೆ ಮಾಡಿ ಪಡೆಯುವುದೆ ಮಾಯೆ.
ರಚನೆ ಮತ್ತ ವಿವರಣೆ
ಎನ್.ಶರಣಪ್ಪ ಮೆಟ್ರಿ
ಮೊ: 944903099