ಏಸುಕ್ರಿಸ್ತನು ಬಡಗಿ ಪ್ರಭುದೇವ ನಟುವರನು
ವ್ಯಾಸನಂಬಿಗ ವಾಲ್ಮೀಕಿ ಬೇಡ
ಹುಟ್ಟಿಬಂದಂಥ ಕುಲ ಯಾವುದಾದರೇನು ?
ದೇವಕುಲದವರಿವರು- ಎಮ್ಮೆತಮ್ಮ
ಶಬ್ಧಾರ್ಥ
ನಟುವರ = ನಾಟ್ಯ ಕಲಿಸುವವ.
ಏಸುಕ್ರಿಸ್ತನ ತಂದೆ ಮರಕೆಲಸ ಮಾಡುತ್ತಿದ್ದನು. ಹೀಗಾಗಿ
ಕ್ರಿಸ್ತನು ಬಡಗೇರ ಕುಲಕ್ಕೆ ಸೇರಿದವನು. ಅಲ್ಲಮಪ್ರಭುವಿನ
ತಂದೆ ನಾಟ್ಯ ಕಲಿಸುತ್ತಿದ್ದನು. ಅಲ್ಲಮ ನಟುವರ ಕುಲಕ್ಕೆ
ಸೇರಿದವನು. ವ್ಯಾಸನ ತಾಯಿ ಸತ್ಯವತಿ ಮೀನಗಾರನ ಮಗಳು. ದೋಣಿ ನಡೆಸುತ್ತಿದ್ದ ಈಕೆಗೆ ಪರಾಶರ ಮುನಿಯಿಂದ
ವ್ಯಾಸನ ಜನನವಾದ ಕಾರಣ ವ್ಯಾಸ ಅಂಬಿಗರ ಕುಲಕ್ಕೆ
ಸೇರಿದವನು. ವಾಲ್ಮೀಕಿಯ ಮೊದಲ ಹೆಸರು ರತ್ನಾಕರ. ಈತನು ಕಾಡಿನಲ್ಲಿ ಬೇಟೆಗಾರರಲ್ಲಿ ಬೆಳೆದ ಕಾರಣ ಬೇಡರ ಕುಲಕ್ಕೆ ಸೇರಿದವನು. ಮಾದಾರ ಚೆನ್ನಯ್ಯ, ಅಂಬಿಗರ ಚೌಡಯ್ಯ, ಹಡಪದ ಅಪ್ಪಣ್ಣ, ಒಕ್ಕಲಿಗ ಮುದ್ದಣ್ಣ, ಮೇದಾರ ಕೇತಯ್ಯ ಕುಂಬಾರ ಗುಂಡಯ್ಯ, ಬೇಡರ ಕಣ್ಣಪ್ಪ, ಮುಂತಾದ ಅನೇಕ ಕುಲಕ್ಕೆ ಸೇರಿದ ಶರಣರಿದ್ದರು. ಆದರೆ ಶರಣ ಜೀವನ ನಡೆಸಿ ಈಶನ ಕುಲದವರಾದರು. ಹಾಗೆ ಏಸುಕ್ರಿಸ್ತ ಅಲ್ಲಮಾ ಪ್ರಭು ವ್ಯಾಸ ಮಹರ್ಷಿ ವಾಲ್ಮೀಕಿ ಮಹರ್ಷಿ ಯಾವುದೇ ಕುಲದಲ್ಲಿ ಜನಿಸಿದ್ದರು ಅವರು ಆಧ್ಯಾತ್ಮವನ್ನು ಸಾಧಿಸಿ ಆಧ್ಯಾತ್ಮ ವಿಚಾರವನ್ನು ಬೋಧಿಸಿ ಬರೆದು ದೇವರ ಕುಲದವರಾದರು. ಯಾವುದೇ ಕುಲದಲ್ಲಿ ಜನಿಸಿದರು ಆಚಾರ ವಿಚಾರದಿಂದ ಶ್ರೇಷ್ಠ ಕುಲದವರಾದರು.ಜನ್ಮನಾ ಜಾಯತೇ ಶೂದ್ರ ಸಂಸ್ಕರಾತ್ ದ್ವಿಜ ಉಚ್ಚತೇ| ಎಂಬ ಶ್ಲೋಕ ಇದನ್ನೇ
ಪುಷ್ಟೀಕರಿಸುತ್ತದೆ. ಅಂದರೆ ಹುಟ್ಟಿನಿಂದ ಶೂದ್ರನಾಗುತ್ತಾನೆ.
ಆದರೆ ಸಂಸ್ಕಾರದಿಂದ ಬ್ರಾಹ್ಮಣನಾಗುತ್ತಾನೆ. ಹುಟ್ಟಿದ
ಕುಲಕ್ಕಿಂತ ಆತನ ಸಾಧನೆಯಿಂದ ಶ್ರೇಷ್ಠ ಕುಲದವನಾಗುತ್ತಾನೆ.
ರಚನೆ ಮತ್ತ ವಿವರಣೆ
ಎನ್.ಶರಣಪ್ಪ ಮೆಟ್ರಿ
ಮೊ: 944903099