ಮೂಡಲಗಿ – ಜೋಡೆತ್ತಿನ ಕೃಷಿಯ ಪುನಶ್ಚೇತನಕ್ಕಾಗಿ ಬಹುಜನರ ಧ್ವನಿ ಕ್ರೋಢೀಕರಿಸುವ ಉದ್ದೇಶದಿಂದ ತಾಲೂಕಿನ ಯಾದವಾಡದ ಶ್ರೀ ಘಟ್ಟಗಿ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ‘ ನಂದಿ ಕೂಗು ‘ ಹಾಗೂ ರೈತ ಜಾತ್ರೆ ಕಾರ್ಯಕ್ರಮವನ್ನು ದಿ. ೨೦ ರಂದು ಹಮ್ಮಿಕೊಳ್ಳಲಾಗಿದೆ ಎಂದು ಯಾದವಾಡ ಗ್ರಾಮ ಪಂಚಾಯತ ಉಪಾಧ್ಯಕ್ಷ ಕಲ್ಮೇಶ ಗಾಣಗಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಕೊಲ್ಹಾಪೂರ ಕನೇರಿ ಮಠದ ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ವಹಿಸಲಿದ್ದಾರೆ, ಸಾನ್ನಿಧ್ಯವನ್ನು ಶಿರೋಳ ರಾಮಾರೂಢ ಮಠದ ಶ್ರೀ ಶಂಕರಾರೂಢ ಮಹಾಸ್ವಾಮೀಜಿ, ಮನ್ನಿಕೇರಿ ಮಹಾಂತಲಿಂಗೇಶ್ವರ ಮಠದ ಶ್ರೀ ವಿಜಯ ಸಿದ್ಧೇಶ್ವರ ಮಹಾಸ್ವಾಮಿಗಳು, ಯಾದವಾಡ ಪಟ್ಟದ ದೇವರು ಶ್ರೀ ಬಸಲಿಂಗಯ್ಯ ಹಿರೇಮಠ ಹಾಗೂ ಯಾದವಾಡ ಮಾನೋಮಿ ಮಹಾಲಿಂಗೇಶ್ವರ ಆಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳು ಸಾನ್ನಿಧ್ಯ ವಹಿಸಲಿದ್ದಾರೆ ಎಂದರು.
ವಿಶೇಷವಾದ ನಂದಿ ಕೂಗು ಮತ್ತು ರೈತ ಜಾತ್ರೆ ಕಾರ್ಯಕ್ರಮ ದಲ್ಲಿ ಉಪನ್ಯಾಸಕರಾಗಿ ಅಂತಾರಾಷ್ಟ್ರೀಯ ಹಸಿರು ಪರಿಸರ ವಿಜ್ಞಾನಿ ಹಾಗೂ ಗ್ಲೋಬಲ್ ಗ್ರೀನ್ ಗ್ರೋಥ್ ಚೇರ್ಮನ್ ಡಾ. ಚಂದ್ರಶೇಖರ ಬಿರಾದಾರ ಹಾಗೂ ಕೃಷಿ ವಿಶ್ವವಿದ್ಯಾಲಯ ದ ಸಾವಯವ ಕೃಷಿ ಸಂಸ್ಥೆ ಸಂಶೋಧನಾ ನಿರ್ದೇಶನಾಲಯದ ಮುಖ್ಯಸ್ಥ ಡಾ. ಶ್ರೀಪಾದ ಕುಲಕರ್ಣಿ ಆಗಮಿಸುವರು ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಪ್ರಮುಖವಾಗಿ ೨೫೦ ಜೋಡೆತ್ತುಗಳು ಹಾಗೂ ದೇಶೀ ತಳಿಯ ಗೋವುಗಳ ಪ್ರದರ್ಶನ, ರೈತ ಸಮಯದಾಯದವರ ಜೊತೆಗೆ ಕಾಯಕದಲ್ಲಿ ತೊಡಗಿಕೊಂಡವರ ಛದ್ಮವೇಷದ ಪ್ರದರ್ಶನ ಹಾಗೂ ಇನ್ನೂ ಅನೇಕ ವಿಶೇಷ ಕಾರ್ಯಕ್ರಮಗಳು ಜರುಗಲಿವೆ. ಕಾರ್ಯಕ್ರಮ ಮುಗಿದ ನಂತರ ಮಧ್ಯಾಹ್ನ ೧ ಗಂಟೆಗೆ ಮಹಾಪ್ರಸಾದ, ೩ ಗಂಟೆಗೆ ಸಕಲ ವಾದ್ಯ ಮೇಳಗಳೊಡನೆ ಆಕಳುಗಳ ಹಾಗೂ ಎತ್ತುಗಳ ಭವ್ಯ ಮೆರವಣಿಗೆ ಜರುಗುವುದು ಮತ್ತು ಸಾಯಂಕಾಲ ೫ ಗಂಟೆಗೆ ಶ್ರೀಗಳಿಂದ ಗೋ ರಕ್ಷಣೆ ಹಾಗೂ ನಂದಿಯ ಉಳಿವಿಗಾಗಿ ಆಶೀರ್ವಚನ ಜರುಗುವುದು. ವಿಶಿಷ್ಟವಾದ ಈ ರೈತ ಜಾತ್ರೆಗೆ ಸಕಲ ರೈತ ಬಾಂಧವರು ಸಾರ್ವಜನಿಕರು ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದು ಕಲ್ಮೇಶ ಗಾಣಗಿ ಅವರು ವಿನಂತಿಸಿಕೊಂಡಿದ್ದಾರೆ
ಪತ್ರಿಕಾಗೋಷ್ಠಿಯಲ್ಲಿ ಗುರುನಾಥ ಬಸಪ್ಪಾ ರಾಮದುರ್ಗ ಹಾಗೂ ಹನುಮಂತ ಅಂಬಲಝೇರಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಕಾರ್ಯಕ್ರಮದ ಭಿತ್ತಿಚಿತ್ರವನ್ನೂ ಅವರು ಪ್ರದರ್ಶಿಸಿದರು.