ಜಿಲ್ಲಾ ಕೃಷಿಕ ಚುನಾವಣೆಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಪ್ರವೇಶ ; ಎಲ್ಲ ಸ್ಥಾನಗಳೂ ಅವಿರೋಧ ಆಯ್ಕೆ
ರಾಜ್ಯ ಪ್ರತಿನಿಧಿಯಾಗಿ ಬಾಳಪ್ಪ ಬೆಳಕೂಡ ಆಯ್ಕೆ
ಬೆಳಗಾವಿ- ಸಹಕಾರ ವಲಯದ ಜಿಲ್ಲಾ ಹಾಲು ಒಕ್ಕೂಟ (ಬೇಮೂಲ್), ಬಿಡಿಸಿಸಿ ಬ್ಯಾಂಕ್, ಜಿಲ್ಲಾ ಸಹಕಾರ ಯೂನಿಯನ್, ಎಸ್ಎಲ್ಡಿಪಿ, ಮಾರ್ಕೆಟಿಂಗ್ ಸೊಸಾಯಿಟಿ ಸೇರಿದಂತೆ ಎಲ್ಲ ಸಹಕಾರಿ ರಂಗದ ಅಧಿಕಾರ ಚುಕ್ಕಾಣಿಯಲ್ಲಿ ಮಹತ್ತರ ಪಾತ್ರ ವಹಿಸಿರುವ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಈಗ ಮತ್ತೊಂದು ಕೃಷಿಕ ಸಮಾಜದ ಜಿಲ್ಲಾ ಮಟ್ಟದ ಪದಾಧಿಕಾರಿಗಳ ಚುನಾವಣೆಯಲ್ಲಿ ಅವಿರೋಧವಾಗಿ ಅಯ್ಕೆ ಮಾಡುವ ಮೂಲಕ ಜಿಲ್ಲಾ ಸಹಕಾರ ವಲಯಕ್ಕೆ ಸಾರಥಿಯಾಗಿ ಗುರುತಿಸಿಕೊಂಡಿದ್ದಾರೆ.
ಈ ಮೂಲಕ ಕೈ ಹಾಕಿರುವ ಎಲ್ಲ ಸಹಕಾರಿ ವಲಯದ ಸಂಘ- ಸಂಸ್ಥೆಗಳನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಂಡು ಅದರ ಉನ್ನತಿ – ಪ್ರಗತಿಗೆ ಶ್ರಮಿಸುವ ಮೂಲಕ ಸಹಕಾರಿ ವಲಯದಲ್ಲಿ ಅವಿರೋಧ ಆಯ್ಕೆ ಮಾಡುವ ಪರಿಪಾಠಕ್ಕೆ ಮುಂದಾಗಿದ್ದಾರೆ.
ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಹಿರಿತನದಲ್ಲಿ ಜಿಲ್ಲಾ ಕೃಷಿಕ ಸಮಾಜದ ನೂತನ ಅಧ್ಯಕ್ಷರಾಗಿ ಶಂಕರಗೌಡ ಶಿವನಗೌಡ ಪಾಟೀಲ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಳಿದಂತೆ ಗುರಪ್ಪ ಚನ್ನಬಸಪ್ಪ ಮೆಟಗುಡ್ಡ (ಉಪಾಧ್ಯಕ್ಷ), ಸತ್ತೆಪ್ಪ ಭರಮಪ್ಪ ನಾಯಿಕ (ಪ್ರಧಾನ ಕಾರ್ಯದರ್ಶಿ), ಚಂದ್ರಕಾಂತ್ ಇಮ್ಮಡಿ ( ಖಜಾಂಚಿ) ಹಾಗೂ ರಾಜ್ಯ ಪ್ರತಿನಿಧಿಯಾಗಿ ಕಲ್ಲೊಳ್ಳಿ ಪಟ್ಟಣದ ಬಾಳಪ್ಪ ಬಸಪ್ಪ ಬೆಳಕೂಡ ಅವರು ಆಯ್ಕೆಯಾಗಿದ್ದಾರೆ.
ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ನೇತೃತ್ವದಲ್ಲಿ ನಿನ್ನೆ ಗುರುವಾರದಂದು ಜಿಲ್ಲಾ ಮಟ್ಟದ ಎಲ್ಲ ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಹೊಸ ಪದಾಧಿಕಾರಿಗಳ ಅಧಿಕಾರ ಅವಧಿಯು ೫ ವರ್ಷದ್ದಾಗಿದೆ.
ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಶಂಕರಗೌಡ ಪಾಟೀಲ ಅವರು ಮಾತನಾಡಿ, ಕೃಷಿಕರು ಮತ್ತು ಸರ್ಕಾರದ ನಡುವೆ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸಿ ಯೋಜನೆಗಳ ಅನುಷ್ಠಾನಕ್ಕೆ ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತೇನೆ. ಎಲ್ಲಾ ತಾಲೂಕುಗಳ ಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೃಷಿಕ ಸಮಾಜದ ಅಭಿವೃದ್ಧಿಗೆ ಶ್ರಮಿಸುವ ಭರವಸೆ ನೀಡಿದರು.
ಶಾಸಕ ಬಾಲಚಂದ್ರ ಜಾರಕಿಹೊಳಿ ಮತ್ತು ಅವರ ಎಲ್ಲ ಸಹೋದರರ ಮಾರ್ಗದರ್ಶನದಲ್ಲಿ ಕೃಷಿಕ ಸಮಾಜದ ಅಭ್ಯುದಯಕ್ಕೆ ಶಕ್ತಿಮೀರಿ ಯತ್ನಿಸಲಾಗುವುದೆಂದು ಪಾಟೀಲ್ ಹೇಳಿದರು.
ಸುಮಾರು ಐದು ವರ್ಷಗಳ ಅವಧಿಗೆ ನಡೆದ ಆಡಳಿತ ಮಂಡಳಿಯ ಚುನಾವಣೆಯಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಕೃಷಿಕ ಸಮಾಜದ ಮುಖಂಡರೊಂದಿಗೆ ಚರ್ಚಿಸಿ ಅವಿರೋಧ ಆಯ್ಕೆಗೆ ಒಮ್ಮತದ ನಿರ್ಣಯ ಕೈಗೊಂಡರು.
ಈ ಅವಿರೋಧ ಆಯ್ಕೆ ನಡೆಯಲು ಹಿರಿಯರಾದ ಬಾಳಪ್ಪ ಬೆಳಕೂಡ, ಡಿಸಿಸಿ ಬ್ಯಾಂಕ್ ನಿರ್ದೇಶಕ ರಾಜು ಅಂಕಲಗಿ, ಶಂಕರಗೌಡ ಪಾಟೀಲ್ (ನೇಸರಗಿ)ಅವರು ಮಹತ್ತರ ಜವಾಬ್ದಾರಿ ವಹಿಸಿದ್ದರೆಂದು ಹೇಳಲಾಗುತ್ತಿದೆ.
ಜಿಲ್ಲಾ ಕೃಷಿಕ ಸಮಾಜದ ಆಡಳಿತ ಮಂಡಳಿಯ ಸರ್ವ ಸದಸ್ಯರು, ಡಿಸಿಸಿ ಬ್ಯಾಂಕ್ ನಿರ್ದೇಶಕ ರಾಜು ಅಂಕಲಗಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಜಿಲ್ಲಾ ಕೃಷಿಕ ಸಮಾಜ ಮತ್ತು ಜಂಟಿ ಕೃಷಿ ನಿರ್ದೇಶಕ ಎಸ್. ಎಸ್. ಪಾಟೀಲ್ ಅವರು ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು.
ಈ ಚುನಾವಣೆಯು ಹಿರಿಯ ನಿರ್ದೇಶಕ ಉಮೇಶ್ ಬೋಳೆತ್ತಿನ ಅಧ್ಯಕ್ಷತೆಯಲ್ಲಿ ಜರುಗಿತು.