spot_img
spot_img

ಪ್ರಬಂಧ : ತೇರು ಹರಿದಾವೋ ತಾನಕ್ಕೆ ನಿಂತಾವೋ

Must Read

spot_img
- Advertisement -

ನೆಯ ಪೈಂಟಿಂಗ್ ಕೆಲಸ ನಡೆದಿತ್ತು. ಮನೆಯ ಪಾತ್ರೆ ಪದಾರ್ಥಗಳನ್ನು ಅತ್ತಿಂದಿತ್ತ ಇಟ್ಟಾಡಿ ಸುಸ್ತಾಗಿ ಹೋಗಿದ್ದೆ. ಮೂರು ದಿನಗಳಲ್ಲಿ ಮುಗಿಸಿಕೊಡುವೆ ಎಂದಿದ್ದ ಅಕ್ಬರ್ ಪುಣ್ಯಾತ್ಮ ಹದಿನೈದು ದಿನ ತೆಗೆದುಕೊಂಡ. ಮನೆ ತುಂಬಾ ದೂಳಿನ ರಾಶಿ ಜೊತೆಗೆೆ ಎಲ್ಲೆಲ್ಲಿ ನೋಡಿದರೂ ಪುಸ್ತಕಗಳೇ! ನೋಡಿ ನೋಡಿ ಬೇಸರಗೊಂಡು ಮಡದಿ ಶಕುಂತಲೆ ಸಿಟ್ಟಿನಿಂದ ರೇಗಾಡಿ ಆಗಿಂದಾಗ್ಗೆ ನನ್ನಿಂದ ಕೆಲಸ ತೆಗೆಯುತ್ತಿದ್ದಳು.

‘ರೀ, ಪೈಂಟ್ ಸೋರಿಸಿಬಿಡ್ತಾರೆ, ನಿಮ್ಮ ಪಂಚೆ ಹಾಸ್ರಿ.. ಮನೆಯಲ್ಲಿ ಇದ್ದ ಬದ್ದ ಹಳೆಯ ಬೆಡ್‌ಶೀಟ್‌ಗಳು, ಹೊದುಪುಗಳನ್ನು ಪೈಂಟಿಂಗ್ ಮಾಡುವ ಜಾಗದಲ್ಲೆಲ್ಲಾ ಹಾಸಿದ್ದಾಯಿತು. ಇನ್ನು ಉದ್ದವಾಗಿ ಉಳಿದಿದ್ದು ನನ್ನ ಪಂಚೆ ಅದನ್ನು ಹಾಸಿದೆ. ಪುಸ್ತಕವನ್ನೆಲ್ಲಾ ಹದಿನೈದು ದಿನ ಆಚೆಗೆ ಬಿಸಾಡಿದ್ದಳು. ಅವು ಅಲ್ಲಿಯೇ ಬಿದ್ದಿದ್ದರೂ ಯಾವ ಕಳ್ಳರೂ ಕದ್ದಿಲ್ಲ. ದೇಶದಲ್ಲಿ ದಡ್ಡರಿಲ್ಲ ಎಂದುಕೊಂಡೆ. ಪುಸ್ತಕಗಳನ್ನು ಮತ್ತೆ ಶೆಲ್ಪ್ನಲ್ಲಿ ಇಡುವಾಗ ಗೊರೂರು ಹೇಮಾವತಿ ದರ್ಶನ ಪುಸ್ತಕ ಸಿಕ್ಕಿತು.

ಇದನ್ನು ನಾನು ಬರೆದಿದ್ದು ೧೯೯೧ರಲ್ಲಿ. ನಮ್ಮೂರಿನ ಪತ್ತೇದಾರಿ ಲೇಖಕ ಪರಮೇಶ್ ಹೇಳಿ ಬರೆಸಿದ್ದರು. ಮತ್ತೇ ಅವರೇ ೧೯೯೨ರಲ್ಲಿ ಪ್ರಕಟಿಸಿದ್ದರು. ಕಳೆದ ವರ್ಷ ಸುಂದರೇಶ್ ಈ ಪುಸ್ತಕ ಕೇಳಿದ್ದರು. ಸಿಕ್ಕಿರಲಿಲ್ಲ. ಅದೆಲ್ಲೊ ಒಂದು ಪ್ರತಿ ಗ್ರಂಥಭಂಡಾರದಲ್ಲಿ ಅಡಗಿಕೊಂಡಿತ್ತು.
ಮಧ್ಯಾಹ್ನ ೨ ಗಂಟೆ. ವ್ಯಾಟ್ಸಪ್ ಪೋನ್ ಬಂತು. ಅಮೇರಿಕಾದಿಂದ ಮಂಜಣ್ಣನ ಮಗ ಮನು. ‘ಏನ್ ಚೆನ್ನಾಗಿದ್ದಿರಾ ಅಂಕಲ್.. ಎಂದನು. ‘ ಚೆಂದ ಏನ್ ಬಂತೋ ಮನು, ನನ್ಗೂ ವಯಸ್ಸಾತ್ತಲ್ಲ.. ‘ಅಂಕಲ್, ಇಲ್ಲೊಬ್ರು ನಿಮ್ಮ ಫ್ರೆಂಡ್ ಬಂದಿದ್ದಾರೆ. ನಿಮ್ಮ ಹತ್ರ ಮಾತ್ನಾಡ್ತಾರೆ ನೋಡಿ.. ಎಂದನು. ಆ ಕಡೆಯಿಂದ ತೊಗಲುಗೊಂಬೆ ಕಲಾವಿದರು ಗುಂಡುರಾಜ್. ‘ಅನಂತು ಚೆನ್ನಾಗಿದ್ದೀರಾ, ಅಮೇರಿಕಾಗೆ ಬಂದಿದ್ದೆ. ಇಲ್ಲಿ ನಿಮ್ಮ ಅಣ್ಣವ್ರ ಮಗ ಒಂದು ಕಾರ್ಯಕ್ರಮಕ್ಕೆ ಕರೆದುಕೊಂಡು ಹೋಗ್ತಿದ್ದಾರೆ.. ಎಂದರು.

- Advertisement -

ಹಾಸನದ ನಮ್ಮ ಗುಂಡುರಾಜ್ ಅಮೇರಿಕಾದಲ್ಲಿ ಫೇಮಸ್ ಆಗಿರುವುದು ಖುಷಿಯಾಯ್ತು. ನೆನ್ನೆ ಮನೆ ಮನೆ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ತೊಗಲುಗೊಂಬೆಯ ತಮ್ಮ ದೇಶ ವಿದೇಶಗಳ ಸುತ್ತಾಟ, ತೊಗಲುಗೊಂಬೆ ಕಲಿಯಲು ಭಾರತಕ್ಕೆ ಬಂದು ವಾರ ತಿಂಗಳು ತಂಗಿದ್ದೆ ಇವರಿಂದ ತರಭೇತಿ ಪಡೆದು ಹೋಗುವ. ತಮ್ಮ ದೇಶಕ್ಕೆ ಕರೆಸಿಕೊಳ್ಳುವ ವಿಚಾರ ಕೇಳಿ ಆಶ್ಚರ್ಯ ಜೊತೆಗೆ ಖುಷಿಯಾಯಿತು. ನಮ್ಮ ಅಣ್ಣನ ಮಗ ಮನು ಅಮೇರಿಕಾದಲ್ಲಿ ಕನ್ನಡ ಭವನ ಕಟ್ಟುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾನೆಂದು ಪತ್ರಕರ್ತರು ಆರ್.ಪಿ.ವೆಂಕಟೇಶಮೂರ್ತಿ ತಮ್ಮ ಪತ್ರಿಕೆಯಲ್ಲಿ ಈ ಹಿಂದೆ ಬರೆದಿದ್ದರು. ಅದನ್ನು ಮನುಗೆ ತಿಳಿಸಿ ಭೇಷ್ ಎಂದೆ. ಮತ್ತೇ ಭಾರತಕ್ಕೆ ಯಾವಾಗ ಬರ‍್ತಿ.. ಎಂದೆ. ಅಲ್ಲಿಯ ಅಧ್ಯಕ್ಷರು ಎಲ್ಲರನ್ನು ಓಡಿಸಲು ಸಹಿ ಮಾಡಿರುವ ಸಂಗತಿ ಟಿವಿಯಲ್ಲಿ ನೋಡಿದ್ದೆನು.

‘ಅಂಕಲ್, ಗೊರೂರು ಜಾತ್ರೆ ಯಾವತ್ತು ಎಂದನು ಮನು. ‘ಅದೇ ಮಾಮುಲಿ ರಥಸಪ್ತಮಿಗೆ ಎಂದೆನು. ‘ ಹೇ ಡೇಟ್ ಹೇಳಿ ಅಂಕಲ್.. ‘ ತಡಿ ಕ್ಯಾಲೆಂಡರ್ ನೋಡಿ ಹೇಳ್ತಿನಿ ಎಂದು ಫೆಬ್ರವರಿ ನಾಲ್ಕು. ಎಂದೆ. ಯಾಕೋ ತಕ್ಷಣದಲ್ಲೇ ಪೋನ್ ಸಂಪರ್ಕ ಕಡಿತಗೊಂಡಿತು. ಪೋನ್ ಬದಿಗಿಟ್ಟು ಗೊರೂರು ಹೇಮಾವತಿ ದರ್ಶನ ಪುಸ್ತಕ ಕೈಗೆತ್ತಿಕೊಂಡೆ. ಮಡದಿ ಟೀ ತಂದುಕೊಟ್ಟಳು. ಹಾಗೇ ಪುಸ್ತಕ ತಿರುವಿಹಾಕಿದೆ.
ಹಾಸನದಿಂದ ದಕ್ಷಿಣಕ್ಕೆ ೨೩ ಕಿ.ಮೀ. ದೂರದಲ್ಲಿ ಹಾಸನ ಅರಕಲಗೂಡು ರಸ್ತೆಯಲ್ಲಿ ಹೇಮಾವತಿ ನದಿಯ ತೀರದಲ್ಲಿ ಐತಿಹ್ಯ ಶ್ರೀ ಯೋಗಾನರಸಿಂಹಸ್ವಾಮಿ ಸನ್ನಿಧಿಯಲ್ಲಿ ಗೊರೂರು ನೆಲೆಗೊಂಡಿದೆ. (ನಾನೀಗ ಹಾಸನದಲ್ಲಿ ನೆಲೆಗೊಂಡಿದ್ದೇನೆ)

ಡಾ. ಗೊರೂರು ರಾಮಸ್ವಾಮಿ ಅಯ್ಯಂಗಾರ್ ತಮ್ಮ ಶ್ರೀ ಯೋಗನರಸಿಂಹಸ್ವಾಮಿ ದೇವಾಲಯ ಮಹಿಮೆ ಮತ್ತು ಚರಿತ್ರೆ ಕೃತಿಯಲ್ಲಿ ಗೊರೂರಿಗೆ ಐದು ಮೈಲಿ ದೂರದಲ್ಲಿರುವ ಅರಕಲಗೂಡಿನಲ್ಲಿ ಐಗೂರು ಪಾಳೆಯಗಾರನಾದ ಕೃಷ್ಣಪ್ಪ ನಾಯಕನು (ಚರಿತ್ರೆಗನುಸಾರವಾಗಿ ಇವನ ಕಾಲ ೧೫೬೮) ಹೇಮಾವತಿ ನದಿಯಲ್ಲಿ ಸ್ನಾನ ಮಾಡಲು ಇಲ್ಲಿಗೆ ಆಗಮಿಸಿದನೆಂದು, ಇಲ್ಲಿ ಇಬ್ಬರು ಅಣ್ಣ ತಮ್ಮಂದಿರು ಇಲ್ಲಿ ಉದ್ಭವಗೊಂಡಿದ್ದ ನರಸಿಂಹಮೂರ್ತಿಯನ್ನು ಪೂಜಿಸುತ್ತಿದ್ದರೆಂದೂ ನಾಯಕನಿಗೆ ಕೂಡಲೇ ತನಗೆ ನೃಸಿಂಹನೇ ದೇವಾಲಯವನ್ನು ನಿರ್ಮಿಸುವಂತೆ ಆಜ್ಞಾಪಿಸುತ್ತಿದ್ದಾನೆ ಎಂದು ಹೊಳೆದ ದೃಶ್ಯವಾಗಿ ತನ್ನ ಇಚ್ಚೆಯನ್ನು ಅಣ್ಣ ತಮ್ಮಂದಿರಿಗೆ ತಿಳಿಸಿ ಅವರಿಂದ ನರಸಿಂಹ ದೀಕ್ಷೆಯನ್ನು ಪಡೆದು ನೃಸಿಂಹಸ್ವಾಮಿಗೆ ಮೊದಲು ಗರ್ಭಗುಡಿಯನ್ನು ಕಟ್ಟಿಸಿದನೆಂದು, ಗೋಕರ್ಣ ಋಷಿಗಳು ತಪಸ್ಸು ಮಾಡಿದ ಸ್ಥಳವಾಗಿ ‘ಗೋಕರ್ಣ ನಗರ’ ವೆಂದು ಕರೆಯುತ್ತಾರೆ.

- Advertisement -

ಅಷ್ಟರಲ್ಲಿ ಒಂದು ಕರೆ ಬಂತು. ಆ ಕಡೆಯಿಂದ ಜಗದೀಶ್ ರಾಮಘಟ್ಟ. ‘ನಾಳೆ ಜಾತ್ರೆ. ಬನ್ನಿ. ‘ ಈ ಸಾರಿ ನಾಟಕ ಉಂಟಾ ಎಂದೆ. ಇಲ್ಲಾ ಆರ್ಕೆಸ್ಟ್ರಾ ಎಂದರು.
‘ ಈ ಸಾರಿ ತೇರು ಉಂಟಾ.. ಹೋದ ವರ್ಷ ಜಾತ್ರೆ ಟೈಂಗೆ ದೇವಸ್ಥಾನದ ಕಾಂಪೌಂಡು ಗೋಡೆ ಎಲ್ಲಾ ಒಡೆದುಹಾಕಿದ್ರಲ್ಲಾ.. ‘ ಅದು ಏನೂ ಆಗಿಲ್ಲ. ಆದರೆ ತೇರಿದೆ.. ಎಂದರು.
ಅಂದಕ್ಕೆ ಅರ‍್ಕಲಗೂಡು ಚೆಂದಕ್ಕೆ ನರಸೀಪುರ
ಚಿತ್ತರದ ಗೊಂಬೆ ಗೊರವೂರು
ಚಿತ್ತರದ ಗೊಂಬೆ ಗೊರವೂರು ಬೀದಿಯ
ಹದಿನಾರು ತೇರು ಹರಿದಾವೆ

ಗೊರೂರು ಹಳೇ ಗ್ರಾಮದಿಂದ ಹೇಮಾವತಿ ನದಿಗೆ ಹೋಗುವ ದಾರಿಯಲ್ಲಿ ಹೇಮಾವತಿ ನದಿ ದಡದಲ್ಲಿ ಶ್ರೀ ಯೋಗನರಸಿಂಹಸ್ವಾಮಿ ದೇವಾಲಯ ನೆಲೆಗೊಂಡಿದೆ. ಮುಖ್ಯ ರಸ್ತೆಯಿಂದ ಈ ದೇವಸ್ಥಾನದವರೆಗೆ ಡಾಂಬರು ರಸ್ತೆ ಇದೆ. ಈ ದೇವಸ್ಥಾನ ವಿಶಾಲವಾಗಿದ್ದು ಛತ್ರದಂತಿರುವುದರಿಂದ ಇಲ್ಲಿ ಮದುವೆ ಮುಂಜಿ ಕಾರ್ಯಗಳು ನಡೆಯುತ್ತಿರುತ್ತವೆ. (ನಮ್ಮ ಅಕ್ಕನವರ ಮದುವೆ ನಡೆದಿದ್ದು ಇಲ್ಲಿಯೇ. ಅದು ೪೬ ವರ್ಷಗಳ ಹಿಂದೆ) ನದಿಗೆ ಇಳಿಯಲು ಕಲ್ಲಿನ ಸೋಪಾನ ಪಂಕ್ತಿಗಳಿವೆ. ಇಲ್ಲಿ ನದಿ ಸ್ವಲ್ಪ ವಿಶಾಲವಾಗಿ ಹರಿಯುತ್ತದೆ, ಮಟ್ಟೆಕಲ್ಲು, ಆನೆಕಲ್ಲು ಎಂಬ ಎರಡು ಕಲ್ಲು ಬೆಟ್ಟಗಳು ನೀರಿನ ಮಧ್ಯದಲ್ಲಿವೆ. ಈ ಜಾಗ ಒಳ್ಳೆ ಈಜುಗಾರರಿಗೆ ಆನಂದ ನೀಡುತ್ತದೆ. (ಅದು ಈಗಲ್ಲ, ನಮ್ಮ ಬಾಲ್ಯದಲ್ಲಿ ಮತ್ತು ಡಾ. ಗೊರೂರರು ತಮ್ಮ ಪ್ರಬಂಧಗಳಲ್ಲಿ ಬರೆದಂತೆ)

ಈ ಮಟ್ಟೆಕಲ್ಲು ಮಡುವಿನಲ್ಲಿ ಲಕ್ಷ್ಮಿಯು ಯೋಗಾನರಸಿಂಹನು ಯೋಗಮುದ್ರೆಯಲ್ಲಿ ಇದ್ದುದರಿಂದ, ಅವನ ಏಕಾಗ್ರತೆಯನ್ನು ಭಂಗಪಡಿಸಲು ಸಾಧ್ಯವಿಲ್ಲದಿರುವುದರಿಂದ ತಾನು ತಪಸ್ಸಿನಿಯಾಗಿ ನರಸಿಂಹ ಬಹಿರ್ಮುಖನಾಗುವುದು ಕಾಯುತ್ತಿದ್ದಾಳೆ ಎಂಬ ನಂಬಿಕೆ ಇದೆ.

ಆಗ ಗೊರೂರಿಗೆ ಐದು ಮೈಲಿ ದೂರದಲ್ಲಿರುವ ಅರ‍್ಕಲಗೂಡಿನಲ್ಲಿ ಐಗೂರು ಪಾಳೆಯಗಾರನಾದ ಕೃಷ್ಣಪ್ಪನಾಯಕನು ಆಳುತ್ತಿದ್ದನು. ಕೃಷ್ಣಪ್ಪ ನಾಯಕನು ಒಂದು ದಿನ ತನ್ನ ಗಡಿ ವಿಚಾರಣೆ ಮಾಡುತ್ತ ಸತೀ ಸುತರೊಡನೆ ಬಂದು ಹೇಮಾವತಿಯಲ್ಲಿ ಸ್ನಾನ ಮಾಡುತ್ತಿರಲು, ಗಡಿಯ ಉತ್ತರದ ತೀರದ ಕಾಡಿನ ನಡುವಿನಿಂದ ಅವರಿಗೆ ಘಂಟಾನಾದವು ಕೇಳಿಸಿತು. ಇದೇನೆಂದು ಅವನು ಆ ಸ್ಥಳಕ್ಕೆ ಹೋಗಿ ನೋಡಲು ಸೂರ‍್ಯಾಗ್ನಿಗಳಂತೆ ಬೆಳಗುತ್ತಿದ್ದ ತೇಜಸ್ವಿನಿಗಳಾದ ಅಣ್ಣ ತಮ್ಮಂದಿರು ವೇದ ಘೋಷವನ್ನು ಮಾಡುತ್ತ ತದೇಕ ಧ್ಯಾನರಾಗಿ ನರಸಿಂಹನನ್ನು ಪೂಜಿಸುತ್ತಿದ್ದರು. ನಾಯಕನಿಗೆ ಕೂಡಲೇ ನೃಸಿಂಹನೇ ದೇವತಾ ಪ್ರತಿಷ್ಠೆ ಮಾಡಿ ದೇವಾಲಯವನ್ನು ನಿರ್ಮಿಸುವಂತೆ ಆಜ್ಞಾಪಿಸುತ್ತಿದ್ದಾನೆ ಎಂದು ಹೊಳೆದ ದೃಶ್ಯವಾಯಿತು. ತಾನು ಆಳುತ್ತಿರುವ ಪಾಳೆಯಪಟ್ಟಿಗಿಂತ ಈ ಕಾರ‍್ಯ ತನ್ನ ಆತ್ಮಕ್ಕೂ ಶ್ರೇಯಸ್ಸಿಗೂ ಹೆಚ್ಚು ಹಿತಕರವೆಂದು ಅವನಿಗೆ ದೃಢವಾಯಿತು. ತನ್ನ ಬಯಕೆಯನ್ನು ನಾಯಕನು ಅಣ್ಣ ತಮ್ಮಂದಿರಿಗೆ ತಿಳಿಸಲು ಅವರು ಅತ್ಯಂತ ವಾತ್ಸಲ್ಯದಿಂದ ಅವನನ್ನು ಮನ್ನಿಸಿ ಅವನಿಗೆ ನರಸಿಂಹದೀಕ್ಷೆಯನ್ನೂ ಕೊಟ್ಟರು. ನಾಯಕನು ಮೊದಲು ನೃಸಿಂಹಸ್ವಾಮಿಗೆ ಗರ್ಭಗುಡಿಯನ್ನು ಕಟ್ಟಿಸಿದನು.

ನರಸಿಂಹಸ್ವಾಮಿ ಉದ್ಭವಗೊಂಡ ಸ್ಥಳದಲ್ಲಿಯೇ ಪೀಠವನ್ನು ನಿರ್ಮಿಸಿ ಸುತ್ತ ಕಲ್ಲುಗೋಡೆಯನ್ನು ಕಟ್ಟಿಸಿದನು. ಗೋಕರ್ಣ ಋಷಿಗಳು ತಪಸ್ಸು ಮಾಡಿದ ಸ್ಥಳವಾದುದರಿಂದ ಈ ಗ್ರಾಮಕ್ಕೆ ನಾಯಕರ ಇಚ್ಛೆಯಂತೆ ಗೋಕರ್ಣನಗರವೆಂದು ನಾಮಕರಣ ಮಾಡಿದನು. ನಾಯಕನು ಕಾಡುಗಳನ್ನೆಲ್ಲ ಕಡಿಸಿ ಊರನ್ನು ನಿರ್ಮಿಸಿ ಬ್ರಾಹ್ಮಣ ವರ್ತಕ ಶೂದ್ರಾದಿಯಾಗಿ ಸಮಸ್ತ ಜಾತಿಗಳಿಂದಲೂ ತುಂಬಿಸಿ, ದಕ್ಷಿಣ ಚಂದ್ರದ್ರೋಣ ಪರ್ವತದಿಂದ (ಬಾಬಾಬುಡನ್‌ಗಿರಿ) ಹುಟ್ಟಿ ಉತ್ತರದಿಂದ ದಕ್ಷಿಣ ಪ್ರವಹಿಸುತ ಬಂದು ಗೊರೂರಿಗೆ ನೈರುತ್ಯ ಭಾಗದಲ್ಲಿ ಪಶ್ಚಿಮದಿಂದ ಪೂರ್ವಕ್ಕೆ ಹರಿಯುತ್ತಿರುವ ಹೇಮಾವತಿಗೆ ಸಂಗಮವಾಗಿರುವ ಯಗಚಿ (ಬದರಿ) ನದಿಗೆ ಅಣೆಯನ್ನು ಕಟ್ಟಿಸಿದನು. ಪಾಳೆಯಗಾರ ಕೃಷ್ಣಪ್ಪನಾಯಕನು ಶ್ರೀ ಯೋಗಾನರಸಿಂಹಸ್ವಾಮಿ ವಿಗ್ರಹವನ್ನು ಪೀಠದಲ್ಲಿ ಪ್ರತಿಷ್ಠಾಪಿಸಿ, ಗರ್ಭಗುಡಿಯನ್ನು ಮತ್ತು ಸುತ್ತ ಕಲ್ಲುಗೋಡೆಯನ್ನು ನಿರ್ಮಿಸಿದ ನಂತರ ಮುಂದೆ ದೊಡ್ಡ ನರಸಯ್ಯ ಮತ್ತು ಅವರ ವಂಶೀಕರು ಅಭಿವೃದ್ಧಿಪಡಿಸಿದರೆಂದು ಹೇಳಲಾಗಿದೆ.

ಹೇಮಾವತಿ ಅಣೆಕಟ್ಟು ಪ್ರಾರಂಭವಾಗುವುದಕ್ಕೆ (೧೯೬೪) ಕೆಲವು ವರುಷಗಳ ಮುಂಚೆ ಆಗ ಊರಿಗೆ ಹಿರಿಯರಾಗಿದ್ದ ಶ್ರೀ ಎಂ. ಕೃಷ್ಣಸ್ವಾಮಯ್ಯಂಗಾರ್‌ರವರು ಊರಿನ ಎಲ್ಲ ದೇವಾಲಯಗಳ ಜೀರ್ಣೋದ್ದಾರವನ್ನು ಮಾಡಿದುದಲ್ಲದೆ, ಅನೇಕ ಭಕ್ತಾದಿಗಳ ನೆರವಿನಿಂದ ಕೈಸಾಲೆ ಮೊಗಸಾಲೆ ಮುಂತಾದುವು ಮಾಡಿಸಿದ್ದರು. (ಇದು ಹಳೆಯ ಕಥೆ ಈಗ ಹೊಸದಾಗಿ ಆಗಬೇಕಿದೆ)

ಪರವಾಸುದೇವರ ದೇವಸ್ಥಾನದ ಪಕ್ಕ ಭೂತಾಕಾರದ ದೊಡ್ಡ ತೇರಿದೆ. ಈ ತೇರಿನ ಎತ್ತರಕ್ಕೆ ಹೋಗಿ ಸಮನಾಗಿ ಕಲ್ಲು ಮಂಟಪ ನಿರ್ಮಿಸಿ ಮೇಲೆ ಮೆಟ್ಟಲು ಅಳವಡಿಸಲಾಗಿದೆ. ಈ ರಥೋತ್ಸವದ ದಿನ ಈ ಮಂಟಪ ಮತ್ತು ತೇರಿನ ಮಧ್ಯೆ ಹಲಗೆ ಇಟ್ಟು ತೇರಿನೊಳಗೆ ಪ್ರವೇಶಿಸಲು, ಓಡಾಡಲು ಇದರಿಂದ ಸುಲಭವಾಗಿದೆ. ಈ ತೇರು ನಾಲ್ಕು ಚಕ್ರಗಳನ್ನೊಳಗೊಂಡ ಗಟ್ಟಿಯಾದ ಮರದಿಂದ ತಯಾರಿಸಲ್ಪಟ್ಟ ಸುಂದರವಾದ ಕೆತ್ತನೆ ಕೆಲಸಗಳನ್ನೊಳಗೊಂಡು ಬೃಹದಾಕಾರವಾಗಿದೆ. ರಥೋತ್ಸವಕ್ಕೆ ನಾಲ್ಕೈದು ದಿನ ಮೊದಲೇ ಅಡಿಕೆ ಬೊಂಬಿನಿಂದ ಎತ್ತರವಾಗಿ ಅಂಕಣ ನಿರ್ಮಿಸಿ ತುದಿಗಳಲ್ಲಿ ದಿಂಬುಗಳನ್ನು ನೇತು ಹಾಕಿರುತ್ತಾರೆ. ನಾಲ್ಕು ಅಂಕಣಗಳ ಮೇಲ್ತುದಿಯಲ್ಲಿ ಕಳಸವಿರುತ್ತದೆ. (ಹಿಂದೆ ಎಂಟು ಅಂಕಣಗಳನ್ನು ಏರಿಸುತ್ತಿದ್ದರಂತೆ! ಗಗನಚುಂಬಿ ಎತ್ತರದಲ್ಲಿ ಕಳಸವು ಚುಕ್ಕಿಯಂತೆ ಕಾಣುತ್ತಿತಂತೆ! ಆದರೆ ಈಗ ಆ ರೀತಿ ಕಟ್ಟುವ ಕುಶಲಮತಿಗಳು ಇಲ್ಲದಿರುವುದರಿಂದಲೂ, ಕಿರಿದಾದ ದಾರಿಯಲ್ಲಿ ಭಾರಿ ಜನಸ್ತೋಮದ ನಡುವೆ ಎಳೆಯುವುದು ಅಪಾಯಕಾರಿ ಸಾಹಸವಾದುದರಿಂದಲೂ ಈಗ ನಾಲ್ಕು ಅಂಕಣಕ್ಕೆ ಸೀಮಿತಗೊಳಿಸಿದ್ದಾರೆ.

ಮಧ್ಯಾಹ್ನದ ವೇಳೆಗೆ ಉತ್ಸವಮೂರ್ತಿಯನ್ನು ಶ್ರೀ ಯೋಗಾನೃಸಿಂಹಸ್ವಾಮಿ ದೇವಸ್ಥಾನದಿಂದ ಅಡ್ಡೆಯಲ್ಲಿಟ್ಟು ಮೆರವಣಿಗೆಯಲ್ಲಿ ಹೊತ್ತು ತಂದು ಈ ತೇರಿನಲ್ಲಿಡುತ್ತಾರೆ. ರಥಸಪ್ತಮಿ ವಿಶೇಷತೆಯ ಒಂದು ಬರಹ ಓದಿದೆ. ಸಪ್ತ ಕುದುರೆಗಳ ರಥವೇರಿದ ಸೂರ್ಯ ತನ್ನ ಪಥವನ್ನು ಉತ್ತರದತ್ತ ತಿರುಗಿಸಿ ಹೊರಡುವ ಪರ್ವಕಾಲವೇ ರಥಸಪ್ತಮಿ. ಹಬ್ಬದ ಕೇಂದ್ರ ಬಿಂದು ಸೂರ್ಯನ ಆರಾಧನೆ. ರಥಸಪ್ತಮಿಯಂದು ಸೂರ್ಯದೇವ ಚಾಂದ್ರಯಾನ ಸಂವತ್ಸರದ ೧೧ನೇ ಮಾಸದ ಮಾಘ ಶುದ್ಧ ಸಪ್ತಮಿ ತಿಥಿ ದಿವಸ ಸಪ್ತಾಶ್ವಗಳಿಂದ ಕೂಡಿದ ರಥವನ್ನೇರುವ ದಿವಸ. ಶ್ರೀಕೃಷ್ಣನು ಧರ್ಮರಾಜನಿಗೆ ರಥಸಪ್ತಮಿ ಬಗ್ಗೆ ಹೇಳಿದ ಒಂದು ಕಥೆ. ಯಶೋವರ್ಮನೆಂಬ ರಾಜನಿಗೆ ಹುಟ್ಟಿದ ಮಗ ಹುಟ್ಟಿನಿಂದಲೇ ರೋಗಿಷ್ಟ. ಜ್ಯೋತಿಷಿಗಳು ರಥಸಪ್ತಮಿ ವ್ರತ ಆಚರಿಸಲು ಹೇಳಿ ರಾಜನು ಸೂರ್ಯಾರಾಧನೆ ಮಾಡಲಾಗಿ ರಾಜಪುತ್ರ ಆರೋಗ್ಯವಂತನಾದನು. ಅದೇ ಅವಧಿಯಲ್ಲಿ ಪಾಂಡವರು ಶ್ರೀಕೃಷ್ಣನ ಮಹಿಮೆ ಪಡೆದಿದ್ದರು. ರಾವಣನನ್ನು ಗೆಲ್ಲಬೇಕಾದಾಗ ಶ್ರೀರಾಮನು ಕೂಡ ಅಗಸ್ತ್ಯ ರ ಉಪದೇಶದಂತೆ ಆದಿತ್ಯ ಹೃದಯದ ಮೂಲಕ ಸೂರ್ಯನ ಆರಾಧನೆ ಮಾಡಿದನೆಂದು ರಾಮಾಯಣದಲ್ಲಿ ಹೇಳಿದೆ. ಸೂರ್ಯಾರಾಧನೆ ಹರಿವಂಶದಲ್ಲಿ ಬಂದಿದೆ. ಮಯೂರನೆಂಬ ಕವಿ ಸೂರ್ಯಶತಕವೆಂಬ ಗ್ರಂಥ ಬರೆದು ಕಳೆದುಕೊಂಡ ಕಣ್ಣನ್ನು ಮರಳಿ ಪಡೆದನೆಂದು ಹೇಳಿದೆ. ಹಿಂದೂ ಪುರಾಣದಲ್ಲಿ ರಥಸಪ್ತಮಿ ಉಲ್ಲೇಖವಿದೆ. ಸಮಸ್ತ ಋಷಿಮುನಿಗಳು ರಥಸಪ್ತಮಿಯಂದು ಸೂರ್ಯನನ್ನು ಪೂಜಿಸುತ್ತಾರಂತೆ..!

ರೀ,ಊಟಕ್ಕೆ ಬನ್ರಿ ಎಂದಳು ಮಡದಿ. ನಾಳೆ ರೆಡಿಯಾಗು ನಮ್ಮೂರಿಗೆ ಹೋಗಿ ಬರೋಣ ಎಂದೆ. ಊರು ಬಿಟ್ಟು ಬಂದರೂ ಹುಟ್ಟೂರು ಮರೆಯುವುದಿಲ್ಲ ನೀವು ಎಂದು ಹೊಟ್ಟೆ ತುಂಬಾ ಊಟಕ್ಕಿಟ್ಟು ಗಾಳಿ ಬೀಸಿದಳು.

ತೇರು ಹರಿದಾವೋ ತಾನಕ್ಕೆ ನಿಂತಾವೊ
ತಾರೋ ಚನ್ನಯ್ಯ ಜವನವ
ತಾರೋ ಚನ್ನಯ್ಯ ಜವನವ ಬಾಳೆಹಣ್ಣ
ಬೇಡಿಕೊಳ್ಳೆ ಮಗಳೆ ಸೆರಗೊಡ್ಡಿ.

ಗೊರೂರು ಅನಂತರಾಜು, ಹಾಸನ.
ಮೊ: ೯೪೪೯೪೬೨೮೭೯.
ವಿಳಾಸ: ಹುಣಸಿನಕೆರೆ ಬಡಾವಣೆ, ೨೯ನೇ ವಾರ್ಡ್,೩ನೇ ಕ್ರಾಸ್, ಶ್ರೀ ಶನೀಶ್ವರ ದೇವಸ್ಥಾನ ರಸ್ತೆ, ಹಾಸನ.

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಗುರುವಾರದಿಂದ ಕಲ್ಲೋಳಿ ಶ್ರೀ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯಲ್ಲಿ “ಮಹಾ ಚೈತ್ರ” ಕಾರ್ಯಕ್ರಮ

ಮೂಡಲಗಿ: ತಾಲೂಕಿನ ಕಲ್ಲೋಳಿ ಪಟ್ಟಣದ ಪ್ರತಿಷ್ಠಿತ ಶ್ರೀ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆ, ಶಿವಗೌಡ ಬಸಗೌಡ ಪಾಟೀಲ ಹಿರಿಯ ಪ್ರಾಥಮಿಕ ಶಾಲೆ...
- Advertisement -

More Articles Like This

- Advertisement -
close
error: Content is protected !!
Join WhatsApp Group