ಕಲ್ಲಾಗದಿರಿ ನೀವು
————————–
ಕಲ್ಲಾಗದಿರಿ ನೀವು ಅಹಲ್ಯೆಯಂತೆ
ಶ್ರೀ ರಾಮನ ಚರಣ ಸ್ಪರ್ಶಕೆ
ಬೆಂಕಿ ಹಾರದಿರಿ ಸೀತೆಯಂತೆ
ಪುರುಷೋತ್ತಮನ ಸಂಶಯದ ಕಿಚ್ಚಿಗೆ
ಕಣ್ಣಿಗೆ ಪಟ್ಟಿ ನ್ಯಾಯವೆ ಗಾಂಧಾರಿ?
ಧೃತರಾಷ್ಟ್ರನ ಕುರುಡುತನಕೆ
ಕೃಷ್ಣನ ಕರೆಯದಿರು ದ್ರೌಪದಿಯೆ
ರಸ್ತೆಯಲಿ ಮಾನ ಭಂಗತನಕೆ
ಯಮನೊಂದಿಗೆ ವಾದ ಮಾಡಿ
ಬೇಡದಿರು ಕುಡುಕನ ಜೀವ ಭಿಕ್ಷೆ
ಗಂಡನ ಆಗಮನಕ್ಕೆ ಕಾಯದಿರು
ತಪದ ದಿಟ್ಟ ಊರ್ಮಿಳೆ
ವರದಕ್ಷಿಣೆ ಕಿರುಕಳಕೆ ಬಲಿಯಾಗದಿರಿ
ತಾರಾ ಮಂಡೊದರಿಯರೆ
ಬಸ್ಸಿನಲ್ಲಿ ಬೀದಿಯಲಿ ಅತ್ಯಾಚಾರ
ನಿರ್ಭಯಾಳ ವೇದನೆ ಯಾತನೆ
ಲಿಂಗ ನಿರ್ಧಾರ ಪತ್ತೆ ನಡೆದಿದೆ
ಸ್ತ್ರೀ ಭ್ರೂಣ ಹತ್ಯೆಗೆ ಕಿರುಚದಿರಿ
ಆಸಿಡ್ ದಾಳಿಗೆ ವಿರೂಪಗೊಳ್ಳುವ
ವಿಶ್ವ ಸುಂದರಿಯರೆ ಒಮ್ಮೆ ಸಿಡಿದೆಳಿರಿ
ಬದುಕುವ ಹಕ್ಕಿಗೆ ಕೂಗಿರಿ
ಸಿಕ್ಕಿಲ್ಲ ತುಳಸಿಗಿನ್ನೂ ನ್ಯಾಯ
ನಿಂತಿಲ್ಲ ರುಕ್ಮಿಣಿಯ ನಿಟ್ಟುಸಿರು
ಸವತಿ ಲಲನೆಯರ ಕಾಟ
ಸಮರ ಸಂಘರ್ಷಕೆ ಸಜ್ಜಾಗ ಬನ್ನಿ
ರಕ್ಕಸರ ರುಂಡ ಚೆಂಡಾಡ ಬನ್ನಿ
ಬನ್ನಿ ಬನ್ನಿ ಬನ್ನಿ ಅಬಲೆಯರೇ
ಹೊಸ ಬದುಕಿಗೆ ಹೆಜ್ಜೆ ಹಾಕ ಬನ್ನಿ
ನವ ಕ್ರಾಂತಿಯ ಗೀತೆ ಹಾಡ ಬನ್ನಿ
ಬುದ್ಧ ಬಸವರ ಪಥಕೆ ನಡೆಯ ಬನ್ನಿ
——————————————
ನಿನ್ನೊಳಗೆ ನೀನಿರುವೆ
ಕನಸು ಬಯಕೆಯ ಗೂಡು
ಕಷ್ಟ ಸುಖಗಳ ಬೀಡು
ನಿನ್ನೊಳಗೆ ನೀನಿರುವೆ
ದೈವ ಪ್ರಜ್ಞೆಯ ಬೆಳಕು
ಹೊರಗೆ ಉಕ್ಕುವ ನಗೆ
ಒಳಗೊಳಗೇ ಚಿಂತನ
ನಿನ್ನ ಧ್ಯಾನದ ಉಸಿರು
ಸತ್ಯ ಶಾಂತಿ ಶೋಧನ
ಅರಿವೇ ಗುರು
ಸಮತೆ ಪ್ರೀತಿ ಜೀವನ
ನಿನಗಿದೆ ಹಿರಿಯ ಪಟ್ಟ
ನನ್ನ ಮನದ ಪ್ರಾರ್ಥನ
ಬುದ್ಧ ಬಸವನ ಮಗಳು
ನೆಲ ಮುಗಿಲಿನ ಚೇತನ
ದಿಟ್ಟ ಗುರಿ ದೂರ ದಾರಿ
ನನ್ನ ನಿನ್ನಯ ಪಯಣ
ಹಸಿರು ಕಾಡಿನ ಹೂವು
ನಮ್ಮ ಸ್ನೇಹ ಪ್ರೀತಿಯ ಬಂಧನ
__________________________
ಹೆಜ್ಜೆ ಹಾಕು ಗೆಳತಿ
ಭದ್ರವಾಗಿ ಕಾಪಾಡು
ನನ್ನ ನಿನ್ನಯ ಆಸ್ತಿ
ಅಲ್ಲ ಅದು ರನ್ನ ಚಿನ್ನ
ಭಾವ ಜೀವದ ಪ್ರೀತಿ
ನಿತ್ಯ ನಿನಗೆ
ನೂರು ಕವನ
ಹೃದಯ ಭಾವದ
ಮಧುರ ಜೀವನ
ಹೆಜ್ಜೆ ಹಾಕು ಗೆಳತಿ
ನಿನಗೆ ಪ್ರೀತಿ ನಮನ
ಬಾಳ ಬುತ್ತಿ ಕಟ್ಟಿದೆ
ಹಾಲು ಹಣ್ಣು ಭಾವನ
ಹಕ್ಕಿ ಪಕ್ಷಿ ಹಾಡುತಿವೇ
ಸತ್ಯ ಸಮತೆ ನೂತನ
ಬಿರಿದ ನೆಲ ಸುರಿವ ಮಳೆ
ಅಚ್ಚ ಹಸುರಿನ ಕಾನನ
ಡಾ.ಶಶಿಕಾಂತ ಪಟ್ಟಣ -ಪೂನಾ