ಇಂಥವರಿಗೆ ಏನು ಹೇಳಲಿ ?
ಎಲ್ಲಾ ದಿನಗಳು ನಿಮ್ಮವೇ
ಇವತ್ತೇನು ಬಿಡು ವಿಶೇಷ
ಮಹಿಳಾ ದಿನ ಅಂತ
ಮಾಡೋಕಿಲ್ಲ ಕೆಲಸ….
ಮೆಸೇಜ್ ಮಾಡಿದ್ರ, ವಿಶ್ ಹೇಳಿದ್ರ ಅಷ್ಟ ಏನ ಪ್ರೀತಿ?
ದಿನಾನು ಇರ್ತತಿ
ಇದ ರೀತಿ…!!
ವಿಶ್ ಅಂತ,ಗಿಫ್ಟ್ ಅಂತ
ಮಾಡಕ್ಕೆ ಬೇರೆ ಕೆಲಸ ಇಲ್ಲ
ಯಾರು ಹೇಳಿದ್ದೋ ಈ ದಿನ
ಅಂತವರಿಗೆ ಬುದ್ದಿ ಇಲ್ಲ
ವಟಗುಡುವ, ಗುರ್ರೆನುವ
ಗಂಡನ ಪರಿ
ಮರೆತೋಯ್ತು ಸೆಲೆಬ್ರೇಷನ್
ಎನ್ನುವ ಗುರಿ…
ಎದ್ದು ಎಲ್ಲ ಕೆಲಸ ಮುಗಿಸಿ
ಊಟದ ಡಬ್ಬಿ ಬ್ಯಾಗಲ್ಲಿ
ಹಾಕಿ ಓಡುವ ನನಗೆ
ಮನಸ್ಸಿಲ್ಲ, ಕನಸಿಲ್ಲ
ಗಾಣದೆತ್ತಿನ ದುಡಿತ
ಇವರ ಮಗಳು, ಪತ್ನಿ,ತಾಯಿ
ಎನ್ನುವದರಲ್ಲಿ ನನ್ನ ಆಯುಷ್ಯ
ಮುಗೀತು…
ವಿಶ್ ಮಾಡಿದ್ರನ ಖರೇ ಏನ
ಅನ್ನುವವರಿಗೆ ಏನು ಹೇಳಲಿ?
ನನ್ನೆಲ್ಲ ದುಡಿಮೆಗೆ
ನಿನ್ನೊಲವ ತೋರುವ ದಾರಿ ಎಂದು!
ಬೋರುಗಲ್ಲಿನ ಮೇಲೆ ನೀರು ಸುರಿದಂತೆ ಸರಿ!
ಎಲ್ಲೋ ಮಹಿಳಾ ಮಂಡಳದಲ್ಲಿ ಮಹಿಳೆಯರಷ್ಟೇ ಕೂಡಿ
ಮಹಿಳಾ ದಿನ ಆಚರಿಸುವ ಸುದ್ದಿ ಫೋನಲ್ಲಿ ನೋಡಿ
ಗಂಡು ಮಗನ ಬಯಸಿ
ಗುಡಿ ಸುತ್ತುವ ತಾಯಿಗೆ ಏನೆಂದು ಹೇಳಲಿ…
ಡಿಗ್ರಿಗಳ ಮಾಲೆ ,
ಕೈತುಂಬಾ ಸಂಬಳ,
ಹೋದಲ್ಲೆಲ್ಲ ಗೌರವ
ಕಡಿಮೆಯಿಲ್ಲ ಯಾವುದಕ್ಕೂ
ಕೋಟಿ ಮನೆಯ ಒಡತಿ
ಕಾರಿನಲ್ಲಿಯೇ ಪಯಣ!
ವಿಶ್, ಗಿಫ್ಟ್ …ಹುಂ ಎಲ್ಲವನೂ
ಮನದ ಮೂಲೆಗೆ ಸರಿಸಿ
ಕೆಂಗಣ್ಣಿನ ಕರೆಗೆ ಹೆದರಿ
ಕಾರು ಹತ್ತುವುದೊಂದೆ ದಾರಿ
ಗಂಡನ ಪಕ್ಕ ಉತ್ಸವ ಮೂರ್ತಿ
ವೇದಿಕೆ ಮೇಲೆ ಭಾಷಣ
ಮಹಿಳಾ ಸಬಲೀಕರಣ
ಅಲ್ಲೆಲ್ಲೋ ಯಾರೋ ಕಿಸಕ್ಕೆಂದು ನಕ್ಕಿದ್ದು
ನನಗೆ ಗೊತ್ತಾಗಲೇ ಇಲ್ಲ…
ಮೀನಾಕ್ಷಿ ಸೂಡಿ
ಕವಯತ್ರಿ,ಲೇಖಕಿ
ಕಿತ್ತೂರು