ಸರಿಯಾಗಿ ಪಡಿತರ ವಿತರಿಸದ ನ್ಯಾಯಬೆಲೆ ಅಂಗಡಿಗಳ ಲೈಸೆನ್ಸ್ ರದ್ದು ಮಾಡಿ

Must Read

ಮೂಡಲಗಿ – ಕಳೆದ ಎರಡು ಮೂರು ದಿನಗಳಿಂದ ರೇಷನ್ ಅಂಗಡಿಗಳ ಮುಂದೆ ಸಿಕ್ಕಾಪಟ್ಟೆ ಜನರು ರೇಷನ್ ಗಾಗಿ ಮುಗಿಬಿದ್ದಿದ್ದು ಹಲವರಿಂದ ಜಗಳಗಳು ಕೂಡ ಸಂಭವಿಸಿವೆ.

ರೇಷನ್ ಅಂಗಡಿಯ ಮುಂದೆ ಜಮಾಯಿಸಿರುವ ಜನರು ಆದಷ್ಟು ಬೇಗ ರೇಷನ್ ಪಡೆಯುವ ಜಿದ್ದಿಗೆ ಬಿದ್ದು ಒಬ್ಬರ ಮೇಲೊಬ್ಬರು ಬೀಳುತ್ತಿದ್ದಾರೆ ಇದಕ್ಕೆ ಕಾರಣ ಪಡಿತರ ಅಕ್ಕಿಯನ್ನು ಕೇವಲ ನಾಲ್ಕು ದಿನಗಳವರೆಗೆ ಸರಬರಾಜು ಮಾಡಲಾಗುವುದು ಎಂದು ಜನರು ತಿಳಿದುಕೊಂಡು ಆದಷ್ಟು ಬೇಗ ತಾನೇ ಪಡೆದುಕೊಳ್ಳಬೇಕು ಎಂದು ಮುಗಿಬೀಳುತ್ತಿದ್ದಾರೆ. ಇದರಿಂದ ವಯಸ್ಸಾದವರು, ಅಶಕ್ತ ಹೆಣ್ಣು ಮಕ್ಕಳು ಸರ್ಕಾರದ ಪಡಿತರ ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ.

ಆಹಾರ, ನಾಗರಿಕ ಸರಬರಾಜು ಹಾಗೂ ಸಾರ್ವಜನಿಕ ವ್ಯವಹಾರಗಳ ಇಲಾಖೆಯು ಬಿಡುಗಡೆ ಮಾಡಿರುವ ‘ನಾಗರಿಕ ಸನ್ನದು ‘ ಎಂಬ ಕೈಪಿಡಿಯ ಪ್ರಕಾರ ಪಡಿತರ ಅಂಗಡಿಯವರು ಬಡಜನರಿಗೆ ಇಡೀ ತಿಂಗಳು ಹಂಚಬೇಕು. ಪ್ರತಿ ಮಂಗಳವಾರ ಪಡಿತರ ಅಂಗಡಿಗೆ ರಜೆಯನ್ನು ಸರ್ಕಾರ ಘೋಷಿಸಿದೆ. ಉಳಿದ ದಿನಗಳಲ್ಲಿ ಪಡಿತರ ಹಂಚಬೇಕು ಆದರೆ ನಗರದಲ್ಲಿ ಕಳೆದ ಕೆಲವು ವರ್ಷಗಳಿಂದ ನೋಡಲಾಗಿ ನ್ಯಾಯಬೆಲೆ ಅಂಗಡಿಯವರು ಕೇವಲ ನಾಲ್ಕೈದು ದಿನಗಳು ಮಾತ್ರ ಪಡಿತರ ಹಂಚಿಕೆ ಮಾಡುತ್ತಿದ್ದು ಇದರಿಂದ ಸಾರ್ವಜನಿಕರಿಗೆ ಅನ್ಯಾಯವಾಗುತ್ತಿದೆ. ಇತ್ತ ಅಕ್ಕಿಯ ಕಾಳಸಂತೆಕೋರರು ಹೆಚ್ಚಾಗುತ್ತಿದ್ದಾರೆ.

ಅದರಲ್ಲೂ ಈಗ ಸರ್ಕಾರ ೧೫ ಕಿಲೋ ಅಕ್ಕಿ ಕೊಡಲು ಶುರು ಮಾಡಿದ್ದರಿಂದ ಅನಧಿಕೃತ ಅಕ್ಕಿ ಮಾರಾಟ ಹಾಗೂ ಸಾಗಾಟ ಹೆಚ್ಚಾಗಿದ್ದು ಈ ಬಗ್ಗೆ ತಹಶೀಲ್ದಾರರು, ಆಹಾರ ಇಲಾಖೆಯ ಅಧಿಕಾರಿಗಳು ಗಮನ ಕೊಡಬೇಕಾಗಿದೆ. ಅಷ್ಟಕ್ಕೂ ಕನಿಷ್ಠ ಹದಿನೈದು ದಿನಗಳವರೆಗೆ ಪಡಿತರ ಹಂಚಿಕೆ ಮಾಡಬೇಕಾದವರು ಕೇವಲ ನಾಲ್ಕು ದಿನಗಳವರೆಗೆ ಮಾತ್ರ ಯಾಕೆ ಹಂಚುತ್ತಾರೆ ಎಂಬುದನ್ನು ಇಲಾಖೆಯ ಅಧಿಕಾರಿಗಳು ಪ್ರಶ್ನಿಸಬೇಕಾಗಿದೆ. ಇದು ಹಲವು ವರ್ಷಗಳಿಂದ ನಡೆದುಕೊಂಡು ಬಂದಿದ್ದರೂ ತಾಲೂಕಾ ಆಡಳಿತ, ಆಹಾರ ಇಲಾಖೆಗಳು ಇತ್ತ ಕಡೆ ಗಮನ ಹರಿಸದೇ ಇರುವುದು ಖಂಡನೀಯ.

ಕೇವಲ ನಾಲ್ಕು ದಿನ ಮಾತ್ರ ಪಡಿತರ ಕೊಡುತ್ತಾರೆ ಎಂಬ ವದಂತಿ ಗದ್ದಲ ಹೆಚ್ಚಾಗಲು ಒಂದು ಕಾರಣವಾದರೆ, ನಗರದ ಎಲ್ಲಾ ರೇಷನ್ ಅಂಗಡಿಗಳಿಗೆ ಒಂದೇ ಸಲ ರೇಷನ್ ಪೂರೈಕೆಯಾಗದ್ದರಿಂದ ಕೂಡ ಗದ್ದಲ ಹೆಚ್ಚಾಗುತ್ತಿದೆ. ಯಾಕೆಂದರೆ ಒಂದು ರಾಷ್ಟ್ರ ಒಂದೇ ರೇಷನ್ ಅಡಿಯಲ್ಲಿ ಯಾರು ಬೇಕಾದರೂ ಎಲ್ಲಿ ಬೇಕಾದರೂ ರೇಷನ್ ಪಡೆಯಬಹುದು. ಒಂದು ಗಲ್ಲಿಯ ಅಂಗಡಿಗೆ ಪಡಿತರ ಬಂದರೆ ಬೇರೆ ಗಲ್ಲಿಯ ಜನರು ಬಂದು ಮುಗಿಬೀಳುವುದರಿಂದ ಸ್ಥಳೀಯ ಗ್ರಾಹಕರಿಗೆ ಅನ್ಯಾಯವಾಗುತ್ತಿದೆ. ಆದ್ದರಿಂದ ನಗರದ ಎಲ್ಲಾ ಅಂಗಡಿಗಳನ್ನು ಏಕಕಾಲಕ್ಕೆ ಶುರು ಮಾಡುವುದು ಉತ್ತಮವಾಗಿದೆ.

ಸದ್ಯಕ್ಕೆ ಮೂಡಲಗಿಯ ತಹಶೀಲ್ದಾರರು, ಫುಡ್ ಇನ್ಸಪೆಕ್ಟರರು ಪಡಿತರ ಅಂಗಡಿಗಳಿಗೆ ಸೂಚನೆ ನೀಡಿ ಕನಿಷ್ಠ ೧೫ ದಿನಗಳವರೆಗೆ ರೇಷನ್ ನೀಡುವಂತೆ ಮಾಡಲೇಬೇಕಾಗಿದೆ. ಇದರಿಂದ ಜನಜಂಗುಳಿ ಕಡಿಮೆಯಾಗುತ್ತದೆ. ಯಾರು ಕೊಡುವುದಿಲ್ಲವೋ ಅಂಥವರ ಲೈಸೆನ್ಸ್ ಅನ್ನು ಮುಲಾಜಿಲ್ಲದೆ ರದ್ದು ಮಾಡಬಹುದು. ಅದರ ಜೊತೆಗೆ ರೇಷನ್ ಅಕ್ಕಿಯ ಕಾಳ ಸಂತೆಯನ್ನೂ ತಡೆಯಲು ಕ್ರಮ ಕೈಗೊಳ್ಳಬೇಕಾಗಿದೆ. ಯಾಕೆಂದರೆ ಸರ್ಕಾರದ ನ್ಯಾಯ ಬೆಲೆ ಅಂಗಡಿಗಳಿಂದ ಬಡಜನತೆಗೆ ಅನ್ಯಾಯವಾಗಬಾರದು.

ಉಮೇಶ ಮ.ಬೆಳಕೂಡ
೯೪೪೮೮೬೩೩೦೯

Latest News

ಬೆಳ್ಳಿ ಬಂಗಾರ ಕದ್ದ ಖದೀಮರ ಹೆಡೆಮುರಿ ಕಟ್ಟಿದ ಗೋಕಾಕ ಪೋಲಿಸರು

ಗೋಕಾಕ ನಗರದ ಬೀಗ ಹಾಕಿದ್ದ ಮನೆಯೊಂದರ ಕೀಲಿ ಮುರಿದು ಬೆಳ್ಳಿ ಬಂಗಾರ ಸೇರಿದಂತೆ ನಗದು ಹಣ ಕದ್ದು ಪರಾರಿಯಾಗಿದ್ದ ಕುಖ್ಯಾತ ಖದೀಮರನ್ನು ಗೋಕಾಕ ಪೋಲಿಸರು ಬಂಧಿಸುವಲ್ಲಿ...

More Articles Like This

error: Content is protected !!
Join WhatsApp Group