ಚಿಲುಮೆಯಂತೆ ಚಿಮ್ಮುವ ಉತ್ಸಾಹವನ್ನು ಅಪ್ಪಿಕೊಳ್ಳಿ

Must Read

ತ್ಸಾಹ ಮಲಗಿಸಕೊಡುವದಿಲ್ಲ. ಆಲಸ್ಯ ಏಳಿಸಿಕೊಡುವದಿಲ್ಲ. ಎನ್ನುವ ಗಾದೆ ಮಾತು ನಿತ್ಯ ಜೀವನದಲ್ಲಿ ಅದೆಷ್ಟು ಸತ್ಯ ಎನಿಸುತ್ತದೆ. ಉತ್ಸಾಹ ನಮ್ಮ ಜೀವನಕ್ಕೆ ಪೆಟ್ರೊಲ್ ಇದ್ದಂತೆ ನಂದಾ ದೀಪದಂತೆ ಉರಿಯುವ ದೀಪಕ್ಕೆ ಆಲಸ್ಯತನವು ಬಿರುಗಾಳಿಯಿದ್ದಂತೆ. ಪ್ರತಿಯೊಂದಕ್ಕೂ ಗೊಣಗುಡುವ ನಮ್ಮ ಚಟಕ್ಕೆ ಮೂಲ ಕಾರಣ ಯಾವುದರಲ್ಲಿಯೂ ಉತ್ಸಾಹ ಇಲ್ಲದಿರುವದೇ ಆಗಿದೆ.

ನಿರುತ್ಸಾಹವು ಅನೇಕ ಸಮಸ್ಯೆಗಳನ್ನು ಸಾಲು ಸಾಲಾಗಿ ನಮ್ಮೆದುರಿಗೆ ನಿಲ್ಲಿಸುತ್ತದೆ. ಎನ್ನುವದು ಗೊತ್ತಿದ್ದರೂ ಗಡಿಬಿಡಿಯ ಆಧುನಿಕ ಜೀವನದ ಶೈಲಿಯಲ್ಲಿ ನಿರುತ್ಸಾಹವು ನಮ್ಮಲ್ಲಿ ಮನೆಮಾಡುತ್ತಿದೆ. ಉತ್ಸಾಹವನ್ನು ಕಳೆದುಕೊಂಡರೆ ಜೀವನದ ಪಯಣವು ಮಕರಂದವನ್ನು ಕಳೆದುಕೊಂಡ ದುಂಬಿಯಂತಾಗುತ್ತದೆ. ನಾವಿಡುವ ಪ್ರತಿಯೊಂದು ಹೆಜ್ಜೆಯೂ ಭಾರವೆನಿಸುವ ಭಾವ ಹುಟ್ಟಿಸುತ್ತದೆ. ನೀರಸತೆಗೆ ಕಾರಣವಾಗುವ ನಿರುತ್ಸಾಹವನ್ನು ತೊರೆದು ಚಿಲುಮೆಯಂತೆ ಚಿಮ್ಮುವ ಉತ್ಸಾಹವನ್ನು ಅಪ್ಪಿಕೊಂಡು ಸಾಗುವದೇ ಜೀವಂತಿಕೆಯ ಲಕ್ಷಣ.

“ಜೀವನವನ್ನು ರಸಮಯಗೊಳಿಸುವ ಮೂಲಧಾತುವೇ ಉತ್ಸಾಹ..ಸದಾ ಕ್ರಿಯಾಶೀಲವಾಗಿಸುವ ಭಾವವೇ ಉತ್ಸಾಹ. ಕಣ್ಣು ಕಂಡು ಕನಸನ್ನು ಬೆನ್ನಟ್ಟಿ ನನಸಾಗಿಸಲು ಬಿಟ್ಟು ಬಿಡದಂತೆ ಪ್ರೇರೇಪಿಸುವದೇ ಉತ್ಸಾಹ..”

ಇತಿಹಾಸದ ಪುಟಗಳನ್ನು ತಿರುವಿದಾಗ ಉತ್ಸಾಹಭರಿತ ವ್ಯಕ್ತಿಗಳು ಮಾಡಿದ ಅಮೋಘ ಸಾಧನೆಗಳು ನಮಗೆ ಕಾಣಸಿಗುತ್ತವೆ. ಸಾವಿರ ಸಾರಿ ಪ್ರಯತ್ನಿಸಿದರೂ ಬಲ್ಬನ್ನು ಆವಿಷ್ಕರಿಸಲು ಸಾಧ್ಯವಾಗದಿದ್ದ ಮೈಕೆಲ್ ಫಾರಡೆ ಉತ್ಸಾಹ ಕಳೆದುಕೊಂಡಿದ್ದರೆ ನಾವಿಂದು ಕತ್ತಲೆಯ ಜಗತ್ತಿನಲ್ಲಿ ಬದುಕಬೇಕಿತ್ತು. ಮೈಕೆಲ್ ಫಾರಡೆಗೆ ಮಹಿಳೆಯೊಬ್ಬಳು ಬೆಳಕು ನೀಡುವ ಈ ಸಣ್ಣ ವಸ್ತುವನ್ನು ಆವಿಷ್ಕರಿಸಲು ನೀವು ಸಾವಿರ ಬಾರಿ ಬೇರೆ ಬೇರೆ ರೀತಿಯಲ್ಲಿ ಪ್ರಯೋಗ ನಡೆಸಿದಿರಾ? ಎಂದು ವ್ಯಂಗ್ಯವಾಗಿ ಕೇಳಿದಳು. ಅದಕ್ಕೆ ಫಾರಡೆ ಬಲ್ಬ್ ತಯಾರಿಕೆಗೆ ಆ ಪ್ರಯೋಗಗಳು ಸಹಾಯಕವಾಗದೆ ಇರಬಹುದು. ಆದರೆ ಅವೆಲ್ಲವುಗಳಿಂದ ಬಲ್ಬ್ ತಯಾರಿಸಲು ಸಾಧ್ಯವಿಲ್ಲ ಎನ್ನುವ ಅಂಶ ಸಾಬೀತಾಯಿತು. ಎಂದಾಗ ಇಂಥ ಉತ್ತರ ನಿರೀಕ್ಷಿಸದ ಮಹಿಳೆಯ ಮುಖ ಬಿಳಚಿಕೊಂಡಿತ್ತು.

ಹೀಗೆ ನಿರಂತರವಾಗಿ ಉಳಿಸಿಕೊಳ್ಳುವ ಆಸಕ್ತಿಯೇ ಉತ್ಸಾಹ. ಉತ್ಸಾಹ ಅಸಾಧ್ಯವೆನಿಸುವ ಕಾರ್ಯಗಳನ್ನು ಸಾಧ್ಯವಾಗಿಸುತ್ತದೆ. ಮನುಷ್ಯನ ಇಂದಿನ ಸೌಕರ್ಯಭರಿತ ಜೀವನಕ್ಕೆ ಕಾರಣ ಉತ್ಸಾಹದ ಹೊರತು ಮತ್ತೇನಿಲ್ಲ. ಉತ್ಸಾಹ ನಮ್ಮಲ್ಲಿ ಅಂತಹ ಚೈತನ್ಯವನ್ನು ತುಂಬುತ್ತದೆ.
ಕಡುಬಡತನವನ್ನು ಬೆನ್ನಿಗಂಟಿಸಿಕೊಂಡು ಹುಟ್ಟಿದ್ದ ಜೇಮ್ಸ್ ಎ ಫಿಗರ್ ಎಂಬ ಬಾಲಕನೊಬ್ಬ ಜಗತ್ತಿನ ಹಿರಿಯಣ್ಣನೆಂದು ಕರೆಯಿಸಿಕೊಳ್ಳುವ ಅಮೇರಿಕಾದ ಸುಪ್ರಸಿದ್ಧ ಅಧ್ಯಕ್ಷನಾಗಲು ಪ್ರಮುಖ ಕಾರಣ ಅವನಲ್ಲಿದ್ದ ಅದಮ್ಯ ಉತ್ಸಾಹ.

ಸಣ್ಣ ಸಣ್ಣ ಇರುವೆಗಳು ಸಂಘಟಿತವಾಗಿ ಶಿಸ್ತಿನಿಂದ ತಮ್ಮ ವಾಸಕ್ಕೆ ಹುತ್ತಗಳನ್ನು ಕಟ್ಟಿಕೊಳ್ಳುತ್ತವೆ. ಅವುಗಳ ಹಿಂದಿರುವ ದೊಡ್ಡ ಬಲ ಉತ್ಸಾಹ. ಉತ್ಸಾಹ ಬಲವಾಗಿ ಕಾರ್ಯ ನಿರ್ವಹಿಸುತ್ತದೆ. ಉತ್ಸಾಹಕ್ಕಿಂತ ಮಿಗಿಲಾದ ಬಲ ಇನ್ನೊಂದಿಲ್ಲವೆಂದರೂ ತಪ್ಪಿಲ್ಲ. ಅಗಾಧ ಶಕ್ತಿ ಹೊಂದಿರುವ ಯುವ ಪೀಳಿಗೆ ಕ್ರಿಯಾಶೀಲರಾಗುವದಕ್ಕೆ ಮನಸ್ಸು ಮಾಡುತ್ತಿಲ್ಲ ಇದಕ್ಕೆ ಕಾರಣ ನಿರುತ್ಸಾಹ ಮತ್ತು ಕೆಲ ಯುವಕರು ಶೀಘ್ರದಲ್ಲಿಯೇ ಸಕ್ಸಸ್ ಗಳಿಸಬೇಕೆನ್ನುವ ಹಂಬಲದಲ್ಲಿರುವ ಅವರಿಗೆ ಅಪಜಯ ಕಟ್ಟಿಟ್ಟ ಬುತ್ತಿ.

ವೈಫಲ್ಯಗಳು ಅವರಲ್ಲಿ ನಿರುತ್ಸಾಹವನ್ನುಂಟು ಮಾಡಿವೆ. ಅಡ್ಡ ಮಾರ್ಗದ ಯಶಸ್ಸಿಗೆ ಕೈ ಹಾಕದೆ ಉತ್ಸಾಹದಿಂದ ಪ್ರಾಮಾಣಿಕ ಪ್ರಯತ್ನ ಮಾಡುವಂತಹ ಮನಸ್ಥಿತಿ ಬೆಳಸಿಕೊಂಡರೆ ಸಕ್ಸಸ್ ಗ್ಯಾರಂಟಿ ಎನ್ನುವದಕ್ಕೆ ಕ್ರಿಕೆಟ್ ದೇವರೆಂದು ಹೆಸರಾದ ಸಚಿನ್ ತೆಂಡೂಲ್ಕರ್. ಜಗತ್ತು ಕಂಡ ದೈತ್ಯ ಬಾಕ್ಸರ್ ಮಹಮ್ಮದ ಅಲಿ, ಮೇರಿಕೋಮ್, ಮಿಲ್ಕಾ ಸಿಂಗ್ ಸಾನಿಯಾ ಮಿರ್ಜಾ ಕಿರಣ್ ಬೇಡಿ ಇಂಥ ಅನೇಕ ಸಾಧಕರ ಪಟ್ಟಿಗಳೇ ಸಾಕ್ಷಿ.

ರಾಕ್ ಫೆಲ್ಲರ್ ಎನ್ನುವ ಅಮೇರಿಕದ ಯುವಕ ತಾನು ಶ್ರೀಮಂತ ಎಂದು ಸೊಕ್ಕಿನಿಂದ ಮೆರೆಯುತ್ತಿದ್ದ ತನ್ನಲ್ಲಿದ್ದ ಹಣವನ್ನು ಸಮಾಜದ ಸದ್ಬಳಕೆಗೆ ವಿನಿಯೋಗಿಸುವಲ್ಲಿ ಉತ್ಸಾಹ ತೋರಿರಲಿಲ್ಲ. ಸ್ವಾಮಿ ವಿವೇಕಾನಂದರು ನೀನು ಶ್ರೀಮಂತನಲ್ಲ. ದೇವರ ಏಜೆಂಟ್ ಮಾತ್ರ. ನಿನ್ನಲ್ಲಿರುವ ಹಣ ಆ ದೇವನದೆ ನೀನು ಅದನ್ನು ಜನಹಿತಕ್ಕಾಗಿ ಬಳಸಬೇಕು. ಎಂಬ ಕಿವಿಮಾತನ್ನು ಹೇಳಿದ ಮೇಲೆ ರಾಕ್ ಫೇಲ್ಲರ್ ಅತ್ಯುತ್ಸಾಹದಿಂದ ತನ್ನ ಹೆಸರಿನಲ್ಲಿ ದೊಡ್ಡ ಫೌಂಡೇಶನ್ ಬೆಳೆಸಿದ. ಅದು ಇಂದಿಗೂ ಅನೇಕ ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವಾಗುತ್ತಿದೆ.

ದಾಸ್ಯದಲ್ಲಿರುವ ಭಾರತದ ನೇತೃತ್ವ ವಹಿಸಿದ ಮಹಾತ್ಮಾ ಗಾಂಧಿಜಿಯವರಲ್ಲಿದ್ದ ಉತ್ಸಾಹ ಅಸಂಖ್ಯಾತ ಸ್ವಾತಂತ್ರ್ಯ ಯೋಧರಿಗೆ ಪ್ರೇರಣೆಯಾಯಿತು. ಆ ಪ್ರೇರಣೆಯ ಫಲವೆ ನಾವಿಂದು ಅನುಭವಿಸುತ್ತಿರುವ ಸ್ವಾತಂತ್ರ್ಯ ಎಂಬುದನ್ನು ನೆನಪಿನಲ್ಲಿಡಲೇಬೇಕು. ಅತಿ ಸಣ್ಣ ವಯಸಿನಲ್ಲಿ ನಾಲ್ಕು ಲಕ್ಷ ಸೈನಿಕರ ಜೊತೆಗೂಡಿ ಅರ್ಧ ಜಗತ್ತನ್ನು ಗೆದ್ದ ಅಲೆಗ್ಜಾಂಡರ್‌ನ ಗೆಲುವಿನ ಗುಟ್ಟು ಬತ್ತದ ಸೆಲೆಯಂತಿದ್ದ ಉತ್ಸಾಹ.
ಅಂತರಂಗದ ಭಾವವಾಗಿರುವ ಉತ್ಸಾಹವಿರದಿದ್ದರೆ ಯಾವ ಕಾರ್ಯವೂ ಯಶ ಕಾಣದು. ಬರೀ ಕನಸು ಕಂಡರೆ ಮನಸ್ಸಿನಲ್ಲಿ ಮಂಡಿಗೆ ತಿಂದಂತಾಗುತ್ತದೆ. ಉತ್ಸಾಹದ ಒರತೆ ಸದಾ ಜಿನುಗುವಂತೆ ನೋಡಿಕೊಂಡರೆ ಕನಸುಗಳೆಲ್ಲ ನನಸಾಗುತ್ತವೆ. ಹಾಗಾದರೆ ತಡವೇಕೆ? ಚಿಲುಮೆಯಂತೆ ಚಿಮ್ಮುವ ಉತ್ಸಾಹವನ್ನು ಅಪ್ಪಿಕೊಳ್ಳಿ ಯಶಸ್ಸಿನ ಜೇನು ತುಂಬಿದ ಜೀವನವನ್ನು ನಿಮ್ಮದಾಗಿಸಿಕೊಳ್ಳಿ.

ಶ್ರೀಮತಿ.ಜಯಶ್ರೀ. ಅಬ್ಬಿಗೇರಿ
ಆಂಗ್ಲ ಭಾಷಾ ಉಪನ್ಯಾಸಕರು
ಸ ಪ ಪೂ ಕಾಲೇಜು
ಹಿರೇಬಾಗೇವಾಡಿ
ತಾ: ಜಿ: ಬೆಳಗಾವಿ
೫೯೧೧೦೯
೯೪೪೯೨೩೪೧೪೨

Latest News

ವೈ ಬಿ ಕಡಕೋಳ ವರಿಗೆ ಗೌರವ ಸನ್ಮಾನ

ಸವದತ್ತಿ : ತಾಲೂಕಿನ ಶಿಕ್ಷಕ ಸಾಹಿತಿ ವೈ. ಬಿ. ಕಡಕೋಳ ಅವರಿಗೆ ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ಸಲ್ಲಿಸಿದ ತಲ್ಲೂರು ರಾಯನಗೌಡರು, ಸಮಗ್ರ...

More Articles Like This

error: Content is protected !!
Join WhatsApp Group