ಜನಿವಾರ ಹಾಕಿದ್ದಕ್ಕಾಗಿ ಬ್ರಾಹ್ಮಣ ವಿದ್ಯಾರ್ಥಿಗೆ ಸಿಇಟಿ ಪರೀಕ್ಷೆಗಿಲ್ಲ ಎಂಟ್ರಿ

0
70

ಬೀದರ : ಜನಿವಾರ ಹಾಕಿದ ಕಾರಣದಿಂದ ಬ್ರಾಹ್ಮಣ ವಿದ್ಯಾರ್ಥಿಯೊಬ್ಬನಿಗೆ ಸಿಇಟಿ ಪರೀಕ್ಷೆಗೆ ಅವಕಾಶ ನೀಡದೆ ವಾಪಸ್ ಕಳಿಸಿ ಜಾತಿನಿಂದನೆ ಮಾಡಿದ ಅಮಾನವೀಯ ಪ್ರಕರಣ ಸಾಮಾಜಿಕ ಸಮಾನತೆ ಸಂದೇಶ ಸಾರಿದ ಬಸವನಾಡು, ಶರಣಭೂಮಿ ಬೀದರ್ ನಲ್ಲಿ ನಡೆದಿದೆ.

ಬೀದರ್ ನಗರದ ಮನ್ನಳ್ಳಿ ರಸ್ತೆಯಲ್ಲಿರುವ ಸಾಯಿಸ್ಫೂರ್ತಿ ಕಾಲೇಜಿನ ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ಗುರುವಾರ ನಡೆದ ಘಟನೆ……

ಕೇಂದ್ರದೊಳಗೆ ಪ್ರವೇಶ ನೀಡುವಾಗ ತಪಾಸಣೆ ಮಾಡುವ ಪೊಲೀಸ್ ಹಾಗೂ ಶಿಕ್ಷಣ ಇಲಾಖೆ ಸಿಬ್ಬಂದಿಗಳು ವಿದ್ಯಾರ್ಥಿ ಸುಚಿವೃತ ಕುಲಕರ್ಣಿ ಎಂಬಾತನ ತಪಾಸಣೆ ಮಾಡುವ ವೇಳೆ ಜನಿವಾರ ಹಾಕಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ತಪಾಸಣಾ ಅಧಿಕಾರಿಗಳು, ಈ ದಾರ (ಜನಿವಾರ) ಹಾಕಿ ಪರೀಕ್ಷೆಗೆ ಬಂದರೆ‌ ಹೇಗೆ?‌ ಇದರೊಳಗೆ ಕ್ಯಾಮರಾ ಇದ್ದರೆ ಹೇಗೆ? ಒಳಗಡೆ ಹೋದಾಗ ಇದನ್ನೇ ಬಳಸಿಕೊಂಡು ಆತ್ಮಹತ್ಯೆ ಮಾಡಿಕೊಂಡರೆ ಯಾರು ಹೊಣೆ? ಎಂಬಿತ್ಯಾದಿ ಅಸಂಬದ್ಧ ಹಾಗೂ ಶತಮೂರ್ಖತನದ ವಿಷಯ ಪ್ರಸ್ತಾಪಿಸಿ, ಇದನ್ನು ತೆಗೆದು ಬಾ ಎಂದು ಹಿಯಾಳಿಸಿ ವಾಪಸ್ ಕಳಿಸಿದ್ದಾರೆ

ಜನಿವಾರ ತೆಗೆಯುವುದಿಲ್ಲ. ಜನಿವಾರ ತೆಗೆಯಬೇಕೆಂಬ ನಿಯಮವೂ ಇಲ್ಲ ಎಂದು ವಿದ್ಯಾರ್ಥಿ ಹೇಳಿದಾಗ, ಆತನೊಂದಿಗೆ ಅಸಭ್ಯ ವರ್ತಿಸಿದ ಸಿಬ್ಬಂದಿ, ಈತನಿಗೆ ಬೈದು ಪರೀಕ್ಷಾ ಕೋಣೆಗೆ ಪ್ರವೇಶ ಕೊಡದೆ ವಾಪಸ್ ಕಳಿಸಿದ ಘಟನೆ ಬೀದರ ನಲ್ಲಿ ನಡೆದಿದೆ.. ಸಿಬ್ಬಂದಿ ಈ ವರ್ತನೆಯಿಂದ ವಿದ್ಯಾರ್ಥಿ ಆಘಾತಕ್ಕೊಳಗಾಗಿದ್ದಾನೆ.

ಸುಚಿವೃತ ಗಣಿತ ಪರೀಕ್ಷೆ ಬರೆಯಲಾಗದೆ ಕಣ್ಣೀರಿಟ್ಟು ವಾಪಸಾಗಿದ್ದು, ಜಾತಿ ನಿಂದನೆ ಮಾಡಿ, ವಿನಾಕಾರಣ ವಿದ್ಯಾರ್ಥಿಗೆ ಪರೀಕ್ಷೆಯಿಂದ ವಂಚಿತಗೊಳಿಸಿದ ಸಿಬ್ಬಂದಿಯ ಧೋರಣೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.  ಘಟನೆ ಬಗ್ಗೆ ಕಿಡಿಕಾರಿದ ಸುಚಿವೃತ ಪಾಲಕರು, ಈ ಬಗ್ಗೆ ಪೊಲೀಸ್ ಕಂಟ್ರೋಲ್ ರೂಮ್ ಗೆ ಕರೆ ಮಾಡಿ ಹಾಗೂ ಜಿಲ್ಲಾದಿಕಾರಿಗೆ ಮಾಹಿತಿ ನೀಡಿದ್ದರೂ ಏನು ಪ್ರಯೋಜನವಾಗಿಲ್ಲ.

ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸದಸ್ಯರ ಮುಂದೆ ತಮ್ಮ ನೋವು ತೋಡಿಕೋಂಡ ಫೊಷಕರು ಜನಿವಾರ ಹಾಕಿದಕ್ಕೆ ನಮ್ಮ ಮಗನಿಗೆ cet ಪರಿಕ್ಷೆ ಬರೆಯಲು ಅನುವು ಮಾಡಿಕೊಟ್ಟಿಲ್ಲ ನಮ್ಮ ಮಗನಿಗೆ ಯಾವುದೇ ಒಳ್ಳೆಯ ಕಾಲೇಜಿನಲ್ಲಿ ಪ್ರವೇಶಕ್ಕೆ ಮಾಡಿಕೊಡಿ ವಿದ್ಯಾರ್ಥಿಯ ತಾಯಿ ಅಳಲು ತೋಡಿಕೊಂಡರು.

ಸದರಿ ವಿಷಯದ ಕುರಿತು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸ್ವಯಂಪ್ರೇರಿತ ಪ್ರಕರಣ ದಾಖಲು ಮಾಡಿಕೊಳ್ಳಲು ನಿರ್ಧರಿಸಿದೆ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ ಮಾಹಿತಿ ನೀಡಿದ್ದಾರೆ.

ಬ್ರಾಹ್ಮಣ ಮಹಾಸಭೆ ಆಕ್ರೋಶ:

ಜನಿವಾರ ಹಾಕಿದ್ದಕ್ಕೆ ಆಕ್ಷೇಪಿಸಿ ಸಿಇಟಿಯಂತಹ ಮಹತ್ವದ ಪರೀಕ್ಷೆಯಿಂದ ವಂಚಿತಗೊಳಿಸಿ ವಿದ್ಯಾರ್ಥಿ ಭವಿಷ್ಯದ ಜೊತೆಗೆ ಚೆಲ್ಲಾಟವಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭೆ ಜಿಲ್ಲಾಧ್ಯಕ್ಷ ವೆಂಕಟೇಶ ಕುಲಕರ್ಣಿ ಹುಮನಾಬಾದ್ ಒತ್ತಾಯ ಮಾಡಿದ್ದಾರೆ.

ಈ ಮೂರ್ಖತನ ನಿಲ್ಲುವುದು ಯಾವಾಗ ?

ಜನಿವಾರ, ಬಳೆ, ತಾಳಿ, ಕರಿಮಣಿ ಮುಂತಾದವುಗಳನ್ನು ಧರಿಸಿ ಸಿಇಟಿ ಪರೀಕ್ಷೆಗೆ ಹೋಗಬಾರದೆನ್ನುವ ನಿಯಮವನ್ನು ಯಾವ ಮೂರ್ಖ ಅಧಿಕಾರಿ ಮಾಡಿದನೋ ಆತನನ್ನು ಮೊದಲು ಹುಡುಕಿ ತಕ್ಕ ಸನ್ಮಾನ ಮಾಡಬೇಕೆನ್ನುವುದು ಪತ್ರಿಕೆಯ ಹಕ್ಕೊತ್ತಾಯ. ಇಂಥ ಸಣ್ಣ ವಸ್ತುಗಳಲ್ಲಿ ಕ್ಯಾಮರಾ ಅಡಗಿಸಿಡುತ್ತಾರೆಂದು ಊಹಿಸುವುದು ಕೂಡ ಮೂರ್ಖತನದ ಪರಮಾವಧಿ. ಹಾಗೊಂದು ವೇಳೆ ಅಭ್ಯರ್ಥಿಗಳು ಧರಿಸಿ ಬಂದಿದ್ದರೆ ಅದನ್ನು ಕಂಡು ಹಿಡಿಯುವ ಕ್ಷಮತೆ ಪರೀಕ್ಷಾ ಭದ್ರತೆ ಕೈಗೊಂಡಿರುವ ಇಲಾಖೆಗೆ ಇಲ್ಲವೆ ? ಅಥವಾ ಇಲಾಖೆಯೇ ಅಷ್ಟೊಂದು ಭ್ರಷ್ಟವಾಗಿದೆಯೆ ?

ಕೇವಲ ಕ್ಷುಲ್ಲಕ ಕಾರಣಕ್ಕೆ ಒಂದು ಮಹತ್ವದ ಪರೀಕ್ಷೆ ಬರೆಯುವ ಅವಕಾಶ ಕಳೆದುಕೊಂಡ ಆ ವಿದ್ಯಾರ್ಥಿಗೆ ನ್ಯಾಯವನ್ನು ಈ ಮೂರ್ಖ ಅಧಿಕಾರಿಗಳಂತೂ ಕೊಡುವುದು ದೂರವೇ ಉಳಿಯಿತು ಶಿಕ್ಷಣ ಇಲಾಖೆಯಾದರೂ ಇನ್ನು ಮುಂದೆ ಇಂಥ ಅಪಸವ್ಯಗಳು ನಡೆಯದಂತೆ ಮುತುವರ್ಜಿ ವಹಿಸಬಹುದೆ ?

ವರದಿ : ನಂದಕುಮಾರ ಕರಂಜೆ, ಬೀದರ

LEAVE A REPLY

Please enter your comment!
Please enter your name here