ವೃತ್ತಿ ಪ್ರವೃತ್ತಿಗಳೆರಡರಲ್ಲಿಯೂ ಸೈ ಎನಿಸಿಕೊಂಡ ಬಯಲಬೆಳಕಿನ ಕವಿ ಎ ಎಸ್ ಮಕಾನದಾರ

0
14

ನೋವಿನ ಸೆಳಕಿನಲ್ಲಿಯೇ ಒಸರುವ ಅದಮ್ಯ ಜೀವನ ಪ್ರೀತಿ. ಬಡತನದ ಬದುಕಿನಲ್ಲಿ ದೊರೆತ ಶ್ರೀಮಂತ ಅನುಭವಗಳ ಬುತ್ತಿ. ಬದುಕಿನ ಬಂಡಿಯ ಸಾಗಿಸಿ ತುತ್ತಿನ ಚೀಲವ ತುಂಬಿಸಲು ಮಾಡಿದ ಹತ್ತು ಹಲವು ಕೆಲಸಗಳು ಹೊಟ್ಟೆ ತುಂಬಿಸಿದ್ದಕ್ಕಿಂತ ತಲೆಯಲ್ಲಿ ಬದುಕಿನ ವೈವಿಧ್ಯಮಯ ಆಯಾಮಗಳ ವಿವಿಧ ವಿಚಾರಗಳನ್ನು ಭಾವಕೋಶದಲ್ಲಿ ತುಂಬಿಸಿಕೊಂಡವರು. ಸಾಹಿತ್ಯದ ಭಂಡಾರವನ್ನು ಓದಿ ಹೊಸ ವಿಷಯಗಳನ್ನು ಅರಿತು ಕಥೆ,ಕವನಗಳ ರಚನೆಗೆ ಹಾದಿಯನ್ನು ತೋರಿ ಮಸ್ತಕವನ್ನು ತುಂಬಿದ್ದ ಹತ್ತು ಹಲವು ವಿಷಯ ವೈವಿಧ್ಯಗಳು… ಬರೆದಿದ್ದಕ್ಕಿಂತ ಬರೆಸಿದ್ದೇ ಹೆಚ್ಚು ಎಂಬಂತೆ ಪ್ರೋತ್ಸಾಹಿಸುವ ವ್ಯಕ್ತಿತ್ವ, ಜೀವ ಭಾವಗಳ ತಂತಿಯನ್ನು ನುರಿತ ವೈಣಿಕನಂತೆ ಮಿಡಿದು ಜನರಿಗೆ ಸಾಹಿತ್ಯ ಸುಧೆಯನ್ನು ತುಂಬಿಕೊಟ್ಟವರು, ಅಂತಿಮವಾಗಿ ತಮ್ಮೆಲ್ಲ ಕನಸುಗಳನ್ನು ನನಸಾಗಿಸುವ ಸಾಹಿತ್ಯ ಪ್ರಕಾಶನ ಸಂಸ್ಥೆಯನ್ನು ಕಟ್ಟಿ, ಔದ್ಯೋಗಿಕವಾಗಿ ಸರಕಾರಿ ನೌಕರಿಯಲ್ಲಿ ನೆಮ್ಮದಿಯ ಬದುಕನ್ನು, ಇದೀಗ ಪದೋನ್ನತಿಯ ಗೌರವವನ್ನು ಪಡೆದುಕೊಂಡವರು ಎಲ್ಲರ ಅಕ್ಕರೆಯ ಸಕ್ಕರೆಯ ಬಯಲ ಬೆಳಕಿನ ಸಾಹಿತಿ,ಅಕ್ಕಡಿ ಸಾಲಿನ ಕವಿ ಎಂದೇ ಖ್ಯಾತರಾಗಿರುವ ಕಥೆಗಾರ, ಅಂಕಣ ಬರಹಗಾರ, ಪ್ರಕಾಶನಕಾರ, ಸಂಪಾದಕ, ಉಪನ್ಯಾಸಕ ಹೀಗೆ ಹತ್ತು ಹಲವು ಉಪಾದಿಗಳನ್ನು ತಮ್ಮ ಸಾಹಿತ್ಯ ಸೇವೆಯ ಕಿರೀಟದ ಗರಿಗೆ ಸೇರಿಸಿಕೊಂಡವರು

ಎ ಎಸ್.ಮಕಾನದಾರ

ಇಂದಿನ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಬೇಲೂರಿನಲ್ಲಿ ಜನಿಸಿದ ಮಕಾನದಾರ ಅವರ ತಾಯಿ ಮೆಹಬೂಬ ಬಿ ತಂದೆ ಸಯ್ಯದಸಾಬ ಹನ್ನೆರಡು ಜನ ಮಕ್ಕಳಲ್ಲಿ ಒಂಬತ್ತನೆಯವರು ಸದ್ಯ ಓರ್ವ ಅಣ್ಣ, ಅಕ್ಕ, ತಮ್ಮ ಮತ್ತು ತಂಗಿಯರನ್ನು ಹೊಂದಿದ ತುಂಬಿದ ಕುಟುಂಬದ ಮಧ್ಯದ ಮಗ. ತಂದೆ ಹಮಾಲಿ ಕೆಲಸ ಮಾಡಿದರೆ ತಾಯಿ ಮನೆ ಕೆಲಸ ಮಾಡುತ್ತಿದ್ದರು. ಮನೆ ತುಂಬಾ ಮಕ್ಕಳಿರುವ ತುಂಬು ಕುಟುಂಬದ ಮನೆಯಲ್ಲಿ ಒಂದು ಹೊತ್ತಿನ ಊಟಕ್ಕೂ ಒದ್ದಾಡುವಂತಹ ಕಿತ್ತು ತಿನ್ನುವ ಬಡತನ. ತುತ್ತಿನ ಚೀಲ ತುಂಬಿಸಲು ತಮಗೆ ಪಾಠ ಹೇಳಿಕೊಡುತ್ತಿದ್ದ ಶಾಲಾ ಮಾಸ್ತರರ ಮನೆಯಲ್ಲಿ ಮತ್ತು ಹೊಲದಲ್ಲಿ ಚಿಕ್ಕ ವಯಸ್ಸಿನಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಮಕಾನದಾರ ಅವರು ಮುಂದೆ ಯಲಬುರ್ಗಾದ ಅಂಗವಿಕಲ ಟೇಲರ್ ಬಾಶು ಮಿಯಾನ ಅಂಗಡಿಯಲ್ಲಿ ಕಾಜಿಗುಂಡಿ ಮಾಡುವ ಕೆಲಸಕ್ಕೆ ಇದ್ದು ಸರಿಯಾಗಿ ಕಾಜಿ ಗುಂಡಿ ಮಾಡುವ ಕೆಲಸ ನಿರ್ವಹಿಸದೆ ಮಾಲೀಕನ ಸಿಟ್ಟು ಹೊಡೆತಗಳಿಗೆ ಈಡಾಗಿ ಕಣ್ಣೀರಿಟ್ಟದ್ದೂ ಉಂಟು.

ಬಡತನ ಕಲಿಸುವ ಪಾಠಗಳು ಒಂದಲ್ಲ ಎರಡಲ್ಲ… ಯಾವುದೇ ಶಾಲೆ ಕಾಲೇಜುಗಳು ಕಲಿಸದ ಔದ್ಯೋಗಿಕ ಪಾಠಗಳನ್ನು ಬದುಕಿನ ಅನುಭವಗಳನ್ನು, ಮಾನವೀಯ ಮೌಲ್ಯಗಳನ್ನು, ಮ್ಯಾನೇಜ್ಮೆಂಟ್ ತಂತ್ರಗಳನ್ನು ವ್ಯವಹಾರ ಕೌಶಲ್ಯವನ್ನು
ಬಡತನದ ಬದುಕು ಅವರಿಗೆ ಕಲಿಸಿದೆ ಎಂದರೆ ತಪ್ಪಿಲ್ಲ

ಹದಿಮೂರು ಸ್ವತಂತ್ರ ಕೃತಿಗಳನ್ನು ಇಪ್ಪತ್ತೆರಡು ಸಂಪಾದಿತ ಕೃತಿಗಳನ್ನು ರಚಿಸಿರುವ ಮಕಾನದಾರರು ಪ್ರೀತಿ ಪ್ರೇಮ, ಭಗ್ನತೆ, ವಿರಹ, ತಾಯಿ, ಬಡತನಗಳ ಕುರಿತು ರಚಿಸಿರುವ ಹಲವಾರು ಕವನಗಳು ಸಹೃದಯರ ಮನಸ್ಸನ್ನು ಸೆಳೆದಿದೆ. ಭಗ್ನ ಪ್ರೇಮವನ್ನು ಹೀಗೂ ವರ್ಣಿಸಬಹುದೇ ಎಂಬ ಭಾವವನ್ನು ಮೂಡಿಸಿವೆ. ತನ್ನೊಳಗಿನ ನೋವನ್ನು ಹಸಿರಾಗಿಸುವ ಪುಟ್ಟ ಹನಿಗವಿತೆಗಳನ್ನು ನೇಯ್ದಿರುವ ಕವಿಯ ಜಾಣ್ಮೆಯನ್ನು ಎಷ್ಟು ಹೊಗಳಿದರೂ ಸಾಲದು.

ಪ್ರೇಮ ಕಾವ್ಯವನ್ನು ಮರಳಿನಲ್ಲಿ ಬರೆದೆ ಎಂಬ ಕವಿಯ
ಅದ್ಭುತ ಶಬ್ದಗಳ ಚಮತ್ಕಾರಿಕ ಗಾರುಡಿ ಕವನಗಳ ಶ್ರೀಮಂತಿಕೆಗಳನ್ನು ಹೆಚ್ಚಿಸಿದೆ. ಕಾವ್ಯದ ಔನ್ನತ್ಯದ ಎಲ್ಲಾ ಮಗ್ಗುಲುಗಳನ್ನು ಯಥೋಚಿತವಾಗಿ ಬಳಸಿಕೊಂಡಿರುವ ಕವಿಯ ಕೌಶಲ್ಯ ಅದ್ಭುತವಾದದ್ದು.

ಹಾಯ್ ಬೆಂಗಳೂರು, ಕರ್ಮವೀರ, ಪ್ರಜಾವಾಣಿ, ವಿಶ್ವವಾಣಿ, ಹೊಸತು ಮತ್ತು ಸಾಹಿತ್ಯ ಅಕಾಡೆಮಿಯಿಂದ ಪ್ರಕಟವಾಗುವ ಅನಿಕೇತನ ಮುಂತಾದ ಪತ್ರಿಕೆಗಳಲ್ಲಿ ಇವರ ಕಥೆ,ಕವನ ಮತ್ತು ಲೇಖನಗಳು ಪ್ರಕಟವಾಗಿವೆ.

ಎದೆಯ ಸುಡುವ ನೆನಪುಗಳು, ಸಖೀ ಸಖ, ಕೆಳಗಲ ಮನಿ ಮಾಬವ್ವ ಮತ್ತು ಇತರ ಕವಿತೆಗಳು, ಒಂದು ಮೌನದ ಬೀಜ, ಅಕ್ಕಡಿ ಸಾಲು, ಮೂರು ದಶಕದ ಕಾವ್ಯ, ಪ್ಯಾರಿ ಪದ್ಯ. ದರ್ವೇಶಿ ಪದ್ಯ, ಉಸಿರ ಗಂಧ ಸೋಕಿ ಇವುಗಳು ಮಕಾನದಾರರ ಕಾವ್ಯ ಸಂಕಲನಗಳಾಗಿವೆ.

ಬೆಳಕಿನ ಹಾಡು, ಸೌಹಾರ್ದ ಸಂಗಮ, ಬೊಗಸೆ ತುಂಬಾ ಬಯಲು, ಕತ್ತಲೂರಿನ ಬೆಳಕು (ರಾಜ್ಯಮಟ್ಟದ ಪ್ರಾತಿನಿಧಿಕ ಕಥಾ ಸಂಕಲನಗಳು), ಅಲಿಯವರ ಮಕ್ಕಳ ನೀತಿ ಕಥೆಗಳು ಸಂಪಾದಿತ ಕೃತಿಗಳಾಗಿವೆ. ಮನುಷ್ಯ ಪ್ರೇಮ ಕದ ತೆರೆಯುವ ಹೊತ್ತಿಗೆ ( ವಿಮರ್ಶೆ), ಸೂಫಿ ಸಾಹಿತ್ಯ (ಅಭಿನಂದನಾ ಗ್ರಂಥ)ಗಳನ್ನು ಕೂಡ ಸಂಪಾದಿಸಿದ್ದಾರೆ.

ಬದುಕಿನ ಬವಣೆಗಳ ಒಟ್ಟು ಮೊತ್ತವನ್ನು ಅನುಭವಿಸುತ್ತಲೇ ಸುಂದರವಾದ ಸಾಹಿತ್ಯಕ ಬದುಕನ್ನು ಕಟ್ಟಿಕೊಂಡವರು ಮಕಾನದಾರರು. ಬದುಕಿನಲ್ಲಿ ಆದರ್ಶಗಳನ್ನು ಇಟ್ಟುಕೊಂಡು ಹೊಸ ಸಮಾಜವನ್ನು ಕಟ್ಟುವ ನಿಟ್ಟಿನಲ್ಲಿ ಸಾಹಿತ್ಯ ಸೃಷ್ಟಿಸಿದ ಮಕಾನದಾರರು. ಹಲವಾರು ಒತ್ತಡಗಳ ನಡುವೆಯೂ ಮೌಲ್ಯಗಳೊಂದಿಗೆ ರಾಜಿಯಾಗದೆ ತಮ್ಮತನವನ್ನು ಬಿಟ್ಟುಕೊಡದೆ ಸೃಜನಶೀಲ ವ್ಯಕ್ತಿತ್ವವನ್ನು ಹಾಸಿ ಹೊದ್ದುಕೊಂಡವರು. ಮಕಾನದಾರರು ಕೇವಲ ತಾವು ಮಾತ್ರ ಬೆಳೆಯಲಿಲ್ಲ, ತಮ್ಮ ಸುತ್ತ ಇರುವವರನ್ನು ಪ್ರೋತ್ಸಾಹಿಸಿ ಬೆನ್ನು ತಟ್ಟಿ ಬರೆಸಿ ಬೆಳೆಸಿದರು. ಅವರ ಲೇಖನಗಳನ್ನು ಪ್ರಕಾಶನ ಸಂಸ್ಥೆಯ ಮೂಲಕ ಹೊರ ತಂದರು.

ವೃತ್ತಿ ಪ್ರವೃತ್ತಿಗಳ ಜೊತೆ ಜೊತೆಗೆ ಸಾಮಾಜಿಕ ಸೇವೆಯಲ್ಲಿಯೂ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಮಕಾನದಾರರು ಕಳೆದ ಏಳು ತಿಂಗಳಿಂದ ಪ್ರತಿ ವಾರ ಹಲವು ಜನರಿಗೆ ಊಟದ ಕಿಟ್ ಗಳನ್ನು ಬಸ್ ಸ್ಟ್ಯಾಂಡ್ ರೈಲ್ವೆ ಸ್ಟೇಷನ್, ಆಸ್ಪತ್ರೆ ಮುಂತಾದ ಜನನಿಬಿಡ ಪ್ರದೇಶಗಳಲ್ಲಿ ನ್ಯಾಯವಾದಿ ಎಸ್ ಕೆ ನದಾಫ್, ಎಂ.ಜಿ.ಮುಲ್ಲಾ, ಧರ್ಮ ಗುರುಗಳಾದ ರಫೀಕ್ ಮೌಲಾನ ರಾಜೇಸಾಬ್ ಅಣ್ಣಿಗೇರಿ ಮತ್ತು ಮಕ್ತುಮ್ ಜೋಹರಂ ಅವರ ಮಾರ್ಗದರ್ಶನ ಮತ್ತು ಸಹಕಾರದೊಂದಿಗೆ ನಿರಂತರವಾಗಿ ವಿತರಿಸುವ ಕಾರ್ಯದಲ್ಲಿ ಕೈ ಜೋಡಿಸಿದ್ದಾರೆ .

ಇದೀಗ ಅತ್ಯುತ್ತಮವಾಗಿ ಕರ್ತವ್ಯವನ್ನು ನಿರ್ವಹಿಸಿರುವ ರಾಜ್ಯ ಸರಕಾರಿ ನೌಕರರಿಗೆ ನೀಡುವ 2023 ನೇ ಸಾಲಿನ ರಾಜ್ಯಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿಯು ಮಕಾನದಾರರಿಗೆ ಲಭಿಸಿದ್ದು ಅರ್ಹತೆಗೆ ಸಂದ ಗೌರವವಾಗಿದೆ.
ಅವರ ಸಾಹಿತ್ಯಕ ಮತ್ತು ವೈಯುಕ್ತಿಕ ಸಾಧನೆಗಳು ಹೀಗೆ ನಿತ್ಯ ನಿರಂತರವಾಗಿ ನಡೆಯುತ್ತಿರಲಿ ಎಂದು ಹಾರೈಸುವ

ವೀಣಾ ಹೇಮಂತ್ ಗೌಡ ಪಾಟೀಲ, ಮುಂಡರಗಿ ಗದಗ

LEAVE A REPLY

Please enter your comment!
Please enter your name here