ಸಣ್ಣ ಕತೆ : ದಯೆ ಬೇಕು ಬದುಕಿನಲ್ಲಿ

0
35

ದಯೆ ಬೇಕು ಬದುಕಿನಲ್ಲಿ

ಯುವಕ ಕಳೆದ ಹಲವಾರು ದಿನಗಳಿಂದ ಕೆಲಸದ ನಿರೀಕ್ಷೆಯಲ್ಲಿ ಆ ಊರಿನ ರಸ್ತೆಗಳಲ್ಲಿ ತಿರುಗಾಡುತ್ತಿದ್ದ ಇಡೀ ಜಗತ್ತಿನ ಭಾರ ತನ್ನ ಮೇಲೆ ಇದೆಯೇನೋ ಎಂಬಂತೆ ಬಳಲಿದ್ದ ಆತ ಕಳೆದ ಕೆಲವು ದಿನಗಳಿಂದ ಊಟವನ್ನು ಕೂಡ ಮಾಡಿರಲಿಲ್ಲ. ಉಳಿದೆಲ್ಲ ದಿನಗಳಿಗಿಂತ ಆ ದಿನ ಭಿನ್ನವಾಗಿತ್ತು.ತೀವ್ರ ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಆತನ ತಾಯಿ ದಾಖಲಾಗಿದ್ದು ಆಕೆಗೆ ಚಿಕಿತ್ಸೆಯ ಅಗತ್ಯವಿತ್ತು. ಸಮಯ ಮೀರುತ್ತಲೇ ಇತ್ತು. ಆದರೆ ಯಾವುದೇ ಬಸ ಸೌಲಭ್ಯ ಆತನಿಗೆ ದೊರೆಯಲೇ ಇಲ್ಲ…. ತೀವ್ರ ಆತಂಕದಿಂದ ಆತ ಜೇಬಿನಲ್ಲಿ ಹಣ ಇಲ್ಲದೆ ಹೋದರೂ ಒಂದು ಟ್ಯಾಕ್ಸಿಯನ್ನು ಬಾಡಿಗೆಗೆ ತೆಗೆದುಕೊಂಡು ಹೊರಟ.

ಡವಗುಟ್ಟುವ ಎದೆಯನ್ನು ಕೈಯಲ್ಲಿ ಹಿಡಿದಂತೆಯೇ ಆತ ಹಳದಿ ಬಣ್ಣದ ಟ್ಯಾಕ್ಸಿಯೊಂದಕ್ಕೆ ಕೈ ಮಾಡಿದ. ಟ್ಯಾಕ್ಸಿಯನ್ನು ಚಲಾಯಿಸುತ್ತಿದ್ದ 58 ವರ್ಷದ ವೃದ್ಧ ವ್ಯಕ್ತಿ ಚಹರೆಯಿಂದಲೇ ಈತನ ಬಳಿ ದಮ್ಮಡಿ ಕಾಸು ಇಲ್ಲವೆಂಬುದನ್ನು ಗುರುತಿಸಿಯೂ ಟ್ಯಾಕ್ಸಿಯನ್ನು ನಿಲ್ಲಿಸಿದ. ಟ್ಯಾಕ್ಸಿಯ ಬಾಗಿಲನ್ನು ತೆಗೆಯುತ್ತಿದ್ದಂತೆಯೇ ಆ ಯುವಕ ಚಾಲಕನನ್ನು ಕುರಿತು ಸರ್ ನನ್ನ ಬಳಿ ಹಣವಿಲ್ಲ ಆದರೆ ನಾನು ಆಸ್ಪತ್ರೆಗೆ ಹೋಗಲೇ ಬೇಕಾಗಿದೆ ನನ್ನ ತಾಯಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು ತೀವ್ರವೇ ನಾನು ಆಕೆಯ ಬಳಿ ಇರಬೇಕಾಗಿರುವುದು ಮಗನಾಗಿ ನನ್ನ ಕರ್ತವ್ಯ. ನನ್ನ ಪರಿಸ್ಥಿತಿ ನಿಮಗೆ ಅರ್ಥವಾಗುತ್ತದೆ ಎಂದು ಭಾವಿಸಿದ್ದೇನೆ ಎಂದು ತುಸು ದೈನ್ಯದಿಂದಲೇ ಹೇಳಿದ.

ವಾಹನ ಚಾಲಕ ತನ್ನ ವಾಹನದ ಹಿಂಬದಿಯ ರಿಯರ್ ವ್ಯೂ ಮಿರರ್ ನಿಂದ ಆ ಯುವಕನನ್ನು ದಿಟ್ಟಿಸಿ ನೋಡಿ ಕುಳಿತುಕೋ ಬಾ ಮಗು ಎಂದು ಹೇಳಿದ.

ಆ ಯುವಕ ಲಗು ಬಗೆಯಿಂದ ವಾಹನದಲ್ಲಿ ಕುಳಿತ ಕೂಡಲೇ ವಾಹನವನ್ನು ಚಲಾಯಿಸಿದ ವೃದ್ಧ ವ್ಯಕ್ತಿ. ಇಬ್ಬರ ನಡುವೆ ನೀರವವಾದ ಮೌನ ಆವರಿಸಿತ್ತು.. ತನ್ನ ಕೃತಜ್ಞತೆಯನ್ನು ಹೇಗೆ ಹೇಳಬೇಕು ಎಂಬುದು ಅರಿವಾಗದೆ ಯುವಕ ಕಾರಿನ ಹೊರಗಡೆ ದಿಟ್ಟಿಸಿ ನೋಡುತ್ತಾ ಕುಳಿತರೆ ವೃದ್ಧ ಚಾಲಕ ತನ್ನ ಚಾಲನೆಯತ್ತ ಲಕ್ಷ್ಯಕೊಟ್ಟ.

ಕೆಲ ನಿಮಿಷಗಳ ಮೌನದ ನಂತರ ವಾಹನ ಚಾಲಕ ನಿನ್ನ ತಾಯಿಗೆ ಏನಾಯಿತು? ಎಂದು ಕೇಳಿದ.

ಕಣ್ಣಲ್ಲಿ ತಂತಾನೇ ನೀರು ತುಂಬಿಕೊಂಡ ಯುವಕ ದೀರ್ಘವಾದ ಉಸಿರನ್ನು ಎಳೆದುಕೊಂಡ. ನನ್ನ ತಾಯಿ ಮಧುಮೇಹ ರೋಗಿಯಾಗಿದ್ದು ಆಕೆಗೆ ತೀವ್ರವಾಗಿ ಇನ್ಸುಲಿನ್ ಅವಶ್ಯಕತೆ ಇದೆ. ನಾನು ಕಳೆದ ಕೆಲ ದಿನಗಳಿಂದ ನೌಕರಿಯ ತಲಾಶೆಯಲ್ಲಿದ್ದು ನನ್ನ ತಾಯಿಗೆ ಬೇಕಾದ ಇನ್ಸುಲಿನ್ ಔಷಧಿಯನ್ನು ಕೊಡಿಸಲು ಸಾಧ್ಯವಾಗುತ್ತಿಲ್ಲ…. ಬಹುಶಃ ನನ್ನ ಹಣೆಯಲ್ಲಿ ತಾಯಿಯನ್ನು ಉಳಿಸಿಕೊಳ್ಳುವುದು ಬರೆದಿಲ್ಲ ಎಂದು ಹೇಳುವಷ್ಟರಲ್ಲಿ ಆತನ ಧ್ವನಿ ದುಃಖದಿಂದ ಗದ್ಗದಿತವಾಯಿತು

ಟ್ಯಾಕ್ಸಿ ಡ್ರೈವರ್ ಏನೂ ಹೇಳಲಿಲ್ಲವಾದರೂ ಆತನ ಭಾವದಲ್ಲಿ ಬದಲಾವಣೆಯನ್ನು ಯುವಕ ಕಂಡುಕೊಂಡನು. ಕೆಲವು ವರ್ಷಗಳ ಹಿಂದೆ ಆತನು ಇಂತದ್ದೇ ಪರಿಸ್ಥಿತಿಯಲ್ಲಿ ಸಿಲುಕಿಕೊಂಡಿದ್ದು ತನ್ನ ತಾಯಿಯನ್ನು ಕಳೆದುಕೊಂಡಿದ್ದನು. ಆತನ ಪಾಲಿಗೆ ಅದು ಆರದ ಗಾಯವಾಗಿತ್ತು.

ನಿಧಾನವಾಗಿ ಟ್ಯಾಕ್ಸಿ ಆಸ್ಪತ್ರೆಯ ಆವರಣವನ್ನು ತಲುಪಿದಾಗ ಅವಸರದಿಂದ ವಾಹನದ ಬಾಗಿಲು ತೆರೆದು ಇಳಿದ ಯುವಕ ಟ್ಯಾಕ್ಸಿಯ ಗಾಜಿನಲ್ಲಿ ತಲೆ ಇಟ್ಟು ತುಂಬಾ ಧನ್ಯವಾದಗಳು ಸರ್, ಈ ಕ್ಷಣ ನನಗೆ ನಿಮ್ಮ ಹಣವನ್ನು ಪಾವತಿಸಲು ಸಾಧ್ಯವಿಲ್ಲ ನಿಜ ಆದರೆ ನಿಮ್ಮನ್ನು ನಾನು ಎಂದೂ ಮರೆಯುವುದಿಲ್ಲ ಎಂದು ಕೃತಜ್ಞತೆಯಿಂದ ಹೇಳಿದ.

ಆ ದಿನವಿಡೀ ವಾಹನ ಚಾಲನೆಯ ತನ್ನ ವೃತ್ತಿಯನ್ನು ಪೂರೈಸಿದ ವೃದ್ಧ ಚಾಲಕನಿಗೆ ಯುವಕನ ನೆನಪು ಬೆಂಬಿಡಲಿಲ್ಲ. ಯುವಕ ಧರಿಸಿದ ಬಟ್ಟೆಗಳು ಆತನ ಮುಖದಲ್ಲಿನ ದೈನ್ಯ, ಆತನ ಕಣ್ಣುಗಳಲ್ಲಿದ್ದ ಆತಂಕ
ಪದೇ ಪದೇ ವೃದ್ಧ ಚಾಲಕನ ಕಣ್ಣ ಮುಂದೆ ಸುಳಿದಂತಾಯಿತು. ಒಂದು ಕ್ಷಣ ತಾನು ಬೆಳೆದ ಬಡತನದ ಹಿನ್ನೆಲೆ, ಪ್ರತಿಕೂಲ ಪರಿಸ್ಥಿತಿಯಲ್ಲಿ ತಾನು ಹೋರಾಡಿದ ನೆನಪುಗಳು ಮತ್ತೆ ಮನದ ಮೂಲೆಯಲ್ಲಿದ್ದ ನೆನಪುಗಳನ್ನು ತಾಜಾವಾಗಿಸಿತು.

ತನ್ನ ಶಿಫ್ಟ್ ಮುಗಿಸಿದ ನಂತರ ಆತ ಹತ್ತಿರದ ಒಂದು ಔಷಧದ ಅಂಗಡಿಗೆ ತೆರಳಿ ಇನ್ಸುಲಿನ್ ಖರೀದಿಸಿ ಆಸ್ಪತ್ರೆಯ ಬಳಿ ತೆರಳಿದ. ತನಗೆ ಆ ಯುವಕ ಸಿಕ್ಕೇ ಸಿಕ್ಕುತ್ತಾನೆ ಎಂಬ ಭರವಸೆ ಆತನಿಗೆ.

ಆಸ್ಪತ್ರೆಯ ಒಳಗೆ ಪ್ರವೇಶಿಸಿದ ಆತ ರಿಸೆಪ್ಶನ್ ನಲ್ಲಿ ಇಂದು ಡಯಾಬಿಟೀಸ್ನಿಂದ ನರಳುತ್ತಿರುವ ಇನ್ಸುಲಿನ ಅವಶ್ಯಕತೆಯನ್ನು ಹೊಂದಿರುವ ಮಹಿಳೆ ಆಸ್ಪತ್ರೆಗೆ ದಾಖಲಾಗಿರುವುದರ ಕುರಿತು ವಿಚಾರಿಸಿದ. ಕೂಡಲೇ ಅಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸ್ವಾಗತಕಾರಿಣಿ ಆತನಿಗೆ ಆಸ್ಪತ್ರೆಯ ಕಾರಿಡಾರಿನ ಕೊನೆಯಲ್ಲಿರುವ ಪುಟ್ಟ ಕೊಠಡಿಯತ್ತ ದಾರಿ ತೋರಿದಳು. ಸ್ವಾಗತಕಾರಿಣಿಯ ನಿರ್ದೇಶನದಂತೆ ನಡೆದು ಬಂದ ವಾಹನ ಚಾಲಕ ಅಲ್ಲಿ ತನ್ನೆರಡು ಕೈಗಳಿಂದ ತಲೆಯನ್ನು ಹಿಡಿದುಕೊಂಡು ಯುವಕ ಕುಳಿತಿರುವುದು ಕಂಡುಬಂತು.

ವಾಹನ ಚಾಲಕನನ್ನು ನೋಡಿ ಸರ್! ಇದೇನು ತಾವು ಇಲ್ಲಿ? ಎಂದು ಪ್ರಶ್ನಿಸಿದ ಯುವಕನ ಕೈಗೆ ಔಷಧಿಯ ಪೊಟ್ಟಣವನ್ನು ನೀಡಿ ‘ಇದು ನಿನ್ನ ತಾಯಿಗೆ’ಎಂದು ಚಾಲಕ ಹೇಳಿದ.

ನಿಂತಲ್ಲಿಯೇ ಸ್ಥಂಭೀಭೂತನಾದ ಯುವಕ.. ಆತನ ಬಾಯಿಂದ ಮಾತುಗಳೇ ಹೊರಡಲಿಲ್ಲ… ಕಣ್ಣೀರು ಧಾರೆಯಾಗಿ ಆತನ ಕೆನ್ನೆಯನ್ನು ತೋಯಿಸಿತು. ಮತ್ತೇನು ಹೇಳಲು ತೋಚದೆ ಆ ಯುವಕ ಗಟ್ಟಿಯಾಗಿ ಚಾಲಕನನ್ನು ಅಪ್ಪಿಕೊಂಡ. ಆತನನ್ನು ಸಮಾಧಾನಿಸಿದ ಚಾಲಕ ತನ್ನ ಜೇಬಿಗೆ ಕೈ ಹಾಕಿ ಒಂದಷ್ಟು ನೋಟನ್ನು ಯುವಕನ ಕೈಗೆ ಹಾಕಿದ. ಆತ ಕೊಟ್ಟ ಹಣವನ್ನು ಯುವಕ ಕಣ್ಣಿಗೆ ಒತ್ತಿಕೊಂಡು ಚಾಲಕನಿಗೆ ನಮಸ್ಕರಿಸಿದ.ಚಾಲಕ ತಂದುಕೊಟ್ಟ ಔಷಧಿ ಮತ್ತು ಆತ ಕೊಟ್ಟ ಹಣದ ಸಹಾಯದಿಂದ ಯುವಕನ ತಾಯಿಯ ಚಿಕಿತ್ಸೆ ಮುಂದುವರೆದು ಆಕೆ ಗುಣಮುಖಳಾದಳು.

ಚಾಲಕ ತೋರಿದ ದಯೆಯನ್ನು ಕಂಡು ಪ್ರಭಾವಿತನಾದ ಯುವಕ ಬದುಕಿನಲ್ಲಿ ಅದೆಷ್ಟೇ ಸಂಕಷ್ಟಗಳು ಬಂದರೂ ಎದುರಿಸುವ ಹುಮ್ಮಸ್ಸನ್ನು ಪಡೆದುಕೊಂಡನು. ಒಂದಲ್ಲ ಒಂದು ದಿನ ಆ ವೃದ್ದ ಚಾಲಕ ತನಗೆ ಮಾಡಿದ ಸಹಾಯವನ್ನು ಬೇರಾವುದೋ ರೀತಿಯಲ್ಲಿ, ಮತ್ತಾರಿಗೋ ಸಹಾಯ ಮಾಡಿ ತೀರಿಸುವೆ ಎಂದು ಆತ ಪ್ರತಿಜ್ಞೆ ಮಾಡಿದ.

ಇತ್ತ ಚಾಲಕ ತಾನು ಮಾಡಿದ ಸಹಾಯಕ್ಕೆ ಪ್ರತಿಯಾಗಿ ಏನನ್ನು ಅಪೇಕ್ಷಿಸಲಿಲ್ಲ… ಬದಲಾಗಿ ಅವಶ್ಯಕತೆ ಇರುವವರಿಗೆ ತಾನು ಸಹಾಯ ಮಾಡಿದ ತೃಪ್ತಿಯನ್ನು ಹೊಂದಿದ.

ಒಂದು ವರ್ಷದ ನಂತರ ಅನಿರೀಕ್ಷಿತವಾದ ಘಟನೆ ಜರುಗಿತು.
ಕಠಿಣ ಪರಿಶ್ರಮದಿಂದ ದುಡಿದ ಯುವಕ ಒಂದು ಸಾರಿಗೆ ಕಂಪನಿಯಲ್ಲಿ ಕಾರ್ಯನಿರ್ವಹಿಸಲಾರಂಭಿಸಿದ. ತಾನು ದುಡಿದ ಸಂಬಳದಲ್ಲಿ ಸ್ವಲ್ಪ ಸ್ವಲ್ಪವನ್ನು ಉಳಿಸಲು ಆರಂಭಿಸಿದ.

ಒಂದು ದಿನ ಬಸ್ ಸ್ಟಾಪ್ ನಲ್ಲಿ ಬಸ್ಸಿಗಾಗಿ ಕಾಯುತ್ತಾ ನಿಂತಿದ್ದ ಯುವಕನಿಗೆ ಹಳದಿ ಬಣ್ಣದ ಟ್ಯಾಕ್ಸಿಯನ್ನು ಚಲಾಯಿಸುತ್ತಿದ್ದ ವೃದ್ಧ ಚಾಲಕನನ್ನು ಕಂಡು ಖುಷಿಯಿಂದ ಕೈಬೀಸಿ ಆತನನ್ನು ಕೂಗಿ ಕರೆದ.

ಆತ ಗಾಡಿ ನಿಲ್ಲಿಸುತ್ತಲೇ ಚಾಲಕ ಆತನನ್ನು ಗುರುತಿಸಿ
ಪರಿಚಯದ ನಗೆ ನಕ್ಕು ನಿನ್ನ ತಾಯಿ ಹೇಗಿದ್ದಾಳೆ? ಎಂದು ಕೇಳಿದ. ಅಮ್ಮ ಈಗ ಆರೋಗ್ಯವಾಗಿದ್ದಾಳೆ ಎಂದು ಭಾವುಕನಾಗಿ ನುಡಿದ ಯುವಕ ಆದರೆ ಇಂದು ನಾನು ನಿಮ್ಮ ಬಳಿ ಸಹಾಯ ಕೇಳಲು ಬಂದಿಲ್ಲ ಬದಲಾಗಿ ನೀವು ಮಾಡಿದ ಸಹಾಯಕ್ಕೆ ಪ್ರತಿಯಾಗಿ
ಏನನ್ನಾದರೂ ಸಲ್ಲಿಸಲು ಬಯಸುತ್ತೇನೆ ಎಂದು ಹೇಳಿದ ಆತ ತನ್ನ ಬೆನ್ನ ಹಿಂದಿನ ಬ್ಯಾಗನ್ನು ತೆರೆದು ಅದರಲ್ಲಿ ವೃದ್ಧನ ಹೆಸರಿನಲ್ಲಿ ಇದ್ದ ಒಂದು ಪುಟ್ಟ ಧನ್ಯವಾದವನ್ನು ತಿಳಿಸುವ ಗ್ರೀಟಿಂಗ್ ಕಾರ್ಡ್ ಮತ್ತು ಸಂಪೂರ್ಣ ದೈಹಿಕ ತಪಾಸಣೆಯ ಪತ್ರವನ್ನು ಆತನ ಕೈಗಿಟ್ಟನು. ಇದನ್ನು ಕಂಡು ಆಶ್ಚರ್ಯಚಕಿತನಾದ ಚಾಲಕ ಏನೆಂದು ಕೇಳಲು ಇದು ನನ್ನ ಕಡೆಯಿಂದ ಧನ್ಯವಾದ ರೂಪದ ಕೊಡುಗೆ. ನನಗೆ ಹಣದ ತೀವ್ರ ಅವಶ್ಯಕತೆ ಇದ್ದಾಗ ನೀವು ನನಗೆ ಸಹಾಯ ಮಾಡಿ ರಕ್ಷಿಸಿದಿರಿ. ಇದೀಗ ನನ್ನ ಸರದಿ. ನೀವು ಸಂಪೂರ್ಣ ಆರೋಗ್ಯವಾಗಿರಲಿ ಎಂದು ನಾನು ಬಯಸುವೆ ಎಂದು ಯುವಕ ಹೇಳಲು ತನ್ನ ತಲೆಯನ್ನು ಅಲುಗಿಸಿದ ವಾಹನ ಚಾಲಕ ತನ್ನೊಂದಿಗೆ ಆತನನ್ನು ಊಟಕ್ಕೆಆಹ್ವಾನಿಸಿದ. ಊಟ ಮಾಡುತ್ತಾ ಅವರಿಬ್ಬರೂ ಮಾತನಾಡುವಾಗ ಹಿರಿಯ ಚಾಲಕನೊಂದಿಗೆ ಯುವಕ ಮಾತನಾಡುತ್ತಾ ಹೀಗೆ ಹೇಳಿದ.
“ನೀವು ಕೇವಲ ನನ್ನ ತಾಯಿಗೆ ಸಹಾಯ ಮಾಡಲಿಲ್ಲ! ಬದಲಾಗಿ ನನ್ನ ದೃಷ್ಟಿಕೋನವನ್ನು ಬದಲಿಸಿದಿರಿ. ಅದೆಷ್ಟೇ ಸಣ್ಣ ಕೆಲಸವೇ ಇರಲಿ ನಾವು ಮತ್ತೊಬ್ಬರ ಜೀವನದಲ್ಲಿ ಪುಟ್ಟ ಬದಲಾವಣೆಯನ್ನು ತರಲು ಸಾಧ್ಯವಿದೆ ಎಂಬುದನ್ನು ನೀವು ನನಗೆ ತಿಳಿಸಿಕೊಟ್ಟಿರಿ ಎಂದು ಹೇಳಿದಾಗ ಮೆಲ್ಲನೆ ಮುಗುಳ್ನಕ್ಕ ಹಿರಿಯ ಚಾಲಕ.

ಮುಂದೆ ಅವರಿಬ್ಬರೂ ಒಳ್ಳೆಯ ಸ್ನೇಹಿತರಾದರು. ಅವರ ವಯಸ್ಸು ಅವರ ಸ್ನೇಹಕ್ಕೆ ಯಾವುದೇ ರೀತಿಯ
ಅಡ್ಡಿಯಾಗಲಿಲ್ಲ ಬದಲಾಗಿ ಅವರಿಬ್ಬರೂ ಪರಸ್ಪರರ ಭಾವನೆಗಳನ್ನು ಅರ್ಥೈಸಿಕೊಂಡು ಉತ್ತಮ ಸ್ನೇಹಿತರಾಗಿ ಸಾಮಾಜಿಕ ಕೆಲಸ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಅರ್ಥಪೂರ್ಣ ಬದುಕನ್ನು ನಡೆಸಿದರು.

ನೋಡಿದಿರಾ ಸ್ನೇಹಿತರೆ,ದಯೆಯ ಸರಪಳಿ ಬಾಂಧವ್ಯದ ರೂಪದಲ್ಲಿ ನಮ್ಮೆಲ್ಲರನ್ನು ಕಟ್ಟಿ ಹಾಕುತ್ತದೆ.

ಯಾರದೋ ಕರುಣೆ ದಯೆಯ ಪರಿಣಾಮವಾಗಿ ನಮ್ಮ ಬದುಕು ಸುಲಲಿತವಾಗಿ ನಡೆದಿದೆ. ಇದೀಗ ನಮ್ಮ ಸರದಿ ನಾವು ಕೂಡ ದಯೆಯ ಈ ಸರಪಳಿಯನ್ನು ಮುಂದುವರೆಸಿ ನಮ್ಮ ಕೈಲಾದಷ್ಟು ಸಹಾಯವನ್ನು ಇತರರಿಗೆ ಮಾಡಲೇಬೇಕು. ಅದೆಷ್ಟೇ ನಾವು ವೈಜ್ಞಾನಿಕವಾಗಿ ‘ ಸರ್ವೈವಲ್ ಫಾರ್ ದ ಫಿಟ್ಟೆಸ್ಟ್’ ಬದುಕಿಗಾಗಿ ಹೋರಾಟ ಎಂದು ಹೇಳಿದರೂ ಜಗತ್ತಿನ ಉಳಿದೆಲ್ಲ ಜೀವಿಗಳಿಗಿಂತ ಮನುಷ್ಯ ಭಿನ್ನವಾಗಿ ತೋರುವುದು ಆತನಲ್ಲಿರುವ ಆಲೋಚನ ಶಕ್ತಿಯಿಂದ, ಭಾವನೆಗಳ ಅಭಿವ್ಯಕ್ತಿಯಿಂದ ಮತ್ತು ಮೌಲ್ಯಗಳನ್ನು ಹೊಂದಿರುವುದರಿಂದ.

“ಕಾಗೆಯೊಂದಗುಳ ಕಂಡರೆ ಕರೆಯದೆ ತನ್ನ ಬಳಗವ” ಎಂಬ ಮಾತು ಪ್ರಾಣಿ ಸಂಕುಲದ ಸಂಘಟನೆಯನ್ನು ತೋರುತ್ತದೆ. ಹಂಚಿ ತಿನ್ನುವ ಪ್ರಾಣಿ ಪಕ್ಷಿಗಳು ಎಂದೂ ತಮ್ಮ ಮಕ್ಕಳಿಗಾಗಿ ಏನನ್ನೂ ಉಳಿಸಿಡುವುದಿಲ್ಲ. ಆದರೆ ಮನುಷ್ಯ ಮಾತ್ರ ತನ್ನ ಮಕ್ಕಳು, ಮೊಮ್ಮಕ್ಕಳು ಎಂದು ಮುಂದಿನ ಹತ್ತು ತಲೆಮಾರಿನವರಿಗಾಗಿ ಆಸ್ತಿಯನ್ನು ಮಾಡಿಡುತ್ತಾನೆ. ಇರಲಿ! ತಪ್ಪಿಲ್ಲ… ಆದರೆ ಅವಶ್ಯಕತೆ ಬಿದ್ದಾಗ ಒಳ್ಳೆಯ ಸ್ಥಿತಿಯಲ್ಲಿ ಇರುವವರು ಮನುಷ್ಯ ತನ್ನಂತೆ ಪರರನ್ನು ಬಗೆದು ತನಗಿಂತ ಕಡಿಮೆ ಅನುಕೂಲವಂತರಿಗೆ ಸಹಾಯ ಮಾಡುವುದು ಮಾನವೀಯ ಧರ್ಮ.

ನಾನು ನನಗಾಗಿ ಎಂದು ಬದುಕುವುದಕ್ಕಿಂತ ಮನುಷ್ಯ ನಾವು ನಮಗಾಗಿ ಎಂದು ಬದುಕುವುದನ್ನು ವಿಶ್ವಮಾನವ ಪ್ರೇಮ ಎಂದು ಹೇಳುತ್ತಾರೆ. ಅಂತಹ ಎಲ್ಲರನ್ನು ಒಂದಾಗಿಸುವ ವಿಶ್ವ ಭ್ರಾತೃತ್ವ ನಮ್ಮದಾಗಬೇಕು ಅಲ್ಲವೇ ಸ್ನೇಹಿತರೆ?

ವೀಣಾ ಹೇಮಂತ್ ಗೌಡ ಪಾಟೀಲ, ಮುಂಡರಗಿ, ಗದಗ

LEAVE A REPLY

Please enter your comment!
Please enter your name here