ಸಿಂದಗಿ; ಪಟ್ಟಣದ ತಹಶೀಲ್ದಾರ ಕಛೇರಿಯ ಎದುರು ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ತಹಸೀಲ್ದಾರ್ ಪ್ರದೀಪ ಹಿರೇಮಠ ರವರ ಮುಖಾಂತರ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಜನತಾದಳ ಜಾತ್ಯತೀತ ತಾಲೂಕಾ ಅಧ್ಯಕ್ಷ ಎಮ್. ಎನ್. ಪಾಟೀಲ ಮಾತನಾಡಿ, ರಾಜೀವ್‌ಗಾಂಧಿ ವಸತಿ ನಿಗಮದ ವತಿಯಿಂದ ಫಲಾನುಭವಿಗಳಿಗೆ ಮನೆಗಳ ಹಂಚಿಕೆಯಲ್ಲಿ ವ್ಯಾಪಕವಾದ ಭ್ರಷ್ಟಾಚಾರ ನಡೆದಿರುವುದಾಗಿ ಕಾಂಗ್ರೆಸ್ ಪಕ್ಷದ ಹಿರಿಯ ಶಾಸಕರೇ ನೇರವಾಗಿ ವಸತಿ ಸಚಿವ ಜಮೀರ್ ಅಹಮದ್ ರವರ ವಿರುದ್ಧ ಆಪಾದನೆ ಮಾಡಿರುತ್ತಾರೆ. ಅಲ್ಲದೆ ಕಾಂಗ್ರೆಸ್ ಪಕ್ಷದ ಹಿರಿಯ ಶಾಸಕರು, ರಾಜ್ಯ ಸರ್ಕಾರ ಕಳೆದ ೨ ವರ್ಷಗಳಿಂದ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳದೆ ಜನರನ್ನು ವಂಚಿಸುತ್ತಿರುವುದಾಗಿ ಆರೋಪಿಸಿದ್ದಾರೆ.ಈ ಹಿನ್ನೆಲೆಯಲ್ಲಿ ಭ್ರಷ್ಟಾಚಾರ ಆರೋಪ ಹೊತ್ತಿರುವ ಜಮೀರ್ ಅಹಮದ್ ರವರನ್ನು ಸಚಿವ ಸಂಪುಟದಿಂದ ವಜಾಗೊಳಿಸಬೇಕೆಂದು ಆಗ್ರಹಿಸಿದರು.
ಇಂಡಿಯ ರೈತ ನಾಯಕ ಬಿ.ಡಿ.ಪಾಟೀಲ ಮಾತನಾಡಿ, ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರವು ಕಳೆದ ೨ ವರ್ಷಗಳಿಂದ ಜನರಿಗೆ ಉತ್ತಮ ಮತ್ತು ಕ್ರಿಯಾಶೀಲ ಆಡಳಿತ ನೀಡುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಸರ್ಕಾರದ ಎಲ್ಲಾ ಇಲಾಖೆಗಳಲ್ಲಿ ಲಂಚಗುಳಿತನ, ಭ್ರಷ್ಟಾಚಾರವು ಹೆಚ್ಚುತ್ತಿದ್ದು, ಸ್ವಜನಪಕ್ಷಪಾತ ತುಂಬಿ ತುಳುಕುತ್ತಿದೆ. ಈ ಬಗ್ಗೆ ರಾಜ್ಯ ಕಾಂಗ್ರೆಸ್ ಪಕ್ಷದ ಹಿರಿಯ ಶಾಸಕರು ಮತ್ತು ಮುಖಂಡರುಗಳು ರಾಜ್ಯ ಸರ್ಕಾರದ ಮತ್ತು ಸಚಿವರುಗಳ ವಿರುದ್ಧ ಬಹಿರಂಗವಾಗಿ ಸಾಕ್ಷಿ ಸಮೇತ ದಾಖಲೆಗಳೊಂದಿಗೆ ಮಾಧ್ಯಮಗಳಲ್ಲಿ ಆರೋಪಿಸಿದ್ದಾರೆ. ಇದಕ್ಕೆ ಉದಾಹರಣೆ ಎಂಬಂತೆ ವಸತಿ ಇಲಾಖೆಯು ರಾಜ್ಯದಲ್ಲಿನ ಅತ್ಯಂತ ಹಿಂದುಳಿದ, ಬಡತನದ ಕುಟುಂಬಗಳ ನಿವೇಶನ ಹಾಗೂ ವಸತ ರಹಿತ ಪಲಾನುಭವಿಗಳಿಗೆ ಮೀಸಲಾಗಿರುವ ವಸತಿ ಯೋಜನೆಗಳನ್ನು ಲಂಚ ನೀಡುವವರಿಗೆ ಮಾತ್ರ ನೀಡುತ್ತಿದ್ದು, ನೈಜ ಇಲಾಖೆಯು ವ್ಯಾಪಕ ಭ್ರಷ್ಟಾಚಾರದಲ್ಲಿ ತೊಡಗಿರುವುದಾಗಿ ಈಗಾಗಲೇ ಪತ್ರಿಕಾ ದೃಶ್ಯಮಾಧ್ಯಮಗಳು ಸಾಕಷ್ಟು ವರದಿ ಮಾಡಿವೆ. ಇದಲ್ಲದೆ, ರಾಜ್ಯ ಸರ್ಕಾರ ಇದುವರೆಗೂ ರಾಜ್ಯದ ಜನತೆಗೆ ಮೂಲಭೂತ ಸೌಕರ್ಯಗಳಾದ ರಸ್ತೆ, ಸೇತುವೆ, ಕೆರೆ ಕಟ್ಟಿಎಗಳ ಪುನಶ್ವೇತನ, ಒಳಚರಂಡಿ ವ್ಯವಸ್ಥೆ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮುಂತಾದವುಗಳನ್ನು ಒದಗಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿರುತ್ತದೆ. ಅಂತೆಯೇ, ಗುತ್ತಿಗೆದಾರರ ಬಾಕಿ ಹಣ ಪಾವತಿ ಮಾಡುವಲ್ಲಿಯೂ ಸಹ ವಿಳಂಬ ಮಾಡುತ್ತಾ ಬಂದಿದ್ದು ಬಡವರ ಹಾಗೂ ರೈತ ವಿರೋಧಿ ಸರ್ಕಾರವಾಗಿ ಮಾರ್ಪಟ್ಟಿರುತ್ತದೆ. ಪರಿಶಿಷ್ಟರಿಗೆ ಮೀಸಲಾಗಿರುವ ಹಣದಲ್ಲಿಯೂ ಅತ್ಯಂತ ತಾರತಮ್ಯವೆಸಗುತ್ತಿದ್ದು, ಆ ವರ್ಗದ ಜನರಿಗೆ ಅನ್ಯಾಯ ಮಾಡುತ್ತಲಿದ್ದು, ಕೇವಲ ತುಷ್ಟಿಕರಣ ರಾಜಕಾರಣ ಮಾಡುತ್ತ ರಾಜ್ಯದ ಜನರಿಗೆ ಘನಘೋರ ಅನ್ಯಾಯವೆಸಗಿದೆ. ಇದಲ್ಲದೆ, ಅತೀವ ಭ್ರಷ್ಟಾಚಾರ ಆಡಳಿತ ವೈಫಲ್ಯದಲ್ಲಿ ತೊಡಗಿರುವ ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡು ಸೂಕ್ತ ರೀತಿಯಲ್ಲಿ ಸಂವಿಧಾನ ಬದ್ಧವಾಗಿ ಆಡಳಿತ ನಡೆಸಲು ನಿರ್ದೇಶನ ನೀಡಬೇಕೆಂದು ಒತ್ತಾಯಿಸಿದರು.
ಈ ವೇಳೆ ಪ್ರಕಾಶ ಹಿರೇಕುರಬರ, ಪರಶುರಾಮ ಯಂಕಂಚಿ, ಎಂ.ಎಚ್.ಪಾಟೀಲ, ಮಲ್ಲು ಹಡಪದ, ಬಿ.ಎಂ.ರತ್ನಾಕರ, ಮಹಾಂತೇಶ ಪರಗೊಂಡ, ಭಾಷಾಸಾಬ ಯರಗಲ್, ಬಂದೇನವಾಜ ಹತ್ತರಕಿ, ಅಮೀನಸಬ ಯರಗಲ್, ಸಾಗರ ರಜಪೂತ, ಮುಸ್ತಾಪ ಯಾತನೂರ, ನಿಂಗರಾಜ ಪೂಜಾರಿ, ಶಾಹಿದ್ ತಾಂಬೋಳಿ, ನರೇಂದ್ರ ಕುಮಸಗಿ, ಮುಜಮ್ಮಿದ್ ತಾಂಬೋಳಿ ಸೇರಿದಂತೆ ಅನೇಕರಿದ್ದರು.