Homeಲೇಖನಹಣ ಗಳಿಸಬೇಕೆ ? ಪರಿಶ್ರಮಿಯಾಗಿ

ಹಣ ಗಳಿಸಬೇಕೆ ? ಪರಿಶ್ರಮಿಯಾಗಿ

ಹಣ ಗಳಿಸಬೇಕೆ?

ಇಂದಿನ ದುಬಾರಿ ದುನಿಯಾದಲ್ಲಿ ಜೀವನ ಸಾಗಿಸೋಕೆ ಹಣದ ಅವಶ್ಯಕತೆ ತುಂಬಾ ಇದೆ ಎನ್ನುವದು ಎಲ್ಲರೂ ಒಪ್ಪಲೇಬೇಕಾದ ಮಾತು.ಬದುಕಿಗೆ ಅತೀ ಅಗತ್ಯವಿರುವ ಹಣ ಗಳಿಸುವದು ಹೇಗೆ ಎಂಬ ಪ್ರಶ್ನೆ ಪ್ರತಿಯೊಬ್ಬರಲ್ಲೂ ಕಂಡು ಬರುತ್ತದೆ. ಈ ಪ್ರಶ್ನೆಗೆ ಉತ್ತರ ಕಂಡು ಕೊಳ್ಳುವ ಸಲುವಾಗಿ ಅನೇಕರು ವಿವಿಧ ತರಹದ ಹರಸಾಹಸಗಳನ್ನು ಮಾಡುವದನ್ನು ನಾವು ಕಾಣುತ್ತೇವೆ.

ಹಣವೆಂಬುದು ಅತೀ ಮೋಹಕ ವಸ್ತು. ಅದು ತನ್ನ ಕಡೆ ಸರ್ವರನ್ನೂ ಆಕರ್ಷಿಸುವ ಶಕ್ತಿ ಹೊಂದಿದೆ. ಎಲ್ಲರೂ ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ಎಂಬ ದಾಸರ ವಾಣಿಯೇನೋ ನಿಜ. ಆದರೆ ಇತ್ತೀಚಿನ ದಿನಗಳಲ್ಲಿ ನಾವು ಹಣ ಗಳಿಸುವದೇ ನಮ್ಮ ಜೀವನದ ಉದ್ದೇಶ ಎಂಬಂತೆ ನಡೆದುಕೊಳ್ಳುತ್ತಿದ್ದೇವೆ ಅಲ್ಲದೆ ಹೆಚ್ಚಿಗೆ ಧನದಾಹಿಗಳಾಗುತ್ತಿದ್ದೇವೆ ಎಂಬ ಅಂಶ ಎದ್ದು ಕಾಣುತ್ತಿದೆ.

ಧನದಾಹಿಗಳಾಗಲು ಅಥವಾ ಹಣವೆಂಬ ವಸ್ತುವಿನ ಹಿಂದೆ ಬೆನ್ನು ಹತ್ತಲು ಕಾರಣಗಳು ಅನೇಕ. ಅದರಲ್ಲಿ ಜೀವನಾಶ್ಯಕ ವಸ್ತುಗಳ ಬೆಲೆಗಳು ಗಗನಕ್ಕೇರುತ್ತಿರುವದು ಮುಖ್ಯವಾಗಿದೆ. ಇನ್ನೊಂದು ಪ್ರಮುಖ ಕಾರಣವೆಂದರೆ ನಾವು ಆಧುನಿಕ ಜಗತ್ತಿನಲ್ಲಿ ಪಾಶ್ಚಿಮಾತ್ಯ ಸಂಸ್ಕೃತಿಯತ್ತ ವಾಲುತ್ತಿದ್ದೇವೆ ಇದರ ಪರಿಣಾಮವಾಗಿ ನಮಗೆ ಐಷಾರಾಮಿ ಜೀವನ, ಭೋಗ ಜೀವನದ ಬಗ್ಗೆ ಹೆಚ್ಚು ಆಸಕ್ತಿ ಬೆಳೆಯುತ್ತಿದೆ. ಜೀವನವನ್ನು ಮಾರುಕಟ್ಟೆಯೆಂದು ತಪ್ಪಾಗಿ ತಿಳಿಯುತ್ತಿದ್ದೇವೆ. ಜೀವನವೆಂಬುದು ಮಾನವೀಯ ಸಂಬಂಧಗಳ ಅತ್ಯಮೂಲ್ಯ ಬಲೆ. ಎಂಬುದನ್ನು ನೆನಪು ಹಾರುತ್ತಿದ್ದೇವೆ. ಹಣದಿಂದ ಪ್ರತಿಯೊಂದನ್ನು ಕೊಳ್ಳಬಹುದು ಎಂಬ ಭ್ರಮೆಯಲ್ಲಿದ್ದೇವೆ.

ಹಣದಿಂದ ಭೌತಿಕ ವಸ್ತುಗಳನ್ನು ಕೊಳ್ಳಬಹುದೇ ವಿನಃ ಮಾನವನ ಮನಸ್ಸಿನ ಅತೀ ಸೂಕ್ಷ್ಮ ಮೌಲ್ಯವಾದ ಪ್ರೀತಿಯನ್ನಲ್ಲ. ಜೀವನಕ್ಕೆ ಪ್ರೀತಿಯೇ ತಳಹದಿ. ಹಣವನ್ನು ಸಾಲವಾಗಿ ಪಡೆಯಬಹುದು ಆದರೆ ಒಡೆದ ಮನಸ್ಸಿನಿಂದ ಪ್ರೀತಿಯನ್ನು ಪಡೆಯುವದು ಅಸಾಧ್ಯವಾದುದು ಎಂಬುದನ್ನು ಅರಿತು ನಡೆದರೆ ಜೀವನ ನಂದನವನವಾಗುತ್ತದೆ. ಮನಸ್ಸಿನ ಸಂತೋಷ ಅಡಗಿರುವದು ಪ್ರೀತಿಯಲ್ಲಿ. ಹಣದಲ್ಲಿ ಅಲ್ಲ. ಹಣದಿಂದ ಭೌತಿಕ ನೆಮ್ಮದಿ ಪಡೆಯಬಹುದೆ ಹೊರತು ಮಾನಸಿಕ ನೆಮ್ಮದಿಯನ್ನಲ್ಲ.

ಹಣವಿರುವ ಶ್ರೀಮಂತ ಗಳಿಸಿಟ್ಟ ಹಣವನ್ನು ಹೇಗೆ ಕಾಪಾಡಿಕೊಳ್ಳುವದು? ಹೇಗೆ ಅದನ್ನು ಇನ್ನಷ್ಟು ಹೆಚ್ಚು ಮಾಡುವದು ಎನ್ನುವ ಚಿಂತೆಯಲ್ಲಿಯೇ ಅನೇಕ ರೋಗಗಳಿಗೆ ಬಲಿಯಾಗುತ್ತಾರೆ. ಹಣವಿದ್ದರೂ ಅದನ್ನು ಅನುಭವಿಸುವ ಭಾಗ್ಯ ಅವರಿಗಿಲ್ಲ. ಹಣ್ಣು ಇದೆ ಹಾಲು ಇದೆ ಸಿಹಿಯೂ ಇದೆ ಮೃಷ್ಟಾನ್ನ ಭೋಜನವೂ ಇದೆ ಆದರೆ ಯಾವುದನ್ನೂ ತಿನ್ನುವ ಹಾಗಿಲ್ಲ. ಯಾಕೆಂದರೆ ಶ್ರೀಮಂತನಿಗೆ ಶ್ರೀಮಂತರ ಕಾಯಿಲೆಗಳಾದ ರಕ್ತದೊತ್ತಡ, ಮಧುಮೇಹ, ಹೃದಯ ಸಂಬಂಧಿ ಕಾಯಿಲೆಗಳು ಕಾಡುತ್ತಿರುತ್ತವೆ.

ರೋಗ ಜೀವನಕ್ಕೆ ಕಾರಣವಾಗುವ ಹಣವು ನನಗೆ ಬೇಡವೇ ಬೇಡ. ನಾನು ಬಡವನಾಗಿಯೇ ಇರುತ್ತೇನೆ ಎಂದೂ ಯಾರೂ ಬಯಸುವದಿಲ್ಲ. ದೈನಂದಿನ ಚಟುವಟಿಕೆಗಳಿಗೆ ಹಣ ಬೇಕೆ ಬೇಕು. ಆದ್ದರಿಂದ ಅದನ್ನು ಗಳಿಸುವದು ಹೇಗೆ ಎಂಬುವದನ್ನು ತಿಳಿದುಕೊಳ್ಳುವದು ಅತ್ಯವಶ್ಯಕವಾಗಿದೆ.

ಹಣವೆಂದರೆ ಹೆಣವೂ ಕೂಡ ಬಾಯಿ ತೆರೆಯುತ್ತದೆ. ಎಂಬ ಗಾದೆ ಮಾತು ನೂರಕ್ಕೆ ನೂರರಷ್ಟು ಸತ್ಯವಾಗಿದೆ. ಹೆಚ್ಚು ಹೆಚ್ಚು ಹಣ ಗಳಿಸಬೇಕು. ಸಂಪತ್ತನ್ನು ಸಂಪಾದಿಸಬೇಕು ಎಂಬ ಆಸೆ ಪ್ರತಿಯೊಬ್ಬರಲ್ಲೂ ಇರುವದು ಸ್ವಾಭಾವಿಕ. ಹಣ ಗಳಿಸಬೇಕೆಂಬ ಹಂಬಲದಲ್ಲಿ ಅದಕ್ಕಾಗಿ ಅನುಚಿತವಾದ ಅಡ್ಡ ಮಾರ್ಗಗಳನ್ನು ಅನುಸರಿಸುವದು ಉಚಿತವಲ್ಲ. ಇಂಥ ಅನೈತಿಕ ಅನ್ಯಾಯದ ಮಾರ್ಗಗಳನ್ನು ಹಿಡಿದರೆ ಕೊನೆಗೊಮ್ಮೆ ಪಶ್ಚಾತ್ತಾಪ ಪಡಲೇಬೇಕಾದ ಸಂದರ್ಭ ಬಂದೊದುಗವದರಲ್ಲಿ ಸಂಶಯವೇ ಇಲ್ಲ.
ಪರಿಶ್ರಮದಿಂದ ಹಣ ಗಳಿಸಬೇಕು ನ್ಯಾಯಯುತವಾದ ಮಾರ್ಗದಿಂದ ಗಳಿಸಿದ ಹಣ ಮಾತ್ರ ನಮಗೆ ನಿಜವಾದ ಸುಖ ನೆಮ್ಮದಿಯನ್ನು ನೀಡಬಲ್ಲದು. ಹಣದಿಂದ ನಾವು ಬಯಸಿದ ಐಷಾರಾಮಿ ಜೀವನ ನಡೆಸಲು ಸಾಧ್ಯ. ಆದರೆ ಪರಿಪೂರ್ಣ ಜೀವನವನ್ನು ನಡೆಸಲು ಸಾಧ್ಯವಿಲ್ಲ. ಬದುಕಿಗೆ ಹಣ ಮುಖ್ಯವಾದುದು ಆದರೆ ಹಣವೇ ಬದುಕಲ್ಲ! ಎಂಬುದನ್ನು ಮನಗಾಣಬೇಕು. ಹಣವು ವಸ್ತುಲೋಲುಪತೆಯನ್ನು ಹೆಚ್ಚಿಸುತ್ತದೆ ಹೊರತು ಹೃದಯ ಶ್ರೀಮಂತಿಕೆಯನ್ನಲ್ಲ ಎಂಬುದನ್ನು ತಿಳಿಯಬೇಕು.

ಯಾಂತ್ರಿಕವಾದ ಜೀವನದಲ್ಲಿ ದಿನನಿತ್ಯದ ಬೇಕು ಬೇಡಗಳನ್ನು ಈಡೇರಿಸಿಕೊಳ್ಳಲು ಹಣ ಬೇಕೇ ಬೇಕು ಆದ್ದರಿಂದ ಪ್ರಯತ್ನವಾದಿಗಳಾಗಬೇಕು ವಿನಃ ಕಳ್ಳತನ ಅಥವಾ ದರೋಡೆಯಂತಹ ಲಂಚಬಾಕತನದಂಥ ಅಪರಾಧಿ ಕೃತ್ಯಗಳಿಗೆ ಕೈ ಹಾಕಬಾರದು. ಹಣವು ತುಂಬಾ ಅಪೇಕ್ಷಣೀಯ ವಸ್ತುವಾಗಿದೆ. ಹಣಕ್ಕೆ ತುಂಬಾ ಪ್ರಾಶಸ್ತ್ಯ ನೀಡುವ ಅನೇಕ ಜನರನ್ನು ನಾವು ಸಮಾಜದಲ್ಲಿ ಕಾಣುತ್ತೇವೆ. ಆದರೂ ಇಂಥ ಜನರ ಹತ್ತಿರ ಹಣ ಇರುವದಿಲ್ಲ ಏಕೆ? ಎಂದು ನಾವು ಯೋಚಿಸಿದಾಗ ಅವರು ಬರೀ ಹಣದ ವ್ಯಾಮೋಹಿಗಳೆ ಹೊರತು ಅದನ್ನು ಹೇಗೆ ಪಡೆಯುವದು ಎನ್ನುವ ಉಪಾಯ ತಿಳಿದವರಲ್ಲ.
ಕೆಲವರು ತಮ್ಮಲ್ಲಿರುವ ಹಣವನ್ನು ಬಚ್ಚಿಟ್ಟುಕೊಳ್ಳುವದು ಅಥವಾ ಅದನ್ನು ಖರ್ಚು ಮಾಡದಿರುವದೇ ಹಣ ಸಂಪಾದಿಸುವ ಮಾರ್ಗ ಎಂಬ ಭ್ರಮೆಯಲ್ಲಿರುತ್ತಾರೆ. ಹಣದಿಂದಲೇ ಹಣವನ್ನು ಗಳಿಸಬೇಕು. ಹಣವನ್ನು ದುಡಿಸಬೇಕು. ಹಣವನ್ನು ಲಾಭದಾಯಕ ಚಟುವಟಿಕೆಗಳಲ್ಲಿ ಹೂಡಿ ಇಮ್ಮಡಿ, ಗಳಿಸಹುದೆಂಬ ಯುಕ್ತಿ ಇಂಥವರಲ್ಲಿ ಕಾಣುವದಿಲ್ಲ. ಬಿತ್ತಿದೊಡನೆ ಫಸಲು ಬರುವದಿಲ್ಲ. ಫಲಕ್ಕಾಗಿ ಅನೇಕ ದಿನ ಕಾಯಬೇಕಾಗುತ್ತದೆ. ತಕ್ಕ ಪರಿಶ್ರಮ ವಹಿಸಬೇಕಾಗುತ್ತದೆ. ಆದ್ದರಿಂದ ಹಣವನ್ನು ಲಾಭದಾಯಕ ಚಟುವಟಿಕೆಗಳಾದ ಉದ್ದಿಮೆ ವ್ಯವಹಾರಗಳಲ್ಲಿ ತೊಡಗಿಸಬೇಕು.
ಹೀಗೆ ಉದ್ದಿಮೆ ವ್ಯವಹಾರಗಳ್ಲಿ ತೊಡಗಿಸಿಕೊಳ್ಳುವದರಿಂದ ಮಾತ್ರ ಹೆಚ್ಚಿನ ಹಣ ಗಳಿಸಲು ಸಾಧ್ಯವೆ? ಹಾಗೇನಿಲ್ಲ ಖಾಸಗಿ ಕ್ಷೇತ್ರಗಳಲ್ಲಿ ನೌಕರರಾಗಿದ್ದರೆ ಅಥವಾ ವ್ಯವಹಾರ ವ್ಯಾಪಾರದಲ್ಲಿ ತೊಡಗಿದ್ದರೆ ಗ್ರಾಹಕರಿಗೆ ನೀವು ನೀವು ನೀಡುವ ಉತ್ತಮ ಸೆವೆ ಪ್ರಾಮಾಣಿಕತೆಯಿಂದ, ನೀವು ನೀಡುವ ಸೇವೆಯ ಗುಣಮಟ್ಟದಿಂದ ನಿಮಗೆ ಹಣ ತಾನಾಗಿಯೇ ಸಿಗುತ್ತದೆ,
ಹಣ ಹೂಡುವ ಮುನ್ನ ಫಲಿತಾಂಶದ ಬಗ್ಗೆ ಚಿಂತಿಸಬಾರದು. ಮೊದಲು ನಮ್ಮ ಪ್ರಯತ್ನ, ನಂತರ ಅದಕ್ಕೆ ತಕ್ಕ ಫಲ ಸಿಕ್ಕೇ ಸಿಗುತ್ತದೆ ಎಂಬ ನಂಬಿಕೆ, ಭರವಸೆ, ವಿಶ್ವಾಸ ನಮಗಿರಬೇಕು.ಮೊದಲು ಉತ್ತಮ ಸೇವೆ ನಂತರ ಹಣ.ಎಂಬ ಧೋರಣೆಯನ್ನು ಬೆಳೆಸಿಕೊಳ್ಳಬೇಕು. ಈ ನೀತಿಯನ್ನು ಅನುಸರಿಸಿದರೆ ಹಣ ತಾನಾಗಿಯೆ ಬರುತ್ತದೆ. ಆನರು ನಮ್ಮಿಂದ ಏನನ್ನು ಪಡೆಯಬೇಕೆಂದು ನಿರೀಕ್ಷಿಸುತ್ತಾರೆಯೋ ಅದಕ್ಕಿಂತ ಹೆಚ್ಚು ನೀಡುವದೇ ಹಣದ ಬೀಜ ಇದ್ದಂತೆ ಈ ಬೀಜ ಚಿಗುರೆಡೆದು ಬೆಳದು ಹೆಚ್ಚಿನ ಫಲ ಕೊಡುತ್ತದೆ.
ಅಂದರೆ ಸ್ವಲ್ಪ ಹೆಚ್ಚಿನ ಉತ್ತಮ ಸೇವೆ ಸಲ್ಲಿಸುವದರಿಂದ ಗ್ರಾಹಕರು ಆಕರ್ಷಿತರಾಗಿ ಪುನಃ ನಮ್ಮಲ್ಲಿಗೆ ಬರುತ್ತಾರೆ. ಇದರಿಂದ ವ್ಯಾಪಾರ ವಹಿವಾಟು ಜಾಸ್ತಿಯಾಗಿ ಹಣದ ಹೊಳೆಯೇ ಹರಿಯಲಾರಂಭಿಸುತ್ತದೆ.

ಹಣ ಆಲಸಿಯಾದವನಿಗೆ ಎಂದೂ ದೊರೆಯುವದಿಲ್ಲ. ಪರಿಶ್ರಮಿಗೆ ಮಾತ್ರ ಲಕ್ಷ್ಮಿ ಒಲಿಯುತ್ತಾಳೆ. ಲಕ್ಷ್ಮಿ ಚಂಚಲೆ ಎಂಬ ಮಾತನ್ನು ಕೇಳುತ್ತೇವೆ. ಅವಳು ಬಹಳ ದಿನ ಒಂದು ಕಡೆ ನಿಲ್ಲುವದಿಲ್ಲ ಎನ್ನುತ್ತಾರೆ. ಇದಕ್ಕೆ ಕಾರಣ ಧನದೇವಿ ಲಕ್ಷ್ಮಿ ನಮಗೆ ನಾವು ಧನಾಂಧರಾಗುತ್ತೇವೆ. ಆ ಕುರುಡುತನದಲ್ಲಿ ಬೇಕಾಬಿಟ್ಟಿಯಾಗಿ ನಡೆದುಕೊಂಡು ಹಣವನ್ನು ಕಳೆದುಕೊಳ್ಳುತ್ತೇವೆ. ಗಳಿಸಿದ ಹಣ ಬಹಳ ದಿನಗಳವರೆಗೆ ಉಳಿಯಬೇಕಾದರೆ ಅದರ ಸದ್ವಿನಿಯೋಗವಾಗಬೇಕು. ಸಮಾಜ ಕಲ್ಯಾಣ ಕಾರ್ಯಗಳಲ್ಲಿ ಅದರ ಬಳಕೆಯಾಗಬೇಕು. ಪ್ರತಿಯೊಂದರಲ್ಲೂ ಲಾಭ ಹಾನಿ ದೃಷ್ಟಿಯಿಂದ ನೋಡುವದನ್ನು ನಿಲ್ಲಿಸಬೇಕು. ಸದಾ ಕ್ರಿಯಾಶೀಲರಾಗಬೇಕು. ನೀವು ತೋರಿಸುವ ಉತ್ಸಾಹ ಆಸಕ್ತಿಗೆ ಅನುಗುಣವಾಗಿ ಫಲಿತಾಂಶ ದೊರೆಯುತ್ತದೆ. ಯಾವುದೇ ಒಂದು ಮಹಾನ್ ಕಾರ್ಯದಲ್ಲಿ ತೊಡಗಿದಾಗ ಹಣ ಅವಶ್ಯಕ ನಿಜ. ಆದರೆ ಹಣದಿಂದ ಮಾತ್ರ ಆ ಮಹಾನ್ ಕಾರ್ಯ ಕೈಗೂಡುವದಿಲ್ಲ ಅದಕ್ಕೆ ನಂಬಿಕೆ ಆತ್ಮವಿಸ್ವಾಸ ಶ್ರದ್ಧೆ ಭಕ್ತಿ ನಿಷ್ಠೆ ಎಂಬ  ಮೌಲ್ಯಗಳು ಬೇಕು. ಹಣವಿದೆಯೆಂದು ನೀರಿನಂತೆ ಬಳಸದೆ, ಮಿತವ್ಯಯಿಗಳಾಗಬೇಕು. ಇತಿಮಿತಿ ಅರಿತು ಖರ್ಚು ಮಾಡಬೇಕು. ಹಣದ ಸೊಕ್ಕಿಗೆ ಕಡಿವಣ ಹಾಕಬೇಕು. ಇಲ್ಲದಿದ್ದರೆ ಜೀವನ ಸುಂಟರಗಾಳಿಗೆ ಸಿಕ್ಕ ಗಾಳಿಪಟದಂತಾಗುತ್ತೇವೆ.ಸುಮಧುರ ಸುಖಮಯ ಸಂಪೂರ್ಣ ತೃಪ್ತಿದಾಯಕ ಜೀವನಕ್ಕೆ ಹಣದ ಜೊತೆಗೆ ಸದ್ಗುಣಗಳೂ ಮೌಲ್ಯಗಳು ಸೇರಿದಾಗ ಮೆರಗು ಬರುತ್ತದೆ. ಬಾಳು ಸಾರ್ಥಕವಾಗುತ್ತದೆ. ಎಂಬ ವಿಷಯವನ್ನು ಅರಿತು ನಡೆದಾಗ ಹಣ ಮುಳ್ಳಾಗದೆ ಹೂವಾಗಿ ಪರಿಣಮಿಸುತ್ತದೆ.


ಜಯಶ್ರೀ. ಅಬ್ಬಿಗೇರಿ
ಆಂಗ್ಲ ಭಾಷಾ ಉಪನ್ಯಾಸಕರು
ಬೆಳಗಾವಿ
೯೪೪೪೯೨೩೪೧೪೨

RELATED ARTICLES

Most Popular

error: Content is protected !!
Join WhatsApp Group