Homeಲೇಖನನಟನೆಯೊಂದಿಗೆ ಸಮಾಜ ಸೇವೆ ಎ.ವಿ.ರುದ್ರಪ್ಪಾಜಿರಾವ್

ನಟನೆಯೊಂದಿಗೆ ಸಮಾಜ ಸೇವೆ ಎ.ವಿ.ರುದ್ರಪ್ಪಾಜಿರಾವ್

ಹಾಸನದ ರಂಗಭೂಮಿಯಲ್ಲಿ ಎ.ವಿ.ರುದ್ರಪ್ಪಾಜಿರಾವ್ ಅವರ ಕಲಾಸೇವೆ ಮರೆಯುವಂತಿಲ್ಲ. ಹಾಸನ ತಾ. ಕಟ್ಟಾಯ ಹೋಬಳಿ ಆಂಜನೇಯಪುರ ಗ್ರಾಮದ ಎ.ಎಲ್.ವೀರೋಜಿರಾವ್ ಪುಟ್ಟತಾಯಮ್ಮ ದಂಪತಿಗಳ ಸುಪುತ್ರರು. ದಿ. ೧೫-೫-೧೯೫೪ರಲ್ಲಿ ಜನಿಸಿದರು. ೧೯೭೪ರಲ್ಲಿ ಬಿಕಾಂ ಮಾಡಿ ೧೯೭೫ರಲ್ಲಿ ಆಲೂರು ಬಿಡಿಓ ಕಛೇರಿಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಕೆಲಸಕ್ಕೆ ಸೇರಿ ಶಿರಸ್ತೆದಾರ್, ತಹಸೀಲ್ದಾರ್ ಆಗಿ ಬಡ್ತಿ ಪಡೆದು ಈಗ ನಿವೃತ್ರರು. ೩೯ ವರ್ಷ ಸರ್ಕಾರಿ ಸೇವೆ ಜೊತೆಗೆ ಜಿಲ್ಲಾ ಸರ್ಕಾರಿ ನೌಕರರ ಸಂಘದಲ್ಲಿ ಸೇವೆ ಸಲ್ಲಿಸಿದ್ದಾರೆ. ಜಿಲ್ಲಾ ನೌಕರರ ಸಂಘದ ಸಂಘಟನಾ ಕಾರ್ಯದರ್ಶಿ, ಉಪಾಧ್ಯಕ್ಷ, ಪ್ರಧಾನ ಕಾರ್ಯದರ್ಶಿ ಕಂದಾಯ ಇಲಾಖೆ ನೌಕರರ ಸಂಘದಲ್ಲಿ ಜಂಟಿ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ ಆಗಿದ್ದರು.

ಕಾಲೇಜು ದಿನಗಳಲ್ಲಿ ಉತ್ತಮ ಕ್ರೀಡಾಪಟು. ಅಥ್ಲೆಟ್‌ನಲ್ಲಿ ರಾಜ್ಯಮಟ್ಟದ ಪ್ರಶಸ್ತಿ ಗೆದ್ದ ಇವರು ಕಾಲೇಜು ಕೋಕೋ ಟೀಂ ಕ್ಯಾಪ್ಟನ್. ಷಟಲ್ ಬ್ಯಾಡ್ಮಿಂಟನ್ ಪ್ಲೇಯರ್. ಸರ್ಕಾರಿ ನೌಕರರ ಕ್ರೀಡಾಕೂಟ ಸಾಂಸ್ಕೃತಿಕ ಸ್ಫರ್ದೆಯಲ್ಲಿ ಕ್ರೀಡೆ ಮತ್ತು ನಾಟಕ ಎರಡರಲ್ಲೂ ಭಾಗವಹಿಸಿ ಬಹುಮಾನ ಗೆದ್ದವರು. ತಮ್ಮ ೫ನೇ ವಯಸ್ಸಿಗೆ ಶನಿಮಹಾತ್ಮೆ ನಾಟಕದಲ್ಲಿ ಗುರು ಜೋಯಿಸ ಪಾತ್ರಕ್ಕೆ ಬಣ್ಣ ಹಚ್ಚಿ ರಾಮಾಯಣ, ಕುರುಕ್ಷೇತ್ರ, ವಿರಾಟಪರ್ವ ಪೌರಾಣಿಕ ನಾಟಕಗಳಲ್ಲಿ ನಟಿಸಿದ್ದಾರೆ. ಕಾಲೇಜು ನಾಟಕ ಸ್ಫರ್ದೆಗಳಲ್ಲಿ ೧೯೭೧-೭೪ ಪ್ರತಿ ವರ್ಷ ಗೆದ್ದಿದ್ದಾರೆ. ೧೯೭೦-೨೦೦೬ವರೆಗೆ ಹಾಸನ ವಸ್ತು ಪ್ರದರ್ಶನ ರಂಗಮಂಟಪದಲ್ಲಿ ಇವರ ತಂಡ ಪ್ರತಿವರ್ಷ ನಾಟಕ ಪ್ರದರ್ಶಿಸಿದೆ. ದಿ. ೨೯-೧೨-೨೦೦೩ರಂದು ರಾಷ್ಟ್ರಕವಿ ಕುವೆಂಪು ಜನ್ಮ ಶತಮಾನೋತ್ಸವ ಅಂಗವಾಗಿ ಜಿಲ್ಲಾಡಳಿತ ಹಾಸನ ಕಲಾಭವನದಲ್ಲಿ ಏರ್ಪಡಿಸಿದ್ದ ಕುವೆಂಪು ವಿರಚಿತ ರಕ್ತಾಕ್ಷಿ ನಾಟಕದಲ್ಲಿ ಬಸವಯ್ಯನ ಪಾತ್ರ ನಿರ್ವಹಿಸಿದ್ದರು.

ಕೆ.ರಂಗಸ್ವಾಮಿ ನಿರ್ದೆಶನದಲ್ಲಿ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಆಶ್ರಯದಲ್ಲಿ ಬೆಂಗಳೂರಿನ ಕೆಜಿಎಸ್ ಕ್ಲಬ್ ರಂಗಮಂದಿರ ಇಲ್ಲಿ ನಡೆದ ರಾಜ್ಯಮಟ್ಟದ ನಾಟಕ ಸ್ಫರ್ಧೆಯಲ್ಲಿ ಕೃಷ್ಣಮೂರ್ತಿ, ಮೈಸೂರು ವಿರಚಿತ ಕೃಷ್ಣಪ್ರಿಯ ಶಕುನಿ ನಾಟಕದಲ್ಲಿ ಸೌಬಲನ ಪಾತ್ರ ನಿರ್ವಹಿಸಿದ್ದರು. ಮಂಡ್ಯದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಭವನದಲ್ಲಿ ರಾಜ್ಯ ಸರ್ಕಾರಿ ನೌಕರರ ರಾಜ್ಯ ಮಟ್ಟದ ನಾಟಕ ಸ್ಫರ್ಧೆಯಲ್ಲಿ ಇವರದೇ ನಿರ್ದೇಶನದಲ್ಲಿ ಗಿರೀಶ್ ಕಾರ್ನಾಡ್‌ರ ಅಂಜುಮಲ್ಲಿಗೆ ನಾಟಕದಲ್ಲಿ ಗೌತಮನ ಪಾತ್ರದಲ್ಲಿ ಅಭಿನಯಿಸಿದ್ದರು. ಈ ನಾಟಕಗಳನ್ನು ನೋಡಿ ನಾನು ಆಗಲೇ ಪತ್ರಿಕೆಗಳಿಗೆ ವಿಮರ್ಶೆ ಬರೆದಿದ್ದೆನು. ಈ ಬರಹಗಳು ೨೦೧೧ರಲ್ಲಿ ಪ್ರಕಟಿತ ನನ್ನ ರಂಗಪ್ರಯೋಗ ಕೃತಿಯಲ್ಲಿವೆ. ನನ್ನ ೧೫೦ ಕಲಾವಿದರ ಪರಿಚಯ ಪುಸ್ತಕ ಅಭಿನಯ ಅಭಿವ್ಯಕ್ತಿಯಲ್ಲಿ ಇವರ ಕಲಾ ಪರಿಚಯವಿದೆ. ಕೇಂದ್ರ ವಾರ್ತಾ ಮತ್ತು ಪ್ರಸಾರ ಮಂತ್ರಾಲಯದ ಸಂಗೀತ ಮತ್ತು ನಾಟಕ ವಿಭಾಗ ಹಾಸನದಲ್ಲಿ ಪ್ರದರ್ಶಿಸಿದ ಬೃಹತ್ ಧ್ವನಿ ಬೆಳಕು ಕರ್ನಾಟಕ ವೈಭವದಲ್ಲಿ ಇವರು ಸುಭಾಸ್ ಚಂದ್ರ ಬೋಸ್ ಪಾತ್ರದಾರಿಯಾಗಿದ್ದರು. ತಾ. ೩೧-೫-೨೦೨೫ರಂದು ಇವರು ಓದಿದ ಹಾಗೂ ನಾನು (ಗೊರೂರು ಅನಂತರಾಜು) ಕೂಡ ಓದಿರುವ ಸರ್ಕಾರಿ ಕಲಾ ವಾಣಿಜ್ಯ ಮತ್ತು ಸ್ನಾತಕೋತ್ತರ ಕಾಲೇಜು ಸ್ವಾಯತ್ತ, ಹಾಸನ ವತಿಯಿಂದ ಸನ್ಮಾನಿಸಲಾಗಿದೆ. ಅಭಿನಂದನಾ ಪತ್ರದಲ್ಲಿ ಇವರ ಸಮಾಜ ಸೇವೆ ಗುರುತಿಸಲಾಗಿದೆ. ಇದರಲ್ಲಿ ಹಾಸನದ ಕಲಾಭವನ ಶಂಕುಸ್ಥಾಪನೆಯಾಗಿ ಬುನಾದಿ ಹಂತದಲ್ಲೇ ಹಲವು ವರ್ಷ ಇದ್ದು, ಇಲ್ಲಿಯೇ ನೌಕರರ ರಾಷ್ಟ್ರ ಮಟ್ಟದ ನಾಟಕೋತ್ಸವ ರಂಗಸಜ್ಜಿಕೆ ನಿರ್ಮಿಸಿ ಅಂದಿನ ಕಾರ್ಯಕ್ರಮದಲ್ಲಿ ಕಲಾ ಭವನ ನಿರ್ಮಾಣ ನಿಧಾನಗತಿಯ ಬಗ್ಗೆ ಅಂದಿನ ಶಾಸಕರು ಹೆಚ್.ಎಸ್.ಪ್ರಕಾಶ್‌ ರವರ ಗಮನಕ್ಕೆ ತಂದು ವೇದಿಕೆಯಲ್ಲಿ ಶಾಸಕರು ಭರವಸೆ ಇತ್ತಂತೆ ಒಂದು ವರ್ಷದಲ್ಲಿ ಕಲಾಭವನ ಪೂರ್ಣಗೊಂಡಿದ್ದನ್ನು ಗುರುತಿಸಲಾಗಿದೆ. ಇದೇ ವರ್ಷ ೧೯೯೨ರಲ್ಲಿ ಹಾಸನದಲ್ಲಿ ನಡೆದ ನೌಕರರ ರಾಷ್ಟ್ರ ಮಟ್ಟದ ನಾಟಕ ಸ್ಫರ್ಧೆಯಲ್ಲಿ ಇವರ ತಂಡ ಅಭಿನಯಿಸಿದ ಮಾನಿಷದ ನಾಟಕ ಪ್ರಥಮ ಸ್ಥಾನ ಪಡೆದಿತ್ತು.

ಇವರು ಅಭಿನಯಿಸಿದ ಇತರೆ ನಾಟಕಗಳು ನಾದಬಿಂದು, ಇದಿಮಾಯಿ, ಕತ್ತಲೆ ದಾರಿ ದೂರ, ಮತ್ತೆ ಅದೇ ಕತೆ. ‘ಮತ್ತೇನಾದರೂ ರಂಗಕತೆ ಇದೆಯಾ ಸಾರ್..ಎಂದೆ ಪೋನ್ ಮಾಡಿದೆ. ‘ಎಲ್ಲಾ ಕತೆ ನಿಮಗೆ ಗೊತ್ತಲ್ಲ ಅನಂತು, ಕಡೆಗೆ ವಂದನಾರ್ಪಣೆ ಮಾಡುವಾಗ ನನ್ನ ಕಲಾ ಸೇವೆಯಲ್ಲಿ ನನ್ನ ಮಡದಿ ಹೆಚ್.ಎನ್.ಬಾರತಿ ನೇಪಥ್ಯ ಸಹಕಾರ ಮರೆಯಬೇಡಿ ಎಂದು ೪೨ನೇ ವಿವಾಹ ವಾರ್ಷಿಕೋತ್ಸವ ಪೋಟೋ ವ್ಯಾಟ್ಸಪ್ ಮಾಡಿದರು.


ಗೊರೂರು ಅನಂತರಾಜು, ಹಾಸನ.
ಮೊ: ೯೪೪೯೪೬೨೮೭೯
ವಿಳಾಸ: ಹುಣಸಿನಕೆರೆ ಬಡಾವಣೆ, ೨೯ನೇ ವಾರ್ಡ್, ಶ್ರೀ ಶನೀಶ್ವರ ದೇವಸ್ಥಾನ ರಸ್ತೆ, ಹಾಸನ.

RELATED ARTICLES

LEAVE A REPLY

Please enter your comment!
Please enter your name here

Most Popular

error: Content is protected !!
Join WhatsApp Group