ಬಿಡಿಸಿಸಿಗೆ ಮುಂದೆ ಲಿಂಗಾಯತ ಅಧ್ಯಕ್ಷರನ್ನಾಗಿ ಮಾಡಲಾಗುವುದು – ಬಾಲಚಂದ್ರ ಜಾರಕಿಹೊಳಿ

Must Read

ಬೆಳಗಾವಿ -ಈಗ ಬಹಳ ಜನರ ಬಯಕೆ ಬಿಡಿಸಿಸಿ ಬ್ಯಾಂಕ್‌ಗೆ ಬರುವುದು. ಆದರೆ, ನಾನು ಬಿಡಿಸಿಸಿ ಬ್ಯಾಂಕ್‌ಗೆ ಸ್ಪರ್ಧೆ ಮಾಡುವುದಿಲ್ಲ. ಮುಂದಿನ ದಿನಗಳಲ್ಲಿಯೂ ನಾನು ಅಧ್ಯಕ್ಷ ಸ್ಥಾನ ಆಕಾಂಕ್ಷಿಯೂ ಅಲ್ಲ. ಮುಂದೆ ಲಿಂಗಾಯತ ಸಮಾಜದವರನ್ನೇ ಅಧ್ಯಕ್ಷ,
ಉಪಾಧ್ಯಕ್ಷರನ್ನಾಗಿ ಮಾಡುತ್ತೇವೆ. ಯಾವುದೇ ಕಾರಣಕ್ಕೂ ಜಾರಕಿಹೊಳಿ ಕುಟುಂಬದಿಂದ
ಅಧ್ಯಕ್ಷರಾಗುವ ಮಾತೇ ಇಲ್ಲ ಎಂದು ಬೆಮುಲ್‌ ಅಧ್ಯಕ್ಷ, ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.

ನಗರದಲ್ಲಿ ಬುಧವಾರ ನಡೆದ ಬಿಡಿಸಿಸಿ ಬ್ಯಾಂಕ್‌ನ ಸಾಮಾನ್ಯ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕರು, ಮಾಜಿ ಶಾಸಕರು, ಕೆಲವು ನಾಯಕರು ಕೂಡ ಬಿಡಿಸಿಸಿಗೆ ಬರಬೇಕು ಎಂದು ಆಕಾಂಕ್ಷೆ ವ್ಯಕ್ತಪಡಿಸಿದ್ದಾರೆ. ಸತೀಶ ಜಾರಕಿಹೊಳಿ,
ಡಾ. ಪ್ರಭಾಕರ ಕೋರೆ, ರಮೇಶ್ ಜಾರಕಿಹೊಳಿ,ಲಕ್ಷ್ಮಣ ಸವದಿ, ಅಣ್ಣಾಸಾಹೇಬ ಜೊಲ್ಲೆಯ ತಂಡವು ಬಲಿಷ್ಠವಾಗಿದೆ. ಆರಂಭದಿಂದಲೂ ಈ ತಂಡದಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ವ್ಯತ್ಯಾಸವಿಲ್ಲದೆ,
ಒಗ್ಗಟ್ಟಾಗಿ ಚುನಾವಣೆ ಎದುರಿಸಲು ಸಜ್ಜಾಗಿದ್ದೇವೆ. ಎಲ್ಲ ಕಡೆ ತಾವು ಕೂಡ ಚುನಾವಣೆಗೆ ಸ್ಪರ್ಧೆ ಮಾಡಬೇಕೆಂದು ಆಸೆ ಇಟ್ಟುಕೊಂಡಿದ್ದಾರೆ. ಅದರಲ್ಲಿ ತಪ್ಪೇನು ಇಲ್ಲ.
ಕೆಲವೊಂದು ಕಡೆ ನಾಮ್‌ ಕೆ ವಾಸ್ತೆ ಚುನಾವಣೆ ಆಗಬಹುದು. ಮತ್ತೊಂದೆಡೆ ಜೋರಾಗಿ ಆಗಬಹುದು ಎಂದರು.

ಈ ಬಾರಿಯ ಸಾಮಾನ್ಯ ಸಭೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದರು. ಸಮಾಧಾನದಿಂದ ಶಾಂತ ರೀತಿಯಿಂದ ಮುಗಿಯಿತು. ಎಲ್ಲವೂ ಒಳ್ಳೆಯದಾಯಿತು ಎಂದರು. ಕೆಲವು ನಿರ್ದೇಶಕರು ಸಭೆಗೆ ಬಾರದ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಎಲ್ಲ
ನಿರ್ದೇಶಕರಿಗೆ ಆಹ್ವಾನ ನೀಡಲಾಗಿತ್ತು. ಶಾಸಕ ಲಕ್ಷ್ಮಣ ಸವದಿ ಅವರು ಬೆಂಗಳೂರಿಗೆ ಹೋಗಿದ್ದರು. ಬೇರೆ ಬೇರೆ ಕಾರಣಗಳಿಂದ ಕೆಲವರು ಸಭೆಯಿಂದ ದೂರ ಉಳಿದಿದ್ದಾರೆ. ಸಾಮಾನ್ಯ ಸಭೆಗೆ ಕೆಲವರು ಗೈರಾಗಿರುತ್ತಾರೆ. ಒಟ್ಟಿನಲ್ಲಿ ಸಾಮಾನ್ಯ ಸಭೆ ಶಾಂತ ರೀತಿಯಿಂದ ನಡೆಯಿತು ಎಂದರು.

ಅಕ್ಟೋಬರ್‌ 19ರಂದು ಚುನಾವಣೆ ನಿಗದಿಯಾಗಿದೆ. ಪ್ರಚಾರ ಕೂಡ ಮಾಡುತ್ತಿದ್ದೇವೆ. ರಾಯಬಾಗ, ನಿಪ್ಪಾಣಿ, ಕಿತ್ತೂರು, ಬೈಲಹೊಂಗಲ ತಾಲೂಕುಗಳಲ್ಲಿ ಪ್ರಚಾರ ಮಾಡುವುದು ಉಳಿದಿವೆ. ಅಲ್ಲಿಯು ಕೂಡ ಆ.5 ಅಥವಾ 6ರೊಳಗೆ ಚುನಾವಣೆ ಪ್ರಚಾರ ಮಾಡಿ ಮುಗಿಸುತ್ತೇವೆ.
ಇದರಿಂದ ಎಲ್ಲ ತಾಲೂಕುಗಳಲ್ಲಿ ಬಿಡಿಸಿಸಿ ಬ್ಯಾಂಕ್‌ ಚುನಾವಣೆಯ ಪ್ರಚಾರ ಮುಗಿದಂತೆ ಆಗುತ್ತದೆ ಎಂದು ತಿಳಿಸಿದರು.

ಕೊಲ್ಹಾಪುರದಲ್ಲಿ ನಡೆದ ಸಭೆಯ ಪರಿಣಾಮ ಏನಾದರೂ ಬೀರಿದೆಯೇ ಎಂಬ ಮಾಧ್ಯಮದವರ
ಪ್ರಶ್ನೆಗೆ ಉತ್ತರಿಸಿದ ಅವರು, ಪೂಜ್ಯ ಸ್ವಾಮೀಜಿಯವರು ಎಲ್ಲರನ್ನು ಸಭೆಗೆ ಕರೆದಿದ್ದರು. ಹೀಗಾಗಿ ನಮ್ಮ ಕಡೆಯವರು, ಬೇರೆಯವರು ಹೋಗಿದ್ದರು. ಬೆಳಗಾವಿಯಲ್ಲಿ ಹಾಸ್ಟೆಲ್ ಕಟ್ಟಬೇಕು ಎಂಬುದು ಕೂಡ ಅಲ್ಲಿ ಚರ್ಚೆಯಾಯಿತು. ಅದರಂತೆ ಸಭೆ ಕರೆದಾಗ
ರಾಜಕೀಯ ಕೂಡ ಚರ್ಚೆ ಆಗಿಯೇ ಆಗುತ್ತದೆ. ಹೀಗಾಗಿ ಅಲ್ಲಿ ಸಭೆಯ ನಂತರ ಅಣ್ಣಾಸಾಹೇಬ ಜೊಲ್ಲೆ, ಮಹಾಂತೇಶ ದೊಡ್ಡಗೌಡರ ಸೇರಿದಂತೆ ಎಲ್ಲರೂ ಸಭೆ ಮಾಡಿ ಮುಂದೇನು ಮಾಡಬೇಕು ಎಂದು ಚರ್ಚೆ ಮಾಡಿದ್ದೇವೆ. ಶಾಂತ ರೀತಿಯಿಂದ ಚುನಾವಣೆ ನಡೆಯುತ್ತದೆ. ಎಲ್ಲವನ್ನು ಅವಿರೋಧ ಆಯ್ಕೆಗೆ ಪ್ರಯತ್ನ ಮಾಡುತ್ತೇವೆ. ಎಲ್ಲಿ ಅವಿರೋಧ ಆಯ್ಕೆ ಆಗುವುದಿಲ್ಲವೋ ಅಲ್ಲಿ ಚುನಾವಣೆ ಮಾಡುತ್ತೇವೆ ಎಂದು ವಿವರಿಸಿದರು.

ಸಚಿವ ಸತೀಶ ಜಾರಕಿಹೊಳಿ ಅವರು ನಿರ್ದೇಶಕರು, ನೀವು ಮತ್ತು ಜೊಲ್ಲೆಯವರು ಎಂದು ಹೇಳಿದ್ದಾರೆ ಎಂಬ ಮಾತಿಗೆ ಪ್ರತಿಕ್ರಿಯಿಸಿ, ಈಗ ಏನಿಲ್ಲ. ಎಲ್ಲರೂ ಆಕ್ಟರೇ,
ಪ್ರೊಡ್ಯೂಸರೆ, ಡೈರೆಕ್ಟರೇ ಆಗಿದ್ದಾರೆ. ಹೀಗಾಗಿ ಎಲ್ಲರೂ ಕೂಡಿಯೇ ಕೆಲಸ ಮಾಡುತ್ತಿದ್ದೇವೆ. ದೊಡ್ಡ ಬ್ಯಾಂಕ್‌ ಇರುವುದರಿಂದ ನೌಕರರಿಗೆ, ರೈತರಿಗೆ ಎಲ್ಲರಿಗೂ
ಅನುಕೂಲವಾಗುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ. ಆದರೆ, ಕೆಲವರು ಅಪಪ್ರಚಾರಕ್ಕೋ, ರಾಜಕೀಯಕ್ಕೋ ಏನೇನೋ ಮಾತನಾಡುತ್ತಿದ್ದಾರೆ. ಅಂತಹವರ ಬಾಯಿ
ಮುಚ್ಚಿಸಲು ಆಗುವುದಿಲ್ಲ. ಬ್ಯಾಂಕ್‌ ಚೆನ್ನಾಗಿದೆ. ಮುಂದೆಯೂ ಚೆನ್ನಾಗಿ ನಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಒಂಬತ್ತು ಪಿಕೆಪಿಎಸ್‌ಗಳು ನಕಲಿ ಇವೆ ಎಂದು ಮಹಾಂತೇಶ ಕಡಾಡಿ ದೂರು ಕೊಟ್ಟಿದ್ದಾರೆ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಸೊಸೈಟಿಗಳನ್ನು ಹಾಗೆಲ್ಲ ನಕಲಿ ಮಾಡಲು ಆಗುವುದಿಲ್ಲ. ಸೊಸೈಟಿ ಮಾಡಿರುತ್ತಾರೆ. ಬ್ಯಾಂಕಿನ ಜತೆ ವ್ಯವಹಾರ
ಮಾಡುತ್ತಾರೆ. ಹೀಗಾಗಿ ನಕಲಿ ಆಗಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ ಅವರು, ಮತ ಮಾಡುವ ಅರ್ಹತೆ ಪಿಕೆಪಿಎಸ್‌ಗೆ ಇರುತ್ತದೆ. ಕೆಲವೊಂದು ಜನ ಆರೋಪ ಮಾಡಬಹುದು. ಅದು ಸರಿ ಇದೆಯೇ ಇಲ್ಲವೋ ಎಂಬುವುದನ್ನು ತನಿಖೆ ಮಾಡಿದಾಗಲೇ ತಿಳಿಯುತ್ತದೆ ಎಂದು ತಿರುಗೇಟು ನೀಡಿದರು.

ಚುನಾವಣೆಯಲ್ಲಿ ಆಸೆ ಆಮಿಷ ಒಡ್ಡುತ್ತಿರುವ ಆರೋಪ ಕೇಳಿಬರುತ್ತಿರುವ ಕುರಿತು ಮಾತನಾಡಿದ ಅವರು, ಯಾವುದೇ ಚುನಾವಣೆ ದುಡ್ಡಿನ ಮೇಲೆ ಆಗುವುದಿಲ್ಲ. ಸಂಘಟನೆ ಇರಬೇಕು. ಜನರ ಪ್ರೀತಿ, ವಿಶ್ವಾಸ, ನಂಬಿಕೆ ಇರಬೇಕು. ದುಡ್ಡಿದ್ರೆ ಶಾಸಕರು, ಎಂಪಿ ಏನು ಬೇಕಾದರೂ
ಆಗಬಹುದಿತ್ತು. ಆದರೆ, ಈ ಮಾತನ್ನು ಒಪ್ಪಲು ಆಗುವುದಿಲ್ಲ. ಕೆಲವೊಂದು ಸಂದರ್ಭದಲ್ಲಿ
ದುಡ್ಡು ಖರ್ಚು ಮಾಡುವ ಅನಿವಾರ್ಯತೆ ಬರುತ್ತದೆ. ಮಾಡುತ್ತಾರೆ ಎಂದಷ್ಟೇ ಹೇಳಿದರು.

ದುಡ್ಡು ಕೊಟ್ಟು ಮತದಾರರನ್ನು ಖರೀದಿ ಮಾಡುತ್ತಾರೆ ಎಂಬ ಆರೋಪ ಕುರಿತು ಮಾತನಾಡಿ, ಅವರು ಹಾಗೆಲ್ಲ ಮಾತನಾಡಬಾರದು. ಅದು ಮತದಾರರಿಗೆ ಮಾಡಿದ ಅವಮಾನವಾಗುತ್ತದೆ. ಹಾಗೆಯೇ ಮತದಾರರು ಯಾರು ಕೂಡ ದುಡ್ಡು ತೆಗೆದುಕೊಂಡು ಮತದಾನ ಮಾಡುವುದಿಲ್ಲ ಎಂದರು.

ಎ.ಬಿ.ಪಾಟೀಲ, ಕತ್ತಿ ಕುಟುಂಬ ಒಂದಾದ ಕುರಿತು ಮಾತನಾಡಿ, ಎಲ್ಲರೂ ಬೆಳಗಾವಿಯವರು. ಕರ್ನಾಟಕದವರು. ಹೊರಗಿನವರು ಯಾರು ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.

ಈ ಸಂದರ್ಭದಲ್ಲಿ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಪ್ಪಾಸಾಹೇಬ್ ಕುಲಗೋಡೆ, ಉಪಾಧ್ಯಕ್ಷ ಸುಭಾಸ ಢವಳೇಶ್ವರ, ಮಾಜಿ ಸಂಸದ ಅಣ್ಣಾಸಾಹೇಬ್ ಜೊಲ್ಲೆ, ಮಾಜಿ ಶಾಸಕರಾದ ಮಹಾಂತೇಶ ದೊಡ್ಡಗೌಡ್ರ, ಅರವಿಂದ ಪಾಟೀಲ, ರಾಜೇಂದ್ರ ಅಂಕಲಗಿ, ನೀಲಕಂಠ ಕಪ್ಪಲಗುದ್ದಿ, ಎಸ್.ಎಸ್.ಢವಣ, ಸತೀಶ ಕಡಾಡಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Latest News

ಅನ್ನದಾನೇಶ್ವರ ಶ್ರೀಗಳು ಪಂಚಭೂತಗಳಲ್ಲಿ ಲೀನ

ಶ್ರೀಶೈಲ ಜಗದ್ಗುರುಗಳು, ನಾಡಿನ ಹರಗುರು ಚರಮೂರ್ತಿಗಳು ಭಕ್ತರು ಭಾಗಿಮೂಡಲಗಿ - ರಬಕವಿ ಬನಹಟ್ಟಿ ತಾಲೂಕಿನ ಬಂಡಿಗಣಿ ಗ್ರಾಮದ ಶ್ರೀ ಬಸವ ಗೋಪಾಲ ನೀಲಮಾಣಿಕ ಮಠದ ಶ್ರೀ...

More Articles Like This

error: Content is protected !!
Join WhatsApp Group