Homeಲೇಖನಸಾರ್, ನನಗೆ ಹಾಡುವುದೆಂದರೆ ತುಂಬಾ ಇಷ್ಟ.ನಾನು ಅಶ್ವಿನಿ ಹರೀಶ್

ಸಾರ್, ನನಗೆ ಹಾಡುವುದೆಂದರೆ ತುಂಬಾ ಇಷ್ಟ.ನಾನು ಅಶ್ವಿನಿ ಹರೀಶ್

ಸರ್, ನನ್ನ ಹೆಸರು ಅಶ್ವಿನಿ ಹರೀಶ್. ನಾನು ದಿನಾಂಕ 25-4-1984ರಲ್ಲಿ ಹೊನ್ನವಳ್ಳಿಯಲ್ಲಿ ಜನಿಸಿದೆ. ಹೊನ್ನವಳ್ಳಿ ಎಂದರೆ ಗೊತ್ತಲ್ವಾ ಚಲನಚಿತ್ರ ಹಾಸ್ಯ ನಟರು ಹೊನ್ನವಳ್ಳಿ ಕೃಷ್ಣ ಅವರ ಊರು. ನನ್ನ ತಂದೆ ತಾಯಿಗೆ ಒಟ್ಟು ಎಂಟು ಮಕ್ಕಳು. ಅವರಲ್ಲಿ ನಾನು ಏಳನೇಯವಳು. ನಾನು ಹೊನ್ನವಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮತ್ತು ಹೊನ್ನವಳ್ಳಿಯ ಖಾಸಗಿ ಶಾಲೆ ಹೇಮಾವತಿ ಪ್ರೌಢಶಾಲೆಯಲ್ಲಿ 10ನೇ ತರಗತಿವರೆಗೆ ಓದಿದೆ. ಚಿಕ್ಕಂದಿನಿಂದ ಹಾಡುವುದೆಂದರೆ ನನಗೆ ತುಂಬಾ ಇಷ್ಟ. ಹಾಡುವುದಲ್ಲದೆ ಓದಿನಲ್ಲೂ ಮುಂದೆ ಇದ್ದೆ. ಚಿಕ್ಕಂದಿನಲ್ಲಿ ಶಾಲೆಯಲ್ಲಿ ಏರ್ಪಡಿಸುತ್ತಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಹಾಡುಗಳನ್ನು ಹಾಡಿ ಬಹುಮಾನ ಪಡೆಯುತ್ತಿದ್ದೆ. ಹಾಗೇ ನೃತ್ಯ ನಾಟಕಗಳಲ್ಲೂ ಭಾಗವಹಿಸುತ್ತಿದ್ದೆ ನಾನು ಚಿಕ್ಕವಳಿದ್ದಾಗ ಹೊಲದ ಹತ್ತಿರ ಕೆಲಸ ಮಾಡುವಾಗ ದನ ಮೇಯಿಸುವಾಗ ನನಗೆ ನಾನೇ ಹಾಡಿಕೊಳ್ಳುತ್ತಿದೆ.

ಮನೆಯಲ್ಲಿ ಕೆಲಸ ಮಾಡುವಾಗಲು ಪಾತ್ರೆ ತೊಳೆಯುವಾಗಲು ಮನೆ ಸಾರಿಸುವಾಗಲೂ ಹಾಡು ಹೇಳುತ್ತಲೇ ಇದ್ದೆ. ನನಗೆ ಅರಿವಾಗದ ಹಾಗೆ ನನ್ನಲ್ಲಿ ಸಂಗೀತದ ಆಸಕ್ತಿ ಬೆಳೆಯಿತು. ಅರಕಲಗೂಡು ಬಾಲಕಿಯರ ಪದವಿ ಪೂರ್ವ ಕಾಲೇಜಿಗೆ ಪಿಯುಸಿಗೆ ಸೇರಿದೆ. ಆಗ ನಮ್ಮ ತಂದೆ ತೀರಿಕೊಂಡರು. ಇದರಿಂದಾಗಿ ಮತ್ತು ಕುಟುಂಬದ ಸಮಸ್ಯೆಗಳಿಂದಾಗಿ ನನ್ನ ವಿದ್ಯೆ ಇಲ್ಲಿಗೆ ಮೊಟಕಾಯಿತು. ಈ ಮಧ್ಯೆ ಈ ಟಿವಿಯ ಹಾಡಿಗೊಂದು ಹಾಡು ಕಾರ್ಯಕ್ರಮದಲ್ಲಿ ನನಗೆ ಹಾಡುವ ಅವಕಾಶ ಬಂತು. ಅದರ ಆಡಿಶನ್ ನಲ್ಲಿ ಭಾಗವಹಿಸಿ ಕುಶಾಲನಗರದಲ್ಲಿ 2006ರಲ್ಲಿ ಪ್ರಥಮ ಬಹುಮಾನ ಪಡೆದೆ. ಆ ಕಾರ್ಯಕ್ರಮವನ್ನು ಪ್ರಸಿದ್ಧ ಹಿನ್ನೆಲೆ ಗಾಯಕಿ ಬಿ.ಆರ್. ಛಾಯ ಹಾಗೂ ರವಿಶಂಕರ್ ನಡೆಸಿಕೊಟ್ಟಿದ್ದರು.

ಮಗಳ ವಿದ್ಯಾಭ್ಯಾಸಗೋಸ್ಕರ ನಮ್ಮ ಸಂಸಾರ ಅರಕಲಗೂಡಿಗೆ ಬಂದೆವು. ಇಲ್ಲಿ ಜನಪದ ಗಾಯಕರು ದೇವಾನಂದ್ ವರಪ್ರಸಾದ್ ಬೇಸಿಗೆ ಶಿಬಿರ, ರಂಗ ತರಬೇತಿ ಶಿಬಿರ ಆಯೋಜನೆ ಮಾಡಿ ಈ ಶಿಬಿರಕ್ಕೆ ನನ್ನ ಮಗಳನ್ನು ಸೇರಿಸಲು ಹೋಗಿ ನನ್ನಲ್ಲಿದ್ದ ಜನಪದ ಗಾಯನ ಆಸಕ್ತಿ ಕಂಡು ಅವರು ನನಗೆ ಹಾಡಲು ಅವಕಾಶ ನೀಡಿದರು. ಇಲ್ಲಿಂದ ಮತ್ತೆ ನನ್ನ ಸಂಗೀತ ಪಯಣ ಪ್ರಾರಂಭ. ಅವರ ಜೊತೆ ವಿಶ್ವ ವಿಖ್ಯಾತ ಮೈಸೂರು ದಸರಾದಲ್ಲಿ ರಂಗಗೀತೆ ಹಾಡಿದ್ದೇನೆ. ಕೋಟಿ ಕಂಠ ಗೀತೆಗಳ ಗಾಯನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇನೆ. ಮೈಸೂರಿನ yeshtel ಟಿವಿಯಲ್ಲಿ ಜನಪದ ಗೀತೆ ಹಾಡಿದ್ದೇನೆ.

ಮೈಸೂರು ಕಿರು ರಂಗಮಂದಿರದಲ್ಲಿ ಆಯೋಜಿಸಿದ ಜಾನಪದ ಹಬ್ಬದಲ್ಲಿ ಭಾಗವಹಿಸಿ ಸೋಜಿಗಾದ ಸೂಜುಮಲ್ಲಿಗೆ ಜನಪದ ಗೀತೆ ಹಾಡಿ ಅಲ್ಲಿ ಕೇಳುತ್ತಿದ್ದವರ ಮನಸ್ಸಿಗೆ ಅಚ್ಚು ಮೆಚ್ಚಾಗಿತ್ತು. ದೇವನಂದ ವರಪ್ರಸಾದ್ ತಾವೇ ಸಂಗೀತ ಸಂಯೋಜನೆ ಮಾಡಿದ ಗಾದೆಗಳ ಆಧಾರಿತ ದೂರದ ಬೆಟ್ಟ ನುಣ್ಣಗೆ ನಾಟಕದಲ್ಲಿ ನಾನು ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದೇನೆ. ಇವತ್ತಿನ ನನ್ನ ಗಾಯನ ಸಾಧನೆಗೆ ದೇವಾನಂದ ವರಪ್ರಸಾದರು ಮುಖ್ಯ ಕಾರಣರು.

ಕೇವಲ ಜನಪದ ಗೀತೆಗಳನ್ನು ಹಾಡುತ್ತಿದ್ದ ನನಗೆ ಸೋಬಾನೆ, ರಾಗಿ ಬೀಸೋ ಪದ ಕಲಿಸಿದರು. ಹಾಗೆ ಮತ್ತೊಬ್ಬರು ಶೇಖರ್ ಅವರು ನಾನು ಚಲನಚಿತ್ರ ಗೀತೆಗಳನ್ನು ಹಾಡುತಿದ್ದೆ. ಕರೋಕೆ ಜೊತೆ ಹೇಗೆ ಹಾಡಬೇಕು ಎಂದು ಅವರು ಹೇಳಿಕೊಟ್ಟರು ಅವರು ಕುಶಾಲನಗರ, ಸೋಮವಾರಪೇಟೆ, ಅರಕಲಗೂಡು, ಶನಿವಾರ ಸಂತೆಯಲ್ಲಿ ಆಯೋಜನೆ ಮಾಡುತ್ತಿದ್ದ ಸ್ವರ ಸಂಭ್ರಮ ಕಾರ್ಯಕ್ರಮದಲ್ಲಿ ನನಗೆ ಗೀತೆ ಆಯ್ಕೆ ಮಾಡಿ ಅದನ್ನು ಸರಿಯಾದ ರೀತಿ ಹಾಡುವಲ್ಲಿ ತಿದ್ದಿ ಹೇಳುತ್ತಿದ್ದರು. ಇವರ ಕಾರ್ಯಕ್ರಮಗಳಲ್ಲಿ ಹಲವಾರು ಸ್ಮರಣಿಕೆಗಳನ್ನು ಪಡೆದಿದ್ದೇನೆ. ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಯುವಜನ ಮೇಳದಲ್ಲಿ ಜಿಲ್ಲಾಮಟ್ಟದಲ್ಲಿ ಭಾಗವಹಿಸಿ ಗೆದ್ದು ವಿಭಾಗ ಮಟ್ಟದಲ್ಲಿ ಭಾಗವಹಿಸಿ ಗೆದ್ದು, ರಾಗಿ ಬೀಸೋ ಪದದಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದರೂ ಕರೋನ ಕಾರಣ ಭಾಗವಹಿಸಲಿಲ್ಲ.

ಅರಸಿಕಟ್ಟೆಯಲ್ಲಿ ಹಳ್ಳಿ ಸಂಸ್ಕೃತಿ ಹಬ್ಬ ಎಂಬ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆ ಮಾಡಿ ಐದಾರು ದಿನ ನಡೆದ ಕಾರ್ಯಕ್ರಮದಲ್ಲಿ ನಾನು ಶಾಲಾ ಮಕ್ಕಳನ್ನು ಜೊತೆಗೆ ನನ್ನ ಮಗಳನ್ನು ಸೇರಿಸಿಕೊಂಡು ಒಂದು ತಂಡ ಮಾಡಿಕೊಂಡು ಅಲ್ಲಿ ಭಜನೆ. ಸೋಬಾನೆ ಪದ. ರಾಗಿ ಬೀಸೋ ಪದ. ಜನಪದ ಗೀತೆ. ಜನಪದ ನೃತ್ಯ. ಆರತಿ ಶಾಸ್ತ್ರದ ಹಾಡು. ಚಪ್ಪರದ ಹಾಡು ಹಾಡಿ ಪ್ರಥಮ ದ್ವಿತೀಯ ಬಹುಮಾನ ಪಡೆದದ್ದೇನೆ. ನಾವೊಂದು ಲಹರಿ ತಂಡ ಮಾಡಿಕೊಂಡು ಕಾರ್ಯಕ್ರಮ ನೀಡುತ್ತಿದ್ದೇವೆ. ಅರಕಲಗೂಡು ದಸರಾದಲ್ಲಿ ದೊಡ್ಡಮ್ಮದೇವಿ ಆವರಣದಲ್ಲಿ ಕಾರ್ಯಕ್ರಮ ನೀಡಿದ್ದೇವೆ. ಗಣೇಶೋತ್ಸವ ಪ್ರಯುಕ್ತ ನಮ್ಮ ತಂಡದಿಂದ ಭಕ್ತಿಗೀತೆ ಕಾಯ೯ಕ್ರಮ ನೀಡಿದ್ದೇವೆ. ಶಿಕ್ಷಕರ ದಿನಾಚರಣೆಗೆ ಕನ್ನಡ ಗೀತೆ ಹಾಡಿದ್ದೇವೆ.

ಹಾಸನ ಜಿಲ್ಲಾ ಬರಹಗಾರರ ಸಂಘದ ಅದ್ಯಕ್ಷರು ಸುಂದರೇಶ್ ಡಿ. ಉಡುವಾರೆ ಇವರು ನನ್ನ ಜನಪದ ಕಲೆಯನ್ನು ಗುರುತಿಸಿ ಜಿಲ್ಲಾಮಟ್ಟದ ಕರೀಂಖಾನ್ ಪ್ರಶಸ್ತಿ ನೀಡಿ ಸನ್ಮಾನಿಸಿದ್ದಾರೆ. ಕನಾ೯ಟಕ ಬರಹಗಾರರ ಸಂಘದ ರಾಜ್ಯಾಧ್ಯಕ್ಷರು ಮಧು ನಾಯಕ್ ಲಂಬಾಣಿ ಅವರು ಆಯೋಜನೆ ಮಾಡುತ್ತಿದ್ದ ಆನ್ ಲೈನ್ ಗಾಯನ ಸ್ಪರ್ಧೆಗಳಲ್ಲಿ ಭಾಗವಹಿಸಿ ನಾನು ಆಯ್ಕೆಯಾಗಿ ಶಿವಮೊಗ್ಗದಲ್ಲಿ ಈ ವಷ೯ ನಡೆದ ಕನ್ನಡ ನುಡಿ ವೈಭವ ಕಾರ್ಯಕ್ರಮದಲ್ಲಿ ನನಗೆ ಗಾನ ಕೋಗಿಲೆ ಪ್ರಶಸ್ತಿ ನೀಡಿ ಸನ್ಮಾನಿಸಿದರು.

ಹೀಗೆ ತಮ್ಮ ಸಂಗೀತ ಸಾಧನೆ ಸನ್ಮಾನದ ವಿವರ ನೀಡಿದ ಮೇಡಂ ಒಂದಿಷ್ಟು ಗಾಯನ ಕಾಯ೯ಕ್ರಮ ಪ್ರಶಸ್ತಿ ಪೋಟೋ ಕಳಿಸಿದ್ದರು. ಅದರಲ್ಲಿ ನಾನೇ ಅವರ ತಂಡಕ್ಕೆ ಪ್ರಶಸ್ತಿ ನೀಡುತ್ತಿರುವ ಪೋಟೋ ಒಂದಿತ್ತು. ಗಾಯನ ಕ್ಷೇತ್ರದಲ್ಲಿ ಇನ್ನೂ ಬೆಳೆಯಲೆಂದು ಶುಭ ಹಾರೈಸಿದೆ.


ಗೊರೂರು ಅನಂತರಾಜು, ಹಾಸನ.
9449462879
ವಿಳಾಸ: ಹುಣಸಿನಕೆರೆ ಬಡಾವಣೆ,
29ನೇ ವಾರ್ಡ್, 3 ನೇ ಕ್ರಾಸ್,
ಶ್ರೀ ಶನೈಶ್ಚರ ದೇವಸ್ಥಾನ ರಸ್ತೆ,
ಹಾಸನ-573201

RELATED ARTICLES

LEAVE A REPLY

Please enter your comment!
Please enter your name here

Most Popular

error: Content is protected !!
Join WhatsApp Group