Homeಸುದ್ದಿಗಳುಕೃಷಿಯಲ್ಲಿ ಮಳೆ ನೀರು ಬಳಕೆಯಲ್ಲಿ ಸಂಶೋಧನಾತ್ಮಕ ತಂತ್ರಜ್ಞಾನ ಕುರಿತು ಕಾರ್ಯಾಗಾರ

ಕೃಷಿಯಲ್ಲಿ ಮಳೆ ನೀರು ಬಳಕೆಯಲ್ಲಿ ಸಂಶೋಧನಾತ್ಮಕ ತಂತ್ರಜ್ಞಾನ ಕುರಿತು ಕಾರ್ಯಾಗಾರ

ಕರ್ನಾಟಕ ಸರಕಾರದ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಶ್ರೀಮತಿ ಈರಮ್ಮ ಎಸ್ ಯಾದವಾಡ ಸರಕಾರಿ ಪದವಿ ಮಹಾವಿದ್ಯಾಲಯ ರಾಮದುರ್ಗದಲ್ಲಿ ಐ.ಕ್ಯೂ.ಎ.ಸಿ. ಕಾರ್ಯಕ್ರಮದಡಿಯಲ್ಲಿ ಗ್ರೀನಲ್ಯಾಂಡ್ ಬಯೋಟೆಕ್ ಹಾಗೂ ದಾಕ್ಷಾಯಿಣಿ ಭಾ ಜಾಬಶೆಟ್ಟಿ ಫೌಂಡೇಶನ್ ರಾಮದುರ್ಗ ಇವರ ಸಹಯೋಗದಲ್ಲಿ ” *Innovative Technologies in Farmland Rainwater Harvesting”* ಎಂಬ ವಿಷಯ ಕುರಿತು ಏರ್ಪಡಿಸಿದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ದಾಕ್ಷಾಯಿಣಿ ಬಿ. ಜಾಬಶೆಟ್ಟಿ ಫೌಂಡೇಶನ್ನಿನ ಅಧ್ಯಕ್ಷ ಭಾಲಚಂದ್ರ ಜಾಬಶೆಟ್ಟಿ ದಿಕ್ಸೂಚಿ ಉಪನ್ಯಾಸ ನೀಡಿದರು.

ನೀರಿನ ಹಿತಮಿತವಾದ ಬಳಕೆಯಿಂದ ಸುಸ್ಥಿರ ಅಭಿವೃದ್ಧಿ ಸಾಧ್ಯ, ಕೃಷಿಯಲ್ಲಿ ಕನಿಷ್ಟ ಪ್ರಮಾಣದ ನೀರನ್ನು ಬಳಸಿ ಗರಿಷ್ಠ ಪ್ರಮಾಣದ ಉತ್ಪಾದನೆ ಮಾಡಬಹುದಾಗಿದೆಯೆಂದರು.

ಅವಶ್ಯಕತೆಗಿಂತ ಹೆಚ್ಚಿನ ರಾಸಾಯನಿಕ ಗೊಬ್ಬರ ಬಳಕೆಯಿಂದ ಜಲಮೂಲಗಳು ಕಲುಷಿತಗೊಳ್ಳುತ್ತಿದ್ದು ಈ ನಿಟ್ಟಿನಲ್ಲಿ ರೈತರನ್ನು ಹಾಗು ಜನಸಾಮಾನ್ಯರನ್ನು ಜಾಗೃತಿಗೊಳಿಸುವ ಕೈಂಕರ್ಯದಲ್ಲಿ ಯುವಕರು ತೊಡಗಿಕೊಳ್ಳುವಂತೆ ಕರೆ ನೀಡಿದರು.

ಜಾಗತಿಕ ತಾಪಮಾನದ ಹೆಚ್ಚಳದಿಂದ ಮಳೆ ಅವಧಿ ಹಾಗೂ ತತಿಗಳಲ್ಲಿ ವ್ಯತ್ಯಾಸವಾಗುತ್ತಿರುವುದರಿಂದ ರೈತ ಸಂಕಷ್ಟಕ್ಕೀಡಾಗುತ್ತಿದ್ದಾನೆ. ಅದನ್ನು ತಪ್ಪಿಸಲು ಕಡಿಮೆ ಖರ್ಚುವೆಚ್ಚದಲ್ಲಿ ರೈತರು ಸ್ವತಃ ತಾವೇ ತಮ್ಮ ಜಮೀನುಗಳಲ್ಲಿ ನೂತನ ಆವಿಷ್ಕೃತ “Aqua-Silico holders” ವಿಶೇಷ ವಿನ್ಯಾಸದ ಜಲಸಂಚಯಗಳನ್ನು ಭೂಮ್ಯಾಂತರ್ಗತವಾಗಿ ರಚಿಸಿ ಬಿತ್ತನೆಯಾದ ಪ್ರಾರಂಭಿಕ ಹಂತದಲ್ಲಾಗುವ ನೀರಿನ ಕೊರತೆಯನ್ನು ಸಮರ್ಥವಾಗಿ ಎದುರಿಸಿ ಬೆಳೆ ನಷ್ಟವನ್ನು ತಪ್ಪಿಸಿ ಸಮೃದ್ಧ ಬೆಳೆ ಬೆಳೆಯಲು ಸಹಕರಿಸುವ ಈ ತಂತ್ರಜ್ಞಾನ ರೈತರ ಆರ್ಥಿಕ ಅಭಿವೃದ್ಧಿಗೆ ಸಹಕಾರಿಯಾಗಲಿದೆಯೆಂದು ವಿವರಿಸಿದರು.

ಹಳ್ಳ ಕೊಳ್ಳಗಳಲ್ಲಿ ಭೂಮ್ಯಾಂತರ್ಗತ “Sub-Surface Polypropylene Check Dam” ಗಳನ್ನು ರಚಿಸುವುದರಿಂದ ಹಳ್ಳದಿಂದ ಒಂದು ಕಿಲೋಮೀಟರ್ ವ್ಯಾಪ್ತಿಯ ಎರಡೂ ಬದಿಯಲ್ಲಿರುವ ಕೊಳವೆಭಾವಿಗಳ ಜಲಮರುಪೂರಣ ಮಾಡಬಹುದಾಗಿದ್ದು, ಗದಗ ಜಿಲ್ಲೆಯ ರೋಣ ತಾಲೂಕಿನಲ್ಲಿ ರಚಿಸಲಾಗಿರುವ ಈ ಮಾದರಿಗಳನ್ನು ದೃಶ್ಯ ಮಾಧ್ಯಮದ ಮೂಲಕ ವಿದ್ಯಾರ್ಥಿಗಳಿಗೆ ಪರಿಚಯಿಸಿದರು.
ಸಾಂದರ್ಭಿಕ ದೃಷ್ಟಾಂತ ಹಾಗೂ ಉಪಮೆಗಳು ಮತ್ತು ಅಲ್ಲಲ್ಲಿ ಕಥೆಗಳ ಹಾಸುಹೊಕ್ಕಾದ ಬಳಕೆಯಿಂದ ಕೇಳುಗರ ಮನ ಸೂರೆಗೊಂಡರು.

ಮಳೆ ಚಪ್ಪಾಳೆಯಿಂದ ಆರಂಭಗೊಂಡ ಸಭೆಯಲ್ಲಿ ಪ್ರೊಫೆಸರ ಸಂಜಯ ಹಾದಿಮನಿಯವರು ಪ್ರಾಸ್ತಾವಿಕ ನುಡಿಗಳನ್ನಾಡುವುದರ ಜೊತೆಗೆ ಬಾಲಚಂದ್ರ ಜಾಬಶೆಟ್ಟಿ ಯವರನ್ನು ಸಭೆಗೆ ಪರಿಚಯಿಸಿದರು.

ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಎಮ್.ಡಿ ಕಮತಗಿಯವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ವಿದ್ಯರ್ಥಿಗಳು ಜಲಸಾಕ್ಷರರಾಗಬೇಕೆಂದು ಹಾಗೂ ಜಲಮೂಲಗಳು ಕಲುಷಿತಗೊಳ್ಳದಂತೆ ಎಚ್ಚರವಹಿಸಲು ಕರೆ ನೀಡಿದರು.

ಪ್ರೊಫೆಸರ್ ಶೋಭಾ ಹುಲ್ಲೊಳ್ಳಿಯವರು ಕಾರ್ಯಕ್ರಮ ನಿರೂಪಿಸಿದರು, ಪ್ರೊಫೆಸರ್ ಕುರಿ ಹಾಗೂ ಇನ್ನಿತರ ಉಪನ್ಯಾಸಕರು ಹಾಗೂ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

error: Content is protected !!
Join WhatsApp Group