ವಸುಮತಿ ಕಂದ ಹೇ ಮುಕುಂದ
ನಂದನಕಂದ ಕೃಷ್ಣ ಮುಕುಂದ
ಬಂದನು ಹುಟ್ಟಿ ಧರೆಯೊಳಗೆ
ಅಂದಿನ ಇರುಳೇ ಕಂದನ ಅಡಗಿಸಿ
ತಂದನು ತಂದೆಯು ಗೋಕುಲಕೆ
ಅಷ್ಟಮಿ ದಿನವೇ ಜನಿಸಿದ ಶಿಶುವ
ಬುಟ್ಟಿಯೊಳಿರಿಸಿ ಹೊರ ನಡೆದ
ದುಷ್ಟ ಕಂಸನು ಕೊಂದೇ ಬಿಡುವನು
ಅಷ್ಟಮ ಮಗುವಿದು ತಿಳಿದರೆ ಎಂದ
ಅಂಧಕಾರದಲಿ ಭರದಿ ಸುರಿವ ಮಳೆ
ಮಗುವದು ನೆನೆಯುವುದೆನ್ನುತಲಿ
ಮುಂದಕೆ ಬಂದು ಹೆಡೆಯನು ಬಿಚ್ಚಿ
ಕೊಡೆಯಾದನಮ್ಮ ಆದಿಶೇಷ!!
ಪುಟ್ಟ ಪುಟ್ಟ ಪಾದವ ಬಡಿಯುತಲಿ
ಆಟಕೆ ಬಿದ್ದನಪ್ಪ ಮುದ್ದು ಕಂದ
ಹೊಟ್ಟೆತನಕ ಬಂದ ನೀರ ಲೆಕ್ಕಿಸದೆ
ಮುಟ್ಟಿಸಿದನ್ವಸುದೇವ ಗೋಕುಲಕೆ
ನಂದನ ಮಗಳನು ಚೆಂದದಿ ಸುತ್ತಿ
ದೇವಕಿ ಮಡಿಲಿಗೆ ಒಪ್ಪಿಸಲು
ಆತುರದಿ ಮಾವ ಲಕ್ಷ್ಮೀಯವತಾರವ
ಎಸೆಯಲು ಜೈಲಿನ ಚಾವಣಿಗೆ
ಅಶರೀರವಾಣಿ ಮೊಳಗಿತು ಮೆಲ್ಲ
ನಿನ್ನ ಕೊಲುವವನು ಈ ಮಗು ಅಲ್ಲ
ಗೋಕುಲದಲಿ ಇರುವನು ಎಂದ
ಅವನೇ ಜನಾರ್ದನ ಮುಕುಂದ
ಹರೇ ಕೃಷ್ಣ ಹರೇ ಎನ್ನಿ ಭಕ್ತಿಯಿಂದ
ಒಲಿಯುವ ಭಕ್ತಿಗೆ ದೇವಕಿ ಕಂದ.
✍️ ಶ್ರೀಮತಿ ಕಮಲಾಕ್ಷಿ ಕೌಜಲಗಿ
ಬೆಂಗಳೂರು.