ಬರಿದಾದ ಒಡಲು
ಕಿಲಕಿಲ ನಗುವ ಸದ್ದಿಲ್ಲ
ಪುಟ್ಟ ಕರಗಳ ಸ್ಪರ್ಶವಿಲ್ಲ
ಮಡಿಲಲ್ಲಿ ಕಂದನು ಮಲಗಿಲ್ಲ
ಮೈ ಮನಕೆ ಹರ್ಷವಿಲ್ಲ
ಬರಿದಾಗಿದೆ ಒಡಲು
ಅಂತರಂಗದಿ ಅಳಲು
ಕೆಮ್ಮಣ್ಣು ತಿನ್ನುವ ಯೋಗವಿಲ್ಲ
ಮಾವಿನಕಾಯಿ ಮೆಲ್ಲುವ ಅದೃಷ್ಟವಿಲ್ಲ
ದೇಹದಿ ಪರಿವರ್ತನೆ ಇಲ್ಲವೇ ಇಲ್ಲ
ಉದರದಿ ಕಂದನ ಒದ್ದಾಟವಿಲ್ಲ
ಬರಿದಾಗಿದೆ ಒಡಲು
ಅಂತರಂಗದಿ ಅಳಲು
ಮಗುವಿನ ಅಳುವ ದನಿಯಿಲ್ಲ
ತೊದಲು ನುಡಿಗಳ ಆಲಿಸುವ ಭಾಗ್ಯವಿಲ್ಲ
ಅಂಬೆಗಾಲಿನ ಗೆಜ್ಜೆನಾದದ ಸಂಗೀತವಿಲ್ಲ
ಅಮ್ಮ ಎಂಬ ಅಕ್ಕರೆಯ ಕರೆಯಿಲ್ಲ
ಬರಿದಾಗಿದೆ ಒಡಲು
ಅಂತರಂಗದಿ ಅಳಲು
ಅಟ್ಟದಲ್ಲಿ ತೊಟ್ಟಿಲು ಅಣಕಿಸುತ್ತಿತ್ತ
ಜನರ ಕುಹಕಗಳಿಗೆ ಮನವು ನೊಂದಿತ್ತ
ಮೌನವು ಮನೆಯಲಿ ತಾಂಡವವಾಡಿತ್ತ
ಪತಿಯ ಸಾಂತ್ವನವ ಹೃದಯ ಬಯಸಿತ್ತ
ಬರಿದಾಗಿದೆ ಒಡಲು
ಅಂತರಂಗದಿ ಅಳಲು
ಗೀತಾ ಲೋಕೇಶ್.ಕಲ್ಲೂರು

