ಲಿಂಗಾಯತ ಎಂದು ಬರೆಸುವ ಅವಕಾಶಕ್ಕಾಗಿ ಒತ್ತಾಯ
ಜಮಖಂಡಿ: ರಾಜ್ಯ ಸರ್ಕಾರ ಕೈಗೊಳ್ಳಲಿರುವ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಧಾರ್ಮಿಕ ಕಾಲಂನಲ್ಲಿ ‘ಲಿಂಗಾಯತ’ ಎಂದು ಬರೆಯಲು ಅವಕಾಶ ಮಾಡಿಕೊಡಲು ಒತ್ತಾಯಿಸಿ ಹಿಂದುಳಿದ ವರ್ಗಗಳ ಕಲ್ಯಾಣ ಆಯೋಗಕ್ಕೆ ಮನವಿ ಸಲ್ಲಿಸಲಾಯಿತು.
ಬಸವ ಕೇಂದ್ರ, ಬಸವ ಸಮಿತಿ, ವಚನ ಸಾಹಿತ್ಯ ಪರಿಷತ್ತು, ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಲಿಂಗಾಯತ ಮಹಾಸಭಾ ವತಿಯಿಂದ ಇಲ್ಲಿನ ಉಪವಿಭಾಗಾಧಿಕಾರಿಗಳ ಕಚೇರಿಯ ಗ್ರೇಡ್-೨ ತಹಶೀಲ್ದಾರ್ ಎನ್.ಜಿ. ಬಿರಡಿ ಅವರ ಮೂಲಕ ಮಂಗಳವಾರ ಸಲ್ಲಿಸಲಾದ ಮನವಿಯಲ್ಲಿ ಈ ಒತ್ತಾಯ ಮಾಡಲಾಗಿದೆ.
ಒಂದು ವೇಳೆ ಧರ್ಮದ ಕಾಲಂನಲ್ಲಿ ಲಿಂಗಾಯತ ಬರೆಯಲು ಅವಕಾಶ ಇರದಿದ್ದರೆ ಧರ್ಮದ ಕಾಲಂನಲ್ಲಿ ‘ಯಾವುದು ಇಲ್ಲ’ ಎಂದು ನಮೂದಿಸಿ ಜಾತಿ ಕಾಲಂನಲ್ಲಿ ‘ಲಿಂಗಾಯತ’ ಅಥವಾ ‘ಲಿಂಗಾಯತದ ಜೊತೆಗೆ ಉಪಜಾತಿ’ಯನ್ನು ನಮೂದಿಸಲಾದರೂ ಅವಕಾಶ ಕೊಡಬೇಕು. ಯಾವುದೇ ಕಾರಣಕ್ಕೂ ‘ಹಿಂದೂ ಅಥವಾ ಇತರೆ’ ಎಂದು ಧರ್ಮದ ಕಾಲಂನಲ್ಲಿ ಲಿಂಗಾಯತರನ್ನು ಸೇರಿಸಬಾರದು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಹಿಂದುಳಿದ ವರ್ಗಗಳ ಕಲ್ಯಾಣ ಆಯೋಗ ಗುರುತಿಸಿರುವ ಲಿಂಗಾಯತರ ೭೮ ಜಾತಿ/ಉಪಜಾತಿಗಳ ಪೈಕಿ ೧೩ ಉಪಜಾತಿಗಳು ಪುನರಾವರ್ತನೆಗೊಂಡಿವೆ. ಆದರೆ, ಆಯೋಗ ಇನ್ನೂ ೪೮ ಉಪಜಾತಿಗಳನ್ನು ಗುರುತಿಸಿಲ್ಲ. ಕೇಂದ್ರ ಸರ್ಕಾರದ ೨೦೦೬ರ ಜಾತಿ ಸಂಹಿತೆ ಪ್ರಕಾರ ೩೨ ಉಪಜಾತಿಗಳು, ಡಾ.ಬಾಬಾಸಾಹೇಬ ಅಂಬೇಡ್ಕರ್ ಸಂಶೋಧನೆ ಮತ್ತು ತರಬೇತಿ ಸಂಸ್ಥೆಯ ಪ್ರಕಾರ ೮ ಉಪಜಾತಿಗಳು ಹಾಗೂ ಇತರೆ ಮಾಹಿತಿ ಪ್ರಕಾರ ೨೩ ಉಪಜಾತಿಗಳು ಒಟ್ಟು ಸೇರಿ ಲಿಂಗಾಯತರ ೧೧೧ ಉಪಜಾತಿಗಳನ್ನು ಗುರುತಿಸಿಲ್ಲ.
ಆಯೋಗ ಗುರುತಿಸಿರುವ ೭೮ ಉಪಜಾತಿಗಳು ಹಾಗೂ ಗುರುತಿಸದೆ ಉಳಿದಿರುವ ೧೧೧ ಉಪಜಾತಿಗಳು ಸೇರಿ ಲಿಂಗಾಯತರ ಒಟ್ಟು ೧೮೯ ಜಾತಿ/ಉಪಜಾತಿಗಳನ್ನು ಪಟ್ಟಿ ಮಾಡಲು ಮನವಿ ಪತ್ರದಲ್ಲಿ ಆಯೋಗವನ್ನು ಒತ್ತಾಯಿಸಲಾಗಿದೆ.
ವಚನ ಸಾಹಿತ್ಯ ಪರಿಷತ್ತಿನ ಎಂ.ಡಿ. ಸಂಖ, ಬಸವ ಕೇಂದ್ರದ ಮಹಾಂತೇಶ ಅಂಗಡಿ, ಅಣ್ಣಾಸಾಹೇಬ ಜಗದೇವ, ಬಸವಜ್ಯೋತಿ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಪ್ರೊ.ಬಸವರಾಜ ಕಡ್ಡಿ, ಪ್ರಾಚಾರ್ಯ ಡಾ.ಟಿ.ಪಿ. ಗಿರಡ್ಡಿ, ಉಪನ್ಯಾಸಕ ಮೌನೇಶ ಬಡಿಗೇರ ಹಾಗೂ ಕರೆಪ್ಪ ಬೀಳಗಿ ಮನವಿ ಸಲ್ಲಿಸಿದ ನಿಯೋಗದಲ್ಲಿದ್ದರು.

