ಕಿತ್ತೂರ ಉತ್ಸವದ ಸಂದರ್ಭದಲ್ಲಿ ಕಿತ್ತೂರ ಇತಿಹಾಸದತ್ತ ಒಂದು ನೋಟ

Must Read

ಈಗ ಕಿತ್ತೂರು ಉತ್ಸವ. ಈ ಸಂದರ್ಭದಲ್ಲಿ ಕಿತ್ತೂರು ಇತಿಹಾಸ ಕುರಿತು ಹಲವಾರು ಗೋಷ್ಟಿಗಳು, ವಿಚಾರ ಸಂಕಿರಣ ಕಿತ್ತೂರು ಇತಿಹಾಸ ಬಿಂಬಿಸುವ ಘಟನೆಗಳು ಜರುಗುತ್ತವೆ..

“ಗೀಜಗನ ಹಳ್ಳಿ”ಎಂಬ ಮೂಲ ಹೆಸರು ಹೊಂದಿದ್ದ ಈ ಕಿತ್ತೂರು ೧೬೬೦ ರಲ್ಲಿ ಐದನೆಯ ದೇಸಾಯಿ ಅಲ್ಲಪ್ಪಗೌಡನ ಆಳ್ವಿಕೆಗೆ ಒಳಪಟ್ಟಿತ್ತು ಈತ ತನ್ನ ರಾಜಧಾನಿ ಸಂಪಗಾವಿಯಿಂದ ಗೀಜಗನಹಳ್ಳಿಗೆ ವರ್ಗಾಯಿಸಿದಾಗ ಸಂಪಗಾವಿಯಿಂದ ಕಿತ್ತ ಊರು “ಕಿತ್ತೂರು”ಆಗಿ ಇತಿಹಾಸದಲ್ಲಿ ಉಳಿಯಿತು. ಕಿತ್ತೂರು ಧಾರವಾಡದಿಂದ ೩೧ ಕಿ.ಮೀ.ಬೆಳಗಾವಿಯಿಂದ ೪೫ ಕಿ.ಮೀ.ಬೈಲಹೊಂಗಲದಿಂದ ೩೫ ಕಿ.ಮೀ ಖಾನಾಪೂರದಿಂದ ೩೫ ಕಿ.ಮೀ ಅಂತರವಿದ್ದು ಯಾವುದೇ ಮಾರ್ಗವಾಗಿ ಬಂದರೂ ರಾಷ್ಟ್ರೀಯ ಹೆದ್ದಾರಿ ನಂ ೪ ರಲ್ಲಿರುವ ಕಾರಣ ಸಾಕಷ್ಟು ಸಾರಿಗೆ ವ್ಯವಸ್ಥೆಯನ್ನು ಹೊಂದಿದೆ.

೧೫೮೫ ರಿಂದ ೧೮೨೪ ರ ವರೆಗೆ ಒಟ್ಟು ಇಬ್ಬರು ದೇಸಾಯಿಗಳು ಕಿತ್ತೂರು ಸಂಸ್ಥಾನವನ್ನು ಆಳಿದವರಲ್ಲಿ ಪ್ರಮುಖರು. ಇಂಥ ದೇಸಾಯಿಗಳಲ್ಲಿ ಕಾಕತಿಯ ದೇಸಾಯಿಯಾದ ಧೂಳಪ್ಪಗೌಡ-ಪದ್ಮಾವತಿಯವರ ಏಕಮಾತ್ರ ಪುತ್ರಿ ರಾಣಿ ಚನ್ನಮ್ಮ ಜನಿಸಿದ್ದು ೧೭೭೮ ರಲ್ಲಿ ಕಿತ್ತೂರಿನ ೧೧ ನೇ ಅರಸ ಮಲ್ಲಸರ್ಜನ ದ್ವಿತೀಯ ಮಡದಿಯಾಗಿ ಕಿತ್ತೂರು ಪ್ರವೇಶಿಸಿದಳು. ಕನ್ನಡ ಭಾಷೆಯೊಂದಿಗೆ ಮರಾಠಿ,ಉರ್ದು,ಇಂಗ್ಲೀಷ್ ಭಾಷೆಗಳ ಜ್ಞಾನ ಪಡೆದಿದ್ದಳು.

ಮಲ್ಲಸರ್ಜನ ನಿಧನದ(೧೮೧೬) ನಂತರ ರಾಣಿ ರುದ್ರಮ್ಮಳ ಮಗ ಶಿವಲಿಂಗಸರ್ಜನಿಗೆ ಪಟ್ಟ ಕಟ್ಟಬೇಕಾಯಿತು. ಆದರೆ ಆತನೂ ನಿಧನ ಹೊಂದಿದಾಗ ಸಂತಾನ ಭಾಗ್ಯವಿಲ್ಲದ ಕಿತ್ತೂರು ಸಂಸ್ಥಾನಕ್ಕೆ ದತ್ತಕಪುತ್ರನ್ನು ಪಡೆದದ್ದನ್ನು ಬ್ರಿಟಿಷ್ ಸರ್ಕಾರ ಒಪ್ಪಲಿಲ್ಲ. ಕಿತ್ತೂರು ಸಂಸ್ಥಾನವನ್ನು ದತ್ತಕ ವಿರೋಧಿ ಕಾಯಿದೆ ಅನ್ವಯ ಬ್ರಿಟಿಷರು ತಮ್ಮ ವಶಕ್ಕೆ ತೆಗೆದುಕೊಳ್ಳಲು ಮುಂದಾದಾಗ ರಾಣಿ ಚೆನ್ನಮ್ಮ ಪ್ರತಿಭಟಿಸಿದಳು.
ಸಂಗೊಳ್ಳಿ ರಾಯಣ್ಣ, ಅಮಟೂರ ಬಾಳಪ್ಪ,ಬಿಚ್ಚುಗತ್ತಿ ಚನ್ನಬಸಪ್ಪ,ಗಜವೀರ,ವೀರಭದ್ರರಂತಹ ವೀರರನ್ನು ಹೊಂದಿದ್ದ ಕಿತ್ತೂರು ಸೈನ್ಯ ಥ್ಯಾಕರೆಯ ಹೆಣ ಉರುಳಿಸಿತು. ನಂತರ ಕಮೀಷನರ ಚಾಪ್ಲೀನ್ ನ ಕಪಟನೀತಿ, ಕಿತ್ತೂರಿನ ಸಂಸ್ಥಾನದಲ್ಲಿದ್ದ ಕುತಂತ್ರಿಗಳ ಮೋಸದ ಮೂಲಕ ಅಂದರೆ ಮಲ್ಲಪ್ಪಶೆಟ್ಟಿ,  ವೆಂಕಟರಾಯರ ಕುತಂತ್ರದಿಂದ ಕಿತ್ತೂರಿಗೆ ಸೋಲಾಯಿತು. ವೀರಾವೇಷದಿಂದ”ಸತ್ತರೆ ವೀರಮರಣ ಬದುಕಿದರೆ ಕಿತ್ತೂರಿನ ನೆಲೆ. ಹರಹರ ಮಹಾದೇವ”ಎಂದು ಹೋರಾಡಿದ ರಾಣಿ ಚೆನ್ನಮ್ಮಳನ್ನು ಬೈಲಹೊಂಗಲದ ಸೆರಮನೆಯಲ್ಲಿಡಲಾಯಿತು. ಸ್ವಾತಂತ್ರ್ಯದ ಕನಸು ಕಂಡ ರಾಣಿ ಚೆನ್ನಮ್ಮ ೧೮೨೯ ರಲ್ಲಿ ವಿಧಿವಶಳಾದಳು.
ಒಟ್ಟಾರೆ ಕಿತ್ತೂರು ಆಡಳಿತ ಸಂಸ್ಥಾನವು ೨೮೬ ನಗರಗಳನ್ನು ಹಾಗೂ ೭೨ ಗ್ರಾಮಗಳನ್ನು ಹೊಂದಿದ್ದ ರಾಜ್ಯವಾಗಿತ್ತು.ಇಲ್ಲಿಯ ಜನಪದ ಕಲೆ ಕರ್ಬಲ್ ಹಂತಿ ಪದಗಳು, ಲಾವಣಿ, ಸೋಬಾನ ಹಾಡುಗಳ ಮೂಲಕ ಇಂದಿಗೂ ಜನರ ಬಾಯಲ್ಲಿವೆ.ರಾಣಿ ಚೆನ್ನಮ್ಮಳ ಕೆಚ್ಚೆದೆಯ ಹೋರಾಟದ ಕಥೆಯು ಸಾವಿರಾರು ಹಳ್ಳಿಗರ ನಾಲಿಗೆಯ ಮೇಲೆ ನಲಿದಾಡುತ್ತಿದೆ.ಕನ್ನಡ ಚಲನಚಿತ್ರ “ಕಿತ್ತೂರು ಚೆನ್ನಮ್ಮ” ಬಿ.ಸರೋಜಾದೇವಿ ಅಭಿನಯದ ಮೂಲಕವಂತೂ ನಾಡಿನಾದ್ಯಂತ ಅವಳ ಇತಿಹಾಸ ಬಿಂಬಿಸಿದೆ. ಕಿತ್ತೂರು ಇಂದಿಗೂ ಇತಿಹಾಸದಲ್ಲಿ ಅಮರವಾಗಿ ಉಳಿದಿದೆ.ಕಾರಣ ರಾಣಿ ಚೆನ್ನಮ್ಮಾಜಿಯ ಹೋರಾಟದ ಫಲ.ಆಕೆ ಜನತೆಗೆ ನೀಡಿದ ದೇಶಭಕ್ತಿಯ ಹುಮ್ಮಸ್ಸು ಸ್ವಾತಂತ್ರ್ಯ ಕ್ಕೆ ಪೂರಕ.

ಕಿತ್ತೂರು ಕುರಿತು ಕನ್ನಡದಲ್ಲಿ ಪ್ರಕಟಣೆಗಳು:
ಕನ್ನಡದಲ್ಲಿ ಮೊದಲು ೧೯೪೭ ರಲ್ಲಿ ಕಿತ್ತೂರು ರಾಣಿ ಇತಿಹಾಸ ಮಂಡಲ, ಬೈಲಹೊಂಗಲ ಇವರಿಂದ ‘ಕಿತ್ತೂರು ಬಂಡಾಯ’ ಪುಸ್ತಕ ರಚಿತವಾಯಿತು.ಇದರಲ್ಲಿನ ಲೇಖನಳು ಹೆಚ್ಚಾಗಿ ಗೆಜೆಟಿಯರ್ ಬಳಸಿಕೊಂಡು ರಚಿಸಲಾಗಿದೆ.ಆದರೆ ಮೂಲ ಆಕರಗಳ ಕಡೆಗೆ ಹೋಗಿಲ್ಲ. ನಂತರ ರಚಿತಗಂಡ ಇತರೆ ಕೃತಿಗಳೆಂದರೆ ಗ.ಸ.ಹಾಲಪ್ಪ (೧೯೬೨) ‘ಭಾರತ ಸ್ವಾತಂತ್ರ್ಯದ ಬೆಳ್ಳಿಚುಕ್ಕಿ’. ಸದಾಶಿವ ಒಡೆಯರ ಅವರ ರಾಣಿ ಕಿತ್ತೂರು ಚನ್ನಮ್ಮ (೧೯೮೧). ಎಂ.ಎಂ.ಕಲಬುರ್ಗಿ ಕಿತ್ತೂರು ಸಂಸ್ಥಾನ ಸಾಹಿತ್ಯ (೧೯೯೯). ಎಂ.ಎಂ.ಕಲಬುರ್ಗಿ ಕಿತ್ತೂರು ಸಂಸ್ಥಾನ ಭಾಗ ೩ (೨೦೧೫), ಚನ್ನಕ್ಕ ಪಾವಟೆಯವರ ಕಿತ್ತೂರು ಕಥನ(೨೦೦೨), ಕಿತ್ತೂರು ನಾಡಿನ ಇತಿಹಾಸ ಮತ್ತು ಸಂಸ್ಕೃತಿ ಏಳು ಉಪನ್ಯಾಸಗಳು (೨೦೦೪). ಸಂಪಾದಕರು ಶಿವಾನಂದ ಗುಬ್ಬನ್ನವರ, ಮಲ್ಲಿಕಾರ್ಜುನ ಮಿಂಚ್ ಅವರ ಕಿತ್ತೂರು ಜಾನಪದ ಸಾಹಿತ್ಯ ೨೦೧೧,  ಎಂ.ಎಂ.ಕಲಬುರ್ಗಿಯವರ ಬ್ರಿಟಿಷ್ ಆಡಳಿತ ಮತ್ತು ಕಿತ್ತೂರು ಚನ್ನಮ್ಮ (೨೦೧೬). ಖರೇ ಖರೇ ಕಿತ್ತೂರು ಬಂಡಾಯ ನಾಟಕ ಎಂ.ಎಂ.ಕಲಬುರ್ಗಿ. ಯ.ರು.ಪಾಟೀಲರ ಕಾದಂಬರಿ ಬೆಳ್ಳಿ ಚುಕ್ಕಿಯ ಬಂಗಾರದ ಕನಸ (೨೦೧೮). ಇವುಗಳ ನಡುವೆ ತಲ್ಲೂರ ರಾಯನಗೌಡರ ಅಳಿಯ ಡಾ.ಬಸನಗೌಡ ಪಾಟೀಲರು ತಲ್ಲೂರ ರಾಯನಗೌಡರು ಸಂಪಾದಿಸಿದ್ದ ಕೃತಿಯ ಮರು ಮುದ್ರಣ ಮಾಡಿದರು. ಅದು ಮಲ್ಲಸರ್ಜ ಕಾವ್ಯ ಕಿತ್ತೂರು ಬಂಡಾಯ (೨೦೧೦) ಪ್ರಕಟವಾಗಿದೆ.೨೦೧೭-೧೮ ರಲ್ಲಿ ಡಾ.ಸಂಗಮೇಶ ಕಲ್ಯಾಣಿಯವರ ಸಂಪಾದಕತ್ವದಲ್ಲಿ ಮೋಡಿ ದಾಖಲೆಯಲ್ಲಿ ಕಿತ್ತೂರು ಪ್ರಕಟವಾಗಿದೆ.ಇತ್ತೀಚೆಗೆ ಬಸವರಾಜ ಕಟ್ಟೀಮನಿ ಪ್ರತಿಷ್ಠಾನ ಬೆಳಗಾವಿಯವರು ಪ್ರಕಟಿಸಿದ ಕಿತ್ತೂರು ಸಂಸ್ಥಾನ ದಾಖಲೆಗಳು ಸಂಪುಟ ೧ (೨೦೧೯) ಇದುವರೆಗೂ ಈ ರೀತಿಯಲ್ಲಿ ಕಿತ್ತೂರು ಕುರಿತು ಕೃತಿಗಳು ಪ್ರಕಟಣೆ ಕಂಡಿವೆ.

   ಡಾ.ಸಂಗಮೇಶ ಕಲ್ಯಾಣಿಯವರ ಸಂಪಾದಕತ್ವದಲ್ಲಿ ಮೋಡಿ ದಾಖಲೆಯಲ್ಲಿ ಕಿತ್ತೂರು

೨೦೧೭ ರಲ್ಲಿ ಜ್ಞಾನಭಾರತಿ ತ್ರಿವೇಣಿ ಪ್ರಕಾಶನ ಮುಧೋಳ ಇವರ ಪ್ರಕಾಶನದಡಿ ತಜ್ಞ ಸಂಶೋಧಕರಾದ ಡಾ.ಸಂಗಮೇಶ ಕಲ್ಯಾಣಿಯವರ “ಮೋಡಿ ದಾಖಲೆಯಲ್ಲಿ ಕಿತ್ತೂರು” ಕೃತಿ ಪ್ರಕಟವಾಯಿತು. ಇದು ೧೪೫ ಪುಟಗಳನ್ನು ಹೊಂದಿದೆ.ಇಲ್ಲಿ ಪುಣೆ ದಾಖಲೆ ಪತ್ರ ಸಂಖ್ಯೆ ೧೫೨೪೬ ರಿಂದ ಮೋಡಿ ಲಿಪಿಯ ಅನುವಾದದಿಂದ ಆರಂಭವಾಗುವ ಬರಹ ಸವಾಲ್ ಜವಾಬ್. ಪತ್ರ ಸಂಖ್ಯೆ ೧೫೨೪೬ ಸುಭಾ ಧಾರವಾಡ. ಡಿ ಕೋಡ್ ಪತ್ರ ಸಂಖ್ಯೆ ೪೧೯೨ ಶ್ರೀ ನಕಲ. ಶ್ರೀ ನಕಲ. ಕಮತ ಸರದೇಶಪಾಂಡೆ, ೪೭ ಪರವೀರಕರ. ೬೨ ಶ್ರೀ ನಕಲು. ಸಮಾರೋಪ, ಇಂಗ್ಲೀಷನಿಂದ ತರ್ಜುಮೆಯಾದ ಬರಹ.ಅನೆಕ್ಜರ್.ದಿ ಕಂಪನಿ ಗವರ್ನಮೆಂಟ್. ಪ್ರಶ್ನೋತ್ತರಗಳು. ಹೀಗೆ ಮಾಹಿತಿಗಳನ್ನು ಮೋಡಿ ಲಿಪಿಯಿಂದ ಅನುವಾದಗೊಳಿಸಿ ಪ್ರಕಟಗೊಳಿಸಿರುವರು. ಮೋಡಿ ಲಿಪಿ ೧೩ನೇ ಶತಮಾನದಿಂದ ೨೦ನೇ ಶತಮಾನದವರೆಗೆ ಬಳಕೆಯಲ್ಲಿತ್ತು.

ಕಿತ್ತೂರಿನ ಅನೇಕ ದಾಖಲೆಗಳು ಮೋಡಿ ಲಿಪಿಯಲ್ಲಿದ್ದು ಅವುಗಳನ್ನು ಡಾ.ಸಂಗಮೇಶ ಕಲ್ಯಾಣಿಯವರು ಮೋಡಿ ದಾಖಲೆಯಲ್ಲಿ ಕಿತ್ತೂರು ಕೃತಿಯಲ್ಲಿ ಅನುವಾದಿಸಿದ್ದು. ಸವಾಲ್ ಜವಾಬ್ ದಲ್ಲಿ ಅನೇಕ ಮಹತ್ವದ ಸಂಗತಿಗಳು ಹೊರಬಂದಿವೆ.ಇದನ್ನು ಸಂಶೋಧನೆಗೆ ಒಳಪಡಿಸುವ ಅಗತ್ಯವಿದೆ.

ಕಿತ್ತೂರು ಸಂಸ್ಥಾನ ದಾಖಲೆಗಳು ಸಂಪುಟ ೧ (೨೦೧೯)
ಬಸವರಾಜ ಕಟ್ಟೀಮನಿ ಪ್ರತಿಷ್ಠಾನ, ಬೆಳಗಾವಿ ಇವರು ಕಿತ್ತೂರು ಸಂಸ್ಥಾನದ ದಾಖಲೆಗಳ ಶೋಧ ಅನುವಾದ ಪ್ರಕಟಣ ಯೋಜನೆ ಅಡಿಯಲ್ಲಿ ಕಿತ್ತೂರು ಸಂಸ್ಥಾನ ದಾಖಲೆಗಳು ಸಂಪುಟ ೧ ನ್ನು ಬಿಡುಗಡೆಗೊಳಿಸಿದೆ. ಇದರ ಪ್ರಧಾನ ಸಂಪಾದಕರು ಪ್ರೊ.ಮಲ್ಲಿಕಾರ್ಜುನ ಹಿರೇಮಠ ಸಂಪಾದಕರು ಡಾ.ಎ.ಬಿ.ವಗ್ಗರ. ಇವರ ಈ ಸಂಪಾದನೆಯಲ್ಲಿ ೪೧೮ ಪುಟಗಳಲ್ಲಿ ಮೊದಲ ಸಂಪುಟ ಮೂಡಿ ಬಂದಿದೆ.ಇನ್ನೊಂದು ಸಂಪುಟ ಕೂಡ ಈಗ ಮುದ್ರಣಕ್ಕೆ ಅಣಿಯಾಗಿದೆ.

ಕಿತ್ತೂರಿನ ಹಕ್ಕು ಪ್ರಸ್ತಾವನೆ ಕುರಿತು ಥ್ಯಾಕರೆಯ ಬರೆದ ಪತ್ರದಿಂದ ಈ ಸಂಪುಟದ ಮೊದಲ ಬರಹ ಪ್ರಕಟವಾಗಿದ್ದು, ನಂತರ ಸಂಸ್ಥಾನವನ್ನು ಮುಂದುವರಿಸಲು ಶಿವಲಿಂಗರುದ್ರ ಸರ್ಜನು ಥ್ಯಾಕರೆಗೆ ಬರೆದ ಪತ್ರ, ದೇಸಾಯಿಯ ಮರಣ ದತ್ತು ಸಮಾರಂಭದ ಮತ್ತು ಸಂಸ್ತಾನದ ಸುರಕ್ಷತೆಗಾಗಿ ಥ್ಯಾಕರೆಯ ವಿಚಾರಣೆ,  ಮೃತ ದೇಸಾಯಿಯ ಶವ ಪರೀಕ್ಷೆಯ ವರದಿ, ದತ್ತು ವಿಷಯ ಮತ್ತು ಸಂಸ್ಥಾನದ ಮನ್ನಣೆ ಕುರಿತು, ಮೃತ ದೇಸಾಯಿಯ ವಂಶಾವಳಿಯ ಸತ್ಯತೆ ಮತ್ತು ಸಂಸ್ಥಾನ ಸುರಕ್ಷಾ ಕ್ರಮಗಳು, ಮಲ್ಲಪ್ಪನನ್ನು ಕಾರಬಾರಿಯನ್ನಾಗಿ ಮುಂದುವರೆಸಲು ಕುರಿತು, ದತ್ತು ಕ್ರಮದ ಸಂಶಯಾಸ್ಪದ ಸಂದರ್ಭ ಕುರಿತು, ಕುನ್ನೂರು ಮಲ್ಲಪ್ಪನ ಸಾಕ್ಷಿ, ನರಸಿಂಗರಾವ್‌ನ ಸಾಕ್ಷಿ, ಜಮದಾರಖಾಮೆ ಮಲ್ಲಪ್ಪನ ಹೇಳಿಕೆ, ದತ್ತು ಪ್ರಸಂಗದ ಸಂದೇಹಾತ್ಮಕ ಥ್ಯಾಕರೆ ಪತ್ರ, ಬ್ರಿಟಿಷ್ ಸೈನ್ಯ ಬಲಗೊಳಿಸುವ ಕುರಿತು, ಸಂಪಗಾವದ ಶಿವಬಸಪ್ಪನ ಸಾಕ್ಷಿ, ಕಿತ್ತೂರಿನ ಸರ್ ಶೆಟ್ಟಿ ರುದ್ರಪ್ಪನ ಹೇಳಿಕೆ ವಂಶಾವಳಿ, ಕಿತ್ತೂರಿನಲ್ಲಿ ನಡೆಸಿದ ವಿಚಾರಣೆಗಳ ಪತ್ರ. ಸನ್ನದ್ ನ ಪ್ರತಿ ರವಾನಿಸುವ ಪತ್ರ,
ಸೈನ್ಯದ ಚಲನವಲನದ ಬಗ್ಗೆ, ಡೆಕ್ಕನ್ ಕಮಿಶನರ್‌ರಿಗೆ ನ್ಯೂನ್ ಹ್ಯಾಮ್ ನ ಪತ್ರ, ಕಿತ್ತೂರಿಗೆ ಸಂಬಂಧಿಸಿದ ನೀಡಿದ ನಿರ್ದೇಶನ ಕುರಿತು, ಗಣಾಚಾರಿ ಶಿವಪ್ಪನ ಹೇಳಿಕೆ, ಸೈನ್ಯದ ಚಲನವಲನದ ಕುರಿತು, ಚನ್ನವ್ವ ಮತ್ತು ವೀರವ್ವರು ವಿಲಿಯಂ ಚಾಪ್ಲಿನರಿಗೆ ಬರೆದ ಪತ್ರ, ಸನ್ನದ್ ಚರ್ಚೆ, ಬ್ರಿಟಿಷ ಸೈನ್ಯದ ಚಲನ ವಲನ ಕುರಿತು. ಸಂಸ್ಥಾನವನ್ನು ದೇಸಾಯಿ ವಂಶಸ್ಥರಿಗೆ ನೀಡುವ ಕುರಿತು, ಮೃತ ದೇಸಾಯಿಯ ಪತ್ರದ ಸಹಿ ಕುರಿತು.ಕಿತ್ತೂರಿನ ಜನರ ದಂಗೆ ಮಾಹಿತಿ.ತ್ವರಿತವಾಗಿ ಸೈನ್ಯ ಕಳುಹಿಸುವ ಕುರಿತು, ಬ್ರಿಟಿಷ ಸೈನ್ಯ ಚದುರಿದ ಮತ್ತು ಅಧಿಕಾರಿಗಳ ಸಾವು,  ಸನ್ನದ ಚರ್ಚೆ, ಸನ್ನದನ ಭಾಷಾಂತರ, ಸೈನಿಕ ಆಡಳಿತ ಘೋಷಣೆ ಶಿಫಾರಸ್ಸು,  ಬ್ರಿಟಿಷ ಅಧಿಕಾರಿಗಳ ಮರಣದ ಮಾಹಿತಿ, ಕಿತ್ತೂರಿನ ದಂಗೆ, ಥ್ಯಾಕರೆ ಮರಣ ಮುಂತಾದ ಘಟನೆಗಳ ಚರ್ಚೆ, ಬಂಡಾಯಗಾರರಿಂದ ಧಾರವಾಡ ರಕ್ಷಣೆ, ದುರ್ಘಟನೆ ನಂತರ ಕಿತ್ತೂರಿನ ವಿದ್ಯಮಾನಗಳ ಪತ್ರ, ಬ್ರಿಟಿಷ ಅಧಿಕಾರಿಗಳ ಬಂಧನ ಮತ್ತು ಸೈನ್ಯ ರವಾನೆ, ಕಿತ್ತೂರು ಘಟನೆಯ ಪರಿಣಾಮಗಳು, ಬ್ರಿಟಿಷ ಸೈನ್ಯದ ಚಲನವಲನ, ಥ್ಯಾಕರೆಯ ಶವವನ್ನು ಧಾರವಾಡಕ್ಕೆ ಮತ್ತು ಧಾರವಾಡದ ರಕ್ಷಣೆ, ಧಾರವಾಡದ ಸೈನ್ಯದ ಚಲನವಲನ, ಧಾರವಾಡದಲ್ಲಿಯ ಖಜಾನೆಯ ರಕ್ಷಣೆ, ಧಾರವಾಡ ಕಲೆಕ್ಟರ್ ಕುರಿತು, ಗುಪ್ತಚಾರ ಮುಖ್ಯಸ್ಥ ಅಮಿಲ್ದಾರ, ಕಿತ್ತೂರು ಕೋಟೆ ದಾಳಿ, ಕಿತ್ತೂರು ವಕೀಲ ಶೀನಪ್ಪನೊಂದಿಗಿನ ಸಂದರ್ಶನ, ಲೆ.ಕ.ಮೆಕ್ಲಿಯೋಡ್‌ನ ನೇತೃತ್ವದ ಸೈನ್ಯದ ಚಲನವಲನ, ಕಿತ್ತೂರು ಪರ ವಕೀಲ ರಾಚಪ್ಪನು ಎಲ್ಪಿನಸನ್ ರಿಗೆ ಬರೆದ ಕಿತ್ತೂರು ಪರ ವಾದಿಸುವ ಪತ್ರ, ಕಿತ್ತೂರು ಬಂಡಾಯ ಹತ್ತಿಕ್ಕಲು ಗೌರವಾನ್ವಿತ ಅಧ್ಯಕ್ಷ ಗವರ್ನರ್ ಎನ್ ಕೌನ್ಸಿಲ್ ರ ಕ್ರಮಗಳ ನಡಾವಳಿಗಳು, ಕಂಪನಿ ಆಡಳಿತ ಬಂಡಾಯಗಾರರ ಕ್ಷಮಾದಾನ ಮತ್ತು ಶಿಕ್ಷೆ ಘೋಷಿಸುವ ಪತ್ರ ಹೀಗೆ ಕಿತ್ತೂರು ಕೋಟೆ ವಶಪಡಿಸಿಕೊಂಡ ನಂತರ ಸಂಪತ್ತಿಗೆ ನಿರ್ಧಾರ ಕುರಿತು ಪತ್ರದವರೆಗಿನ ಎಲ್ಲ ಪತ್ರ ವ್ಯವಹಾರಗಳನ್ನು ಪುಣೆಯಿಂದ ಪಡೆದು ಯಥಾವತ್ತಾಗಿ ಪ್ರಕಟಿಸಿರುವರು.ಇದು ಕಿತ್ತೂರು ಇತಿಹಾಸವನ್ನು ಅಧ್ಯಯನ ಮಾಡುವವರಿಗೆ ಸಂಶೋಧನೆಗೆ ಆಕರ ಗ್ರಂಥವೆಂದರೆ ಅತಿಶಯೋಕ್ತಿಯಲ್ಲ.

೧೮೨೪ ರ ವರೆಗೆ ಕಿತ್ತೂರು ಮುಂಬೈ ಪ್ರಾಂತದಲ್ಲಿನ ಒಂದು ಚಿಕ್ಕ ಸಂಸ್ಥಾನವಾಗಿತ್ತು. ಇದು ಪ್ರಾರಂಭದಲ್ಲಿ ಪೂನಾದಲ್ಲಿದ್ದ ಡೆಕ್ಕನ್ ಕಮೀಶನರ್ ನಿರ್ದಶನದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಧಾರವಾಡದ ಕಲೆಕ್ಟರನ ಸುಪರ್ದಿಗೆ ಒಳಪಟ್ಟಿತ್ತು.ನಂತರ ೧೮೨೬ ರಲ್ಲಿ ಚಾಪ್ಲಿನ್ ಡೆಕ್ಕನ್ ಕಮೀಶನರ್ ಕಚೇರಿಯನ್ನು ರದ್ದುಗೊಳಿಸಿದನು.೧೮೩೦ ರಲ್ಲಿ ಮುಂಬೈ ಪ್ರಾಂತಕ್ಕೆ ಸೇರ್ಪಡೆಗೊಒಂಡು ೧೮೩೬ ಏಪ್ರಿಲ್ ೨೮ ರಂದು ಪ್ರತ್ಯೇಕ ಜಿಲ್ಲೆಯಾಗಿ ರಚನೆಗೊಂಡ ಬೆಳಗಾವಿಗೆ ಸೇರ್ಪಡೆಯಾಯಿತು. ಈ ರೀತಿ ಚನ್ನಮ್ಮ ರಾಣಿಯ ಅವಸಾನದರೆಗೆ ಜರುಗಿದ ಘಟನೆಗಳು ಇತಿಹಾಸದಲ್ಲಿ ಕಿತ್ತೂರಿನ ಅಧಿಪತ್ಯ ಕುರಿತು ತನ್ನದೇ ಆದ ಘಟನಾವಳಿಗಳ ಮೂಲಕ ಚಿರಸ್ಥಾಯಿಯಾಗಿ ಕಿತ್ತೂರು ಉಳಿದಿದೆ.ಅಂದಿನಿಂದ ಇಂದಿನವರೆಗೂ ಕಿತ್ತೂರು ಕುರಿತಂತೆ ಅನೇಕ ಮಹತ್ವದ ದಾಖಲೆಗಳು ಹೊರಬರುತ್ತಿದ್ದು ಅಧ್ಯಯನ ದೃಷ್ಟಿಯಿಂದ ಇನ್ನೂ ಕಿತ್ತೂರು ಕುರಿತಂತೆ ಕೆಲಸವಾಗಬೇಕಿದೆ. ಈ ದಿಸೆಯಲ್ಲಿ ಇತ್ತೀಚಿನ ಪ್ರಕಟಣೆಗಳಾದ ಡಾ.ಸಂಗಮೇಶ ಕಲ್ಯಾಣಿಯವರ ಸಂಪಾದಕತ್ವದಲ್ಲಿ ಮೋಡಿ ದಾಖಲೆಯಲ್ಲಿ ಕಿತ್ತೂರು ಮತ್ತು ಕಿತ್ತೂರು ಸಂಸ್ಥಾನ ದಾಖಲೆಗಳು ಸಂಪುಟ ೧ (೨೦೧೯) ಕೃತಿಗಳು ಕಿತ್ತೂರಿನ ಕುರಿತು ಮಹತ್ವದ ದಾಖಲೆಗಳನ್ನು ಒದಗಿಸಿದ್ದು .ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಬೆಳಗಾವಿ ಇವರು ಕಿತ್ತೂರು ಶೋಧ, ಕುರಿತು ಕೃತಿ ಪ್ರಕಟಿಸಿದ್ದು ಅದರಲ್ಲಿ ಕೂಡ ಹವಾರು ಪೂರಕ ಮಾಹಿತಿಗಳು ಲಭ್ಯವಿವೆ.ಒಟ್ಟಾರೆ ಇದುವರೆಗೂ ಕಿತ್ತೂರನ್ನು ಕುರಿತಂತೆ ಬಂದಿರುವ ಎಲ್ಲ ಕೃತಿಗಳ ಸಮಗ್ರ ಅಧ್ಯಯನ ಜರುಗಿದರೆ ಒಂದೆಡೆ ಇತಿಹಾಸವನ್ನು ಸಂಗ್ರಹಿಸುವ ಕಾರ್ಯ ಜರುಗಿದಂತಾಗುತ್ತದೆ.


ಡಾ.ವೈ.ಬಿ.ಕಡಕೋಳ
ಮಾರುತಿ ಬಡಾವಣೆ.ಸಿಂದೋಗಿ ಕ್ರಾಸ್.
ಮುನವಳ್ಳಿ ೫೯೧೧೧೭. ಸವದತ್ತಿ ತಾಲೂಕು ಬೆಳಗಾವಿ ಜಿಲ್ಲೆ

Latest News

ಶಿರೀಷಗೆ ಗಡಿತಿಲಕ, ಶಶಿಗೆ ಜನ್ನಾ ಪ್ರಶಸ್ತಿ

ಬೆಳಗಾವಿ - ಇಲ್ಲಿಯ ಬಿ ಎ ಸನದಿ ಸಾಂಸ್ಕೃತಿಕ ಪ್ರತಿಷ್ಠಾನ ಕರ್ನಾಟಕ ರಾಜ್ಯೋತ್ಸವ ಹಿನ್ನೆಲೆಯಲ್ಲಿ ಪ್ರತಿವರ್ಷ ಕೊಡಮಾಡುವ ಕನ್ನಡ ಗಡಿತಿಲಕ ಪ್ರಶಸ್ತಿಗೆ ಶಿರೀಷ ಅವರು ಆಯ್ಕೆಯಾಗಿದ್ದಾರೆ...

More Articles Like This

error: Content is protected !!
Join WhatsApp Group