ಅಯ್ಯೊ ನಾನು ಏನು ಮಾಡಿದರೂ ಜನ ನನ್ನ ಬಗ್ಗೆ ಒಂದಿಲ್ಲೊಂದು ತಪ್ಪು ಹುಡುಕೋದು ಮಾಡುತ್ತಾರೆ , ಅಪಹಾಸ್ಯ ಮಾಡುತ್ತಾರೆ ಬೇಸತ್ತು ಹೋಗಿದ್ದೀನಿ ಎನ್ನುತ್ತ ಮಾನಸಿಕ ಸ್ಥಿರತೆ ಕಳೆದು ಕೊಂಡು, ಆಗಾಗ ಖಿನ್ನತೆ ಗೆ ಬಲಿಯಾಗಿ ಮನಸ್ಸಿಗೆ ನೋವು ಮಾಡಿಕೊಂಡು ಯಾರೊಂದಿಗೂ ಬೆರೆಯದೆ ಅನೇಕ ಬಾರಿ ಸಮಯ ವ್ಯರ್ಥ ಮಾಡಿಕೊಂಡು, ನನ್ನ ನೋವು ಇನ್ನೊಬ್ಬರೊಟ್ಟಿಗೆ ನಿರಾಶ ಭಾವನೆಯಿಂದ ಹೇಳಿಕೊಳ್ಳುತ್ತಿರುವಾಗ , ಅನುಭವಿ ಆತ್ಮೀಯರು ಹಿರಿಯರು ಕಿವಿ ಮಾತ್ತೊಂದನ್ನು ಹೇಳಿದರು…
ಎಲ್ಲಿ ಪ್ರಗತಿ ಕಾರ್ಯಗಳು ನಡೆಯುತ್ತಿರುತ್ತವೆಯೋ ಅತ್ತ ಕಡೆ ಜನರು ಗಮನಿಸುತ್ತಾರೆ ,ನೀನು ಚಿಂತೆ ಮಾಡುವಂತೆ ನಿನಗೆ ಗೊತ್ತಿಲ್ಲದೆ ನಿನ್ನ ಕಾರ್ಯವೈಖರಿಯ ಋಣಾತ್ಮಕ ವಿಷಯಗಳ ಬಗ್ಗೆ ಬೆಳಕು ಚೆಲ್ಲಿ, ಅದನ್ನೆ ಅಸ್ತ್ರ ವಾಗಿ ಬಳಸಿಕೊಂಡು ಪ್ರಹಾರ ಮಾಡುತ್ತಾರೆ….
ನಿನ್ನ ಕಾರ್ಯವೈಖರಿಯ ಬಗ್ಗೆ ಮಾತನಾಡಿದಾಗ ದಯವಿಟ್ಟು ಚಿಂತೆ ಮಾಡಿ ನೋವು ಮಾಡಿಕೊಳ್ಳುವ ಬದಲು, ಧನಾತ್ಮಕ ವಿಷಯಗಳ ಬಗ್ಗೆ ಗಮನಿಸಿ ನಮ್ಮಲ್ಲಾಗುವ ಅಲ್ಪ ತಪ್ಪುಗಳನ್ನು ಸರಿಪಡಿಸುವತ್ತ ಚಿಂತನೆ ಮಾಡಿ, ಮುಂದಿನ ನಮ್ಮ ಕಾರ್ಯವೈಖರಿಗಳಲ್ಲಿ ಇನ್ನೂ ಹೆಚ್ಚಿನ ಬದಲಾವಣೆಗಳು ತಂದು ಸುಧಾರಿಸಿಕೊಳ್ಳುವತ್ತ ಚಿಂತನೆ ಮಾಡಬೇಕು ಎನ್ನುವ ಅನುಭವದ ಮಾತು ಕೇಳಿ ಕೊಂಚ ಸಮಾಧಾನವಾಯಿತು…
ಚಿಂತನೆಯು ಬದಲಾವಣೆಯ ಇನ್ನೊಂದು ರೂಪ, ಬದಲಾಗುತ್ತಿರುವ ಜಗತ್ತಿನೊಂದಿಗೆ ನಮ್ಮನ್ನು ನಾವು ಹೊಂದಿಸಿಕೊಳ್ಳಲೆ ಬೇಕಾದ ಅನಿವಾರ್ಯತೆಗೆ ಬದ್ಧರಾಗಬೇಕು.
“ಚಿಂತನೆ” ಪದದ ಅರ್ಥವು ಯೋಚನೆ, ಆಲೋಚನೆ, ಅಥವಾ ಮನಸ್ಸಿನ ಕ್ರಿಯೆಯಾಗಿದೆ. ಇದು ಒಂದು ಸಮಸ್ಯೆಯನ್ನು ಪರಿಹರಿಸಲು ಅಥವಾ ಒಂದು ವಿಷಯವನ್ನು ಆಳವಾಗಿ ವಿಶ್ಲೇಷಿಸಲು ಮಾಡುವ ಮಾನಸಿಕ ಚಟುವಟಿಕೆಯನ್ನು ಸೂಚಿಸುತ್ತದೆ.
ಈ ಪದವನ್ನು ‘ಆಲೋಚನೆ’, ‘ಪರಿಗಣನೆ’ ಅಥವಾ ‘ದೃಷ್ಟಿಕೋನ’ ಎಂಬ ಅರ್ಥಗಳಲ್ಲಿಯೂ ಬಳಸಲಾಗುತ್ತದೆ. ಚಿಂತನೆಯು ಆಳವಾದ ಪರಿಗಣನೆಯಾಗಿದ್ದು ಕೆಲವು ಸಂದರ್ಭಗಳಲ್ಲಿ, ‘ಚಿಂತನೆ’ ಎಂದರೆ ಆಳವಾದ ಧ್ಯಾನ ಅಥವಾ ಗಮನದೊಂದಿಗೆ ಒಂದು ವಿಷಯವನ್ನು ಪರಿಗಣಿಸುವುದು ಎಂಬುದಾಗಿದೆ.
ಒಬ್ಬರ ಅಭಿಪ್ರಾಯ ಅಥವಾ ನಂಬಿಕೆಯನ್ನೂ ಚಿಂತೆ ಎನ್ನುವುದಕ್ಕಿಂತ ಚಿಂತನೆ ಎಂದು ಕರೆಯಬಹುದು. ಉದಾಹರಣೆಗೆ, “ಅವರ ಚಿಂತನೆಯ ಪ್ರಕಾರ, ಎಲ್ಲವೂ ಸರಿಯಾಗಿ ನಡೆಯುತ್ತದೆ” ಎನ್ನುವಲ್ಲಿ ಇದು ಅವರಿಗೆ ಒಂದು ವಿಷಯ ಅಥವಾ ಕಾರ್ಯದ ಬಗ್ಗೆ ಅವರಲ್ಲಿರುವ ದೃಷ್ಟಿಕೋನವನ್ನು ಸೂಚಿಸುತ್ತದೆ.
ಅನೇಕ ಸಾಧಕರು, ಸಮಾಜ ಸೇವಕರು ಸ್ವಾರ್ಥ ಬಿಟ್ಟು, ಹಗಲು ರಾತ್ರಿ ಎನ್ನದೆ,ನನ್ನಿಂದ ಏನಾದರೂ ಸಾಮಾಜಿಕ ಕಾರ್ಯ ಮಾಡಬೇಕೆಂಬ ಕನಸು ಹೊತ್ತಿ ಸಮಾಜಮುಖಿ ಕಾರ್ಯಗಳನ್ನು ಮಾಡುವಾಗ,ನೂರಕ್ಕೆ ಶೇಕಡಾ 90 ರಷ್ಟು ಜನ ಪ್ರೋತ್ಸಾಹಿಸುವುದಕ್ಕಿಂತ, ತಪ್ಪುಗಳನ್ನು ಎತ್ತಿ ಹಿಡಿಯುವುದು ಸರ್ವೇಸಾಮಾನ್ಯ ವಾಗಿದೆ. ಇಂತಹ ಸಂದರ್ಭದಲ್ಲಿ ಸಮಾಜ ಮತ್ತು ಸಮಾಜಮುಖಿ ಕಾರ್ಯದಲ್ಲಿ ತೊಡಗಿರುವ ಜನರು ನಾನು ಎಷ್ಟೇ ಒಳ್ಳೆಯ ಕಾರ್ಯ ಮಾಡುತ್ತಿದ್ದರೂ ನನ್ನ ಕೆಲಸದ ಬಗ್ಗೆ ನಿಂದನೆ ಮಾಡುತ್ತಿದ್ದಾರೆ ಎನ್ನುವ ಚಿಂತೆಯಲ್ಲಿ ಮುಂದಿನ ಯೋಜನೆಗಳ ಬಗ್ಗೆ ಹಿಂದೇಟು ಹಾಕುತ್ತಾರೆ.
ಯಾವುದೇ ಕೆಲಸ ಕಾರ್ಯಗಳು ಮಾಡುವಾಗ ಏಳುಬೀಳುಗಳು ಸಹಜ, ತಪ್ಪುಗಳು ಆಗುತ್ತಿರುತ್ತವೆ.ಎಲ್ಲಿ ಕೆಲಸ ಕಾರ್ಯಗಳು ಯಶಸ್ವಿಯತ್ತ ಸಾಗುತ್ತಿರುತ್ತವೋ ಅವುಗಳ ಬಗ್ಗೆ ಹಾಗೂ ಅಂಥವರ ಬಗ್ಗೆ ಚರ್ಚೆಗಳು ಹೆಚ್ಚಾಗುತ್ತಿವೆ ಎಂದರೆ ಇದರ ಅರ್ಥ ನನ್ನ ಕಾರ್ಯ ಚಟುವಟಿಕೆಗಳ ಬಗ್ಗೆ ಎಲ್ಲರೂ ಗಮನ ಕೊಡುತ್ತಿದ್ದಾರೆ ಎಂದಾಗುತ್ತದೆ. ಕೆಟ್ಟದ್ದು ಒಳ್ಳೆಯದು ಎಲ್ಲದರ ಬಗ್ಗೆ ಯೋಚನೆಗಳು ನಡೆಯುತ್ತಿವೆ ಎನ್ನುವ ಅರ್ಥ.
ನಮ್ಮ ನಿಂದಕರು ನಮ್ಮ ತಪ್ಪುಗಳನ್ನು ಎಳೆ ಎಳೆಯಾಗಿ ವಿಶ್ಲೇಷಣೆ ಮಾಡಿ ಎತ್ತಿ ಹಿಡಿಯುತ್ತಾರೆ.
ಹಾಗಂತ ನಾವು ಇದು ನಮ್ಮ ತಪ್ಪು ಎಂದು ಭಾವಿಸದೆ ಅವರ ಮಾತುಗಳಲ್ಲಿ ಸತ್ಯ ಇದೆ ಎನ್ನುವುದನ್ನು ನಾವು ಧನಾತ್ಮಕವಾಗಿ ಸ್ವೀಕರಿಸಿ, ನಮ್ಮ ಕಾರ್ಯ ವೈಖರಿಗಳಲ್ಲಿ ತರಬೇಕಾದ ಬದಲಾವಣೆಗಳನ್ನು ಹಾಗೂ ಹಿಂದೆ ಆದಂತಹ ತಪ್ಪುಗಳನ್ನು ತಿದ್ದಿಕೊಳ್ಳಲು ನಮಗೆ ನಾವೇ ಚಿಂತನೆ ಮಾಡಿ ಮುಂದಿನ ಕಾರ್ಯ ಚಟುವಟಿಕೆಗಳನ್ನು ಉತ್ತಮಗೊಳಿಸಕೊಳ್ಳಬಹುದು.
ಯಾವ ಕೆಲಸ ಕಾರ್ಯಗಳು ಕೂಡ ಶೀಘ್ರದಲ್ಲಿಯೇ ಯಶಸ್ವಿಯಾಗಲು ಸಾಧ್ಯವಿಲ್ಲ. ಸರಿ ತಪ್ಪುಗಳ ಮಧ್ಯೆ ಸುಧಾರಿಸಿಕೊಂಡು ಮುನ್ನುಗ್ಗಬೇಕಾಗುತ್ತದೆ.
ಇಂದಿನ ಜಗತ್ತಿನಲ್ಲಿ ಉನ್ನತ ಶಿಕ್ಷಣ ಪಡೆದು, ಪ್ರತಿಭಾವಂತ ಹಾಗೂ ಅಗಾಧ ಜ್ಞಾನವುಳ್ಳ ಯುವ ಪೀಳಿಗೆಗೆ ಅನುಭವದ ಕೊರತೆ ಇದೆ, ಇವರನ್ನು ಮಾನಸಿಕವಾಗಿ ಸದೃಢರಾಗುವಂತೆ ಆತ್ಮಬಲ ತುಂಬಬೇಕಾಗುತ್ತದೆ.
ಒಳ್ಳೆಯದು ಕೆಟ್ಟದ್ದು, ಸೋಲು ಗೆಲುವು ಎಲ್ಲವುಗಳ ಬಗ್ಗೆ ವಿಶ್ಲೇಷಣೆ ಮಾಡುವ ಹಾಗೂ ಸಮಾನವಾಗಿ ಸ್ವೀಕರಿಸುವ ಮನೋಭಾವ ಇವರಲ್ಲಿ ಬೆಳೆಸಬೇಕು. ಎಡವಿದಾಗ ಅಥವಾ ಯಾರಾದರೂ ತಪ್ಪುಗಳನ್ನು ಎತ್ತಿ ಹಿಡಿದು ತೋರಿಸಿದಾಗ ಚಿಂತೆ ಮಾಡದೆ, ವೈಫಲ್ಯದ ಕಾರಣಕ್ಕಾಗಿ ಚಿಂತನೆ ಮಾಡಲು ಪ್ರೋತ್ಸಾಹಿಸಬೇಕು.
ದುರದೃಷ್ಟದ ಸಂಗತಿ ಎಂದರೆ ಪ್ರತಿ ಕ್ಷೇತ್ರದಲ್ಲಿಯೂ ಸಾಧನೆ ಮಾಡಬೇಕೆಂಬ ಆತುರ ನಮ್ಮನ್ನು ಎಡವುವಂತೆ ಮಾಡುತ್ತದೆ.
ಅನುಭವಸ್ಥರಿಂದ ಅನುಭವಗಳನ್ನು ಪಡೆದುಕೊಂಡು ಯೋಚಿಸಿ, ನಿಧಾನವಾಗಿ ಆದರೂ ಸರಿ ಪರಿಪೂರ್ಣ ಕೆಲಸ ಮಾಡಬೇಕು. ಯಾಕೆಂದರೆ ಅನುಭವ ಹೆಚ್ಚಾದಂತೆ ಪ್ರಯೋಗಾತ್ಮಕವಾಗಿ ನಮ್ಮಲ್ಲಿ ತಾಳ್ಮೆ ಕೂಡ ಹೆಚ್ಚಾಗುವುದರೊಂದಿಗೆ ಸೋಲು ಗೆಲುವು ಎಲ್ಲವನ್ನು ಸಮನಾಗಿ ಸ್ವೀಕರಿಸುವ ಮನೋಭಾವ ಬೆಳೆಯುತ್ತದೆ…
ಅನುಭವಕ್ಕಿಂತ ದೊಡ್ಡ ಪಾಠವಿಲ್ಲ, ಚಿಂತನೆಗಿಂತ್ತ ದೊಡ್ಡ ಶಕ್ತಿಯಿಲ್ಲ…, ಯಾವುದೇ ರೀತಿಯ ಸಂಬಂಧಗಳಾಗಲಿ,ಕೌಟಿಂಬಿಕ ವಿಷಯಗಳಾಗಲಿ ಸ್ವಲ್ಪ ವ್ಯತ್ಯಾಸ ಬಂದರೂ ಕೂಡ ನಾವು ನಮಗೆ ಗೊತ್ತಿಲ್ಲದೆ ಅನೇಕ ತಪ್ಪುಗಳನ್ನು ಮಾಡಿರುತ್ತೇವೆ, ಅವುಗಳನ್ನು ಎತ್ತಿ ತೋರಿಸಿದಾಗ ಅವುಗಳ ಬಗ್ಗೆ ಚಿಂತೆ ಮಾಡಲು ಹೊರಡುತ್ತೇವೆ, ಚಿಂತೆ ಬಿಟ್ಟು ತಪ್ಪುಗಳ ಬಗ್ಗೆ ಚಿಂತನೆ ಮಾಡಿದಾಗ , ಹೆಚ್ಚುತ್ತಿರುವ ಆತ್ಮಹತ್ಯೆಗಳು, ವಿವಾಹ ವಿಚ್ಛೇದನಗಳು ಅಂದರೆ ಡೈವರ್ಸ್, ಕೊಲೆ ಸುಲಿಗೆಗಳು , ಹಾಗೂ ವಿವಿಧ ರಂಗಗಳಲ್ಲಿ ಇಂದಿನ ಯುವ ಪೀಳಿಗೆ ಸ್ವಲ್ಪ ವ್ಯತ್ಯಾಸವಾದರೂ ಕೂಡ ಬೇಗನೆ ಸೋಲೊಪ್ಪಿಕೊಂಡು ಚಿಂತನೆ ಮಾಡದೆ ಅನಾಹುತ ಮಾಡಿಕೊಳ್ಳುತ್ತಿರುವುದು ದುಃಖಕರ ಸಂಗತಿಯಾಗಿದೆ.
ನಾವು ಸಮಜಮುಖಿ ಕಾರ್ಯಗಳಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕಾದರೆ ಮೊದಲು ಸದೃಢರಾಗಬೇಕು , ಎಲ್ಲವನ್ನು ಸ್ವೀಕರಿಸುವ ಮನೋಭಾವನೆ ಬೆಳೆಸಿಕೊಂಡು, ಚಿಂತೆ ಬಿಟ್ಟು ಚಿಂತನೆಮಾಡುವತ್ತ ನಮ್ಮನ್ನು ಬಲಪಡಿಸಿಕೊಳ್ಳಬೇಕು.

ನಂದಿನಿ ಸನಬಾಳ ಕಲಬುರಗಿ

