ಲಿಂಗಾಯತ ಧರ್ಮ ಮಾನ್ಯತೆ ಮತ್ತು ಅಲ್ಪ ಸಂಖ್ಯಾತ ಸ್ಥಾನಮಾನದ ಬೇಡಿಕೆ ನ್ಯಾಯ ಸಮ್ಮತ ಹಾಗೂ ಕಾನೂನು ಸಮ್ಮತವಾಗಿದೆ. ಲಿಂಗಾಯತ ಧರ್ಮ ಮಾನ್ಯತೆಯ ಚಳವಳಿಯು ಕಳೆದ ೨೦೦ ವರ್ಷಕ್ಕೂ ಹಳೆಯದಾದ ಹೋರಾಟವಾಗಿದೆ.ಅನೇಕ ಸಂದರ್ಭಗಳಲ್ಲಿ ಸಂವಿಧಾನಾತ್ಮಕ ಚರ್ಚೆಯಲ್ಲಿ ಲಿಂಗಾಯತ ಒಂದು ಪರಿಪೂರ್ಣ ಸ್ವತಂತ್ರ ಧರ್ಮವೆಂದು ದಾಖಲಾಗಿದೆ
ವೀರಶೈವ ಅಥವಾ ಹಿಂದೂ ಎಂಬ ಪದಗಳು ಲಿಂಗಾಯತ ಧರ್ಮದ ಮೇಲೆ ಒಂದು ಒತ್ತಾಯದ ಹೇರಿಕೆ ಅಷ್ಟೇ
ಧರ್ಮ ಎನ್ನುವ ಪದವು ಸಂಸ್ಕೃತ ಪದದಿಂದ ಬಂದದ್ದು “ಧಾರಣಾತ್ ಧರ್ಮಃ “-ಅಂದರೆ ಯಾವುದನ್ನು ಧರಿಸಲು ಆಧರಿಸಲು ಸಮರ್ಥವಾಗುತ್ತದೆಯೋ ಅದು ಧರ್ಮವೆಂದಾಗುತ್ತದೆ. ಧರ್ಮ ಅಂದರೆ ಧಾರಣ .ಜಿಡ್ಡುಗಟ್ಟಿದ ಮೃತಪ್ರಾಯವಾಗಬಹುದಾದ ಸಾಮಾಜಿಕ ಧಾರ್ಮಿಕ ರಾಜಕೀಯ ಆರ್ಥಿಕ ವ್ಯವಸ್ಥೆಗೆ ಒಂದು ಬೃಹತ್ ಪರ್ಯಾಯ ಮತ್ತು ಪ್ರತಿ ವ್ಯವಸ್ಥೆಯನ್ನು 12ನೆ ಶತಮಾನದಲ್ಲಿ ಶರಣರು ಕಲ್ಪಿಸಿದರು. ಧರ್ಮವು ಶೊಷಣೆಯಾದಾಗ ಮೋಸ ಕಪಟ ಕಳ್ಳತನ ಕಂದಾಚಾರ ಮೂಡನಂಬಿಕೆ ತಾಂಡವವಾಡುವಾಗ ಬಸವಣ್ಣನವರು ” ದಯವಿಲ್ಲದ ಧರ್ಮ ಅದೆವುದಯ್ಯಾ ” ಎಂದು ಧರ್ಮಕ್ಕೆ ದಯೆ ಪ್ರೀತಿಯನ್ನು ಅಡಿಪಾಯ ಹಾಕಿದರು.
Religion is a way of life -ಅದು ಬರಿ ಸಿದ್ಧಾಂತವಲ್ಲ ಬದುಕಿನ ಕ್ರಮ ಅಥವಾ ಸಾಧನೆಯ ಹಾದಿ(Religion is a way of life but not view of Life ). ಬದುಕನ್ನ ಕೇವಲ ಅವಲೋಕಿಸಿ ವ್ಯಾಖ್ಯಾನ ಮಾಡುವುದು ಧರ್ಮವಲ್ಲ.ಶರಣರು *(LIFE IS NOT ONLY WAY OF LIFE BUT ALSO WAY OF GOOD CONDUCT )* “ಧರ್ಮ ಕೇವಲ ಬದುಕಿನ ಮಾರ್ಗವಲ್ಲ ಆದರೆ ಅದು ಬದುಕಿನ ನೀತಿ ಸಂಹಿತೆ ಸತ್ಯ ಶುದ್ಧ ಆಚರಣೆ “ಎಂದು ಹೇಳಿದರು. ಇಲ್ಲಿ ಸಲ್ಲುವವ ಅಲ್ಲಿಯೂ ಸಲ್ಲುವವ ಇಲ್ಲಿ ಸಲ್ಲದವ ಅಲ್ಲಿಯೂ ಸಲ್ಲರಯ್ಯ.
ಬಸವಣ್ಣ ನಿರ್ಮಲವಾದ ಮನಸ್ಸಿಗೆ ಮನುಷ್ಯ ತನ್ನನ್ನೇ ಆತ್ಮಾವಲೋಕನ ಮಾಡಿಕೊಳ್ಳಬೇಕು ” ಎನ್ನ ಚಿತ್ತವು ಅತ್ತಿಯ ಹಣ್ಣು ನೋಡಯ್ಯಾ ” ಮಾವಿನ ಕಾಯೊಳು ಎಕ್ಕೆ ಕಾಯಿ ನಾನಯ್ಯಾ ” “ಮನವೆಂಬ ಮರ್ಕಟ ” “ವಿಷಯ ವೆಂಬ ಹಸುರೆನ್ನ ಮುಂದೆ ಪಸರಿಸಿದಿರಿ” ಹೀಗೆ ತನು ವಿರೋಧ ಆತ್ಮಾವಲೋಕನ ಜೊತೆಗೆ ಭ್ರತ್ಯಾಚಾರದ ಕಿಂಕರ ಭಾವನೆಯಿಂದಾ ಬಸವಣ್ಣನವರು ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಭಕ್ತಿ ಚಳವಳಿ ಮತ್ತು ಸಮತೆಯ ಸಂಘರ್ಷವನ್ನು ಸಾರಿದರು.
ಪರಿಣಾಮವಾಗಿ ಕಕ್ಕಯ್ಯ ಚೆನ್ನಯ್ಯ ಹರಳಯ್ಯಾ ಮಾಚಯ್ಯ ಚೆಂದಯ್ಯ,ಸತ್ಯಕ್ಕಾ ಕಾಳವ್ವೆ, ನಿಂಬೆಕ್ಕಾ ,ಅಂಬಿಗರ ಚೌಡಯ್ಯಾ ಹೀಗೆ ಕೆಳಸ್ತರದ ಜನರ ಸಂಘಟನೆಯಿಂದ ಲಿಂಗಾಯತ ಎಂಬ ಒಂದು ಹೊಸ ಧರ್ಮವನ್ನು ಬಸವಣ್ಣ ಮತ್ತು ಎಲ್ಲಾ ಶರಣರು ಸ್ಥಾಪಿಸಿದರು ಧರ್ಮ ಗುರು ಸ್ಥಾಪಕ ಬಸವಣ್ಣ. ವಚನಗಳು ಸಮತೆ ಶಾಂತಿ ಪ್ರೀತಿ ವಿಶ್ವ ಬಂಧುತ್ವ ಸಾರುವ ನಿರ್ವಿವಾದ ಸತ್ಯಗಳು . ಆದರೆ ಯಾವುದೇ ಲಾಂಛನ ಕಾವಿ ಮಠವಿರದ ಈ ಧರ್ಮದಲ್ಲಿ ಮತ್ತೆ ಮೌಡ್ಯ ತುಂಬಿಕೊಂಡಿವೆ . ಶರಣರ ಮೂಲ ಆಶಯ ಗುರುತಿಸದೆ ಅದನ್ನು ತಮ್ಮ ಗ್ರಹಿಕೆಗೆ ತಕ್ಕಂತೆ ವ್ಯಾಖ್ಯಾನ ಮಾಡುತ್ತಾ ಜನರನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ.
ಶರಣರು ಅನುಭಾವಿಗಳು ಸ್ವಾಮಿಗಳು ,ಮಠಾಧೀಶರು, ಅಕ್ಕ ಮಾತೆಯವರು.*(MYSTICS PAR EXCELLENCE )*
ಕಾಯಕ ದಾಸೋಹ ತತ್ವವನ್ನು ಮೊಟ್ಟ ಮೊದಲ ಬಾರಿಗೆ ತೋರಿ ಬದುಕಿದ ಧೀರರು .ಶರಣರ ಅಧ್ಯಾತ್ಮ ದೃಷ್ಟಿ ಸಂಪದ್ದ್ಭರಿತ ಹಾಗು ಗಟ್ಟಿ ಧ್ವನಿ ಹೊಂದಿದ ಬದುಕಿನ ಪಥ ಸೋಪಾನ.
“ಅರಿವೇ ಗುರು ಆಚಾರವೇ ಲಿಂಗ ಅನುಭಾವವೇ ಜಂಗಮ” ಎಂದೆನ್ನುವ ಶರಣರು ಲಿಂಗ ಯೋಗ (ಪೂಜೆಯಲ್ಲ ) ಮೂಲಕ ಅನುಸಂಧಾನ ಮಾಡಿ ಮನುಷ್ಯ ಹೇಗೆ ತಾನೇ ದೇವನಾಗಬಲ್ಲನು ಎಂದು ಸಾಧಿಸಿ ತೋರಿದ್ದಾರೆ. ಅಲ್ಲಿಯವರೆಗಿದ್ದ ಸೋಹಂ ಎಂಬ ಭಾವವು ದಾಸೋಹಂ ಎಂಬ ಮಹಾನ್ ತತ್ವದಲ್ಲಿ ಪರಿವರ್ತನೆಗೊಂಡಿತು. ಇಂತಹ ಕ್ರಾಂತಿ ಜಗತ್ತಿನಲ್ಲಿಯೇ ಅಪರೂಪವಾಗಿದೆ. ವರ್ಗ ವರ್ಣ ಆಶ್ರಮ ಲಿಂಗ ಬೇಧ ಧಿಕ್ಕರಿಸಿದ ಶರಣರು ಸಾರ್ವಕಾಲಿಕ ಸಮಕಾಲೀನ ಸಮಾನತೆಯ ಸಮಾಜದ ರೂವಾರಿಗಳು.
ಅಂದಿನ ಮೌಢ್ಯ ,ಅಂಧ ಶೃದ್ಧೆ ,ಕಂದಾಚಾರ ,ಪುನರ್ಜನ್ಮ , ಕರ್ಮ ಸಿದ್ಧಾಂತವನ್ನು ಶರಣರು ಸಂಪೂರ್ಣ ತಿರಸ್ಕರಿಸಿ ಹೊಸ ಸಮಾಜವನ್ನು ನಿರ್ಮಿಸಿದರು.
ಶರಣರು ಪುನರ್ಜನ್ಮ ಕರ್ಮ ಸಿದ್ಧಾಂತ ವಿರೋಧಿಸಿದ ಧೀರರು.
———————————————
ಅಟ್ಟೆ ಮುಟ್ಟಲಿಲ್ಲ, ಮುಟ್ಟಿ ಮರಳಲಿಲ್ಲ,
ಏನೆಂಬೆ ಲಿಂಗವೆ, ಎಂತೆಂಬೆ ಲಿಂಗಯ್ಯಾ ?
ನಿಜವನರಿದ ಬಳಿಕ ಮರಳಿ ಹುಟ್ಟಲಿಲ್ಲ, ಕಾಣಾ ಗುಹೇಶ್ವರಾ
ಇಲ್ಲಿ ಅಟ್ಟೆ ಎಂದರೆ ತಲೆಯಿಲ್ಲದ ದೇಹ ಎಂದರ್ಥ .ನಿರ್ಗುಣ ಶೂನ್ಯ ಬಯಲು ಕದಳಿ ಎಂಬ ಪಾರಿಭಾಷಿಕ ಪದಗಳಿವೆ. ಬಸವಣ್ಣವರು ಹುಡುಕಿದ ಸಂಶೋಧಿಸಿದ
ಇಷ್ಟಲಿಂಗ ಲಿಂಗವನರಿಯದೆ ಏನನ್ನೂ ಅರಿತರೂ ಫಲವಿಲ್ಲಾ ಲಿಂಗವನರಿತ ಬಳಿಕ ಮತ್ತೆನನ್ನೂ ಅರಿತರೂ ಫಲವಿಲ್ಲಾ,ಅದಕ್ಕೆ ಇಂತಹ ಸ್ಥಳ ಮುಟ್ಟಿದ ಬಳಿಕ ಭಕ್ತನಾಗಿ ಮತ್ತೆ ಭವಿಯಾಗಲಿಲ್ಲ.ಏನೆಂಬೆ ಲಿಂಗವೆ, ಎಂತೆಂಬೆ ಲಿಂಗಯ್ಯಾ ? ಇಂತಹ ಸುಂದರ ಲಿಂಗ ತತ್ವ ತಿಳಿದ ಬಳಿಕ ಮರಳಿ ಹುಟ್ಟಲು ಸಾಧ್ಯವೇ ?
ಭವಿ ಒಂದು ಜನ್ಮ ಅದು ಪರಿವರ್ತಿತಗೊಂಡ ಇನ್ನೊಂದು ಸ್ಥಲವೇ” ಭಕ್ತ ” ಇನ್ನೊಂದು ಜನ್ಮ ಇಂತಹ ನಿಜವನರಿದ ಬಳಿಕ ಮರಳಿ ಹುಟ್ಟು ಸಾಧ್ಯವಿಲ್ಲ. ಇದು ಅಲ್ಲಮರ ಅಭಿಮತ .
ಇದೆ ರೀತಿ ದಿಟ್ಟ ಗಣಾಚಾರಿ ಅಂಬಿಗರ ಚೌಡಯ್ಯ .ಈ ಕೆಳಗಿನಂತೆ ಪ್ರಶ್ನಿಸಿದ್ದಾನೆ .
ಕ್ಷೀರದಿಂದಾದ ತುಪ್ಪ ಕ್ಷೀರವಪ್ಪುದೇ ?
ನೀರಿನಿಂದಾದ ಮುತ್ತು ನೀರಪ್ಪುದೇ ?
ಮೀರಿ ಪೂರ್ವಕರ್ಮವನು ಹರಿದ ಭಕ್ತಗೆ
ಬೇರೆ ಮತ್ತೆ ಜನ್ಮವುಂಟೆ ಲಿಂಗವಲ್ಲದೆ ?
ಕಟ್ಟಿಹೆ ಬಿಟ್ಟಿಹೆವೆಂಬ ದಂದುಗ ನಿಮಗೇಕೆ ?
ತೆರನನರಿಯದೆ ಹಲವು ತೊಪ್ಪಲ ತರಿತಂದು ಮೇಲೊಟ್ಟಲೇಕೊ ?
ಜಂಗಮ ಬಂದರೆ ತೆರನರಿತು ಅರ್ಪಿಸಬಲ್ಲಡಲ್ಲಿ ಶಿವ ತೆರಹಿಲ್ಲದಿಪ್ಪನೆಂದಾತನಂಬಿಗರಚೌಡಯ್ಯ.
ಹಾಲಿನಿಂದಾ ತುಪ್ಪ ಮತ್ತೆ ಹಾಳಾಗುವುದೆ ಕ್ರಿಯೆಯಿಳಿದು. ನೀರಿನಿಂದಾದ ಮುತ್ತು ನೀರಪ್ಪುದೇ ? ನೀರಿನಲ್ಲಿ ಹುಟ್ಟಿದ ಮುತ್ತು ಮತ್ತೆ ನೀರಾಗುವುದೆ.?
ಮೀರಿ ಪೂರ್ವಕರ್ಮವನು ಹರಿದ ಭಕ್ತಗೆ ಮತ್ತೆ ಬೇರೆ ಜನ್ಮ ಉಂಟೆ ?
ಕಟ್ಟಿಹೆ ಬಿಟ್ಟಿಹೆನೆ೦ಬ ಆತಂಕ ನಿಮಗೇಕೆ ಭಕ್ತರೆ ? ಅರ್ಥವಿಲ್ಲದ ನೆಲೆಯಿಲ್ಲದ ತಪ್ಪಲು ತಂದು ಅನಗತ್ಯ ಒಟ್ಟಲೇಕೊ ? ಜಂಗಮ ಬಂದಲ್ಲಿ ತೆರನರಿತು ಅರ್ಪಿಸಿದಡೆ ಶಿವ ನೊಪ್ಪುವ ಎಂದು ಹೇಳಿದ್ದಾರೆ.
ಶರಣರು ಕರ್ಮ ಸಿದ್ಧಾಂತವನ್ನು ಪುನರ್ಜನ್ಮವನ್ನು ಒಪ್ಪಲಿಲ್ಲ ಮತ್ತು ಕಟುವಾಗಿ ವಿರೋಧಿಸಿದರು.ಆದರೆ ಪಲ್ಲಟ ಪರಿವರ್ತನೆ ಭವಿ ಭಕ್ತ ವಿವರಣೆ ಕೊಡುವಾಗ ಒಂದು ಸ್ಥಿತಿಯಿಂದ ಇನ್ನೊಂದು ಸ್ಥಿತಿಗೆ ಮಾರ್ಪಾಡಾದಾಗ ಅದನ್ನು ಒಂದು ಜನ್ಮ ಮತ್ತೊಂದು ಜನ್ಮ ಎಂದು ಕರೆದರು .
ನಾವೇ ಒಂದು ಅಪಘಾತದಲ್ಲಿ ಸಿಕ್ಕು ಪಾರಾದಾಗ, ಸಾಮಾನ್ಯವಾಗಿ ನಾವು ಪುನರ್ಜನ್ಮ ಪಡೆದೆವು ಎಂದು ಹೇಳುವುದು ವಾಡಿಕೆ .ಕಾರಣ ಶರಣರು ಪುನರ್ಜನ್ಮ ಒಪ್ಪಲಿಲ್ಲ. ಹಿಂದಿನ ಜನ್ಮವಿಲ್ಲ ಮುಂದೆ ಇನ್ನೊಂದು ಜನ್ಮವೂ ಇಲ್ಲ .ನುಡಿದಂತೆ ನಡೆ ಇದೆ ಜನ್ಮ ಕಡೆ ಇದು ಶರಣರ ಸ್ಪಷ್ಟವಾಣಿ .
ಲಿಂಗಾಯತ ಧರ್ಮವು ಯಾವುದು?
—————————————–
ಲಿಂಗಾಯತ ಧರ್ಮವು ಮಠಗಳ ಸಂಸ್ಕೃತಿಯದ್ದಲ್ಲ IT HAS REJECTED MONARCHY. ಅದು ಮಹಾ ಮನೆಯ ಸಂಸ್ಕೃತಿ.
ಲಿಂಗಾಯತ ಧರ್ಮವು ಬ್ರಹ್ಮಚರ್ಯೆ ವಿರೋಧಿಸುತ್ತದೆ. ಅದು ಪ್ರಾಪಂಚಿಕ ಸಾಂಸಾರಿಕ ತತ್ವವನ್ನು ಬೋಧಿಸುತ್ತದೆ. ಇಂದ್ರಿಯ ನಿಗ್ರಹ ಮಹಾಪಾಪ.
ಲಿಂಗಾಯತ ಧರ್ಮವು ಬಾಹ್ಯದಲ್ಲಿ ದೇವರನ್ನು ಕಾಣುವುದಿಲ್ಲ.ತನ್ನ ಅಂತರೊಳಗೆ ದೇವರನ್ನು ಕಾಣುವುದು. ಮಾನವ ಮಹದೇವನಾಗುವದು. ಲಿಂಗಾಯತ ಧರ್ಮವು ದಾನ ವಿರೋಧಿಸುತ್ತದೆ ,ಆದರೆ ದಾಸೋಹವನ್ನು ಪ್ರೋತ್ಸಾಹಿಸುತ್ತದೆ. ಲಿಂಗಾಯತ ಧರ್ಮವು ವೇದ ಶಾಸ್ತ್ರ ಆಗಮ ವಿರೋಧಿಸುತ್ತದೆ.ಆದರೆ ವಚನಗಳೇ ಶಾಸನವೆನ್ನುತ್ತದೆ .ವಚನಗಳ ಬದುಕಿನ ಅನುಭವ ಚಿಂತನ.
ಲಿಂಗಾಯತ ಧರ್ಮವು ಮಾಟ ಮಂತ್ರ ಮೂಢ ನಂಬಿಕೆ ಖಂಡಿಸುತ್ತದೆ. ವೈಜ್ಞಾನಿಕತೆ ವೈಚಾರಿಕತೆ ಬೆಳೆಸುತ್ತದೆ. ತರ್ಕವನ್ನು ನಂಬುತ್ತದೆ. ಲಿಂಗಾಯತ ಧರ್ಮವು ಪಂಚಾಂಗ ಮುಹೂರ್ತ ಘಳಿಗೆ ಒಪ್ಪುವದಿಲ್ಲ.ಸರ್ವಕಾಲ ಸುಮಂಗಲ . ನಾಳೆ ಬರುವುದು ನಮಗಿಂದೇ ಬರಲೆನ್ನುವ ದಿಟ್ಟ ಧ್ಯೇಯ
ಲಿಂಗಾಯತ ಧರ್ಮದಲ್ಲಿ ಗುಲಾಮಗಿರಿ ದಾಸ್ಯತ್ವವಿಲ್ಲ, ಭಕ್ತನಲ್ಲಿ ಸ್ವಾಭಿಮಾನ ಸ್ವತಂತ್ರತೆಯಿದೆ ಹಸಿ ದುಡಿದರೆ ತನಗುಂಟು ತನ್ನ ಪ್ರಮಥರಿಗುಂಟು.
ಲಿಂಗಾಯತ ಧರ್ಮವು ಆಡಂಬರ ಮೆರವಣಿಗೆ ಒಪ್ಪುವದಿಲ್ಲ. ಸರಳ ಸತ್ಯ ಶುದ್ಧ ಮೌಲ್ಯಯುತ ತತ್ವಗಳ ಆಚರಣೆ.
ಲಿಂಗಾಯತ ಧರ್ಮವು ಸ್ಥಾವರ ಮೂರ್ತಿ ವಿರೋಧಿಸುತ್ತದೆ. ಲಿಂಗಯೋಗ ನಿರಾಕಾರ ನಿರುಪಾದಿತ ಲಿಂಗ ತತ್ವವನ್ನು ಒಪ್ಪುತ್ತದೆ. ಲಿಂಗಾಯತ ಧರ್ಮವು ಜಡ ವಿರೋಧಿ, ಪ್ರಕೃರ್ತಿದತ್ತ ನಿಸರ್ಗ ಜಂಗಮಪ್ರೇಮಿ ಚೈತನ್ಯದಾಯಕ ಕ್ರಿಯಾಶೀಲತೆಯಲ್ಲಿ ಭಕ್ತ ಆನಂದ. ಲಿಂಗಾಯತ ಧರ್ಮವು ಪ್ರಾಣಿ ಬಲಿ ಸುಲಿಗೆ ಶೋಷಣೆ ಖಂಡಿಸುತ್ತದೆ. ಕಾಯಕ ದಾಸೋಹ ಕಡ್ಡಾಯ ಸಕಲ ಜೀವಿಗಳನ್ನು ಪ್ರೀತಿಸುವ ಸಿದ್ಧಾಂತವಾಗಿದೆ. ಲಿಂಗಾಯತ ಧರ್ಮವು ಸೂತಕ ವಿರೋಧಿಸುತ್ತದೆ,ಹುಟ್ಟು ಸಾವು ಸಹಜ ಕ್ರಿಯೆಗಳ ಧರ್ಮ.
ಲಿಂಗಾಯತ ಧರ್ಮವು ಜಗತ್ತಿನಲ್ಲಿ ಸಾಂಸ್ಥಿಕರಣ ವಿರೋಧಿಸಿದ ಏಕ ಮೇವ ಧರ್ಮ .ಚರ್ಚು ಗುಡಿ ಮಠ ಆಶ್ರಮ ಬಸದಿ ಮಸೀದಿ ಗುರುದ್ವಾರ ,ಬಸದಿಗಳಿಲ್ಲದ ಮುಕ್ತ ಸಮಾಜವನ್ನು ಕಟ್ಟಿದ ಶರಣರು ಜಗತ್ತಿನ ಸಮತೆಯ ಶಾಂತಿಯ ರಾಯಭಾರಿಗಳು.
ಸುಮಾರು ನಲವತ್ತು ವಚನಕಾರರು 489 ವಚನಗಳಲ್ಲಿ ವೇದ ಆಗಮ ಶಾಸ್ತ್ರ ಪುರಾಣಗಳನ್ನು ಧಿಕ್ಕರಿಸಿದ್ದಾರೆ, ನೂರಾರು ವಚನಕಾರರು ಸನಾತನ ವ್ಯವಸ್ಥೆಯ ಜಾತೀಯತೆ ಅಸ್ಪ್ರಶ್ಯತೆ ಯಜ್ಞ ಹೋಮ ಮುಂತಾದ ಅನೇಕ ಕರ್ಮಾ ಕಾಂಡಗಳನ್ನು ವಿರೋಧಿಸಿದ್ದಾರೆ. ಲೋಕದಂತೆ ಬಾರರು ಲೋಕದಂತೆ ಇಪ್ಪರು ಕೂಡಲ ಸಂಗನ ಶರಣರು ಸ್ವತಂತ್ರ ಧೀರರು ಎಂದು ಅಪ್ಪ ಬಸವಣ್ಣನವರು ಅಂದೇ ಹೇಳಿದ್ದಾರೆ.
ಇವತ್ತು ಕೆಲವರು ಲಿಂಗಾಯತ ವೀರಶೈವ ಜಾತಿವಾದಿ ಸ್ವಾಮಿಗಳನ್ನು ರಾಜಕಾರಣಿಗಳನ್ನು ಹುರಿದುಂಬಿಸಿ ಲಿಂಗಾಯತ ಧರ್ಮ ಮಾನ್ಯತೆಗೆ ಮತ್ತು ಅಲ್ಪ ಸಂಖ್ಯಾತ ಸ್ಥಾನಮಾನಕ್ಕೆ ಅಡ್ಡಿ ಪಡಿಸುವುದು ಈ ಹೋರಾಟಕ್ಕೆ ಹಿನ್ನಡೆಯಾಗುವ ಖೋಟಾ ಕೃತಿಗಳನ್ನು ನಿರಂತರ ಪ್ರಕಟ ಮಾಡುತ್ತಿರುವುದು ಅತ್ಯಂತ ಖಂಡನೀಯವಾಗಿದೆ.
ಲಿಂಗಾಯತ ಹೋರಾಟವು ಇಂತಹ ದಮನಿಸುವ ಶಕ್ತಿಗೆ ಬಗ್ಗುವುದಿಲ್ಲ.
ಇನ್ನು ಕನ್ನೇರಿ ಮಠ ಮೂಲ ಒಂದು ಬಸವ ಪರಂಪರೆಯ ಮಠವಾಗಿದೆ. ಮಠದ ಶ್ರೀಗಳು ಅದೃಶ್ಯ ಕಾಡಸಿದ್ದೇಶ್ವರ ಸ್ವಾಮಿಗಳು ಅತ್ಯಂತ ಅಂಗಾರಿಕಾ ಪದಗಳನ್ನು ಬಳಸಿದ್ದಾರೆ ಅಲ್ಲದೆ ಇದನ್ನು ಒಂದು ರಾಜಕೀಯ ದಾಳವನ್ನಾಗಿ ಬಳಸುವ ಕೆಲ ಬಿಜೆಪಿ ಮತ್ತು ಇತರ ಪಕ್ಷಗಳ ಮುಖಂಡರು ಬಸವ ಧರ್ಮ ತತ್ವಕ್ಕೆ ದ್ರೋಹ ಮಾಡುತ್ತಿದ್ದಾರೆ. ಲಿಂಗಾಯತ ಧರ್ಮ ಮಾನ್ಯತೆ ಅಲ್ಪ ಸಂಖ್ಯಾ ಸ್ಥಾನಮಾನದ ಬೇಡಿಕೆ ನಮ್ಮ ಹಕ್ಕು ಅದನ್ನು ಪಡದೆ ಪಡೆಯುತ್ತೇವೆ. ಬಸವ ಪ್ರಜ್ಞೆ ಈಗ ದೇಶದ ತುಂಬಾ ಹರಡಿದೆ ಇದನ್ನು ಹತ್ತಿಕುವ ಕಾರ್ಯ ಮಾಡಬೇಡಿ .
ಡಾ .ಶಶಿಕಾಂತ ಪಟ್ಟಣ ರಾಮದುರ್ಗ



