ನಾ …
ನನ್ನೊಳಗಿನ ಕಪ್ಪು
ಬಿಳುಪಿನ ಚಿತ್ರ ಧುತ್ತನೆ ಕಣ್ಣೆದುರಿಗೆ…
ಭಾವನೆಗಳ ತಾಕಲಾಟ
ಉತ್ತರ ಸಿಗದ ಭಾವ..
ನಾನು, ನನ್ನದು ಎಂಬ ಮಮಕಾರ
ಮನಸ ತುಂಬಾ ಪ್ರೀತಿ, ಚಿತ್ತಾರ
ಸಾಧನೆ ಸಾಧಕಿ ಅಲ್ಲವೇ ಅಲ್ಲ
ಆದರೂ ಎಲ್ಲರಂತಲ್ಲ ನಾನು..
ಅಗೋಚರ…
ನನ್ನುಸಿರಿಗೂ ಒಂದು ಹೆಸರಿದೆ
ಪ್ರೀತಿ ಆಗಸದ ಎಳಸು ನಕ್ಷತ್ರ …
ಬಾಳಪುಟದಿ ಖುಷಿಗಳ ಹಾವಳಿ
ಕಷ್ಟ ಸುಖಗಳ ಕ್ಯಾಲೆಂಡರಲ್ಲಿ
ದಿಟ್ಟ ನಿರ್ಧಾರಗಳ ಪ್ರಭಾವಳಿ
ಬೆಳಕಿಲ್ಲದ ಹಾದಿಯಲ್ಲಿ
ನಡೆಯುವ ಧೈರ್ಯ !!!
ಭ್ರಮೆ ಅಲ್ಲ …
ದಿಟ್ಟತೆ, ಸ್ಪಷ್ಟತೆ, ಸನ್ನಡತೆ
ಗೊಂದಲದ ಗೂಡು
ಭಾವನಾ ಪರಿಧಿ..
ಗೆದ್ದು ಬೀಗುವ ಪರಿ
ಬೌದ್ಧಿಕತೆಯ ಸನ್ನಿಧಿ
ಬದುಕಿಗೆ ವಿಷ ಉಣಿಸಿದವರೆದಿರು
ಎಚ್ಚರದಿ ಎದ್ದು ನಿಂತಿರುವೆ ನಾ
ನಾನು ನಾನಲ್ಲ…
ನನ್ನಂತೆ ಪರರು ಅಂದಾಕಿ..
ಬದುಕ ರಂಗಾಯಣದಲ್ಲಿ
ಎಲ್ಲ ಪಾತ್ರಗಳಿಗೂ
ಸೈ, ಸೈ ಅಂದಾಕಿ..
ನೀರೆ ನಾ…. …..ನೀರಿನಂತೆ ಶುಭ್ರ, ಪರಿಶುಭ್ರ
ಮೀನಾಕ್ಷಿ ಸೂಡಿ ಲೇಖಕಿ, ದೇವಗಾಂವ, ಚನ್ನಮ್ಮನ ಕಿತ್ತೂರು, ಬೆಳಗಾವಿ ಜಿಲ್ಲೆ

