ಮೃದು ಹೃದಯಿ
ಹೆಗಲ ಮೇಲೆ ಹೊತ್ತು ಮುಗಿಲು ತೋರುತ ಹಾಲು ತುಪ್ಪ ಉಣಿಸಿ ಅಪ್ಪನಾದ ಅವನು ಮೃದುಹೃದಯಿ
ಮಗುವಿನೊಡನೆ ಮಗುವಾಗಿ ಕುಣಿದು ಕುಪ್ಪಳಿಸಿ ಅಜ್ಜನಾದ ಅವನು ಮೃದುಹೃದಯಿ
ಎಳೆಯನಾಗಿ ನಗೆಯ ಚೆಲುವ ಚಿತ್ತಾರ ಬಿಡಿಸಿ ಕವನ ಬರೆದು ಗೆಳೆಯನಾದ ಅವನು ಮೃದುಹೃದಯಿ
ಅರಿವು ಮೂಡಿಸಿ ಅಂಧಕಾರ ಓಡಿಸಿ ಜ್ಞಾನಜ್ಯೋತಿ ಮುಡಿಸಿ ಗುರುವಾದ ಅವನು ಮೃದುಹೃದಯಿ
ಬಾಲ್ಯಬಾನಿಗೆ ಬಣ್ಣಬಳಿದು ಕುಣಿಸಿ ಕಿಡಿಗೇಡಿ ತಮ್ಮನಾದ ಅವನು ಮೃದುಹೃದಯಿ
ಜೊತೆಗೆ ನಡೆದು ಭರವಸೆ ಬೆಳಕು ಬೀರಿ ಹಿರಿಯ ಅಣ್ಣನಾದ ಅವನು ಮೃದುಹೃದಯಿ
ಜೊತೆ ಬಾಳ ಸಿಹಿಕಹಿಯ ಹಂಚಿ ಉಣುತ ತಾಯಾಗಿ ಸಂತೈಸಿ ಜೀವ ಭಾವವಾದ ಅವನು ಮೃದು ಹೃದಯಿ
ಮಾವ,ಹುಟ್ಟಿದ ಮನೆ ಬಿಟ್ಟು ಬಂದ ಮಗಳ ತಂದೆಯಾದ ಅವನು ಮೃದುಹೃದಯಿ
ನೆರಿಗೆ ಬಿದ್ದ ಮೊಗದ ನಗೆಸರಿಗೆ ಊರುಗೋಲು ಮಗನಾದ ಅವನು ಮೃದುಹೃದಯಿ
ದಟ್ಟೆ ದಟ್ಟೆ ಎನುತ ಕೈಹಿಡಿದು ನಡೆಸುವ ಪುಟ್ಟ ಮೊಮ್ಮಗನಾದ ಅವನು ಮೃದುಹೃದಯಿ
ಕುದಿವ ದುಃಖ ಎದೆಯೊಳಗೆ ನಗೆಮಲ್ಲಿಗೆ ಮೊಗದಲಿ ಹೊತ್ತುನಡೆದ ಅವನು ಮೃದುಹೃದಯಿ
ಇಂದು ಮುಂದು ಎಂದೆಂದೂ ಅವಳ ಕಂಗಳ ಬೆಳದಿಂಗಳ ಬೆಳಕಾದ ಅವನು ಮೃದುಹೃದಯಿ
(ವಿಶ್ವ ಪುರುಷರ ದಿನದ ಅಂಗವಾಗಿ)
– ಇಂದಿರಾ ಮೋಟೆಬೆನ್ನೂರ, ಬೆಳಗಾವಿ

