ಮೂಡಲಗಿ : ರಾಜ್ಯದಲ್ಲಿ ೨೦೨೫-೨೬ನೇ ಸಾಲಿನ ಮುಂಗಾರು ಅತಿವೃಷ್ಟಿಯಿಂದಾಗಿ ನಷ್ಟಕ್ಕೊಳಗಾದ ರೈತರು ಬೆಳೆದ ಏಕದಳ, ದ್ವಿದಳ ಹಾಗೂ ತೋಟಗಾರಿಕಾ ಬೆಳೆಗಳಿಗೆ ಎಸ್‌ಡಿಆರ್‌ಆಫ್/ಎನ್‌ಡಿಆರ್‌ಆಫ್ ನಿಯಮಕ್ಕೆ ಅನುಸಾರವಾಗಿ ಹಾಗೂ ರಾಜ್ಯ ಸರ್ಕಾರದಿಂದ ಹೆಚ್ಚುವರಿಯಾಗಿ ಕೂಡಲೇ ಪರಿಹಾರ ಬಿಡುಗಡೆಗೊಳಿಸಬೇಕೆಂದು ಅರಭಾವಿ ಬಿಜೆಪಿ ಮಂಡಲ ಅಧ್ಯಕ್ಷ ಮಹಾದೇವ ಶೆಕ್ಕಿ ಆಗ್ರಹಿಸಿದರು.
ಗುರುವಾರದಂದು ಪಟ್ಟಣದಲ್ಲಿ ತಹಶೀಲ್ದಾರರ ಮುಖಾಂತರ ಮಾನ್ಯ ರಾಜ್ಯಪಾಲರಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು, ಕರ್ನಾಟಕ ರಾಜ್ಯದಲ್ಲಿ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದಾಗಿನಿಂದ ಈ ನಾಡಿನ ರೈತರ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹಾರ ನೀಡುತ್ತಿಲ್ಲ. ಬರದ ಸಂದರ್ಭದಲ್ಲಿ ರಾಜ್ಯ ಸರಕಾರ ಎಚ್ಚೆತ್ತುಕೊಂಡಿಲ್ಲ, ಅತಿವೃಷ್ಟಿ ಸಂದರ್ಭದಲ್ಲೂ ತಲೆ ಕೆಡಿಸಿಕೊಂಡಿಲ್ಲ ಎಂದು ಹೇಳಿದರು.
ಈಗ ಮೆಕ್ಕೆಜೋಳ ಬೆಳೆಯುವ ರೈತರೂ ಸಂಕಷ್ಟದಲ್ಲಿದ್ದಾರೆ. ರಾಜ್ಯ ಸರಕಾರ ಇನ್ನೂ ಖರೀದಿ ಕೇಂದ್ರಗಳನ್ನು ಪ್ರಾರಂಭಿಸಿಲ್ಲ. ಬೆಳೆಹಾನಿಗೆ ಪರಿಹಾರ ಘೋಷಿಸಿ ಒಂದೂವರೆ ತಿಂಗಳಾದರೂ ಪರಿಹಾರ ಕೊಡುವಲ್ಲಿ ರಾಜ್ಯ ಸರಕಾರ ತಲೆ ಕೆಡಿಸಿಕೊಂಡಿಲ್ಲ. ವೈರಲ್ ಇನ್‌ಫೆಕ್ಷನ್ ಆಗಿ ಭತ್ತದ ಬೆಳೆ ಹಾನಿಗೊಳಗಾಗಿದೆ. ರಾಜ್ಯ ಸರಕಾರ ರೈತರ ಹಿತ ಕಾಪಾಡುವಲ್ಲಿ ಸಂಪೂರ್ಣ ವಿಫಲವಾಗಿದ್ದು ರಾಜ್ಯದ ಎಲ್ಲ ಸಮಸ್ಯೆಗೂ ಕೇಂದ್ರ ಸರಕಾರದ ಕಡೆ ಬೆಟ್ಟು ತೋರಿಸುವುದು ಮತ್ತು ಪರಿಹಾರಕ್ಕಾಗಿ ಅವರ ಕಡೆ ಮುಖ ಮಾಡುವುದಷ್ಟೇ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರ ಸೀಮಿತವಾಗಿದೆ ಎಂದು ರಾಜ್ಯ ಸರಕಾರದ ವಿರುದ್ಧ ಹರಿಹಾಯ್ದರು.
ಈ ಸಂದರ್ಭದಲ್ಲಿ ಅನೇಕ ರೈತ ಮುಖಂಡು, ಸ್ಥಳೀಯ ಮುಖಂಡರು ಸೇರಿದಂತೆ ಬಿಜೆಪಿ ಪದಾಧಿಕಾರಿಗಳು ಉಪಸ್ಥಿತರಿದ್ದರು.

