ನವ ಬೆಂಗಳೂರುನಿರ್ಮಾಪಕ ಮಹಾ ದಾಸೋಹಿ ರಾವ ಬಹದ್ದೂರ್ ಎಲೆ ಮಲ್ಲಪ್ಪ ಶೆಟ್ಟರು

Must Read

ರಾವ್ ಬಹದ್ದೂರ್ ಎಲೆ ಮಲ್ಲಪ್ಪ ಶೆಟ್ಟರು: (1815-1887), ಒಬ್ಬ ಭಾರತೀಯ ವ್ಯಾಪಾರಿ ಮತ್ತು ಲೋಕೋಪಕಾರಿಯಾಗಿದ್ದರು. 19 ನೇ ಶತಮಾನದ ಉತ್ತರಾರ್ಧದಲ್ಲಿ ಬೆಂಗಳೂರು ಪ್ರದೇಶವು ಭೀಕರ ಬರಗಾಲದಿಂದ ಬಳಲುತ್ತಿದ್ದಾಗ, ಅವರು ಮಳೆ ನೀರನ್ನು ಶೇಖರಣೆ ಮಾಡಲು ಹಾಗೂ ಜನರಿಗೆ ಸಹಾಯ ಮಾಡಲು ದೊಡ್ಡ ಕೆರೆಯ ನಿರ್ಮಾಣಕ್ಕೆ ತಮ್ಮ ಸಂಪತ್ತಿನ ಹೆಚ್ಚಿನ ಭಾಗವನ್ನು ಉದಾರವಾಗಿ ದಾನ ಮಾಡಿದರು, ಈಗ ಅದನ್ನು ಎಲೆ ಮಲ್ಲಪ್ಪ ಶೆಟ್ಟಿ ಕೆರೆ ಎಂದು ಕರೆಯಲಾಗುತ್ತದೆ. ಇವರು 1880 ರಲ್ಲಿ ಬೆಂಗಳೂರಿನ ಮೊದಲ ಹೆರಿಗೆ ಆಸ್ಪತ್ರೆಯನ್ನು ಸ್ಥಾಪಿಸಲು ಹಣಕಾಸಿನ ನೆರವು ನೀಡಿದರು.

ರಾವ್ ಬಹದ್ದೂರ್ ಎಲೆ ಮಲ್ಲಪ್ಪ ಶೆಟ್ಟರು ಲಿಂಗಾಯತ ಸಮಾಜದ ಅಪ್ರತಿಮ ದಾಸೋಹಿಗಳು ತಮ್ಮ ಬಹುತೇಕ ಆಸ್ತಿ ಸಂಪತ್ತನ್ನು ಸಾಮಾಜಿಕ ಕಾರ್ಯಕ್ಕೆ ವಿನಿಯೋಗಿಸಿದರು.

*ವೃತ್ತಿ*
ಲೋಕೋಪಕಾರಿ, ವೀಳ್ಯದೆಲೆ ವ್ಯಾಪಾರಿ ಮತ್ತು ರೈತ
ಅವರ ಲೋಕೋಪಕಾರಕ್ಕಾಗಿ ಬ್ರಿಟಿಷ್ ಸರ್ಕಾರವು “ರಾವ್ ಬಹದ್ದೂರ್” ಎಂಬ ಬಿರುದನ್ನು ನೀಡಿ ಗೌರವಿಸಲಾಗಿತ್ತು.

ಎಲೆ ಮಲ್ಲಪ್ಪ ಶೆಟ್ಟರು 1737ರ ಯುವ ಸಂವತ್ಸರದ ಏಕಾದಶಿ ದಿನ ಮರಿ ಸಿದ್ದಪ್ಪ ಶೆಟ್ಟರು ಮತ್ತು ಚೆನ್ನಮ್ಮ ಇವರ ಮೂರನೇ ಮಗನಾಗಿ ಲಿಂಗಾಯತ ಕುಟುಂಬದಲ್ಲಿ ಬೆಂಗಳೂರಿನಲ್ಲಿ ಜನಿಸಿದರು ಇವರ ಪಾರಂಪರಿಕ ವೃತ್ತಿ ಅಡಿಕೆ ಮತ್ತು ಎಲೆ ಮಾರಾಟ. ಮರಿ ಸಿದ್ದಪ್ಪ ಶೆಟ್ಟರು ಅಂದಿನ ಕಾಲದ ದೊಡ್ಡ ಅಬಕಾರಿ ಕಂಟ್ರಾಕ್ಟರ್ ಸಹ ಆಗಿದ್ದರು

ಬಳ್ಳಾರಿಯ ಸಕ್ಕರೆ ಕರಡಪ್ಪನವರು ಮತ್ತು ಜಗಜ್ಯೋತಿ ಬಸವಣ್ಣನವರು, ಎಲೆ ಮಲ್ಲಪ್ಪ ಶೆಟ್ಟರ ಜೀವನದಲ್ಲಿ ಬಾಲ್ಯದಿಂದಲೇ ಆದರ್ಶವಾಗಿ ಕಂಡವರು.ಶೆಟ್ಟಿಯವರು ಶರವಣಮ್ಮ ಅವರನ್ನು ವಿವಾಹವಾದರು, ಅವರಿಗೆ ನಂಜಮ್ಮ ಮತ್ತು ನಿರ್ವಾಣಮ್ಮ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದರು. ಪತ್ನಿ ಶರ್ವಣಮ್ಮ ತೀರಿಕೊಂಡ ನಂತರ ಹೊನ್ನಮ್ಮ ಎಂಬುವರನ್ನು ಮದುವೆಯಾಗಿದ್ದರು.

ಸಾಮಾಜಿಕ ಕಾರ್ಯಗಳು

ಬೆಂಗಳೂರಿನ ಕೆರೆ ಆಸ್ಪತ್ರೆ ರಸ್ತೆ ಗಂಜಿ ಕೇಂದ್ರ ವಿದ್ಯಾರ್ಥಿ ವಸತಿ ನಿಲಯ ಹೀಗೆ ತಮ್ಮನ್ನು ಸಂಪೂರ್ಣ ಸಾಮಾಜಿಕ ಕಾರ್ಯಕ್ಕೆ ತೊಡಗಿಸಿಕೊಂಡವರು ದಿವಾನ ರಾವ್ ಬಹದ್ದೂರ ಎಲೆ ಮಲ್ಲಪ್ಪ ಶೆಟ್ಟರು

1876-1878ರಲ್ಲಿ ದೊಡ್ಡ ಬರಗಾಲ ಎಂದೇ ಕುಖ್ಯಾತವಾದ ಮಹಾ ಕ್ಷಾಮ ಆವರಿಸಿತು. ಆ ಸಮಯದಲ್ಲಿ ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳು ಭೀಕರ ಬರಗಾಲದಿಂದ ಬಳಲಿದವು. ಕೆರೆಗಳು ಮತ್ತು ಕೊಳಗಳು ಬತ್ತಿಹೋದವು. ಬ್ರಿಟಿಷ್ ಸರ್ಕಾರ ಮತ್ತು ಮೈಸೂರು ಸಾಮ್ರಾಜ್ಯವು ಸವಾಲನ್ನು ಎದುರಿಸಲು ಎಲ್ಲಾ ಪ್ರಯತ್ನಗಳನ್ನು ಮಾಡಿತು. ತೊಂದರೆಗೊಳಗಾದ ನಿವಾಸಿಗಳಿಗೆ ನೀರು ಒದಗಿಸುವ ಸಲುವಾಗಿ, ಎಲೆ ಮಲ್ಲಪ್ಪ ಶೆಟ್ಟಿಯವರು ತಮ್ಮ ಸಂಪತ್ತಿನ ಬಹುಭಾಗವನ್ನು ಎರಡು ವರ್ಷಗಳ ಕಾಲ, ದಿನನಿತ್ಯವೂ ಅನ್ನ ಮತ್ತು ಗಂಜಿ ವ್ಯವಸ್ಥೆ ಮಾಡಿದರು. ಬೃಹತ್ ಕೆರೆಯ ನಿರ್ಮಾಣಕ್ಕಾಗಿ ಉದಾರವಾಗಿ ದಾನ ಮಾಡಿದರು, ಈಗ ಅದನ್ನು ಎಲೆ ಮಲ್ಲಪ್ಪ ಶೆಟ್ಟಿ ಕೆರೆ ಎಂದು ಕರೆಯಲಾಗುತ್ತದೆ. ತೀವ್ರ ಬರದ ಪರಿಣಾಮ ಸ್ಥಳೀಯ ರೈತರು ಆಹಾರದ ಕೊರತೆಯಿಂದ ಬಳಲುತ್ತಿದ್ದರು, ಮಲ್ಲಪ್ಪ ಶೆಟ್ಟರು ಅಂತಹ ಜನರನ್ನು ದಿನಗೂಲಿ ಕಾರ್ಮಿಕರನ್ನಾಗಿ ಬಳಸಿಕೊಂಡು ಆರ್ಥಿಕ ನೆರವು ನೀಡುವ ಮೂಲಕ, ಅಂದಿನ ವೀರನ ಹಳ್ಳಿ ಬಳಿ ಕೆರೆಯನ್ನು ನಿರ್ಮಿಸಿದರು. ಅಂದಿನ ವೀರನಹಳ್ಳಿ ಇಂದು ಆವಲಹಳ್ಳಿ ಎಂದು ಕರೆಯಲ್ಪಡುತ್ತದೆ. 1940 ರಿಂದ 2 ದಶಕಗಳ ಕಾಲ ಬೆಂಗಳೂರು ನಗರಕ್ಕೆ ಈ ಕೆರೆಯಿಂದಲೇ ನೀರು ಸರಬರಾಜು ಮಾಡಲಾಗುತ್ತಿತ್ತು. 260 ಎಕರೆ ವಿಸ್ತೀರ್ಣದ, ಎಲೆ ಮಲ್ಲಪ್ಪ ಶೆಟ್ಟಿ ಕೆರೆ ಬೆಂಗಳೂರಿನ ದೊಡ್ಡ ಕೆರೆಗಳಲ್ಲಿ ಒಂದಾಗಿದೆ.

ಕೆರೆ ನಿರ್ಮಾಣದ ಮುಕ್ತಾಯದ ನಂತರ, 1877ರ ಜನವರಿ ಒಂದರಂದು ಬ್ರಿಟಿಷ್ ಸರ್ಕಾರ ಮಲ್ಲಪ್ಪ ಶೆಟ್ಟರಿಗೆ ರಾವ್ ಬಹದ್ದೂರ್ ಎಂಬ ಬಿರುದನ್ನು ನೀಡಿ ಪೌರ ಸನ್ಮಾನ ಮಾಡಿತು.1880 ರಲ್ಲಿ, ಹೆರಿಗೆಯ ಸಮಯದಲ್ಲಿ ಕೆರೆಯ ನಿರ್ಮಾಣ ಕೆಲಸಗಾರರೊಬ್ಬರು ಮರಣ ಹೊಂದಿದ ನಂತರ, ಬೆಂಗಳೂರಿನಲ್ಲಿ ಹೆರಿಗೆ ಆಸ್ಪತ್ರೆ ಇಲ್ಲದ ಕಾಲದಲ್ಲಿ ಬೆಂಗಳೂರಿನ ಸುತ್ತಮುತ್ತಲಿನ ಪ್ರದೇಶಗಳ ಮಹಿಳೆಯರಿಗೆ ಸಹಾಯ ಮಾಡಲು ಸುಸಜ್ಜಿತ ಹೆರಿಗೆ ಆಸ್ಪತ್ರೆಯನ್ನು ಸ್ಥಾಪಿಸಲು ಶೆಟ್ಟರು ನಿರ್ಧರಿಸಿದರು. ಎಲೆ ಮಲ್ಲಪ್ಪ ಶೆಟ್ಟಿಯವರ 35,000 ಆರ್ಥಿಕ ನೆರವಿನ ಮೂಲಕ ಬೆಂಗಳೂರಿನ ಮೊದಲ ಸರ್ಕಾರಿ ಹೆರಿಗೆ ಆಸ್ಪತ್ರೆಯನ್ನು 90 ಹಾಸಿಗೆಗಳೊಂದಿಗೆ ಸಿನೋಟಾಫ್ ರಸ್ತೆಯಲ್ಲಿ (ಸಧ್ಯದ ನೃಪತುಂಗ ರಸ್ತೆಯಲ್ಲಿರುವ ಈಗಿನ ಐಜಿಪಿ ಕಚೇರಿ ಸ್ಥಳದಲ್ಲಿ) ಸ್ಥಾಪಿಸಲಾಯಿತು. ಈ ಆಸ್ಪತ್ರೆಯನ್ನು ಎಲೆ ಮಲ್ಲಪ್ಪ ಶೆಟ್ಟಿ ಹೆರಿಗೆ ಆಸ್ಪತ್ರೆ ಎಂದು ಕರೆಯಲಾಗುತ್ತಿತ್ತು, 1935 ರಲ್ಲಿ ಈ ಆಸ್ಪತ್ರೆಯನ್ನು ಸ್ಥಳಾಂತರಿಸಲಾಯಿತು ಮತ್ತು ಪ್ರಸ್ತುತ ವಾಣಿ ವಿಲಾಸ ಆಸ್ಪತ್ರೆಯೊಂದಿಗೆ ವಿಲೀನಗೊಳಿಸಲಾಯಿತು.

ಮಲ್ಲಪ್ಪ ಶೆಟ್ಟರು ಕೋಲಾರ ಜಿಲ್ಲೆಯ ಬಂಗಾರಪೇಟೆಯಲ್ಲಿ 40,000 ವೆಚ್ಚದಲ್ಲಿ ಧರ್ಮಛತ್ರ ಮತ್ತು ಬಡ ವಿದ್ಯಾರ್ಥಿಗಳಿಗೆ ಉಚಿತ ಪ್ರಸಾದ ನಿಲಯ ಇವುಗಳನ್ನು ಕಟ್ಟಿಸಿದರು. ಇಂದಿಗೂ ಈ ಎರಡು ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಮಲ್ಲಪ್ಪ ಶೆಟ್ಟರು ಸಾಹಿತ್ಯ ಪ್ರೇಮಿ ಆಗಿದ್ದರು. ಗಮಕ ಕಲಾವಿದ ಮತ್ತು ಅಭಿನವ ಕಾಳಿದಾಸ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಬಸವಪ್ಪ ಶಾಸ್ತ್ರಿಗಳನ್ನು ಪ್ರೋತ್ಸಾಹಿಸಿ ಅವರಿಂದ ಕಾವ್ಯ ವಾಚನ ಕಮ್ಮಟಗಳನ್ನು ನಡೆಸುತ್ತಿದ್ದರು.

ಬೆಂಗಳೂರಿನ ಪುರಾತನ ದೇಗುಲಗಳಾದ ಬಸವನಗುಡಿಯ ದೊಡ್ಡ ಬಸವೇಶ್ವರ
ಗವಿಪುರಂ ಗುಡ್ಡ ಹಳ್ಳಿಯ
ಗವಿ ಗಂಗಾಧರೇಶ್ವರ,
ಪ್ರಳಯಕಾಲ ರುದ್ರೇಶ್ವರ ದೇವಾಲಯ ಬೆಳ್ಳಿ ಬಸವೇಶ್ವರ ದೇವಸ್ಥಾನ ಹಲಸೂರು ಸೋಮೇಶ್ವರ ದೇವಸ್ಥಾನ ಈ ದೇವಾಲಯಗಳ ಜೀವನೋದ್ಧಾರಕ್ಕೆ ಧನ ಸಹಾಯ ಮಾಡಿದರು.ಶೆಟ್ಟರು 1798ರಿಂದ ಮಲ್ಲೇಶ್ವರದ ಕಾಡು ಮಲ್ಲೇಶ್ವರ ದೇಗುಲದ ಜೀರ್ಣೋದ್ಧಾರಕ್ಕೆ ನೀಡಿ ಗರ್ಭಗುಡಿ ಮತ್ತು ಕಲ್ಯಾಣಿಯನ್ನು ಕಟ್ಟಿಸಿದರು. ದೇವಾಲಯದ ಮುಂಭಾಗದಲ್ಲಿ ಕಲ್ಲಿನ ಸೋಪಾನಗಳಿಂದ ಅಲಂಕೃತವಾದ ಕೊಳದಲ್ಲಿ ವೃಷಭದ ಮೂರ್ತಿಯನ್ನು ಸ್ಥಾಪಿಸಿದರು ಈ ವೃಷಭದ ಬಾಯಿಂದ ತೀರ್ಥವು ಹೊರಬರುವುದನ್ನು ಇಂದಿಗೂ ಕಾಣಬಹುದು

ಶ್ರೀ ದಕ್ಷಿಣಮುಖ ನಂದಿ ತೀರ್ಥ ಕಲ್ಯಾಣಿ ಕ್ಷೇತ್ರ, ಮಲ್ಲೇಶ್ವರಂ, ಬೆಂಗಳೂರು, ಕಾಡು ಮಲ್ಲೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯವು ಮಲ್ಲಪ್ಪ ಶೆಟ್ಟರ ನಿಧನದ ನಂತರ ಸಂಪೂರ್ಣವಾಯಿತು

ದಾಸೋಹ ಮತ್ತು ಕೊಡುಗೈ ದೊರೆ ದಾನಿ ಎನಿಸಿಕೊಂಡ ಮಲ್ಲಪ್ಪ ಶೆಟ್ಟರು ತಾವು ಕೊನೆಯ ಗಳಿಗೆಯಲ್ಲಿ ತಮಗೆ ಯಾರಾದರೂ ಆಶ್ರಯ ಸಹಾಯ ಸಹಕಾರ ಕೇಳಿಕೊಂಡು ಬಂದರೆ ಕೈಯಲ್ಲಿದ್ದ ವಸ್ತು ಒಡವೆ ಚಿನ್ನ ಬೆಳ್ಳಿಯ ತಟ್ಟೆ ಹೀಗೆ ಸಹಾಯ ಮಾಡುತ್ತಿದ್ದರು.ಎಲ್ಲಾ ವರ್ಗಕ್ಕೂ ಸಹಾಯ ಮಾಡಿದ ಧೀಮಂತ ವ್ಯಕ್ತಿಯ ಕೊನೆಯ ದಿನಗಳು ಆರೋಗ್ಯದ ಬಗ್ಗೆ ಗಮನ ನೀಡದೆ ಮನೆಯ ಕುಟುಂಬದ ಸದಸ್ಯರ ಆಶ್ರಯಕೆ ಅವಲಂಬಿತರಾದರು .ಬೆಂಗಳೂರಿನಲ್ಲಿ ಐದಾರು ಕೆರೆಗಳನ್ನು ಕಟ್ಟಿ ಅವುಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಿದರು.

ಎಲೆ ಮಲ್ಲಪ್ಪ ಶೆಟ್ಟರು ಎಂಬ ಕರುಣಾಮಯಿ

ಅಂದೊಮ್ಮೆ ಸಂಜೆ ಆರರ ಸುಮಾರಿಗೆ ಕೆರೆಯ ಕಾರ್ಯ ವೀಕ್ಷಿಸಿ ಮನೆಗೆ ತಮ್ಮ ರಥದಲ್ಲಿ ಹೋಗ ಬೇಕಾದ ಸಂದರ್ಭದಲ್ಲಿ ಒಬ್ಬ ತುಂಬು ಗರ್ಭಿಣಿಯು ರಸ್ತೆಯಲ್ಲಿಯೇ ಬಿದ್ದು ಒದ್ದಾಡುವಾಗ ತುಂಬು ಗರ್ಭಿಣಿಯನ್ನು ಆಸ್ಪತ್ರೆಗೆ ಒಯ್ದು ಸೇರಿಸಿದರು ಹೆರಿಗೆಯಾಯಿತು ತಾಯಿ ಸತ್ತಳು ಮಗು ಬದುಕಿ ಉಳಿಯಿತು. ಅಂದೇ ಬೆಂಗಳೂರಿಗೆ ಒಂದು ಸುಸಜ್ಜಿತ ಹೆರಿಗೆಯ ಆಸ್ಪತ್ರೆಯ ಕಟ್ಟಡ ನಿರ್ಮಾಣ ಮಾಡುವ ಅಗತ್ಯದ ಬಗ್ಗೆ ಮನವರಿಕೆ ಮಾಡಿಕೊಂಡು ಲಿಂಗಾಯತ ಸಮುದಾಯದ ಎಲ್ಲಾ ಶ್ರೀಮಂತ ವ್ಯಾಪಾರಿಗಳನ್ನು ಸಭೆಗೆ ಬರಲು ಸೂಚಿಸಿದರು ಎಲ್ಲಾ ವ್ಯಾಪಾರಸ್ಥರು ತಮ್ಮ ಕೈಲಾದ ಆರ್ಥಿಕ ಸಹಾಯ ಮಾಡುವುದಾಗಿ ಮಾತು ಕೊಟ್ಟರು. ಆಗ ನೆರೆದ ಎಲ್ಲಾ ಲಿಂಗಾಯತ ಶ್ರೀಮಂತ ಮುಖಂಡರು ಎಲೆ ಮಲ್ಲಪ್ಪ ಶೆಟ್ಟರು ಏನು ಕೊಡುತ್ತಾರೆ ಎಂದು ಕುತೂಹಲದಿಂದ ನೋಡುತ್ತಿದ್ದರು. ಆಗ ಶ್ರೀ ಎಲೆ ಮಲ್ಲಪ್ಪ ಶೆಟ್ಟರು ಬಿಳಿ ಕಾಗದ ತರಿಸಿ ಒಂದೊಂದು ಸೊನ್ನೆ ಹಾಕುತ್ತ ಹೊರಟರು. ಎಲ್ಲರಿಗೂ ಮುಜುಗರ ಮತ್ತು ಆಸಕ್ತಿ ಹೀಗೆ ಸೊನ್ನೆ ಹಾಕುತ್ತಾ ಹೋಗುವಾಗ ಮೂವತ್ತೈದು ಸೊನ್ನೆ ಹಾಕಿದ  ಎಲೆ ಮಲ್ಲಪ್ಪ ಶೆಟ್ಟರ ಮುನಿಮ್ ಅಂದರೆ ಮ್ಯಾನೇಜರ್ ಅಥವಾ
ಕಾರಭಾರಿ ಇದನ್ನು ನೋಡಿ ಓಡಿ ಬಂದು ಎಲೆ ಮಲ್ಲಪ್ಪ ಶೆಟ್ಟರ ಕೈ ಹಿಡಿದು ನಿಲ್ಲಿಸಿದರು. ಆಗ  ಎಲೆ ಮಲ್ಲಪ್ಪಶೆಟ್ಟರು ಒಂದೊಂದು ಸೊನ್ನೆಗೆ ಒಂದೊಂದು ಬೆಳ್ಳಿಯ ಸಾವಿರ ರೂಪಾಯಿಯಂತೆ ಒಟ್ಟು ಮೂವತ್ತೈದು ಸಾವಿರ ಹಣವನ್ನು ಕೊಟ್ಟು ಕೆರೆಯ ನಿರ್ಮಾಣದ ಕೆಲಸಗಾರರಿಗೆ ಅನ್ನ ವಸತಿ ಬಟ್ಟೆ ಕೊಡುತ್ತಿದ್ದರು.

ಬೆಂಗಳೂರಿನ ಭೀಕರ ಬರಗಾಲದ ಸಮಯದಲ್ಲಿ ಇಡೀ ಬೆಂಗಳೂರಿಗೆ ಅಂದರೆ ಅವತ್ತಿನ ಜನಸಂಖ್ಯೆ ಅಂದಾಜು ಎರಡು ಲಕ್ಷವಾಗಿತ್ತು ಅದರಲ್ಲಿ ಪ್ರತಿಶತ ಎಪ್ಪತ್ತೈದು ಜನರಿಗೆ ಎರಡು ವರುಷಗಳವರೆಗೆ ಎರಡೂ ಹೊತ್ತು ಅನ್ನ ನೀರು ಕೊಟ್ಟು ಸಲುಹಿದ್ದು ಒಂದು ಪವಾಡವೆ ಎಂದೆನ್ನ ಬಹುದು. ಇಂತಹ ಅಪ್ಪಟ ದಾಸೋಹ ಪ್ರೇಮಿ ಲಿಂಗಾಯತ ಸಮಾಜದಲ್ಲಿ ಕಂಡು ಬರುವುದು ತುಂಬಾ ವಿರಳ.

ಗೌರವಗಳು
ಆಗಿನ ಬ್ರಿಟೀಷ್ ರಾಣಿ ವಿಕ್ಟೋರಿಯಾ, 1877 ಜನವರಿ ಒಂದರಂದು, ಎಲೆ ಮಲ್ಲಪ್ಪ ಶೆಟ್ಟಿಯವರಿಗೆ “ರಾವ್ ಬಹದ್ದೂರ್” ಎಂಬ ಬಿರುದುನ್ನು ನೀಡಿದರು.
ಬಂಗಾರಪೇಟೆಯ (ಆಗಿನ ಬೌರಿಂಗ್‌ಪೇಟೆ) ರಸ್ತೆಯೊಂದಕ್ಕೆ ಎಲೆ ಮಲ್ಲಪ್ಪ ಶೆಟ್ಟಿಯವರ ಹೆಸರಿಡಲಾಗಿತ್ತು

ನಿಧನ :
ಎಲೆ ಮಲ್ಲಪ್ಪ ಶೆಟ್ಟಿಯವರು 1887 ರ ಸರ್ವಜಿತ ಸಂವತ್ಸರದ ಜೇಷ್ಠ ತದಿಗೆ ದಿನ, ತಮ್ಮ 72 ನೇ ವಯಸ್ಸಿನಲ್ಲಿ ನಿಧನರಾದರು.

ಲಿಂಗಾಯತ ಸಮಾಜದ ಅಪ್ರತಿಮ ದಾಸೋಹಿಗಳು ಬಸವ ತತ್ವ ಚಿಂತಕರು ಆಧುನಿಕ ಬೆಂಗಳೂರಿನ ನವ ನಿರ್ಮಾಪಕರು ರಾವ್ ಬಹದ್ದೂರ ಎಲೆ ಮಲ್ಲಪ್ಪಶೆಟ್ಟರು ಒಂದು ದಿವ್ಯ ವ್ಯಕ್ತಿತ್ವ ಹೊಂದಿದ ಆದರ್ಶಪ್ರಾಯರು

 

ಡಾ.ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ

LEAVE A REPLY

Please enter your comment!
Please enter your name here

Latest News

ಅರಭಾವಿಯಲ್ಲಿ ವಿಶ್ವ ಮಣ್ಣು ದಿನಾಚರಣೆ

ಕಿತ್ತೂರ ರಾಣಿ ಚನ್ನಮ್ಮ ತೋಟಗಾರಿಕೆ ಮಹಾವಿದ್ಯಾಲಯ, ಅರಭಾವಿಯಲ್ಲಿ ದಿನಾಂಕ: ೦೫.೧೨.೨೦೨೫ ರಂದು ವಿಶ್ವ ಮಣ್ಣು ದಿನಾಚರಣೆಯನ್ನು ರಾಷ್ಟ್ರೀಯ ಸೇವಾ ಯೋಜನೆ ಹಾಗೂ ತೋಟಗಾರಿಕೆ ವಿಸ್ತರಣಾ ಮತ್ತು...

More Articles Like This

error: Content is protected !!
Join WhatsApp Group