ಲೇಖನ : ಆತ್ಮ ಪ್ರಶಂಸೆ

Must Read

 

‘ಹೊತ್ತಿಗೊದಗದ ಮಾತು|
ಹತ್ತುಸಾವಿರ ವ್ಯರ್ಥ|
ಕತ್ತೆ ಕೂಗಿದರೆ ಫಲವುಂಟು|
ಬಹುಮಾತು|
ಕತ್ತೆಗೂ ಕಷ್ಟ ಸರ್ವಜ್ಞ|’

ಈ ಮೇಲಿನ ಸರ್ವಜ್ಞನ ವಚನ ಎಷ್ಟೊಂದು ಅರ್ಥಪೂರ್ಣ. ಮಾತಿಲ್ಲದೆ ಯಾರ ಜೀವನ ನಡೆಯುವುದು ಬಲು ಕಷ್ಟ. ನಮ್ಮ ದೈನಂದಿನ ಬದುಕಿನ ವ್ಯವಸ್ಥೆ ಸುಗಮವಾಗಿ ಮಾಡಿಕೊಳ್ಳಲು ನಾವು ಮಾಡಿಕೊಂಡಿರುವ ಯಾದೃಚ್ಛಿಕ ಧ್ವನಿ ಸಂಕೇತದ ವ್ಯವಸ್ಥೆ ಈ ಮಾತು.
‘ಮಾತು ಹೇಗಿದ್ದರೆ ಚೆನ್ನಾಗಿರುತ್ತದೆ’ ಎಂಬುದು ಸರ್ವಜ್ಞನ ವಚನದಿಂದ ತಿಳಿಯುತ್ತದೆ. ಅದೇ ಮಾತು ಅತಿಯಾದರೆ ಕತ್ತೆಗೂ ಕಷ್ಟ ಎಂಬ ಉಕ್ತಿ ಮಾನವ ಜನ್ಮದ ಪ್ರತಿಯೊಬ್ಬನಿಗೂ ಅನ್ವಯ’. ನಮ್ಮತನ ಕುರಿತು ಮತ್ತೊಬ್ಬರ ಮುಂದೆ ಹೇಳುವುದು. ಇನ್ನೊಬ್ಬರಿಂದ ನಮ್ಮನ್ನು ಹೊಗಳಿಸಿಕೊಳ್ಳುವುದು ‘ಆತ್ಮಪ್ರಶಂಸೆ’ ಇದು ಸರಿಯೇ?
ಸ್ವ ಪ್ರಶಂಸೆ ಮನುಷ್ಯನ ಸಹಜ ಪ್ರವೃತ್ತಿಯಾದರೂ ಕೂಡ ಇದು ಅತಿಯಾದರೆ ಇತರರ ನಿಂದನೆಗೆ ಗುರಿಯಾಗುತ್ತದೆ.

‘ಕೋಲ್ಟನ್’ ಎಂಬುವವರು ‘ಹೊಗಳಿಕೆ ವಿಷ ಹಾಕಿದ ಬಹುಮಾನ’ ಎಂದಿದ್ದಾರೆ. ಅಂದರೆ ಇನ್ನೊಬ್ಬರು ನಿಮ್ಮನ್ನು ಹೊಗಳುವ ದೃಷ್ಠಿಕೋನ ಈ ಮಾತಿಗೆ ಅನ್ವಯಿಸುತ್ತದೆ. ಇದು ಅವರ ಸ್ವಾರ್ಥವೂ ಇರಬಹುದು ಅಥವಾ ನಿಸ್ವಾರ್ಥವೂ ಇರಬಹುದು. ಅವರವರ ಭಾವನೆಗಳಿಗೆ ಈ ಮಾತು ಅನ್ವಯ.
ಈ ಆತ್ಮಪ್ರಶಂಸೆ ಅತಿಯಾದರೆ ಮನುಷ್ಯ ತನ್ನತನ ಕಳೆದುಕೊಳ್ಳುತ್ತಾನೆ. ಅವನು ಏನನ್ನು ಮಾಡುತ್ತಿರುವನೋ ಅದನ್ನು ಮರೆತು ಹೊಗಳಿಕೆಯ ಕೇಂದ್ರವಾಗುತ್ತಾನೆ. ತನ್ನನ್ನು ‘ಶ್ರೇಷ್ಠ’ ಎಂದು ಭಾವಿಸುತ್ತಾನೆ. ‘ನಾನು’ ಎಂಬ ‘ಅಹಂ’ ಆತನಲ್ಲಿ ಬರುವುದು. ಹೀಗಾಗಿ ಇದು ಸರಿಯಲ್ಲ.
ಬಸವಣ್ಣನವರು ತಮ್ಮ ವಚನದಲ್ಲಿ ಹೀಗೆ ಹೇಳಿದ್ದಾರೆ.

ತನ್ನ ಬಣ್ಣಿಸಬೇಡ|
ಇದಿರ ಹಳಿಯಲು ಬೇಡ|
ಅನ್ಯರಿಗೆ ಅಸಹ್ಯ ಪಡಬೇಡ|
ಇದೇ ಅಂತರಂಗ ಶುದ್ಧಿ|
ಇದೇ ಬಹಿರಂಗ ಶುದ್ಧಿ|
 ಇದೇ ನಮ್ಮ ಕೂಡಲ ಸಂಗನೊಲಿಸುವ ಪರಿ ||
ಈ ವಚನ ಎಷ್ಟೊಂದು ಪ್ರಸ್ತುತ. ಹೊಗಳಿ, ಹೊಗಳಿ ಹೊನ್ನಶೂಲಕ್ಕೇರಿಸಿದಂತೆ ಎನ್ನುವ ಬಸವಣ್ಣನವರು “ಹೊಗಳಿಕೆ” ಬೇಡ ಎಂದಿರುವರು.

ಮಹಾಭಾರತದಲ್ಲಿ ಉತ್ತರ ಕುಮಾರನು ಬೃಹನ್ನಳೆಯ ಎದುರು ತನ್ನ ಪೌರುಷವನ್ನೆಲ್ಲ ಹೇಳುವನು. ಕೊನೆಗೆ ಯುದ್ಧ ಭೂಮಿಗೆ ಹೋದಾಗ ಹೇಡಿಯಂತೆ ಓಡಿ ಹೋಗುವನು ಇಲ್ಲಿ ಕೂಡ ‘ಆತ್ಮಪ್ರಶಂಸೆ’ ಅತಿಯಾದಾಗ ಅದರ ಪರಿಣಾಮ ಏನಾಗುತ್ತದೆ ಎಂಬುದು ಕಂಡು ಬಂದಿದೆ.

ಚಿಕ್ಕವರಿಂದ ಹಿಡಿದು ಮುದುಕರವರೆಗೆ ಜನ ‘ನಾನು’ ‘ನನ್ನದು’ ಎಂಬ ಮಾತುಗಳನ್ನಾಡುವುದು ಸಾಮಾನ್ಯ. ತನ್ನ ಬಗೆಗೆ ತನ್ನದೇ ಕಲ್ಪನೆ ತನ್ನನ್ನು ಕುರಿತು ತಾನೇ ಬೆಳೆಸಿಕೊಂಡ ಅಹಮಿಕೆ. ತನ್ನ ದೇಹವನ್ನು ಇತರ ವಸ್ತು ಮತ್ತು ವ್ಯಕ್ತಿಗಳಿಂದ ಬೇರೆಯಾಗಿ ಗುರುತಿಸುವುದು, ತನ್ನ ಕ್ರಿಯೆಗಳನ್ನು ಬೇರೆಯವರ ಕ್ರಿಯೆಗಳಿಂದ ಬೇರೆಯಾಗಿ ಕಾಣುವುದು ಇವು ಎಷ್ಟೋ ಸಲ ಆತ್ಮಪ್ರಶಂಸೆಗೆ ಗುರಿ ಮಾಡುತ್ತವೆ. ಕಾರಣ ಇದು ವ್ಯಕ್ತಿತ್ವವನ್ನು ರೂಪಿಸಬೇಕೇ ವಿನಃ ವ್ಯಕ್ತಿತ್ವವನ್ನು ಅಧಃಪತನಕ್ಕೆ ತಳ್ಳುವ ಮಟ್ಟಕ್ಕೆ ಇರಬಾರದು.

ಇಂದಿನ ದಿನಗಳಲ್ಲಿ ವ್ಯಕ್ತಿ ಹೊಗಳಿಕೆಯ ಬೆನ್ನು ಹತ್ತುತ್ತಿರುವುದು ವ್ಯಕ್ತಿತ್ವದ ಅಧಃಪತನದ ಸೂಚಕವಾಗಿದೆ., ತನ್ನ ತಾ ತಿಳಿದು ಬದುಕುವ ಪ್ರಕ್ರಿಯೆ ತುಂಬ ವಿರಳವಾಗುತ್ತಿದೆ. ಆತ್ಮ ಪ್ರಶಂಸೆ ಎಂದಿಗೂ ಉತ್ತಮವಾದುದನ್ನು ಮಾಡದು.ತನ್ನಷ್ಟಕ್ಕೆ ತಾನು ಪ್ರಾಮಾಣಿಕವಾಗಿ ಬದುಕಿದರೆ ಜನ ಆ ವ್ಯಕ್ತಿಯ ವ್ಯಕ್ತಿತ್ವಕ್ಕೆ ಯಾವಾಗಲೂ ಮಹತ್ವ ಕೊಟ್ಟೇ ಕೊಡುವರು.
ಆತ್ಮಪ್ರಶಂಸೆ ಇಂಥ ಸಂದರ್ಭ ತನ್ನಿಂದ ತಾನೇ ಸಿಗುವುದು. ಅದು ಮುಖಸ್ಥುತಿ ಆಗದೇ ಪ್ರಾಮಾಣಿಕ ಮಾತುಗಳ ಮೂಲಕ ಹೊರಹೊಮ್ಮಿರುತ್ತದೆ. ಭಾರತದ ಪುರಾಣ ಇತಿಹಾಸಗಳನ್ನು ಗಮನಿಸಿದಾಗ ಇಂಥ ವಿಚಾರಗಳಿಗೆ ಸಂಬಂಧಿಸಿದಂತೆ ಅನೇಕ ಘಟನೆಗಳನ್ನು ನಾವು ಕಾಣುತ್ತೇವೆ.ರಾಜ ಮಹಾರಾಜರ ಕಾಲದಲ್ಲಂತೂ “ಬಹುಪರಾಕ್” ಎಂದು ಹೊಗಳಿಸಿಕೊಳ್ಳುವ “ರಾಜಾಧಿರಾಜ,ಮಹಾಪ್ರತಾಪ.” ಹೀಗೆ ಬಿರುದಾವಳಿಗಳ ಮೂಲಕ ಹೊಗಳಿಕೆಗಳು ಜರುಗುತ್ತಿದ್ದವು.ಅದಕ್ಕೆಂದೇ ಅರಮನೆಯಲ್ಲಿ ರಾಜನ ಆಗಮನವಾಗುವ ಸಂದರ್ಭದಲ್ಲಿ ಹೂಮಳೆಗರೆಯುತ್ತ ರಾಜನನ್ನು ಹೊಗಳುವ ಪರಂಪರೆ ಇತ್ತು. ಇಂದು ಅದನ್ನೇ ತಮ್ಮದೇ ಆದ ಶೈಲಿಯಲ್ಲಿ ಕೆಲವರು ಮಾಡುತ್ತಿರುವುದು, ಆಧುನಿಕ ರಾಜರಾಗುತ್ತಿರುವುದು ಸಾಕ್ಷಿ. ತಮ್ಮನ್ನು ಹೊಗಳಿಸಿಕೊಳ್ಳಲೆಂದೇ ಹಲವು ವಿಚಿತ್ರ ಕಾರ್ಯಗಳಲ್ಲಿ ತೊಡಗಿದ್ದು ಕಂಡು ಬರುತ್ತಿದೆ.ಜನರು ಜಯಕಾರ ಹಾಕಲೆಂದು ಬಸ್,ಲಾರಿಗಳಲ್ಲಿ.ವಿವಿಧ ವಾಹನಗಳಲ್ಲಿ ಕರೆತಂದು ತಮ್ಮ ಪ್ರತಿಷ್ಟೆಯನ್ನು ಹೆಚ್ಚಿಸಿಕೊಳ್ಳುವವರು ಇಂದಿನ ದಿನಗಳಲ್ಲಿ ಹೆಚ್ಚಿದ್ದಾರೆ.ಅದು ಶಾಶ್ವತವಲ್ಲ ತಮ್ಮ ಕರ್ಮಾನುಸಾರ ಜಯಕಾರ ಪಡೆದರೆ ಜೀವನ ಸಾರ್ಥಕ.ಅದರ ಹಿಂದಿನ ಮರ್ಮ ಅರಿತರೆ ತಾವು ಪ್ರಾಮಾಣಿಕವಾಗಿ ಬದುಕಿದರೆ ಅಂತಹ ಬಹು ಪರಾಕ್ ಅವಶ್ಯಕತೆ ಇಲ್ಲ ಎಂಬುದನ್ನು ಮನಗಾಣಬಹುದು. ಇಲ್ಲವಾದರೆ ಅದರಿಂದ ಬೇರೆಯವರಿಗೆ ಕಿರಿಕಿರಿಯಾಗುವುದಷ್ಟೇ ಅಲ್ಲ ಹಲವರು ತಮ್ಮ ಬೇಳೆ ಬೇಯಿಸಿಕೊಳ್ಳಲು ಕೂಡ ಅನುಕೂಲವಾಗುವುದು.

ನೆನಪಿಡಿ ನಿಮ್ಮ ಆತ್ಮ ವಿಶಾಲವಾಗಿರುತ್ತದೆ. ನಿಮ್ಮೊಳಗೆ ವಿಶ್ವವೇ ಅಡಗಿರುತ್ತದೆ. ಏ ಇನ್ನು ಸಾಕು..ಔದಾರ್ಯ, ಶ್ರೇಷ್ಠತೆ, ದೈವಿಕ ಪ್ರೀತಿಯನ್ನು ತುಂಬಿಕೊಂಡು ಸಂತೃಪ್ತನಾಗು ಎಂದು ನಿಮ್ಮ ಆತ್ಮಕ್ಕೆ ಹೇಳಿಕೊಳ್ಳಿ. ನೀನು ಶಾಶ್ವತ, ನೀನು ಎಲ್ಲರಲ್ಲೂ ಇರುತ್ತೀಯಾ, ನೀನು ಎಲ್ಲರನ್ನೂ ಪ್ರೀತಿಸುತ್ತೀಯಾ, ನೀನು ಜ್ಞಾನದ ಸಾಗರ, ನೀನು ಸೌಹಾರ್ದದ ಖನಿ.. ಹೀಗೆ ಆತ್ಮದ ಹತ್ತು ಗುಣಗಳನ್ನು ದಿನವೂ ಹೇಳಿಕೊಳ್ಳಿ ಅಥವಾ ಬರೆಯಿರಿ.

ನಿಮಗೆ ಸಿಕ್ಕಿರುವ ಸೌಲಭ್ಯ, ಅವಕಾಶಗಳ ಬಗ್ಗೆ ಯೋಚಿಸಿ, ಸಂತೃಪ್ತಿಯಿಂದ ನಿಮ್ಮ ಕುಟುಂಬ ಸದಸ್ಯರು, ಸಹೋದ್ಯೋಗಿಗಳು, ನಿಮ್ಮ ಬಾಸ್‌ಗೆ ಕೃತಜ್ಞತೆ ಸಲ್ಲಿಸಿ. ವೃತ್ತಿಯಲ್ಲಿ ಯಶಸ್ಸು ಗಳಿಸಿರುವ ನಿಮ್ಮ ಸಹೋದ್ಯೋಗಿಗೂ ನಿಮ್ಮ ಸ್ನೇಹ, ಬೆಂಬಲ ಹಾಗೂ ಪ್ರೀತಿಯ ಅಗತ್ಯವಿರುತ್ತದೆ. ಆತನೂ ಮನುಷ್ಯನಾಗಿರುತ್ತಾನೆ, ನಿರಾಸೆ, ಹತಾಶೆಗಳು ಅವನಲ್ಲೂ ತುಂಬಿರುತ್ತವೆ. ನಿಮ್ಮೊಳಗಿನ ನಿರಾಸೆಯಲ್ಲ ಕರಗಿಹೋಗಲಿ. ನಿಮ್ಮ ಹೃದಯ ಬೆಳಗಲಿ. ನಿಮ್ಮನ್ನು ನೀವು ಸಂಪೂರ್ಣವಾಗಿ ಕ್ಷಮಿಸಿಕೊಳ್ಳಿ. ನಿಮ್ಮನ್ನು ನೀವು ಹಾರೈಸಿಕೊಳ್ಳಿ.


ಡಾ.ವೈ.ಬಿ.ಕಡಕೋಳ
(ಶಿಕ್ಷಕರು)
ಮಾರುತಿ ಬಡಾವಣೆ ಸಿಂದೋಗಿ ಕ್ರಾಸ್.
ಮುನವಳ್ಳಿ-೫೯೧೧೧೭
ಸವದತ್ತಿ ತಾಲೂಕ ಬೆಳಗಾವಿ ಜಿಲ್ಲೆ
೮೯೭೧೧೧೭೪೪೨ ೯೪೪೯೫೧೮೪೦೦

LEAVE A REPLY

Please enter your comment!
Please enter your name here

Latest News

ಅರಭಾವಿಯಲ್ಲಿ ವಿಶ್ವ ಮಣ್ಣು ದಿನಾಚರಣೆ

ಕಿತ್ತೂರ ರಾಣಿ ಚನ್ನಮ್ಮ ತೋಟಗಾರಿಕೆ ಮಹಾವಿದ್ಯಾಲಯ, ಅರಭಾವಿಯಲ್ಲಿ ದಿನಾಂಕ: ೦೫.೧೨.೨೦೨೫ ರಂದು ವಿಶ್ವ ಮಣ್ಣು ದಿನಾಚರಣೆಯನ್ನು ರಾಷ್ಟ್ರೀಯ ಸೇವಾ ಯೋಜನೆ ಹಾಗೂ ತೋಟಗಾರಿಕೆ ವಿಸ್ತರಣಾ ಮತ್ತು...

More Articles Like This

error: Content is protected !!
Join WhatsApp Group