ಗಮಕಗಳ ಗಾರುಡಿಗ ತ್ರಿಪದಿ ಸಾಮ್ರಾಟ  ಗಂಗಪ್ಪಾ ವಾಲಿ

Must Read

ಕನ್ನಡ ಸಾಹಿತ್ಯದಲ್ಲಿ ಸರ್ವಜ್ಞನ ನಂತರ ಅದೇ ಪರಂಪರೆಯಲ್ಲಿ ಸಾಗಿದ ಡಿವಿಜಿ ಮತ್ತು ದಿನಕರ ದೇಸಾಯಿ ಅವರ ಸರಿ ಸಮಾನವಾದ ಬಹು ಎತ್ತರದ ತ್ರಿಪದಿ ಸಾಹಿತ್ಯದ ದಿಗ್ಗಜ ನಮ್ಮವರೇ ಆದ ವಾಲಿ ಗಂಗಪ್ಪನವರು. ಇಂದಿನ ತಲೆಮಾರಿನವರಿಗೆ ಗೊತ್ತಿರದ ಮತ್ತು ಕನ್ನಡಿಗರು ಮರೆತ ಅಪರೂಪದ ಸಾಹಿತಿಗಳು ಗಮಕಿಗಳು.

ಸುಪ್ರಭಾತದ ಸಿರಿಕಂಠದ ಕೋಗಿಲೆ ಎಂದೆಲ್ಲಾ ಪ್ರಸಿದ್ಧಿ ಪಡೆದ ಗಂಗಪ್ಪಾ ವಾಲಿಯವರು ಇವರ ಭಕ್ತಿ ಭಾವ ಬಸವಣ್ಣನವರ ಮೇಲಿನ ಅಗಮ್ಯವಾದ ಪ್ರೀತಿ ಇಂದಿಗೂ ಆದರ್ಶ ಮತ್ತು ಅನುಕರಣೀಯ ‘ಸಾರಜ್ಜ’ ಅಂಕಿತ ನಾಮದಿಂದ ಪ್ರಸಿದ್ಧರಾಗಿರಾಗಿರುವ ಗಂಗಪ್ಪ ವಾಲಿ ನಾದಮಾಧುರ್ಯದ ಗಮಕಿಗಳು. ವೃತ್ತಿಯಿಂದ ವ್ಯಾಪಾರಸ್ಥರು. ಸುಪ್ರಭಾತ ಕವಿಗಳು ಎಂದೇ ಪ್ರಸಿದ್ಧರು. ಅವರಲ್ಲಿನ ಸರಳತೆ ಭಾಷೆಯ ಮೇಲಿನ ಹಿಡಿತ ಸಾಹಿತ್ಯ ಅಧ್ಯಯನ ಅಗಾಧವಾಗಿತ್ತು.

ವರಕವಿ ಡಾ ದತ್ತಾತ್ರೇಯ ರಾಮಚಂದ್ರ ಬೇಂದ್ರೆಯವರು ಗಂಗಪ್ಪ ವಾಲಿ ಅವರನ್ನು ‘ವೃತ್ತಿಯಿಂದ ವ್ಯಾಪಾರಿ, ಶೀಲದಿಂದ ಗೃಹಸ್ಥ, ಹೃದಯದಿಂದ ಕವಿ, ಕಲಾತ್ಮಕತೆಯಿಂದ ಸಹಜ ಗಮಕಿ. ಎಲ್ಲರನ್ನೂ ಸ್ವಾಗತಿಸುವ ಹಸನ್ಮುಖ. ಮಿತಭಾಷಿ, ಎಲ್ಲರಿಗೂ ಕಿವಿ ಕೊಡುತ್ತಾರೆ, ಕೆಲವರಿಗೆ ಮಾತ್ರ ಧ್ವನಿಯನ್ನು ನೀಡುತ್ತಾರೆ. ಕಿನ್ನರ ಕಂಠದ ಕವಿ’ ಎಂದು ವರ್ಣಿಸಿದ್ದಾರೆ. ಇವರನ್ನು ಕವಿ ಕುಲ ತಿಲಕ ಕವಿಗಳ ಗುರು ಕವಿಯ ಕವಿ ಎಂದೆಲ್ಲಾ ಕರೆದದ್ದುಂಟು. ಗಂಗಪ್ಪಾ ವಾಲಿಯವರನ್ನು ತಮ್ಮ ಮನೆಗೆ ಕರೆಯಿಸಿ ಆಗಾಗ ಅವರ ಕಂಚಿನ ಕಂಠದ ಗಮಕಗಳನ್ನು ಕೇಳುತ್ತಿದ್ದರು ಅವರಿಂದ ಸುಪ್ರಭಾತದ ಗೀತೆಗಳನ್ನು ಕೇಳಿ ಆನಂದ ಪಡುತ್ತಿದ್ದರು ಅಲ್ಲದೇ ಗಂಗಪ್ಪ ಇದ್ದರೆ ಇರಬೇಕು ನಿನ್ನಂತಹ ಕವಿ ಮತ್ತು ಗಮಕಿ ಎಂದು ಹೇಳುತ್ತಿದ್ದರು.

ಗಂಗಪ್ಪ ಅವರು 1912 ಮಾರ್ಚ್ 20ರಂದು ಜನಿಸಿದರು. ಅವರ ಪೂರ್ವಜರು ಇಂದಿನ ವಿಜಯಪುರದವರು. ಕಾರಣಾಂತರಗಳಿಂದ ವಿಜಯಪುರ ತೊರೆದು ಹುಬ್ಬಳ್ಳಿಗೆ ಬಂದು ವ್ಯಾಪಾರ ಮಾಡುತ್ತಾ ನೆಲೆಕಂಡುಕೊಂಡರು ವ್ಯಾಪಾರವನ್ನೇ ಆಧರಿಸಿ ಹುಬ್ಬಳ್ಳಿಯಲ್ಲಿ ನೆಲೆ ನಿಂತವರು.

ಇವರ ಮನೆತನದವರು ಶರಣರ ಕಾಲದ ವಚನಗಳನ್ನು ತಾಡೋಲೆಗಳನ್ನು ಸಂಗ್ರಹಿಸುವುದು ಅವುಗಳ ಪ್ರತಿ ಪಾಠ ಮಾಡಲು ಅವರು ತಾಡ ಓಲೆ ಬರೆಯುವ ಕೆಲಸ ಮಾಡುತ್ತಿದ್ದರು. ‘ತಾಡ’ ಲೋಪವಾಗಿ ‘ಓಲೆ’ ನಂತರ ವಾಲಿಯಾಗಿ ಪರಿವರ್ತನೆ ಆಗಿರಬಹುದು. ಆದ್ದರಿಂದ ಅವರನ್ನು ವಾಲಿ ಮನೆತನದವರು ಎಂದೇ ಕರೆಯುತ್ತಾರೆ.

ಬಹು ಚುರುಕಾದ ಬಾಲಕ ಗಂಗಪ್ಪನವರು ತಮ್ಮ ವ್ಯಾಪಾರ ವೃತ್ತಿ ಮತ್ತು ಕಾಯಕಕ್ಕಾಗಿ ಗಂಗಪ್ಪನವರು ಮಾಧ್ಯಮಿಕ ಶಿಕ್ಷಣವನ್ನು ಮೊಟಕುಗೊಳಿಸಿ ವ್ಯಾಪಾರದಲ್ಲಿ ತೊಡಗಿಕೊಂಡರು. ಇವರ ತಂದೆ ವೀರಪ್ಪನವರು ಕಾವ್ಯಾಸಕ್ತರು, ವೇದಾಂತ ಪ್ರಿಯರು, ಸಾಹಿತ್ಯಾಸಕ್ತರು ಆಗಿದ್ದರಿಂದ ಅವರಿಂದ ಬಳುವಳಿಯಾಗಿ ಬಂದ ಎಲ್ಲ ವಿದ್ಯೆಗಳನ್ನು ಶ್ರದ್ಧೆಯಿಂದ ವೃದ್ಧಿಸಿಕೊಂಡರು. ಬೇಂದ್ರೆ, ಡಿ.ವಿ.ಜಿ ಮೊದಲಾದವರ ಅತ್ಯಂತ ಅಚ್ಚು ಮೆಚ್ಚಿನ ಕವಿಗಳಾದರು. ಬಾಲ್ಯದಿಂದ ಒದಗಿಬಂದ ಸಂಗೀತದ ಒಲವು ಮಲ್ಲಿಕಾರ್ಜುನ ಮನಸೂರ ಅವರ ಸಾನ್ನಿಧ್ಯದಿಂದ ಇನ್ನಷ್ಟು ಬಲಿಯುವಂತಾಯಿತು. ಇಂಗ್ಲಿಷ್ ರೊಮ್ಯಾಂಟಿಕ್ ಕವಿಗಳ ಬಿಡಿ ಕವನಗಳಿಗೆ ಇವರ ಮನಸ್ಸು ಸ್ಪಂದಿಸಿತು. ಸಂಗೀತ-ನಾಟಕ ಎಲ್ಲಿಯೇ ಇದ್ದರೂ ಗಂಗಪ್ಪ ವಾಲಿಯವರು ಅಲ್ಲಿರುತ್ತಿದ್ದರು.

ಮನೆಯಲ್ಲಿ ತಾಯಿ ಹಾಡುವ ಜೋಗುಳದ ಪದ, ಸೋದರತ್ತೆ ಹೇಳುತ್ತಿದ್ದ ಜನಪದ ಹಾಡುಗಳು, ತಂದೆ ಹೇಳುತ್ತಿದ್ದ ನಿಜಗುಣ ಶಿವಯೋಗಿಯ ಹಾಗೂ ಸರ್ಪಭೂಷಣರ ಹಾಡುಗಳು ಅವರ ಹೃದಯವನ್ನು ತಿದ್ದಿ, ಅವರಲ್ಲಿ ನಾದಮಾಧುರ್ಯ ತುಂಬ ಅರಳಿಸಿತ್ತು. ,

ಕೃತಿಗಳು

ಕಲ್ಯಾಣಕ್ರಾಂತಿ, ಚಂದ್ರಮಾಯೆ (ಅನುವಾದ), ಕಾವ್ಯ ಕಿನ್ನರಿ(ಕವನ ಸಂಕಲನ), ‘ಕಾವ್ಯ ಮಂಜರಿ ಅವರ ಸಮಸ್ತ ಕವಿತೆಗಳು‘ ಕೃತಿ ರಚಿಸಿದ್ದಾರೆ. ಹುಬ್ಬಳ್ಳಿಯ ಮೂರು ಸಾವಿರ ಮಠದ ಹಿಂದಿನ ಜಗದ್ಗುರು ಶ್ರೀ ಡಾ ಮೂಜಗಂ ಇವರಿಗೂ ಕೂಡ ತ್ರಿಪದಿಗಳ ಗೀಳು ಹಚ್ಚಿಸಿ ಅವರಲ್ಲಿಯೂ ಸಾಹಿತ್ಯ ಕೃಷಿ ಮಾಡಲು ಶ್ರೀ ಗಂಗಪ್ಪ ವಾಲಿ ಅವರು ಪ್ರೇರಣೆ ನೀಡಿದರು.

ಕವಿಯಾಗಿ, ಸುಶ್ರಾವ್ಯ ಕಂಠದ ಗಾಯಕರಾಗಿ ಸ್ವರ ಸಂಯೋಜಕ ಆಗಿರುವುದು ಅಪರೂಪ. ಇಂತಹ ಸೃಜನಶೀಲ ಸೃಷ್ಟಿಗೆ ಗಂಗಪ್ಪನವರ ಕವಿತೆಗಳೇ ಸಾಕ್ಷಿ. ಈ ಸಹೃದಯದ ಕವಿ ಬರೆದಿರುವುದು ಅನೇಕ ಕವನಗಳು ತ್ರಿಪದಿಗಳು ಸುಪ್ರಭಾತಗಳು . ಸದಾ ಸಮಾನ ಮನಸ್ಕರ ಮಧ್ಯೆ ಮೌನವಾಗಿರುವ ಸರಳ ಸಜ್ಜನಿಕೆಯ ಸಾಕಾರ ಮೂರ್ತಿ. ಇವರ ಸಾಹಿತ್ಯವು ಜನರಿಗೆ ಕಾಣುವಂತೆ ಇರುವುದು ಸ್ವಲ್ಪ. ಜನರಿಗೆ ಕಾಣದಂತೆ ಕಳೆದು ಹೋಗುವುದು ಹೆಚ್ಚು.
ಯಾವುದೇ ವಿಶ್ವವಿದ್ಯಾಲಯದ ಮೆಟ್ಟಿಲು ಏರದ ಒಬ್ಬ ಶ್ರೀ ಸಾಮಾನ್ಯ ವರ್ತಕರ ಸಾಧನೆಯು ಯಾವುದೇ ದೊಡ್ಡ ಕವಿಗೆ ಕಡಿಮೆ ಇಲ್ಲ. ಪ್ರಚಾರ ಪ್ರಶಸ್ತಿ ಪಡೆಯದ ಒಬ್ಬ ಕವಿ ಬದುಕಿ ಹೀಗೊಂದು ದಿನ ಸದ್ದಿಲ್ಲದೇ ಮೌನದಲಿ ಎದ್ದು ಹೋದರು.
ಬಸವ ಪರಂಪರೆಯ ವಾರಸುದಾರರು ಬಯಲಲ್ಲಿ ಬಯಲಾದರು.

ಬಹು ದೊಡ್ಡ ಕವಿ ಸಾಹಿತಿ ಗಮಕಿ ಸುಪ್ರಭಾತದ ಸತ್ಪುರುಷ ಗಂಗಪ್ಪ ವಾಲಿ ಅವರ ಸ್ಮರಣಾರ್ಥ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯು ಇವರು  ವ್ಯಾಪಾರ ಮಾಡುವ ಹತ್ತಿಕಾಳು ಸಾಲ ವ್ಯಾಪಾರಸ್ಥರ ಬೀದಿಗೆ  ಗಂಗಪ್ಪ ವಾಲಿ ಮಾರ್ಗವೆಂದು ನಾಮಕರಣ ಮಾಡಿದ್ದಾರೆ.

ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ, 9552002338

LEAVE A REPLY

Please enter your comment!
Please enter your name here

Latest News

ಗೌರವ -ಘನತೆಯೇ ಮಾನವ ಹಕ್ಕಿನ ಮೂಲ: ಕರೆಪ್ಪ ಬೆಳ್ಳಿ

ಸಿಂದಗಿ: ಮನುಷ್ಯನಿಗೆ ಮೊದಲು ಗೌರವ ಮತ್ತು ಘನತೆ ಇರಬೇಕು. ಜಾತಿ—ಧರ್ಮ ಯಾವ ಬೇಧ ಭಾವವೂ ಇಲ್ಲದೆ ಪ್ರತಿಯೊಬ್ಬರಿಗೂ ಸಮಾನ ಹಕ್ಕುಗಳಿವೆ. ನಾವು ಎಲ್ಲರೂ ಮಾನವೀಯ ಮೌಲ್ಯಗಳನ್ನು...

More Articles Like This

error: Content is protected !!
Join WhatsApp Group