ಏನ ಥಂಡ್ಯೋ ಮಾರಾಯಾ ಹುಬ್ಬಳ್ಳ್ಯಾಗ..!!
ಈ ಬೆಳಗಿನ ಥಂಡ್ಯಾಗ
ವರ್ರಂತ ಬೀಸೂ ತಂಪ ಗಾಳ್ಯಾಗ
ನನಗ ನಮ್ಮಾಕಿ ನೆನಪಿಗಿ ಬರ್ತಾಳ..!
ಜೊತಿಗಿದ್ದಿದ್ರ ಆಕಿ..
ಒಂದಿಷ್ಟು ಚಾ-ಚೂಡಾ
ಹಿಡ್ಕೊಂಡು ಬಂದ,
ಕುಡಿರಿ ತಿನ್ರಿ ಅನ್ನೋ ಕಾಟಕ್ಕ ಅವನಪ್ಪನ;
ಎಂಥಾ ಥಂಡಿದ್ರೂ ಸರ್ರಂತ, ಸರೀತಿತ್ತು.!
ಈ ಬೆಳಗಿನ ಥಂಡ್ಯಾಗ
ವರ್ರಂತ ಬೀಸೂ ತಂಪ ಗಾಳ್ಯಾಗ…
ನನಗ ನಮ್ಮ ‘ಆಯಿ’ ನೆನಪಿಗೆ ಬರ್ತಾಳ..!
ಬತ್ತಿಗಿಟ್ಟ ಹತ್ತಿ ಹಿಂಜಿ..
ಕಿವಿಗಿಟ್ಟು ಕೊಚ್ಚಿಗಿ ಬಿಗಿದು
ಹೊರಗ ಹೋಗಬ್ಯಾಡ ನೋಡ
ಅನ್ನೋ ತಾಕೀತು ಕೇಳಿ….
ಥಂಡಿ ತರಾತುರಿಯೊಳ ಓಡ್ತಿತ್ತು..!
ಈ ಬೆಳಗಿನ ಥಂಡ್ಯಾಗ
ವರ್ರಂತ ಗಾಳ್ಯಾಗ
ನನಗ ‘ನಮ್ಮಪ್ಪ’ ನೆನಪಿಗೆ ಬರ್ತಾನ..!
ಹಿಂಡ ಕುರಿಯೊಳಗ ಮಲಗಿರೋ ಮಂದಿ ತೋರಿಸಿ..
ನೋಡಲ್ಲಿ ಪಾಪ ಅವರ ಎಷ್ಟ ಗಟ್ಟಿ ಇದ್ದಾರ..
ಕುರಿ-ಮರಿ ಕಟ್ಕೊಂಡು ಜೀವನಾ ನಡಸ್ತಾರ
ನಡಗತಾನ ಮಗಾ, ಗದಾ..s ಗದಾ..s
ಅನ್ನೋ ಮಾತಿಗೆ ಥಂಡಿ ದಿಕ್ಕಾಪಾಲಾಗತಿತ್ತು..!
ಈ ಬೆಳಗಿನ ಥಂಡ್ಯಾಗ
ವರ್ರಂತ ಬೀಸೂ ತಂಪ ಗಾಳ್ಯಾಗ
ಸುಡು ಸುಡು ನೀರಲ್ಲಿ
ಸಣ್ಣ ಮಕ್ಳ ಕುಂಡಿ ತೊಳಿತಿದ್ದ
ಅವ್ವ ನೆನಪಿಗೆ ಬರ್ತಾಳ.
ಸಿಂಬಳಾ ಸೀಟಿ, ಮಾರಿ ತೊಳದು
ಸೀರಿ ಸೆರಗಿನಿಂದ ಸ್ವಚ್ಚ ವರಸಿ
ಕರಿ ಕಾಡಗಿ ಬೊಟ್ಟಿಟ್ಟಾಗ
ದೃಷ್ಟಿ ತಾಗದ, ಥಂಡಿ ಅಂಗಡಿ ಸೇರತಿತ್ತು..!
ಚನ್ನಬಸಪ್ಪ ಚೌಗಲಾ
“ವಿಶ್ವಾರಾಧ್ಯ ಪ್ರಿಯ”
೮೮೬೭೬೬೫೦೪೪

