ಮತ್ತೆ ಹುಟ್ಟಿ ಬಂದಿರುವೆ
ಕೊರೆವ ಚಳಿ ಡಿಸೆಂಬರ್ ೨೫ ದಲಿತಸೋಗೆಯ ಬಿಲಗಳಲಿ ವಾಸವಾಗಿರುವ ಜೀಸಸ್ ಹುಟ್ಟಿ ಬಂದಿದ್ದಾನೆ ಮತ್ತೆ
ಪುಟ್ಟ ಹುಡುಗ ಲಾಬೋ
ಮಡಕೆಯಲ್ಲಿ ಹಿಡಿದು ತಂದ
ಗಿಡದ ಟೊಂಗೆ ಹುಟ್ಟು ಹಬ್ಬದ ಸಂಕೇತವಾಯಿತು ಕ್ರಿಸ್ಮಸ್ ಟ್ರೀ
ಗೋಲ್ಗೋಥಾ ಗುಡ್ಡದ ಮೇಲೆ
ತೈಬಿರಿಯಸ್ ಚಕ್ರವರ್ತಿಯ ಆಜ್ಞೆ
ಯಹೂದಿಗಳ ಪ್ರತ್ಯೇಕ ರಾಜ್ಯ
ರೋಮ್ ಸಾಮ್ರಾಜ್ಯದ ವಿರುದ್ಧ ಆರೋಪ
ಹೊಸ ಸಾಮ್ರಾಜ್ಯದ ಬಯಕೆ
ಮುಗ್ಧ ಹೃದಯಕ್ಕೆ ಇಟ್ಟ ಬೆಂಕಿ
ಮುಳ್ಳಿನ ಕಿರೀಟ
ಹಬ್ಬಿಸಿದ ಸುಳ್ಳು
ಬಡಿದ ಮೊಳೆಗಳು
ಬಾಗಿ ನಿಂತು ಕೈ ಮುಗಿದಂತಿದೆ ದೇಹ
ದೇವರೇ ಮನ್ನಿಸು
ಇವರಾರೂ ಅರಿಯರು
ಕರೆದು ಸಮ್ಮಾನಿಸುವ
ದುರುಳ ರಾಜಕೀಯ
ಮನ ಮನೆಯಲ್ಲೂ ನರಳಾಟ
ಅದೆಷ್ಟೋ ಜೀವಗಳು
ನಗೆ ಕಾಣದೇ ಮಲಗಿಕೊಂಡಿವೆ
ಎನ್ನ ತಂದೆ ಜೊಸೆಫ್
ತಾಯಿ ಮೇರಿ ಕಲಿಸಿದ ಪಾಠ
ನನಗಿಂದು ಸಂತಸ ತಂದಿದೆ
ಸುಳ್ಳಿನ ಗೋರಿಯೊಳಗೆ
ಜೀವಂತ ಶವವಾಗಿ ಮಲಗಿದ
ಇವರನ್ನು ಎಚ್ಚರಿಸುವೆ
ಅವಮಾನ ಅಪಚಾರ
ದುಷ್ಟ ಪೈಶಾಚಿಕ ಕೃತ್ಯದ ಪೈಪೋಟಿ
ಅಧಿಕಾರ ಆಮಿಷ
ಲಂಚ ವಂಚನೆಗೆ ಮೋಸ
ಬೆಳಕಿಲ್ಲದ ಮನೆ ಮನೆ ಯಲ್ಲಿ
ದೀಪವಾಗುವೆ
ಬರುವೆ ಇಂದಲ್ಲಾ ನಾಳೆ
ನಿಮ್ಮ ಮನೆ ಮನೆಗೆ
ದಲಿತ ಶೋಷಿತ ಮಿಡಿತ ಭಾವದಲಿ
ಬದುಕು ತೋರುವೆ
ನಗೆ ನಗಾರಿ ಸಿಲುಬೆಯಿಂದೆದ್ದು
ಡೋಲು ಬಾರಿಸುವೆ
ಗಂಟೆ ಜಾಗಟೆಯ ಸದ್ದು
ಗಗನದ ತುಂಬೆಲ್ಲಾ
ಹೂಮಳೆ ಗರೆಯುವೆ
ಕಾಯಬೇಕು ಕರುಣಾಳು ಬೆಳಕಾಗಿ
ಮತ್ತೆ ಬರುವೆ ಮತ್ತೆ ಹುಟ್ಟುವೆ..
ಸಾವಿತ್ರಿ ಕಮಲಾಪೂರ

