ಕನ್ನಡದ ದೀಪ ಹಚ್ಚಿದ ಭಾವ ಕವಿ ಡಾ ಡಿ ಎಸ್ ಕರ್ಕಿ

Must Read

ನವೋದಯ ಸಾಹಿತ್ಯದ ಕಾಲ ಘಟ್ಟದಲ್ಲಿ ಗುರುತಿಸಿ ಕೊಂಡ ಅಪ್ರತಿಮ ನವೋದಯದ ಕೊನೆಯ ಕೊಂಡಿ ಡಾ. ಡಿ ಎಸ್ ಕರ್ಕಿ ಅವರು. ಅವರ ಮಾಧುರ್ಯ ಕವನಗಳಿಗೆ ರಾಷ್ಟ್ರ ಕವಿ ಕುವೆಂಪು ಅವರೂ ಕೂಡ ಮಾರು ಹೋಗಿದ್ದರು. ಅವರ ಭಾವ ಭದ್ರತೆ ಹಲವು ಬಗೆಯ ಕನ್ನಡ ಕಾವ್ಯ ಪರಂಪರೆಯಲ್ಲಿ ಶ್ರೇಷ್ಠ ಕವಿ ಸಾಹಿತಿ ಡಾ ಡಿ ಎಸ್ ಕರ್ಕಿ ಒಬ್ಬರು.

ಹಚ್ಚೇವು ಕನ್ನಡದ ದೀಪ” ಎಂಬ ಪ್ರಸಿದ್ಧ ಗೀತೆಯನ್ನು ರಚಿಸಿದ ದುಂಡಪ್ಪ ಸಿದ್ದಪ್ಪ ಕರ್ಕಿಯವರು (ನವೆಂಬರ್ 15, 1907 – ಜನವರಿ 16, 1984) ಕನ್ನಡದ ನವೋದಯ ಕಾಲದ ಪ್ರಮುಖ ಕವಿಗಳಲ್ಲೊಬ್ಬರೆನಿಸಿದ್ದಾರೆ.

ಡಿ. ಎಸ್. ಕರ್ಕಿಯವರು ಬೆಳಗಾವಿ ಜಿಲ್ಲೆಯ ಹಿರೆಕೊಪ್ಪ ಗ್ರಾಮದಲ್ಲಿ 1907 ನವೆಂಬರ್ 18ರಂದು ಜನಿಸಿದರು.ಇವರ ತಾಯಿ ದುಂಡವ್ವ ;ತಂದೆ ಸಿದ್ದಪ್ಪ.ದುಂಡಪ್ಪ ಸಿದ್ದಪ್ಪ ಕರ್ಕಿ ಎಂಬುದು ಇವರ ಪೂರ್ಣ ನಾಮ.ಚಿಕ್ಕಂದಿನಲ್ಲಿಯೆ ತಾಯಿಯನ್ನು ಕಳೆದುಕೊಂಡ ಇವರ ಪ್ರಾಥಮಿಕ ಶಿಕ್ಷಣ ತಾಯಿಯ ತವರೂರಾದ ಬೆಲ್ಲದ ಬಾಗೇವಾಡಿಯಲ್ಲಿ ಆಯಿತು. ಬೆಳಗಾವಿಯ ಗಿಲಗಂಜಿ ಅರಟಾಳ ಹಾಯಸ್ಕೂಲಿನಲ್ಲಿ ಮಾಧ್ಯಮಿಕ ಶಿಕ್ಷಣ ಪೂರೈಸಿದ ಕರ್ಕಿಯವರು ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಪದವಿ ಅಭ್ಯಾಸದ ನಂತರ 1935ರಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರು.ಬೆಲ್ಲದ ಬಾಗೇವಾಡಿಯಲ್ಲಿ ಪ್ರಾಥಮಿಕ ಶಿಕ್ಷಣ, ಬೆಳಗಾಂವಿಯ ಜಿ.ಎ.ಹೈಸ್ಕೂಲಿನಲ್ಲಿ ಪ್ರೌಢಶಿಕ್ಷಣ ಪಡೆದರು. ಕೊಲ್ಲಾಪುರದ ರಾಜಾರಾಮ ಕಾಲೇಜು, ಪುಣೆಯ ಫರ್ಗುಸನ್ ಕಾಲೇಜು, ಧಾರವಾಡದ ಕರ್ನಾಟಕ ಕಾಲೇಜುಗಳಲ್ಲಿ ಓದಿದರು. ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆದರು.

1940 ರಲ್ಲಿ ಬಿ.ಟಿ. ಪದವಿಯನ್ನು ಪಡೆದು ಗಿಲಗಂಜಿ ಅರಟಾಳ ಹಾಯಸ್ಕೂಲಿನಲ್ಲಿಯೇ ಶಿಕ್ಷಕರಾದರು. 1942 ರಲ್ಲಿ “ಕನ್ನಡ ಛಂದಸ್ಸಿನ ವಿಕಾಸ” ಮಹಾಪ್ರಬಂಧಕ್ಕಾಗಿ ಪ್ರೊ. ಕೆ ಜಿ ಕುಂದಣಗಾರ ಇವರ ಮಾರ್ಗ ದರ್ಶನದಲ್ಲಿ ತಮ್ಮ ಪಿ.ಎಚ್‍ಡಿ.ಯನ್ನು ಪಡೆದರು. ಕೆಲಕಾಲದಲ್ಲಿ ಕೆ.ಎಲ್.ಇ. ಸೊಸೈಟಿ ಸೇರಿದರು. ಜಿ.ಎ. ಪ್ರೌಢ ಶಾಲೆಯಲ್ಲಿ ಅಧ್ಯಾಪಕರಾದರು. ಅನಂತರ ಬೆಳಗಾಂವಿಯ ಲಿಂಗರಾಜ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ, ಕೆ.ಎಲ್.ಇ. ಸೊಸೈಟಿಯ ಹುಬ್ಬಳ್ಳಿಯ ಕಲಾ ಕಾಲೇಜಿನ ಉಪಪ್ರಾಚಾರ್ಯರಾಗಿ, ಪ್ರಾಂಶುಪಾಲರಾಗಿ, ಕೆಲಕಾಲ ನರೇಗಲ್ ಕಾಲೇಜಿನ ಪ್ರಾಂಶುಪಾಲರಾಗಿ ಸೇವೆಸಲ್ಲಿಸಿ ಹುಬ್ಬಳ್ಳಿಗೆ ಹಿಂದಿರುಗಿದರು. ದಕ್ಷ ಆಡಳಿತಗಾರರೆಂದೂ ಇವರು ಹೆಸರುಗಳಿಸಿದರು. ವಿದ್ಯಾರ್ಥಿಗಳನ್ನು ಸ್ನೇಹಿತರಂತೆ ಕಾಣುತ್ತಿದ್ದರು. ನಿವೃತ್ತಿಯ ನಂತರ ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಪೀಠದಲ್ಲಿ ವಿಶ್ರಾಂತ ಪ್ರಾಧ್ಯಾಪಕರಾಗಿ ಅನೇಕ ವರ್ಷಗಳವರೆಗೆ ವಿದ್ಯಾರ್ಥಿಗಳ ಸಂಶೋಧನೆಗೆ ನೆರವಾದರು.

ಕನ್ನಡದ ಕೀಟ್ಸ್
“ಕರ್ಕಿಯವರು ಭೂಮಿಯ ಸಂಗೀತದ ನಾದದೊಂದಿಗೆ ಭುವನದ ಭಾಗ್ಯರಾಗಿ ತಮ್ಮ ಸಾಹಿತ್ಯ ಕೃಷಿಯನ್ನು ಮಾಡಿದವರು. ಅಧ್ಯಾತ್ಮಿಕತೆ, ಪ್ರಕೃತಿ ಪ್ರೀತಿ, ಸೌಂದರ್ಯದ ಒಲವು ಅವರ ಕಾವ್ಯದ ಜೀವಾಳಗಳಾಗಿವೆ. ಡಿ.ಎಸ್. ಕರ್ಕಿ ಅವರಿಗೆ ಕಾವ್ಯ ಕೃಷಿ ವಿಶೇಷ ಕ್ಷೇತ್ರವಾದರೂ ಎಲ್ಲ ಸಾಹಿತ್ಯ ಪ್ರಕಾರಗಳಲ್ಲಿಯೂ ಜನಪರ ವಿಚಾರಗಳನ್ನು ನೀಡಿದ್ದಾರೆ. ನಾಡಗೀತೆಗಳನ್ನು ಬರೆದು ನಾಡಿನಾದ್ಯಂತ ಪ್ರಸಿದ್ದಿಯನ್ನು ಪಡೆದ ಅವರು ಬೆಳಗಾವಿಯಲ್ಲಿ ಎಸ್.ಡಿ. ಇಂಚಲ, ಬ.ಗಂ. ತುರಮರಿಯರೊಂದಿಗೆ ಸೇರಿ ಕನ್ನಡ ಜೀವಂತಗೊಳಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದು ಈ ಮೂವರೂ ಸೇರಿ *ಕನ್ನಡದ ಕೀಟ್ಸ್*’ ಎಂದೇ ಹೆಸರುವಾಸಿಯಾಗಿದ್ದರು” ಎಂದು ಪ್ರೊ. ಎಂ. ಎಸ್. ಇಂಚಲ ಅಭಿಪ್ರಾಯ ಪಡುತ್ತಾರೆ.

ಡಾ. ಡಿ ಎಸ್ ಕರ್ಕಿಯವರು ಒಬ್ಬ ಸಹಜಮಾದುರ್ಯದ ಸಂವೇದನಾಶೀಲ ಮತ್ತು ಭಾವನಿಷವಿ ರಮ್ಯ ಕವನಗಳ ಮೂಲಕ ಕನ್ನಡ ನಾಡು ನುಡಿ ಸಂಸ್ಕೃತಿಯ ಉನ್ನತಮೌಲ್ಯಗಳನ್ನು ಉದಾತ್ತ ಆದರ್ಶಗಳನ್ನು ಹೃದ್ಯವಾಗಿ ಹಾಡಿದ ಭಾವಗೀತೆಯ ಕವಿ ಎಂದೇ ಪ್ರಸಿದ್ಧರಾಗಿದ್ದರು. ಪ್ರಕೃತಿ ಮತ್ತು ಜೀವನದ ಸಾತ್ವಿಕ ಸತ್ವ ಸೌಂದರ್ಯದಿಂದ ಅಗಾಧವಾಗಿ ಪ್ರಭಾವಿತರಾದ ಇವರು ಗದ್ಯ ಪದ್ಯವೆರಡರಲ್ಲೂ ತಮ್ಮ ವ್ಯಕ್ತಿ ವಿಶಿಷ್ಟ ಪ್ರತಿಭೆಯನ್ನು ಪ್ರದರ್ಶಿಸಿದರು. ಕಾವ್ಯ, ಪ್ರಬಂಧ, ಮಕ್ಕಳಸಾಹಿತ್ಯ ಮತ್ತು ಸಂಪಾದನೆ, ಸಂಶೋಧನೆಗೆ ಸಂಬಂಧಿಸಿದ ಒಟ್ಟು ಹನ್ನೊಂದು ಕೃತಿಗಳನ್ನು ಪ್ರಕಟಿಸಿದ್ದಾರೆ. ಆಧ್ಯಾತ್ಮಿಕ ಚಿಂತನೆಗಳನ್ನು ಸೌಂದರ್ಯಪ್ರಜ್ಞೆ ಮತ್ತು ಜೀವನಸಂಸ್ಕೃತಿ ಕುರಿತಾದ ಆರೋಗ್ಯಪೂರ್ಣ ವಿಚಾರಗಳನ್ನು ಬದುಕಿನ ಶುಚಿ ರುಚಿ ಮತ್ತು ಒಲವು ಚೆಲವನ್ನು ಕಲಾತ್ಮಕ ವಿನ್ಯಾಸದಲ್ಲಿ ಸುಕುಮಾರ ಶೈಲಿಯಲ್ಲಿ ಪಡಿಮೂಡಿಸಿರುವ ಇವರ ಕಾವ್ಯಪ್ರತಿಭೆ ಅನನ್ಯವಾದುದು.

ನಕ್ಷತ್ರಗಾನ (1949), ಭಾವತೀರ್ಥ (1953), ಗೀತಗೌರವ (1968), ಕರಿಕೆ ಕಣಗಿಲು (1976), ನಮನ (1977) – ಇವು ಇವರ ಕವನ ಸಂಕಲನಗಳು.

ಹಚ್ಚೇವು ಕನ್ನಡದ ದೀಪ, ಕರುನಾಡದೀಪ ಸಿರಿ ನುಡಿಯದೀಪ ಒಲವೆತ್ತಿ ತೋರುವ ದೀಪ ಎಂದು ಕನ್ನಡಿಗರ ಎದೆಯಾಳದ ಮಿಡಿತವನ್ನು ಕಾವ್ಯದ ಕೊರಳಲ್ಲಿ ಮಿಡಿದ ನಾಡಕವಿ ಇವರು. ಕವಿಯ ಜೀವನ ಪ್ರೀತಿ, ಪ್ರಕೃತಿ, ಕಲೆ ಮತ್ತು ಸಾಹಿತ್ಯ ಚಿಂತನೆಯ ಚತುರ್ಮುಖ ದರ್ಶನ ನೀಡುವ ಗದ್ಯಕೃತಿ ನಾಲ್ದೆಸೆಯನೋಟ (1952), ಸಾಹಿತ್ಯ ಸಂಸ್ಕೃತಿ ಶೃತಿ (1974) ಇವರ ಗದ್ಯಶೈಲಿಯ ಸೊಗಸು ಪ್ರಬಂಧ ಪ್ರತಿಭೆ ಮತ್ತು ಅನುವಾದ ಸಾಮರ್ಥ್ಯಕ್ಕೆ ಉತ್ತಮ ಉದಾಹರಣೆ.

ಮಕ್ಕಳ ಶಿಕ್ಷಣ (1956) ಶಿಕ್ಷಣತಜ್ಞನೊಬ್ಬನ ಶೈಕ್ಷಣಿಕ ಕಾಳಜಿಗಳನ್ನು ಪ್ರಕಟಿಸಿರುವ ಕೃತಿ. ಬಣ್ಣದ ಚೆಂಡು, ತನನತೋಂನಂ ಶಿಶುಗೀತೆಗಳ ಸಂಕಲನಗಳು. ಕರ್ನಾಟಕದ ಅನುಭಾವಿ ಕವಿ ಶಿಶುನಾಳ ಶರೀಫರ ತತ್ವಪದಗಳ ಸಂಗ್ರಹ ಜನಪ್ರಿಯ ಪದಗಳು. ಇದು ಶರೀಫರ ಗೀತೆಗಳ ಆನುಭಾವಿಕ ಸಾಮಾಜಿಕ, ತಾತ್ತ್ವಿಕ ನೆಲೆಗಳ ಗಂಭೀರ ಪ್ರತಿಪಾದನೆ ಯನ್ನೊಳಗೊಂಡಿದೆ.

ಕನ್ನಡ ಛಂದೋವಿಕಾಸ (1956) ಕನ್ನಡ ಛಂದಸ್ಸಿನ ಚರಿತ್ರೆ ಮತ್ತು ಸ್ವರೂಪವನ್ನು ಪ್ರಾಚೀನ ಮತ್ತು ಆಧುನಿಕ ಕಾವ್ಯ ಭಾಗಗಳ ಮೂಲಕ ವಿಶ್ಲೇಷಿಸುವ ಸಂಶೋಧನ ಮಹಾ ಪ್ರಬಂಧ. ಛಂದಶ್ಶಾಸ್ತ್ರದ ಗಂಭೀರ ಅಧ್ಯಯನಗಳು ವಿರಳವಾಗಿದ್ದ ಸಂದರ್ಭದಲ್ಲಿ ಛಂದಶ್ಶಾಸ್ತ್ರದ ಅಧ್ಯಯನಕ್ಕೆ ಅಧಿಕೃತ ಆಕರ ಗ್ರಂಥವಾಗಿದ್ದ ಕನ್ನಡ ಛಂದೋವಿಕಾಸ ಅಚ್ಚಗನ್ನಡದ ದೇಸಿ ಛಂದಸ್ಸನ್ನು ಕುರಿತು ನಡೆಸಿರುವ ವಿವೇಚನೆ ಮೌಲಿಕವಾದುದಾಗಿದೆ. ತ್ರಿಪದಿ, ಕಂದ, ರಗಳೆ, ಸಾಂಗತ್ಯ, ಷಟ್ಪದಿ, ಅಕ್ಕರ, ಚೌಪದಿ, ಏಳೆ ಇತ್ಯಾದಿ ಅಚ್ಚಗನ್ನಡ ಛಂದೋಲಯಗಳ, ಚಾರಿತ್ರಿಕ ಮತ್ತು ಕಲಾತ್ಮಕ ನೆಲೆಯ ಚರ್ಚೆ ಕರ್ಕಿಯವರ ವಿದ್ವತ್ ಪರಿಶ್ರಮ ಮತ್ತು ಸದಭಿರುಚಿಯ ಪ್ರತೀಕವಾಗಿದೆ.

*ಪ್ರಶಸ್ತಿ ಮತ್ತು ಗೌರವಗಳು*

ಪ್ರೊ. ಕರ್ಕಿ ಅವರ ಕೃತಿ ‘ಗೀತ ಗೌರವ’ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿದೆ. ಇವರ ಸಾಹಿತ್ಯಕ ಸಾಧನೆಗೆ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ನೀಡಿ ಗೌರವಿಸಿದೆ (1972). ಕಾವ್ಯಗೌರವ ಎಂಬ ಸಂಭಾವನಾ ಗ್ರಂಥವನ್ನು ಇವರಿಗೆ ಅರ್ಪಿಸಲಾಗಿದೆ (1991)

*ವಿವಿಧ ರೀತಿಯ ಸೇವೆಗಳು*
ಕರ್ನಾಟಕ ವಿಶ್ವವಿದ್ಯಾಲಯದ ಸೆನೆಟ್, ಸಿಂಡಿಕೇಟ್ ಸದಸ್ಯರಾಗಿ ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ ಸಹಾ ಕರ್ಕಿಯವರು ಸೇವೆ ಮಾಡಿದ್ದಾರೆ. ಪಿ.ಇ.ಎನ್. ಸಂಸ್ಥೆಯಿಂದ ಫ್ರಾನ್ಸ್ ಹಾಗು ರಶಿಯಾ ದೇಶಗಳಿಗೆ ಭೇಟಿ ನೀಡಿದ್ದರು.

*ಸಾಹಿತ್ಯ ಕೊಡುಗೆ*

ಕರ್ಕಿಯವರು ಏಳು ಕವನಸಂಕಲನಗಳಲ್ಲಿ, ಎರಡು ಮಕ್ಕಳ ಕವನಸಂಕಲನಗಳನ್ನು ಮತ್ತು ಎರಡು ಪ್ರಬಂಧ ಸಂಕಲನಗಳನ್ನು ನೀಡಿದ್ದಾರೆ. ಇವರ ಕೆಲವು ಸಂಕಲನಗಳು ಈ ರೀತಿಯಾಗಿವೆ:

*ಕವನಸಂಕಲನಗಳು*

ನಕ್ಷತ್ರಗಾನ
ಭಾವತೀರ್ಥ
ಗೀತಗೌರವ
ನಮನ
ಕರ್ಕಿ ಕಣಗಲ

*ಮಕ್ಕಳ ಕವನಗಳು*

ಬಣ್ಣದ ಚೆಂಡು
ತನನ ತೋಂ

ಪ್ರಬಂಧ ಸಂಕಲನ
ನಾಲ್ದೆಸೆಯ ನೋಟ

*ನಿಧನ*

ಡಿ.ಎಸ್. ಕರ್ಕಿಯವರು 1984 ಜನೆವರಿ 16ರಂದು ನಿಧನರಾದರು.

ಬಾಲ್ಯದಲ್ಲಿಯೇ ತಾಯಿಯನ್ನು ಕಳೆದುಕೊಂಡ ಒಬ್ಬ ನತದೃಷ್ಟ ಬಾಲಕ ಮುಂದೆ ಕನ್ನಡ ಸಾಹಿತ್ಯ ಲೋಕದ ಅನಭಿಷಕ್ತ ಸಾಮ್ರಾಟನಾಗುತ್ತಾನೆ ಎಂದು ಯಾರೂ ಊಹಿಸಿರಲಿಲ್ಲ.

ಕತ್ತಲೆಯ ಕರುನಾಡಿನಲ್ಲಿ ಕನ್ನಡದ ಪ್ರಜ್ವಲ ದೀಪ ಹಚ್ಚಿ ನಾಡು ನುಡಿ ದೇಶದ ಸ್ವಾತಂತ್ರ್ಯ ಸಮಗ್ರತೆಯ ಬೆಳಕನ್ನು ಪಸರಿಸಿದ ನವೋದಯ ಕಾಲದ ಶ್ರೇಷ್ಠ ಕವಿ ಡಾ ಡಿ ಎಸ್ ಕರ್ಕಿ ಅವರಿಗೆ ಶತ ಕೋಟಿ ನಮನಗಳು.
ಕನ್ನಡಕೊಬ್ಬರೆ ಡಿ ಎಸ್ ಕರ್ಕಿ
_________________________

ಡಾ.ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ

LEAVE A REPLY

Please enter your comment!
Please enter your name here

Latest News

ಕವಿಗೋಷ್ಠಿಗೆ ಆಹ್ವಾನ

ಮೂಡಲಗಿ - ಫೆ.೧ ರಂದು ರವಿವಾರ ಮುಂಜಾನೆ ೧೦ ಘಂಟೆಗೆ ಕನ್ನಡ ಸಾಹಿತ್ಯ ಪರಿಷತ್ತು ,ಮೂಡಲಗಿ ಹಾಗೂ ಎಮ್ ಐ ಕೆ ಪಿ ಯು ಕಾಲೇಜು,...

More Articles Like This

error: Content is protected !!
Join WhatsApp Group