ಭಯದ ಬಾಹುಗಳು
ಕಂದು ಕಂಗಳ ಮುದ್ದು ಮಗಳು
ಬಂದೆನ್ನ ತಬ್ಬಿ, ಮತ್ತೆ ಮಲಗುವ
ಗುಂಗಿನಲ್ಲಿದ್ದಾಳೆ
ಅರೆಮುಚ್ಚಿದ ಕಣ್ಣ ಬಣ್ಣ ನನ್ನನ್ನೇ
ಹೋಲುತ್ತದೆ
ತುಸು ಹೆಚ್ಚಿಗೆ ಮಿಂಚಿದೆಯಷ್ಟೇ.
ಮೆದು ಮೈಯ್ಯ ಸ್ಪರ್ಶ, ಮೆಲ್ಲುಸಿರ
ಬಿಸಿ, ಗುಟ್ಟಿನ್ನೂ ರಟ್ಟಾಗದ ಹೃದಯ
ಬಡಿತ
ಎದೆಯ ಕಸಿವಿಸಿ ಮರೆಸಿ
ರೆಪ್ಪೆಗಳ ದಪ್ಪಗಾಗಿಸಿ
ನಿದ್ರಾಲೋಕದ ಅತಿಥಿಯಾಗಿಸಿ
ಸಮಾಧಾನಿಸುವುದರಲ್ಲಿ
ಫಕ್ಕನೆ ಎಚ್ಚರ !
ನೆನ್ನೆ ನೋಡಿದ ಸುದ್ದಿ
ತರಳೆಯ ಕಗ್ಗೊಲೆ
ಮೊನ್ನೆ ಕೇಳಿದ್ದು
ಬಾಲೆಯ ಬಲಾತ್ಕಾರ
ಇಲ್ಲೇನೋ ಜಿಹಾದ ಅಲ್ಲೇನೋ ಜಾತಿ ವಿವಾದ
ಹೆಣ್ತನಕ್ಕೆ ಹೇಸಿಗೆ ಪಡುವ ಸಂವಾದ
ನಾಲಿಗೆಯ ನರ ಕಸಿಯುತ್ತಿರುವ ಜಗದಲ್ಲಿ, ಹೇಗೆ ಮಾಡಲಿ
ಸುರಕ್ಷಾ ಪಾಠ?
ಕಾಪಾಡುವುದೆಂತು ಕಣ್ಮಿಂಚಿನಾಟ?
ಸಾವಿರ ಸವಾಲು ಮೀರಿ
ನಿಂತರೂ ಮೊದಲ ಬಾರಿ
ಹೆಣ್ಣಾಗಿದ್ದಕ್ಕೆ ಭಯ ಆವರಿಸಿದೆ
ಹೆಣ್ಣು ಅಬಲೆಯೆನ್ನುವ ಅಂಜಿಕೆ
ನಿಜದಂತಿದೆ
ಕಾಣುತ್ತಿರುವ ದಾರಿಯೊಂದೇ
ಗುಟ್ಟಿನ ಗರ್ಭದೊಳು ಅವಳೆದೆ
ಬಡಿತವ ಮತ್ತೊಮ್ಮೆ ಬಚ್ಟಿಟ್ಟು ಕಾಯುವುದೆ..
ಡಾ.ಭವ್ಯ ಅಶೋಕ ಸಂಪಗಾರ

