ಅನುಬಂಧ
ಕಾಣದ ದಾರಿಯಲ್ಲಿ
ಬೆಸೆದ ನಂಟು,
ಹೆಸರಿಲ್ಲದಿದ್ದರೂ ಹೃದಯಕ್ಕೆ
ಪರಿಚಿತವಾದ ಬಂಧ…
ಕಾಲದ ಹೊಳೆ ಹರಿದರೂ
ಕಳೆಯದ ಗುರುತು, ಗಂಟು
ಅದು ಅನುಬಂಧ.
ಮೌನದಲ್ಲೂ ಮಾತಾಡುವ
ಸಂಬಂಧ, ಬಂಧ..
ಕಣ್ಣಂಚಿನ ನೀರನ್ನೂ
ಓದುತ್ತದೆ ಒರೆಸುತ್ತದೆ.
ಹೃದಯ ಮುರಿದು
ನೊಂದ ಕ್ಷಣದಲ್ಲಿ
ಅದೃಶ್ಯವಾಗಿ ಕೈ
ಹಿಡಿದುಕೊಳ್ಳುತ್ತದೆ.
ಮಣ್ಣಿನ ವಾಸನೆಯಂತೆ
ಸಹಜ,
ಬೆಳಗಿನ ಬೆಳಕಿನಂತೆ
ಮೃದುವು.
ನಗುವಿನಲ್ಲೂ, ನೋವಿನಲ್ಲೂ
ಉಸಿರಾಡುವ ನಂಟು.
ತಾಯಿ–ಮಗುವಿನ
ಹಸಿರು ಪ್ರೀತಿಯಂತೆ
ಸ್ನೇಹಿತರ ನಿಷ್ಕಪಟ ನಗು,
ಗುರುವಿನ ಮಾರ್ಗದರ್ಶನ,
ಅಸ್ಪಷ್ಟ ಮೌನ
ಅನುಬಂಧದ ಬೇರೆ ಬೇರೆ
ರೂಪಗಳು ಒಂದೇ
ಕಾಲ ದೂರಿರಿಸಿದರೂ,
ಸ್ಮೃತಿ ಪಟದಲ್ಲಿ ಹತ್ತಿರ.
ದೇಹಗಳು ದೂರವಾದರೂ,
ಮನಗಳು ಒಡಲಿನಂತೆ
ಬಿರುಗಾಳಿಯಲ್ಲಿ ಮರವನ್ನೆತ್ತಿದ
ಬೇರುಗಳಂತೆ, ಗಟ್ಟಿ
ಎತ್ತುವ ಶಕ್ತಿಯೇ ಅನುಬಂಧ.
ಜಗತ್ತು ಕೈಬಿಟ್ಟ ಸಂದರ್ಭದಲ್ಲಿ
ಉಳಿಸುವ ನಂಬಿಕೆ.
ಅನುಬಂಧವೆಂದರೆ
ಸಂಬಂಧವಲ್ಲ,
ಬದುಕಿಗೆ ಅರ್ಥ
ನೀಡುವ ಭಾವನೆ.
ನಮ್ಮನ್ನು ನಾವು
ಗುರುತಿಸುವ ಕನ್ನಡಿ,
ಜೀವನದ ದೀರ್ಘ
ಪಯಣದಲ್ಲಿ ಜೊತೆಯಾದ ನೆರಳು.
ಅರಿಯದಿದ್ದರೂ,
ಮೌಲ್ಯ ಗೊತ್ತಾಗುವುದು.
ಅದಕ್ಕಾಗಿಯೇ ಅನುಬಂಧ…
ಹೃದಯದೊಳಗೆ ಮೌನವಾಗಿ ,
ಹೂ ಬಿಡುವ ಅಮೂಲ್ಯ ವರ.
_________________________
ಡಾ.ತಾರಾ ಬಿ ಎನ್ ಧಾರವಾಡ

