ಪ್ರೀತಿಸಿದ ತಪ್ಪಿಗೆ…
ಇಂದು ಈ ಮುಸ್ಸಂಜೆಯಲಿ….
ಯಾರೋ ಎಲ್ಲೋ
ಪ್ರೀತಿಸುವ ಹೃದಯಕೆ
ನೋವುಣಿಸಿರಬೇಕು…
ಅಕಾಲದಲ್ಲಿ ಆಕಾಶ
ಆರ್ಭಟಿಸಿ ಭೋರ್ಗರೆದು
ಹೀಗೆ ಸುರಿಯಬೇಕಾದರೆ…
ಸದ್ದಿಲ್ಲದೇ ಒಡೆದ
ಎದೆ ತುಣುಕುಗಳು
ಮುಗಿಲಲಿ ಶೋಕಗೀತೆ
ನುಡಿಸುತಿವೆ….
ಯಾರೋ ಎಲ್ಲೋ
ಹೂವಂತ ಮನಸನು
ಮಾತಿನ ಮುಳ್ಳುಗಳಿಂದ
ಚುಚ್ಚಿ ನೋಯಿಸಿರಬೇಕು…
ಹೆಪ್ಪುಗಟ್ಟಿದ ದುಃಖ
ಕಪ್ಪು ಮೋಡದ ಒಡಲ
ಬಗೆದು ಭೋರೆಂದು
ಭುವಿಯ ಅಪ್ಪುತಿದೆ…
ಯಾರೋ ಎಲ್ಲೋ
ಸ್ನೇಹ ತುಂಬಿದ ಕಂಗಳಿಗೆ
ಅಪಮಾನ ಆಪಾದನೆ
ಪಟ್ಟಿ ಕಟ್ಟಿರಬೇಕು….
ಗರಬಡಿದ ಮುಗಿಲು ದುಃಖಿಸಿ
ಬಿಕ್ಕಿಅಳುತ ಮುತ್ತುಮಳೆ
ಸುತ್ತ ಸುರಿಸುತಿದೆ ನೋಡು..
ತಪ್ಪು ಮಾಡದ ಜೀವ
ಬಿಟ್ಟ ಬಿಸಿಯುಸಿರ ಕಾವಿಗೆ
ಸುಟ್ಟು ಸುಡುವ ಸೂರ್ಯನೇ
ನಲುಗಿ ಮರೆಯಾಗಿ ಹೋದ….
ಹೂಹೃದಯ ಒಡೆದು ಚೂರಾಗಿದೆ
ಬಿರುಮಾತಿನ ಬಾಣಗಳಿಗೆ…
ಪ್ರೀತಿಸಿದ ತಪ್ಪಿಗೆ…..
– ಇಂದಿರಾ ಮೋಟೆಬೆನ್ನೂರ, ಬೆಳಗಾವಿ

