ಅದು ಕ್ರಿ. ಶ. ೧೨೫೦, ಉತ್ತರ ಕರ್ನಾಟಕ ಪ್ರಾಂತ್ಯದಲ್ಲಿ ಭೀಕರ ಬರಗಾಲ ಆವರಿಸಿತ್ತು. ಗದಗ ಜಿಲ್ಲೆಯ ಸೊರಟೂರು ಮೂಲದ ಬಹುತೇಕ ಕುಟುಂಬಗಳು ಮಹಾರಾಷ್ಟದತ್ತ ಗುಳೆ ಹೋದವು. ಅವರಲ್ಲಿ ಬಳ್ಳಿಯಪ್ಪ ಎಂಬ ಹಣಬರ ಕುಲದ ಗೌಳಿ ಲಿಂಗಾಯತ ಒಬ್ಬನು. ಅವರ ಕುಲಗುರು (ಮನೆಯ ಗುರುಗಳು) ಶಿಂಗ್ಣಾಪುರ ಸಮೀಪದ ಶಾಂತಲಿ೦ಗ ಸ್ವಾಮಿಗಳು. ಅವರು ಮೂಲತಃ ಲಿಂಗಾಯತ ಪರಂಪರೆಯ ಶ್ರೀಮಠ ಸ್ಥಾಪಿಸಿದ್ದರು. ಅದೇ ಕಾರಣಕ್ಕಾಗಿ ಗುರುಗಳ ಆಶ್ರಯ ಅವಲಂಬಿಸಿ, ಬರಗಾಲಕ್ಕೆ ಹೆದರಿ, ಬಳ್ಳಿಯಪ್ಪ ವಲಸೆ ಹೋಗಿದ್ದನು. ಹುಟ್ಟೂರು ತೊರೆದು ಅಂದಿನ ಮಹಾರಾಷ್ಟ್ರದ “ಮಣ್” ಎಂಬ ಪ್ರದೇಶದಲ್ಲಿ ನೆಲೆಸಿದ್ದನು. ಅಲ್ಲಿಯೇ ಪಶು ಪಾಲನಾ ಕಾಯಕದಲ್ಲಿ ತೊಡಗಿದ್ದ. ಮರಳಿ ಗದಗ ಜಿಲ್ಲೆಗೆ ಹಿಂತಿರುಗಲಿಲ್ಲ. ಮಹಾರಾಷ್ಟದಲ್ಲಿ ಶಿವಭಕ್ತನಾಗಿ, ಶ್ರೀಮಠದ ಲಿಂಗಾಯತ ಆಚರಣೆಯಲ್ಲಿ ತೊಡಗಿದ್ದನು. ಅವರ ಕುಲ(ಮನೆ) ದೇವರು ಶ್ರೀಶೈಲ ಮಲ್ಲಿಕಾರ್ಜುನನಾಗಿದ್ದ. ಎಷ್ಟೋ ಬಾರಿ ಗದಗ ಮತ್ತು ಮಹಾರಾಷ್ಟ್ರ ಪ್ರದೇಶದಿಂದ ಪಾದಯಾತ್ರೆಯ ಮೂಲಕ ಶ್ರೀಶೈಲಕ್ಕೆ ತಲುಪಿ, ತಮ್ಮ ಭಕ್ತಿ ಸೇವೆಗೈದಿದ್ದೂ ಇದೆ.
“ಕಾಗೆಯೊಂದಗುಳ ಕಂಡರೆ ಕರೆಯದೆ ತನ್ನ ಬಳಗವನು?
ಕೋಳಿಯೊಂದು ಗುಟುಕ ಕಂಡರೆ ಕೂಗಿ
ಕರೆಯದೆ ತನ್ನ ಕುಲವೆಲ್ಲವ?
ಶಿವಭಕ್ತನಾಗಿ ಭಕ್ತಿಪಕ್ಷವಲ್ಲವಿದಿದ್ದರೆ
ಕಾಗೆ ಕೋಳಿಯಿಂದ ಕರಕಷ್ಟ ಕೂಡಲಸಂಗಮದೇವಾ”/
ಕ್ರಿ.ಶ. ೧೬೮೧ರಲ್ಲಿ ಉಲ್ಲೇಖಿಸಿದ ಶಿಂಗ್ಣಾಪುರದ ತಾಮ್ರ ಶಾಸನವೊಂದು ದೊರೆತಿದೆ. ಅದರಲ್ಲಿ ಬಳ್ಳಿಯಪ್ಪ ಗೋಪತಿ ಅಂದರೆ ಗೌರಡ್ ಮುಖ್ಯಸ್ಥನಾಗಿದ್ದ ಎಂದು ನಮೂದಿಸಿದೆ.
ಅಂದರೆ ಬಳ್ಳಿಯಪ್ಪನು, ಶಾಂತಲಿ೦ಗ ಸ್ವಾಮೀಜಿಯ ನೆರವಿನಿಂದ ಸ್ಥಿತಿವಂತನಾದ. ನಂತರ ಶ್ರೀಮಠದ ಸೇವೆಯಲ್ಲಿ ನಿರತನಾದ. ಪರಮ ಭಕ್ತನಾಗಿ ಸ್ವಾಮೀಜಿಗೆ ಮತ್ತು ಶ್ರೀಮಠಕ್ಕೆ ಆಪ್ತ ಒಡನಾಡಿಯಾದ. ಕ್ರಮೇಣ ಸ್ಥಿತಿವಂತನಾಗಿ, ಶಂಭುಲಿ೦ಗ ಮಹಾದೇವನ ಗುಡಿ ನಿರ್ಮಿಸಿದ. ಅದಕ್ಕೆ ತಾನೆ ಅಧ್ಯಕ್ಷನಾಗಿ ಉಸ್ತುವಾರಿ ವಹಿಸಿಕೊಂಡಿದ್ದ. ಅವನ ನಾಲ್ಕನೆ ತಲೆಮಾರಿನ ಕಿರಿಯ ಮೊಮ್ಮಗನೆ ಮಾಲೋಜಿ ರಾಜೆ ಭೋಂಸ್ಲೆ (ಕ್ರಿ.ಶ.೧೫೫೩-೧೬೨೩) ಎಂದು ಗುರುತಿಸಲಾಗಿದೆ.
ಮರಾಠಿಯಲ್ಲಿ ಭೋಂಸ್ಲೆ ಎಂದರೆ ಹೊಯ್ಸಳ ಎಂದರ್ಥ. ಅದನ್ನು ಬ್ರಿಟಿಷರು ತಪ್ಪಾಗಿ ಉಚ್ಚರಿಸಿದ್ದಕ್ಕೆ, ಅವರ ಮನೆತನಕ್ಕೆ ಭೋಂಸ್ಲೆ ಎಂದು ದಾಖಲಿಸಿದರಂತೆ. ನಂತರ ಮಾಲೋಜಿ ರಾಜೆ ಸಹ ಲಿಂಗಾಯತ ಪರಂಪರೆಯ ಶಾಂತಲಿ೦ಗ ಸ್ವಾಮಿಯ ಶ್ರೀಮಠಕ್ಕೆ ಅಧ್ಯಕ್ಷನಾಗಿ ಮುಂದುವರೆದಿದ್ದ. ಶಾಂತಲಿ೦ಗ ಸ್ವಾಮೀಜಿ ಲಿಂಗೈಕ್ಯರಾದ ಬಳಿಕ ಜಯರಾಮ ಸ್ವಾಮಿಗಳು ಶ್ರೀಮಠದಲ್ಲಿ ಮುಂದುವರೆದರು. ಅವರು ವಡಗಾಂವದಲ್ಲೊ೦ದು ಲಿಂಗಾಯತ ಶಾಖಾಮಠ ಸ್ಥಾಪಿಸಿದ್ದರು. ಇನ್ನೊಂದು ತಾಮ್ರದ ತಟ್ಟೆಯಲ್ಲಿ ಮಾಲೋಜಿ ರಾಜೆನ ಅಜ್ಜನಾದ ಮಹಾಭಿಲ್ಲಮನ ಕುರಿತು ದಾಖಲಿಸಿದೆ. ಭಿಲ್ಲಮ ಮಾಂಡಲಿಕನಾಗಿದ್ದ ಎಂದು ನಮೂದಾಗಿದೆ.
“ಸಂಸಾರವೆ೦ಬುದು ಗಾಳಿಯ ಸೊಡರು
ಸಿರಿಯೆಂಬುದೊಂದು ಸುತೆಯ ಮಂದಿ ಕಂಡಯ್ಯ/
ಇದ ನೆಚ್ಚಿ ಕೆಡಬೇಡ ಸಿರಯೆಂಬುದ/
ಮರೆಯದೆ ಪೂಜಿಸು ಕೂಡಲಸಂಗಮದೇವನ”/
ಈ ಭೋಂಸ್ಲೆ ವಂಶದ ಎಂಟನೆ ತಲೆಮಾರಿನವನಾದ ಶಿವಾಜಿ, ಆರಂಭದಲ್ಲಿ ವಡಗಾಂವ ಲಿಂಗಾಯತ ಶ್ರೀಮಠಕ್ಕೆ ಭೇಟಿ ನೀಡಿದ್ದ. ಅಲ್ಲಿನ ಸ್ವಾಮಿಜಿಯಿಂದ ಲಿಂಗ ಧೀಕ್ಷೆ ಪಡೆದಿದ್ದ. ಹಣೆಯ ಮೇಲೆ ವಿಭೂತಿ ಧಾರಣೆ ಮಾಡುತ್ತಿದ್ದ. ಹಾಗೂ ಗುರು ಭೋಧನೆ ಹೊಂದಿದ್ದ ಎಂದು ಪ್ರತೀತಿ ಇದೆ, ಹೀಗಾಗಿ ಶಿವಾಜಿ ತಾಯಿ ಜೀಜಾಬಾಯಿ ಅವೆರಡೂ ಶ್ರೀಮಠಗಳಿಗೆ ಉಂಬಳಿ, ಪ್ರತಿ ತಿಂಗಳು ದೇಣಿಗೆ ರೂಪದಲ್ಲಿ ಹಣಕಾಸಿನ ನೆರವು ಕಲ್ಪಿಸಿದ್ದಳು. ಶಿವಾಜಿ ತನ್ನ ದಕ್ಷಿಣ ಭಾರತದ ಪ್ರವಾಸದ ಸಂದರ್ಭದಲ್ಲಿ, ಶ್ರೀಶೈಲಕ್ಕೆ ಭೇಟಿ ನೀಡಿದ್ದ. ತನ್ನ ಪೂರ್ವಜರ ಕುಲದೇವರಾದ ಶ್ರೀಶೈಲದ ಲಿಂಗಕ್ಕೆ ಪೂಜೆ ಸಲ್ಲಿಸುತ್ತ ಅಲ್ಲಿಯೇ ಎಂಟು ದಿನ ತಂಗಿದ್ದ ಎಂದು ಉಲ್ಲೇಖವಿದೆ.
ಕ್ಷತ್ರಿಯನಲ್ಲ ಎಂಬ ಕಾರಣಕ್ಕೆ ಶಿವಾಜಿಯ ಪಟ್ಟಾಭಿಷೇಕಕ್ಕೆ ಸ್ಥಳೀಯ ಪುರೋಹಿತರು ವಿರೋಧಿಸಿದ್ದರು. ಲಿಂಗಾಯತ ಕುಲಗೋತ್ರದ ಹಿನ್ನೆಲೆ ಹೊಂದಿದ್ದಕ್ಕೆ ಶಾಸ್ತ್ರದ ಪ್ರಕಾರ ಪಟ್ಟಾಭಿಷೇಕಕ್ಕೆ ಒಪ್ಪಿರಲಿಲ್ಲ. ಅವಾಗ ಕಾಶಿಯಲ್ಲಿದ್ದ ನಾಗಾ(ಗಾಗಾ) ಭಟ್ಟನೆಂಬ ವಿಶೇಷ ಪುರೋಹಿತನನ್ನು ಆಮಂತ್ರಿಸಿ, ಒಂದು ಲಕ್ಷ ಪೌಂಡ್ ಮೊತ್ತದ ಧನ ಕನಕಾದಿಗಳನ್ನು ನೀಡಿ ಪಟ್ಟಾಭಿಷೇಕಕ್ಕೆ ಮನವೊಲಿಸಿದ್ದನು. ಅಲ್ಲದೆ ರಾಜ್ಯಭಾರಕ್ಕೆ ಕ್ಷತ್ರಿಯನಲ್ಲದಿದ್ದರೂ ರಾಜಸ್ಥಾನದ ಸಿಸೊದಿಯಾ ಎಂಬ ರಜಪೂತ ವಂಶಸ್ಥರ ಮನೆತನದವನೆಂದು ತನ್ನ ಜನ್ಮ ಜಾತಕವನ್ನು ಸ್ವತಃ ಶಿವಾಜಿಯೆ ತಿದ್ದುಪಡಿಗೊಳಿಸಿ ಪಟ್ಟಾಭಿಷೇಕವಾಗಿದ್ದು ಚರಿತ್ರೆ.
ಕ್ರಿ.ಶ.೧೬೭೪ರ ಜೂನ್ ೬ರಂದು ಶಿವಾಜಿಗೆ ಪ್ರಥಮ ಪಟ್ಟಾಭಿಷೇಕವಾಯಿತು. ಅದೇ ವರ್ಷ ಜೂನ್ ೧೮ ರಂದು ಶಿವಾಜಿ ತಾಯಿ ಲಿಂಗೈಕ್ಯಳಾದಳು. ಹೀಗಾಗಿ ೨೪ ಸಪ್ಟಂಬರ್ ೧೬೭೪ರಂದು ಎಂಟು ನದಿಗಳ ಜಲರಾಶಿಯಿಂದ ಶಿವಾಜಿಗೆ ಎರಡನೆ ಪಟ್ಟಾಭಿಷೇಕವಾಯಿತು.
“ಆರು ಮುನಿದು ನಮ್ಮನೇನ ಮಾಡುವರು
ಊರು ಮುನಿದು ನಮ್ಮನೆಂತು ಮಾಡುವರು/
ನಮ್ಮ ಕುನ್ನಿಗೆ ಕೂಸ ಕೊಡಬೇಡ
ನಮ್ಮ ಸೋಣಗಂಗೆ ತಳಿಗೆಯಲಿಕ್ಕಬೇಡ
ಆನೆಯ ಮೇಲೆ ಹೋಹವನ ಶ್ವಾನ ಕಚ್ಚಬಲ್ಲುದೆ,
ನಮಗೆ ನಮ್ಮ ಕೂಡಲ ಸಂಗಮನುಳ್ಳನ್ನಕ್ಕ”/
ಆ ಪಟ್ಟಾಭಿಷೇಕದ ಬಳಿಕ ಕ್ರಿ.ಶ. ೧೬೭೬ರಲ್ಲಿ ಹಂಪಿಯ ವಿಜಯನಗರಕ್ಕೆ ಶಿವಾಜಿ ಭೇಟಿ ನೀಡಿದ್ದ. ಪುರಾತನ ಪರಂಪರೆಯ ನೆನೆಯುತ ಕೆಲಕಾಲ ಧ್ಯಾನಸ್ಥನಾಗಿ ಕುಳಿತಿದ್ದ ಆ ಸಂದರ್ಭದಲ್ಲಿ ತಮ್ಮೂರಿಗೆ ಶಿವಾಜಿ ಆಗಮಿಸಿದ್ದಾನೆಂದು ಸ್ಥಳೀಯರು ಸಭೆ ಸೇರಿದರು. ಅವರು ಮೂಲ ಹಿಂದುಗಳಾದ್ರೂ ಮುಸ್ಲಿಂ ಆಡಳಿತದ ಧರ್ಪಕ್ಕೆ ಬಸವಳಿದಿದ್ದರು. ಕೆಲವು ಹಿಂದು ನಿರಾಶ್ರಿತರು ಶಿವಾಜಿಗೆ ವಿಜಯನಗರದಲ್ಲೇ ರಾಜ್ಯಭಾರ ಮಾಡುವಂತೆ ಭಿನ್ನವಿಸಿಕೊಂಡರು. “ಪತನಗೊಂಡ ಹಿಂದೂ ಸಾಮ್ರಾಜ್ಯದ ಪುನರುತ್ಥಾನಗೊಳಿಸುವುದೇ ನನ್ನ ಗುರಿ, ಹೊರತು ಇಲ್ಲಿರಲಾರೆ”! ಎಂದು ಅವರ ಮುಂದೆ ಶಿವಾಜಿ ಶಪಥ ಗೈದಿದ್ದೆ, ಮುಂದೆ ಹಿಂದು ಸಾಮ್ರಾಟ್‌ನಾಗಿ ಬೆಳೆಯಲು ಕಾರಣ ಎನ್ನಲಾಗುತ್ತಿದೆ.
ಶಿವಾಜಿ ತಂದೆ ಷಹಜಿ, ಹೊದಿಗೆರೆ ಇಂದಿನ ದಾವಣಗೆರೆ ಜಿಲ್ಲೆಯ ಶಿಕಾರಿಗೆ ಹೋದಾಗ, ಕುದುರೆಯ ಮೇಲಿಂದ ಬಿದ್ದು ಸಾವನ್ನಪ್ಪುತ್ತಾನೆ. ಅಲ್ಲಿಯೇ ಸಮಾಧಿ ಮಾಡಿದ್ದು ಇಂದಿಗೂ ಗಮನಿಸಬಹುದು. ಶಿವಾಜಿ ಸಹೋದರನಾದ ಸಂಭಾಜಿ, ಕೊಪ್ಪಳದ ಕನಕಗಿರಿಯಲ್ಲಿ ಸಂಭವಿಸಿದ ಸಮರದಲ್ಲಿ ಮೃತ್ಯು ಹೊಂದಿದ್ದು, ಅಲ್ಲಿಯೇ ಸಮಾಧಿ ಮಾಡಲಾಗಿದೆ.
“ಸತ್ಯವೂ ಇಲ್ಲ, ಅಸತ್ಯವೂ ಇಲ್ಲ,
ಸಹಜವೂ ಇಲ್ಲ, ಅಸಹಜವೂ ಇಲ್ಲ,
ನಾನೂ ಇಲ್ಲ, ನೀನೂ ಇಲ್ಲ/
ಇಲ್ಲ, ಇಲ್ಲ ಎಂಬುದು ತಾನಿಲ್ಲ,
ಗುಹೇಶ್ವರನೆಂಬುದು ತಾ ಬಯಲು”/
ಕ್ರಿ.ಶ.೧೬೮೦ ರಲ್ಲಿ ೧೨ ದಿನಗಳವರೆಗೆ ವಿಫರೀತ ಭೇಧಿಯಿಂದ ಬಳಲಿ ಶಿವಾಜಿ ಅಸ್ವಸ್ಥನಾಗುತ್ತಾನೆ. ಸೂಕ್ತ ಚಿಕಿತ್ಸೆ ಫಲಿಸದೆ ಅದೇ ವರ್ಷ ಏಪ್ರಿಲ್ ಮೂರರಂದು ತನ್ನ ೫೦ನೆ ವಯಸ್ಸಿಗೆ ಮೃತ್ಯು ಹೊಂದಿದ್ದಾನೆ ಎಂದು ಬ್ರಿಟಿಷ್ ಮೂಲಗಳು ಹೇಳುತ್ತವೆ. ಶಿವಾಜಿ ಒಟ್ಟು ಎಂಟು ಪತ್ನಿಯರನ್ನು ಹೊಂದಿದ್ದನು. ಅವರಲ್ಲಿ ಹಿರಿಯ ಪತ್ನಿ ಪುತಲಬಾಯಿ ಬಂಜೆಯಾಗಿದ್ದಕ್ಕೆ, ಅಂದೆ ಚಿತೆಗೆ ಹಾರಿ ಸತಿ ಪದ್ಧತಿಗೆ ಬದ್ಧಳಾದಳು. ಶಿವಾಜಿಯ ಹಿರಿಯ ಮಗ ಸಂಭಾಜಿ ತನ್ನ ಇಂದ್ರಿಯ ಸುಖಕ್ಕಾಗಿ ವ್ಯಸನಿಯಾಗಿದ್ದ. ಬ್ರಾಹ್ಮಣ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ್ದಕ್ಕೆ ಪನ್ಹಾಳಾ ಕೋಟೆಯಲ್ಲಿ ಕಾರಾಗೃಹ ಶಿಕ್ಷೆಗೊಳಗಾಗಿದ್ದ.
ತನಗೆ ಮುನಿವವರಿಗೆ ತಾ ಮುನಿಯಲೇಕಯ್ಯಾ?
ತನಗಾದ ಆಗೇನು? ಅವರಿಗಾದ ಚೇಗೇನು?
ತನುವಿನ ಕೋಪ ತನ್ನ ಹಿರಿಯತನದ ಕೇಡು;
ಮನದ ಕೋಪ ತನ್ನರುಹಿನ ಕೇಡು
ಮನೆಯೊಳಗಣ ಕಿಚ್ಚು ಮನೆಯ ಸುಟ್ಟಲ್ಲದೆ
ನೆರಮನೆಯ ಸುಡುವುದೆ ಕೂಡಲಸಂಗಮದೇವಾ”/
ಶಿವಾಜಿಯ ಎರಡನೆಯ ಪತ್ನಿಯಾಗಿದ್ದ ಸೋಯರಾಬಾಯಿ ತನ್ನ ೧೦ ವರ್ಷದ ಮಗನಾದ ರಾಜಾರಾಮನನ್ನು ಪಟ್ಟಾಭಿಷೇಕಕ್ಕೆ ಯೋಜನೆ ರೂಪಿಸಿದ್ದಳು. ಅದರಂತೆ ಕ್ರಿ.ಶ.೧೬೮೦ ಎಪ್ರಿಲ್ ೨೧ ರಂದು ಅಪ್ರಾಪ್ತನ ರಾಜನ ಸಿಂಹಾಸನಕ್ಕೆ ಪಟ್ಟಾಭಿಷೇಕಗೊಳಿಸಲಾಯಿತು. ಅದನ್ನು ವಿರೋಧಿಸಿದ ತನ್ನ ಸಂಬ೦ಧಿಗಳಿಗೆ ವಿಷ ಪ್ರಾಷಣಗೊಳಿಸಿದ ಆರೋಪಕ್ಕೆ ರಾಜಾರಾಮನ ತಾಯಿ ಸೋಯರಾಬಾಯಿ ಮತ್ತು ಇನ್ನೋರ್ವ ಪತ್ನಿಯಾಗಿದ್ದ ಜಾನಕಿಬಾಯಿಯನ್ನು ಜೈಲಿಗೆ ಹಾಕಿದ್ದಲ್ಲದೆ, ಪಿತೂರಿಯ ಆರೋಪದ ಮೇಲೆ ಅವರನ್ನು ಗಲ್ಲಿಗೇರಿಸಲಾಯಿತು.

– ಡಾ. ಸತೀಶ ಕೆ. ಇಟಗಿ, ಪತ್ರಿಕೋದ್ಯಮ ಉಪನ್ಯಾಸಕ
ಅಂಚೆ: ಕೋಳೂರ-೫೮೬೧೨೯, ತಾ: ಮುದ್ದೇಬಿಹಾಳ,
ಜಿ: ವಿಜಯಪುರ-೫೮೬೧೨೯ (ಕರ್ನಾಟಕ ರಾಜ್ಯ)
ಮೊ: ೯೨೪೧೨೮೬೪೨೨
Email: satishitagi10@gail.com

