ಕವನ ವಿಶ್ಲೇಷಣೆ ; ಸಕಾರಾತ್ಮಕತೆಯ ಹೊಳಹು ಬಿಂಬಿಸುವ ಕವನ

Must Read

ಜೀವಕಳೆ ಚಿಮ್ಮಿರಲಿ

ನೂರು ನೋವಿನ ಮಧ್ಯೆ
ಕಿರುನಗೆಯು ಹುಟ್ಟಿರಲಿ
ದುಃಖ ಕಡಲಿನ ನಡುವೆ
ಹುಟ್ಟು ಹಾಕುವ ದೋಣಿ

ಕಷ್ಟಗಳ ಜಡಿಮಳೆಯು
ನಂಬಿಕೆಯ ಕೊಡೆಯಿರಲಿ
ಶೋಕದ ಮನೆಯಲ್ಲಿ
ಪ್ರೀತಿ ಮೂಡಿರಲಿ

ಕತ್ತಲೆಯ ದಾರಿಯಲಿ
ಮಿಣುಕು ಬೆಳಕೊಂದಿರಲಿ
ಇರುಳು ಬವಣೆಯ ಸರಿಸಿ
ಹೊಸ ಬೆಳಕು ಉದಯಿಸಲಿ

ನಲುಗಿ ನಡುಗಿದ ಜೀವ
ಮುಗಿಲು ಮಲ್ಲಿಗೆ ಭಾವ
ಸಾವು ಸೋಲಿನ ಸರಣಿಯಲಿ
ಜೀವಕಳೆ ಚಿಮ್ಮಿರಲಿ

ಹುಟ್ಟಿದ್ದು ಬದುಕಲು
ಸತ್ತು ಸೋಲುವುದಲ್ಲ
ಒಣಗಿದ ಬೆಟ್ಟದಲಿ
ಹಸಿರು ಹುಲ್ಲಿನ ಚಿಗುರು

ಬಳಲದಿರು ಜೀವನದಿ
ಗಟ್ಟಿಯಾಗುವ ಜಟ್ಟಿ
ಏನಾದರೂ ಸಾಧಿಸು
ಮನುಜ ಜನ್ಮದಿ ಹುಟ್ಟಿ
__________________

ಡಾ. ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ

ಡಾ. ಶಶಿಕಾಂತ ಪಟ್ಟಣ ಸರ್ ಅವರು ಬರೆದ ಕವನ ” ಜೀವಕಳೆ ಚಿಮ್ಮಿರಲಿ ” ಇದೊಂದು ಅತ್ಯಂತ ಶಕ್ತಿಯುತವಾಗಿ ಮತ್ತು ಅಷ್ಟೇ ಪರಿಣಾಮಕಾರಿಯಾಗಿ ಮೂಡಿ ಬಂದ ಕವನ. ಸಕಾರಾತ್ಮಕವಾಗಿ ಹೊಳಹು ಬಿಂಬಿಸುವ ಕವನ ಮತ್ತು ತನ್ನಿಂದ ತಾನೇ ಎಲ್ಲರ ಮನಸ್ಸನ್ನು ತಟ್ಟಿ ಧೈರ್ಯ ತುಂಬುವ ಕೆಲಸ ಮಾಡುತ್ತದೆ.

ಡಾ. ಪಟ್ಟಣ ಸರ್ ಅವರ ಹೆಚ್ಚಿನ ಕವನಗಳು ಸಮಾಜಕ್ಕೆ ಏನಾದರೂ ಸಂದೇಶ, ಭರವಸೆ, ಮಾನವೀಯತೆ, ರಾಷ್ಟೀಯ ಏಕತೆ, ನಾಡು-ನುಡಿಯ ಅಭಿಮಾನ, ಸಂಘಟನೆ, ಬುದ್ಧ, ಬಸವ, ಬಾಪು, ಅಂಬೇಡ್ಕರ್ ಅವರ ಬೋಧನೆಗಳು, ಹೀಗೆ ಒಂದಿಲ್ಲ ಒಂದು ರೀತಿಯಲ್ಲಿ ಸಮಾಜಕ್ಕೆ ಉಪಯೋಗವಾಗುವಂತಹ ನಿಟ್ಟಿನಲ್ಲಿ ಮೂಡಿಬರುತ್ತವೆ. ಇದು ಒಬ್ಬ ಬರಹಗಾರನ ನಿಜವಾದ ಆದ್ಯ ಕರ್ತವ್ಯ. ಆ ನಿಟ್ಟಿನಲ್ಲಿ ಅವರು ತಮ್ಮ ಬರಹಗಳ ಮೂಲಕ ಹಗಲಿರುಳು ಕೆಲಸ ಮಾಡುತ್ತಿದ್ದಾರೆ.

ಜೀವನದ ಜಂಜಾಟದ ನಡುವೆ ನಾವೆಲ್ಲರೂ ನಗುತ್ತಾ ನಮ್ಮ ಜೀವನ ಸಾಗಿಸೋಣ. ದುಃಖದ ನಡುವೆಯೂ ನಮ್ಮ ಜೀವನದ ದೋಣಿಯ ಹುಟ್ಟು ಹಾಕುವುದು ನಿಲ್ಲಿಸುವುದು ಬೇಡ ಎನ್ನುವ ಗಟ್ಟಿತನವನ್ನು ಸಾರುವ ಸರಳವಾದ ಮೊದಲ ಸಾಲುಗಳೇ ಎಲ್ಲರ ಗಮನ ಸೆಳೆಯುತ್ತವೆ.

ಕಷ್ಟಗಳ ಜಡಿಮಳೆಯ ನಡುವೆ ನಂಬಿಕೆಯೆoಬ ಕೊಡೆಯಿರಲಿ, ಇದೊಂದು ಅದ್ಭುತವಾದ ಉಪಮೆ. ಶೋಕದ ಮಧ್ಯೆಯೂ ಪ್ರೀತಿ ಜಿನುಗುತ್ತಿರಲಿ ಎನ್ನುವ ಸಾಲುಗಳು ಜೀವನದಲ್ಲಿ ಒಂದು ರೀತಿಯ ಭರವಸೆ ಹುಟ್ಟಿಸುತ್ತವೆ.

ಕತ್ತಲೆಯ ದಾರಿಯಲ್ಲಿ ಮಿಣುಕು ಬೆಳಕೊಂದು ಮೂಡಲಿ, ಕತ್ತಲೆಯ ಬವಣೆ, ಸಂಕಷ್ಟಗಳು ದಾಟಿ ಹೊಸ ಬೆಳಗು ಮೂಡಲಿ ಎನ್ನುವ ಆಶಾಭಾವನೆ ಇನ್ನೊಂದು ಕಡೆಗೆ ಕಾಣುತ್ತದೆ.

ಒಣಗಿದ ಬೆಟ್ಟದಲ್ಲಿ ಹಸಿರಿನ ಚಿಗುರಾಗು, ಹುಟ್ಟಿರುವುದು
ಸಾರ್ಥಕವಾಗಿ ಬದುಕು ಕಂಡು ಕೊಳ್ಳಲು, ಸೋತು ಸಾಯುವುದಕ್ಕಲ್ಲ ಎನ್ನುವ ಬುದ್ಧಿಮಾತು ಸಹ ಇಲ್ಲಿದೆ.

ಜೀವನದಲ್ಲಿ ಬಳಲದೆ ಜಟ್ಟಿ ಯಂತೆ ಗಟ್ಟಿಯಾಗಿ ಹೋರಾಡು, ಮನುಜ ಜನ್ಮದಲಿ ಹುಟ್ಟಿದ ಮೇಲೆ ಏನಾದರೂ ಸಾಧಿಸಿ ತೋರಿಸು ಎನ್ನುವ ಕಿವಿಮಾತು ಎಲ್ಲರಿಗೆ ಜ್ಞಾನೋದಯದ ಬೆಳಕು ಮೂಡಿದ ಹಾಗೆ ಆಗುತ್ತದೆ.

ಒಟ್ಟಿನಲ್ಲಿ ಎಲ್ಲರಲ್ಲಿ ಭರವಸೆ ತುಂಬುವ, ಜೀವನದಲ್ಲಿ ನಂಬಿಕೆ ಮೂಡಿಸುವ, ನಮ್ಮ ಶಕ್ತಿಯನ್ನು ನಾವು ತಿಳಿಯುವಂತೆ ಮಾಡುವ, ಯಾವುದೇ ಕಷ್ಟ ಬಂದರೂ ಹಿಂಜರಿಕೆಯಿಲ್ಲದೆ ಮುನ್ನುಗ್ಗು ಎನ್ನುವ ಸರಳ ಸಂದೇಶ ಎಲ್ಲರಿಗೂ ತಲುಪುವಲ್ಲಿ ಯಶಸ್ವಿಯಾಗಿದೆ. ಎಲ್ಲರಲ್ಲಿ ಮತ್ತೊಮ್ಮೆ ಜೀವ ತುಂಬುವ ಕವನ.

ಸುಧಾ ಪಾಟೀಲ
ಬೆಳಗಾವಿ

LEAVE A REPLY

Please enter your comment!
Please enter your name here

Latest News

ಮಧ್ಯಾಹ್ನದ ಬಿಸಿಯೂಟ ಸೇವಿಸಿ ೫೦ ಕ್ಕೂ ಅಧಿಕ ಮಕ್ಕಳು ಅಸ್ವಸ್ಥ

ಬೀದರ - ಮಧ್ಯಾಹ್ನದ ಬಿಸಿಯೂಟ ಸೇವಿಸುತ್ತಿದ್ದಂತೆ ಮಕ್ಕಳಿಗೆ ವಾಂತಿ, ಭೇದಿ ಶುರುವಾಗಿ ೫೦ ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥಗೊಂಡ ಘಟನೆ ಔರಾದ್ ತಾಲೂಕಿನ ಜಮಲಪೂರ್ ಗ್ರಾಮದ...

More Articles Like This

error: Content is protected !!
Join WhatsApp Group