ನಾವು ಬಿಳಿಗಿರಿ ರಂಗನ ಬೆಟ್ಟದಿಂದ ಇಳಿದು ತಲಕಾಡಿಗೆ ಹೋಗಲು ತಿರುಮಕೂಡಲು ನರಸೀಪುರ ಕಡೆಗೆ ತಿರುಗಿ ಬಂದೆವು. ಟಿ.ನರಸೀಪುರದಿಂದ 10 ಕಿ.ಮೀ.ದೂರದಲ್ಲಿದೆ ಮೂಗೂರು. ನಾವು ಮೂಗೂರು ಮುಟ್ಟಿದಾಗ ಮಟ ಮಟ ಮಧ್ಯಾಹ್ನ. ರಣ ರಣ ಸುಡುವ ಬಿಸಿಲು. ಬಸ್ಸು ತ್ರಿಪುರ ಸುಂದರಿ ದೇವಸ್ಥಾನದ ಮುಂಭಾಗ ನಿಂತಿತು. ನಮ್ಮ ಪಾದರಕ್ಷೆಗಳನ್ನು ಬಸ್ಸಲ್ಲೇ ಬಿಟ್ಟು ದೇವಸ್ಥಾನ ಪ್ರವೇಶಿಸಿದೆವು. ದೇವಸ್ಥಾನದ ಒಳಾಂಗಣದ ನೆಲಹಾಸು ಕಲ್ಲು ಬಿಸಿಲಿಗೆ ಕಾದು ಪಾದಗಳು ಕಾದ ಕಾವಲಿ ಹೆಂಚಿನ ಮೇಲೆ ಇಟ್ಟಂತೆ ಬೆಂದವು. ತ್ರಿಪುರ ಸುಂದರಿ ಎಂದರೆ ಮೂರು ಲೋಕಗಳಲ್ಲಿ ಸುಂದರಿ. ಅಂತೆಯೇ ಇದು ಒಂದು ಸುಂದರವಾದ ದೇವಾಲಯವೂ ಹೌದು. ತ್ರಿಪುರ ಸುಂದರಿಯನ್ನು ಬ್ರಹ್ಮ ವಿಷ್ಣು ಮಹೇಶ್ವರರ ಒಕ್ಕೂಟವೆಂದು ತಿಬ್ಬಾದೇವಿ ಎಂದು ಕರೆಯುವ ದೇವಾಲಯವು ಸುಮಾರು 850 ವರ್ಷಗಳಷ್ಟು ಹಳೆಯದು. ಇದು ಮುಸ್ಲಿಂ ಪಾಳೇಗಾರ ನಿರ್ಮಿಸಿದ ಹಿಂದು ದೇವಾಲಯ. ಪಾಳೇಗಾರ ನವಾಬ್ ಬಾಬಾ ಸಾಹೇಬನು ತನ್ನ ಆಡಳಿತ ಪ್ರದೇಶ ವಿಸ್ತರಿಸಲು ದಂಡಯಾತ್ರೆಗೆ ಹೊರಟು ಮೂಗೂರಿನಿಂದ 3 ಕಿ.ಮೀ.ದೂರದ ಹೊಸಹಳ್ಳಿಯಲ್ಲಿ ವಿಶ್ರಾಂತಿ ಪಡೆಯಲು ಸೈನಿಕರಿಗೆ ತಿಳಿಸಿ ತಾನು ನೇರಳೆ ಮರದ ಕೆಳಗೆ ಕಲ್ಲಿನ ಮೇಲೆ ತಲೆ ಇಟ್ಟು ಮಲಗುತ್ತಾನೆ. ಆಗ ಇದ್ದಕ್ಕಿದ್ದಂತೆ ಪ್ರಕಾಶಮಾನ ಬೆಳಕು ಗೋಚರಿಸುತ್ತದೆ. ತ್ರಿಪುರ ಸುಂದರಿ ದೇವಿ ಅವನ ಮುಂದೆ ಪ್ರತ್ಯಕ್ಷಳಾಗುತ್ತಾಳೆ.
ತಾನು ಐಕ್ಯಗೊಂಡಿದ್ದ ಸ್ಥಳದಲ್ಲಿ ಆತನ ಮಲಗಿದ್ದರಿಂದ ಇದೆಲ್ಲವೂ ಆಯಿತೆಂದು ಹೇಳುತ್ತಾಳೆ. ಆದರೆ ಇದನ್ನು ನಂಬದೆ ನವಾಬನು ಒಣಗಿದ ಜೋಳದ ಕಡ್ಡಿಯನ್ನು ತರಿಸಿ ಬೇರು ಮೇಲೆ ಮಾಡಿ ಗಿಡ ನೆಟ್ಟು ನಾಳೆ ಸಂಜೆಯೊಳಗೆ ಈ ಜೋಳದ ಕಡ್ಡಿ ಮೊಳಕೆ ಒಡೆದಿದ್ದರೆ ನೀನು ದೇವರೆಂದು ನಂಬುವುದಾಗಿ ತಿಳಿಸುತ್ತಾನೆ ಹಾಗೂ ಸುತ್ತಲೂ ಸೈನಿಕರನ್ನು ಕಾವಲಿಸಿ ಯಾರು ಗಿಡಕ್ಕೆ ನೀರು ಹಾಕದಂತೆ ನೋಡಿಕೊಳ್ಳುವಂತೆ ಆಜ್ಞಾಪಿಸುತ್ತಾನೆ. ಆದರೂ ಗಿಡ ಚಿಗರೊಡೆದು ನವಾಬನಿಗೆ ನಂಬಿಕೆ ಬರುತ್ತದೆ.
ದೇವಸ್ಥಾನ ಕಟ್ಟಲು ಅಪ್ಪಣೆ ಪಡೆದು ಮೂಗೂರಿನಲ್ಲಿ ದೇವಾಲಯವನ್ನು ಕಟ್ಟಿಸಿದನೆಂದು ಕಥೆ ಹೇಳುತ್ತದೆ. ದೇವಿಯು ಈ ಸೀಮೆಯಲ್ಲಿ ನೆಲೆಸಿದ್ದ ಮೂಕಾಸುರನ ಸಂತತಿಯನ್ನು ನಾಶ ಪಡಿಸಿ ಈ ಕ್ಷೇತ್ರದಲ್ಲಿ ನೆಲೆಸಿದ್ದಾಳೆಂಬ ಪ್ರತೀತಿ ಇದೆ. ಆದಿಶಕ್ತಿ ದೇವಿಯ ಒಂದು ಅವತಾರ. ದುರ್ಗಾ ಮಹಾಕಾಳಿ ದೇವಿಯಂತೆ ತ್ರಿಪುರ ಸುಂದರಿ ದೇವಿಯು ಪಾರ್ವತಿ ದೇವಿಯನ್ನು ಪ್ರತಿನಿಧಿಸುತ್ತಾಳೆ. ತ್ರಿಪುರ ಸುಂದರಿ ದೇವಿಯನ್ನು ತ್ರಿಪುರ ಬಾಲಾ, ತ್ರಿಪುರ ಸುಂದರಿ, ತ್ರಿಪುರ ಬೈರವಿ ಎಂಬ ಮೂರು ರೂಪಗಳಲ್ಲಿ ಚಿತ್ರಿಸಲಾಗಿದೆ. ಮಗುವಿನ ರೂಪವನ್ನು ಬಾಲ ಸುಂದರಿ, ಯುವ ರೂಪವನ್ನು ಶೋಡಶಿ ಎಂದೂ ತ್ರಿಪುರ ಸುಂದರಿ ಮೂರು ಲೋಕಗಳ ಅದ್ಭುತ ಶಾಶ್ವತ ಸೌಂದರ್ಯ ಪ್ರತಿನಿಧಿಸುತ್ತಾಳೆ.
ತ್ರಿಪುರ ಬೈರವಿ ಲಲಿತಾ ದೇವಿಯ ಉಗ್ರ ಶಕ್ತಿ. ಈ ಹಿಂದೆ ಎ.ಸಿ.ರಾಜು ನಿರ್ದೇಶನದಲ್ಲಿ ದೇವಿಮಹಾತ್ಮೆ ನಾಟಕ ಹಾಸನದಲ್ಲಿ ಪ್ರದರ್ಶಿತವಾಗಿತ್ತು. ನಾಟಕದಲ್ಲಿ ಅಸುರರ ಸಂಹಾರಕ್ಕಾಗಿ ದೇವಿಯ ಅವತಾರದ ಕಥೆಯನ್ನು ಅದ್ಭುತ ಕಾಲ್ಪನಿಕತೆಯಲ್ಲಿ ಹೆಣೆಯಲಾಗಿದೆ. ನಾಟಕ ನೋಡಿ ಬರೆದಿದ್ದ ಬರಹ 2014ರಲ್ಲಿ ಪ್ರಕಟಿತ ರಂಗ ಪ್ರಯೋಗಗಳ ವಿಮರ್ಶಾ ಕೃತಿ ರಂಗಸಿರಿ ಕಥಾ ಐಸಿರಿ ಕೃತಿಯಲ್ಲಿದೆ. ತಪೋಬಲದಿಂದ ವರವ ಮಡೆದು ಸಾವಿಲ್ಲವೆಂಬ ಗರ್ವದಿಂದ ಮೆರೆವ ಅಸುರರ ಸಂಹಾರಕ್ಕೆ ದೇವಿಯ ಅವತಾರ ಕಥೆಯು ಅದ್ಭುತ ರೋಚಕವಾಗಿದೆ. ತ್ರಿಪುರ ಸುಂದರಿ ಪೌರಾಣಿಕ ಕಥೆ ಇದಕ್ಕೆ ಹತ್ತಿರವಾಗಿದೆ. ಪ್ರತಿ ವರ್ಷ ವಸಂತ ಹೂ ಬಿಡುವ ಹಬ್ಬವನ್ನು ಈ ಭಾಗದಲ್ಲಿ ಆಚರಿಸಲಾಗುತ್ತದೆ. ಇದು ಚಿಗುರು ಹೊಡೆಯುವ ಜಾತ್ರೆ ಎಂದು ಹೆಸರಾಗಿದೆ. ಈ ಹಬ್ಬದ ಆಚರಣೆಗೆ ಅಕ್ಕಪಕ್ಕದ ಗ್ರಾಮಗಳಿಂದ ತಿಬ್ಬಾದೇವಿಯ ಸಹೋದರಿಯರೆಂದು ಹೇಳುವ ದೇವತೆಗಳನ್ನು ಮೆರವಣಿಗೆಯಲ್ಲಿ ತರಲಾಗುತ್ತದೆ. ಹಬ್ಬ ಮೂರು ದಿನ ನಡೆಯುತ್ತದೆ. ಹೊಸಹಳ್ಳಿಯಲ್ಲಿ ನೇರಳೆ ಮರದ ಕೊಂಬೆಯನ್ನು ರಾತ್ರಿ ಸವರಿ ಬರುತ್ತಾರೆ. ಮಾರನೇ ದಿನ ಅದು ಚಿಗುರೊಡೆದಿರುತ್ತದೆ. ಇದನ್ನು ನೋಡಲು ಅಪಾರ ಸಂಖ್ಯೆಯಲ್ಲಿ ಜನ ಸೇರುತ್ತಾರೆ. ಇಲ್ಲಿ ನಡೆಯುವ ಬಂಡಿ ಹಬ್ಬವು ವಿಶೇಷವಾಗಿದೆ. ಉತ್ಸವ ಮೂರ್ತಿಯ ಬಂಡಿಯನ್ನು ಎತ್ತುಗಳನ್ನು ಕಟ್ಟಿ ಓಡಿಸುತ್ತಾರೆ. ದೇವಾಲಯವು ಸುತ್ತಲೂ ಎತ್ತರದ ಗೋಡೆಗಳನ್ನು ಹೊಂದಿದ್ದು ವಿವಿಧ ರೂಪಗಳಲ್ಲಿ ದೇವಿಯ ಸಣ್ಣ ಪತ್ರಿಮೆಗಳಿಂದ ಅಲಂಕರಿಲ್ಪಟ್ಟಿವೆ. ಗರ್ಭಗೃಹದ ಮೇಲೆ ವಿವಿಧ ರೂಪಗಳಲ್ಲಿ ದೇವಿಯ ಸುಂದರವಾದ ಕೆತ್ತನೆ ಮತ್ತು ವರ್ಣರಂಜಿತ ಪ್ರತಿಮೆಗಳ ಗೋಪುರವಿದೆ. ಗರ್ಭಗುಡಿಯಲ್ಲಿ ಕಪ್ಪುಕಲ್ಲಿನ ವಿಗ್ರಹವು ಕುಳಿತ ಭಂಗಿಯಲ್ಲಿ ಶೋಭಾಯಮಾನವಾಗಿದೆ. ವಿವಿಧ ಹೂವು, ಒಡವೆ ವಸ್ತ್ರಗಳಿಂದ ದೇವಿಯನ್ನು ಶೃಂಗರಿಸಿ ಪೂಜಿಸಲಾಗುತ್ತದೆ.
ಇಲ್ಲಿ ಮೂಗನ್ನು ನೆಲಕ್ಕೆ ಸೋಕಿಸಿ ನಮಸ್ಕರಿಸಬೇಕೆಂದು, ಇದರಿಂದ ನಮ್ಮಲ್ಲಿನ ಅಹಂಕಾರವನ್ನು ತೊರೆಯುತ್ತೇವೆ ಎನ್ನುತ್ತಾರೆ. ನಾವು ದೇವಿ ದರ್ಶನ ಮಾಡಿ ಹೊರಬಂದೆವು. ಬಸ್ಸಿನ ಕಡೆ ನಡೆವಾಗ ನಮ್ಮ ಗುಂಪಿನಲ್ಲಿ ಒಬ್ಬರು ‘ಇಲ್ಲಿ ಪ್ರಭುದೇವ್ ಮನೆ ಎಲ್ಲಿ..? ಎಂದು ಯಾರನ್ನೋ ಕೇಳಿದರು. ಆ ಕೂಡಲೇ ನನಗೂ ಪ್ರಭುದೇವ್ ಯಾರು ತಿಳಿಯಲಿಲ್ಲ. ಆತ ಎನಕೂ ತೆರಿಯಾದು ಪೋಯ..ಎಂದು ಹೇಳಲಿಲ್ಲ. ಸಿನಿ ದುನಿಯಾದ ಡ್ಯಾನ್ಸ್ ಮಾಸ್ಟರ್ ಮೂಗೂರು ಸುಂದರ್ ಊರು. ನಟ ಪ್ರಭುದೇವ್ ತಂದೆ. ನಾವು ಬಸ್ಸು ಹತ್ತಿ ಕುಳಿತೆವು. ನಮ್ಮ ಗುಂಪಿನ ಇಬ್ಬರು ಮಹಾಶಯರು ಬಾರ್ ಹುಡುಕಿ ಹೊರ ಹೋಗಿದ್ದರು. ಇವರಿಗಾಗಿ ಅರ್ಧಗಂಟೆ ಬಸ್ಸಿನಲ್ಲಿ ಕಾಯ್ದು ಕುಳಿತು ಬಿಸಿಲಿನ ಕಾವಿಗೆ ಬಸವಳಿದೆವು.
-ಗೊರೂರು ಅನಂತರಾಜು, ಹಾಸನ.
ಮೊ: 9449462879.
ವಿಳಾಸ: ಹುಣಸಿನಕೆರೆ ಬಡಾವಣೆ, 29ನೇ ವಾರ್ಡ್,3ನೇ ಕ್ರಾಸ್, ಶ್ರೀ ಶನೇಶ್ವರ ದೇವಸ್ಥಾನ ರಸ್ತೆ, ಹಾಸನ.