spot_img
spot_img

ಇತಿಹಾಸ ಸಂಸ್ಕೃತಿಗಳ ಮೇಲೆ ಬೆಳಕು ಚೆಲ್ಲುವ ಅಮೂಲ್ಯ ಕೃತಿ

Must Read

spot_img
- Advertisement -

ಹೊಸಪುಸ್ತಕ ಓದು

ಗತಾನುಶೀಲನ
ಲೇಖಕರು : ಡಾ. ಅಮರೇಶ ಯತಗಲ್
ಪ್ರಕಾಶನ : ಪಲ್ಲವಿ ಪ್ರಕಾಶನ, ಹೊಸಪೇಟೆ
ಮುದ್ರಣ : ೨೦೨೩

[ದಿನಾಂಕ ೯-೨-೨೦೨೫ರಂದು ಕಲಬುರ್ಗಿಯ ಕನ್ನಡ ನಾಡು ಲೇಖಕರ ಮತ್ತು ಓದುಗರ ಸಹಕಾರ ಸಂಘದವರು ಕೊಡುವ ಪ್ರತಿಷ್ಠಿತ ಪ್ರಶಸ್ತಿಗೆ ಪಾತ್ರವಾಗಿರುವ ಡಾ. ಅಮರೇಶ ಯತಗಲ್ ಅವರ ‘ಗತಾನುಶೀಲನ’ ಕೃತಿಯ ಅವಲೋಕನ]

ಡಾ. ಅಮರೇಶ ಯತಗಲ್ ಅವರು ನಮ್ಮ ನಾಡು ಕಂಡ ಶ್ರೇಷ್ಠ ಶಾಸನ ಸಂಶೋಧಕರು. ಶಂಬಾ, ಚಿದಾನಂದಮೂರ್ತಿ, ಎಂ. ಎಂ. ಕಲಬುರ್ಗಿ ಅವರ ತರುವಾಯ ಕನ್ನಡ ಸಂಶೋಧನಾ ಕ್ಷೇತ್ರ ಅನಾಥವಾಗುವುದೇನೋ ಎಂಬ ಆತಂಕ ಕನ್ನಡಿಗರಲ್ಲಿತ್ತು. ಆದರೆ ಈ ಎಲ್ಲ ಪೂರ್ವಸೂರಿಗಳ ಸಂಶೋಧನಾ ವಾರಸುದಾರಿಕೆಯನ್ನು ಅತ್ಯಂತ ಸಮರ್ಥವಾಗಿ ಮುನ್ನಡೆಸುತ್ತಿರುವವರ ಒಂದು ಕಡೆಯೇ ಇದೆ. ಅವರಲ್ಲಿ ಡಾ. ಅಮರೇಶ ಯತಗಲ್ ಅವರು ಒಬ್ಬರು ಎಂಬುದು ಸಂತೋಷದ ಸಂಗತಿ. ಕನ್ನಡ ವಿಶ್ವವಿದ್ಯಾಲಯದ ಶಾಸನಶಾಸ್ತ್ರ ವಿಭಾಗದ ಪ್ರಾಧ್ಯಾಪಕರು, ಮುಖ್ಯಸ್ಥರಾಗಿರುವ ಅವರು ಏನೇ ಮಾಡಿದರೂ ಬೃಹತ್ತಾದದ್ದನ್ನೇ ಮಾಡುತ್ತಾರೆ. ಈ ಹಿಂದೆ ಅವರು ನ್ಯಾಯಮೂರ್ತಿ ಶಿವರಾಜ ಪಾಟೀಲ ಅವರ ಅಭಿನಂದನ ಗ್ರಂಥ ‘ಸಾರ್ಥಕ ಬದುಕು’ ಎರಡು ಬೃಹತ್ ಸಂಪುಟಗಳಲ್ಲಿ ಪ್ರಕಟಿಸಿ ದಾಖಲೆಯನ್ನೇ ನಿರ್ಮಿಸಿದ್ದರು. ಕಳೆದ ವರ್ಷ ‘ವಾಲ್ಮೀಕಿ ವಿಜಯ’ ಎಂಬ ಸಾವಿರಕಿಂತ ಹೆಚ್ಚು ಪುಟದ ಬೃಹತ್ ಸಂಪುಟವನ್ನು ಸಂಪಾದಿಸಿ ಸಂಶೋಧನಾ ಕ್ಷೇತ್ರಕ್ಕೆ ವಿನೂತನ ಕೊಡುಗೆ ಕೊಟ್ಟಿದ್ದಾರೆ. ಶಾಸನ ಶಾಸ್ತ್ರದ ಅಧ್ಯಯನವೆಂದರೆ ನಮ್ಮ ಗತಕಾಲದ ಇತಿಹಾಸದ ಪುನರವಲೋಕನ. ಈ ಮೂಲಕ ವರ್ತಮಾನದ ನವೀಕರಣಕ್ಕೆ ನಾಂದಿ ಹಾಡುವ ಅಮೂಲ್ಯ ಲೇಖನಗಳನ್ನು ಒಳಗೊಂಡ ‘ಗತಾನುಶೀಲನ’ ಕೃತಿ ಕನ್ನಡ ಸಂಶೋಧನಾ ಕ್ಷಿತಿಜದ ವಿಸ್ತಾರಕ್ಕೆ ಪ್ರೇರಣೆ ನೀಡುತ್ತದೆ.

- Advertisement -

ನಮ್ಮ ಪ್ರಾಚೀನ ಜನರು ಇತಿಹಾಸದ ಅವಶ್ಯಕತೆ ಮತ್ತು ಮಹತ್ವವನ್ನು ಅರಿತಿದ್ದರು. ಇದರ ಉದ್ದೇಶ ಕೇವಲ ಪಂಡಿತರ ಅಧ್ಯಯನದ ವಸ್ತುವಾಗುವುದಕ್ಕೆ ಅಥವಾ ಮಾನವನ ಕುತೂಹಲವನ್ನು ಉತ್ತರಿಸುವುದಕ್ಕಲ್ಲ. ಮುಖ್ಯವಾಗಿ ಮನುಷ್ಯನು ಸನ್ಮಾರ್ಗದಲ್ಲಿ ನಡೆಯುವುದಕ್ಕೆ ಬೇಕಾದ ವಿವೇಕವನ್ನು ಪಡೆಯುವುದಕ್ಕೋಸ್ಕರ ಇಷ್ಟೆ ಅಲ್ಲ, ಇತಿಹಾಸವನ್ನು ಬರೆಯಬೇಕಾದರೆ ಎಷ್ಟೆಲ್ಲ ಆಕರಗಳನ್ನು ಒಟ್ಟು ಮಾಡಬೇಕಾಗುತ್ತದೆ, ಅವುಗಳನ್ನು ವಿಮರ್ಶಿಸಬೇಕಾಗುತ್ತದೆ ಎಂಬುವದನ್ನು ಕೂಡಾ ಸ್ಪಷ್ಟವಾಗಿ ಅರಿತಿದ್ದರು. ಕಾಶ್ಮೀರದ ಕಲ್ಹಣನು ತನ್ನ ಕೃತಿ `ರಾಜತರಂಗಿಣಿ’ (ಕ್ರಿ.ಶ.೧೧೭೮)ಯಲ್ಲಿ.

ದೃಷ್ಟಂ ದೃಷ್ಟಂ ನೃಪೋದಂತಂ ಬಧ್ವಾ ಪ್ರಮಯಮೀಯುಷಾಂ
ಅರ್ವಾಕ್ಕಾಲಭವೈರ್ವಾರ್ತಾ ಯತ್ಪಬಂಧೇಷು ಪೂರ್ಯತೆ ||
ದಾಕ್ಷ್ಯಂ ಕಿಯದಿದಂ ತಸ್ಮಾದಸ್ಮಿನ್ ಭೂತಾರ್ಥವರ್ಣನೆ |
ಸರ್ವಪ್ರಕಾರಂ ಸ್ಖಲಿತೆ ಯೋಜನಾಯ ಮಮೋದ್ಯಮಃ ||

“ಪ್ರಾಚೀನ ವಿದ್ವಾಂಸರು ತಮ್ಮ ಕಾಲದಲ್ಲಿ ಪ್ರತ್ಯೇಕ ಕಂಡು ತಿಳಿದ ರಾಜರ ವಿಷಯಗಳ ಬಗ್ಗೆ ಗ್ರಂಥಗಳನ್ನು ಬರೆದ ಕಾಲಜ್ಞಾನಿಗಳು. ಅನಂತರದ ವಿದ್ವಾಂಸರು ಈ ಹಿಂದಿನ ರಾಜರುಗಳ ಬಗ್ಗೆ ಬರೆಯುವಾಗ ಈ ಗ್ರಂಥಗಳಿಂದ ಸಂಗ್ರಹಿಸುವದಲ್ಲದೇ ಪ್ರಚಲಿತ ದಂತಕಥೆ, ಆಡುಮಾತುಗಳನ್ನು ಸೇರಿಸಿ ಬರೆದರು. ಹಾಗೆ ಮಾಡುವಾಗ, ವಿಚಕ್ಷಣತೆಯನ್ನು ಉಪಯೋಗಿಸಿಲ್ಲ, ವಿಮರ್ಶೆಯನ್ನು ಮಾಡಿಲ್ಲ. ಆದ್ದರಿಂದ ಈಗ ನನ್ನ ಗ್ರಂಥರಚನೆಯಲ್ಲಿ ಇಂಥ ತಪ್ಪುಗಳನ್ನೆಲ್ಲ ತೆಗೆದು ಲಭ್ಯವಿರುವ ಹಿಂದಿನ ಮಹತ್ವದ ಪತ್ರಗಳನ್ನು, ದಾನಪತ್ರಗಳನ್ನು ಶಾಸನಗಳನ್ನು ಪರಿಶೀಲಿಸಿ ಇವುಗಳ ಆಧಾರದ ಮೇಲೆ ವಿರೋಧಾಭಾಸಗಳನ್ನು ಬಗೆಹರಿಸಿ ಇತಿಹಾಸವನ್ನು ಬರೆಯುವ ಪ್ರಯತ್ನ ಮಾಡಿದ್ದೇನೆ” ಎಂದು ತನ್ನ ಕ್ರಮ ವಿಧಾನಗಳ ಬಗ್ಗೆ ಹೇಳಿದ್ದಾನೆ. ಈ ಮಾತುಗಳ ಹಿನ್ನೆಲೆಯಲ್ಲಿಯೇ ಡಾ. ಅಮರೇಶ ಯತಗಲ್ ಅವರ ಈ ಸಂಶೋಧನಾ ಕೃತಿ ಮೂಡಿಬಂದಿದೆ ಎಂದು ಹೇಳಿದರೆ ಅತ್ಯಯುಕ್ತಿಯಾಗಲಾರದು.

- Advertisement -

ಕಲ್ಹಣನು ಹೇಳಿದಂತೆ, ನಮ್ಮ ದೇಶದ ಉದ್ದಗಲಕ್ಕೂ ಹಾಗೂ ಸುಮಾರು ೫೦೦೦ ವರ್ಷðಗಳ ಉದ್ದಕ್ಕೂ ವಿಪುಲ ಗ್ರಂಥಗಳಲ್ಲದೆ ನಾನಾ ಪ್ರಕಾರದ ಪ್ರಾಚ್ಯವಸ್ತುಗಳು ಅಂದರೆ ವಿವಿಧ ಶಾಸನಗಳು, ಸ್ಮಾರಕಗಳು, ಮೂರ್ತಿಗಳು, ನೆಲೆಗಳು ಮೊದಲಾದವು ಹೇರಳವಾಗಿವೆ. ಸುಮಾರು ೧೮ನೇ ಶತಮಾನದ ಮಧ್ಯಭಾಗದಿಂದ, ಹೆಚ್ಚಾಗಿ ಭಾರತೀಯ ಇತಿಹಾಸ ಮತ್ತು ಸಂಸ್ಕೃತಿಯಲ್ಲಿ ಆಸ್ಥೆತಳೆದ ಬ್ರಿಟಿಷ್ ಅಧಿಕಾರಗಳು ಹಾಗೂ ಭಾರತೀಯ ವಿದ್ವಾಂಸರು ನಮ್ಮ ದೇಶದ ಪ್ರಾಚೀನ ಸಾಹಿತ್ಯ ಮತ್ತು ಪ್ರಾಚ್ಯವಸ್ತು ಶೋಧನೆ ಮತ್ತು ಅಧ್ಯಯನವನ್ನು ನಡೆಸುತ್ತಾ ಬಂದರು. ಸುಮಾರು ೧೯೪೭ರಿಂದ ಇಂಥ ಶೋಧನೆಗಳು ಮತ್ತು ಅಧ್ಯಯನವು ತೀವ್ರವಾಗಿ ವ್ಯಾಪಕವಾಗುತ್ತಾ ಅನೇಕ ಪಟ್ಟು ಹೆಚ್ಚಾಗಿದೆ. ಅಷ್ಟಾಗಿ ಗಮನಕೊಡದಂಥ ಅಲಕ್ಷಿತ ಕ್ಷೇತ್ರಗಳೆನಿಸಿದ ಜನಪದಸಾಹಿತ್ಯ, ಸ್ಥಳನಾಮ, ಸ್ಥಳೀಯ ಪುರಾಣ ಮೊದಲಾದ ಹಲವಾರು ವಿಷಯಗಳಲ್ಲಿಯ ಐತಿಹಾಸಿಕ ಅಂಶಗಳನ್ನು ವೈಜ್ಞಾನಿಕ ವಿಧಾನಗಳಿಂದ ವಿಮರ್ಶೆ ಮಾಡಿ ಪ್ರಮಾಣಬದ್ಧ ಪ್ರಾಮಾಣಿಕ, ನಿಷ್ಪಕ್ಷಪಾತ ಸಮಗ್ರ ಇತಿಹಾಸದ ಪುನರ್ರಚನೆಯ ಪ್ರಯತ್ನ ನಡೆದಿರುವುದು ಸಂತೋಷದ ಸಂಗತಿಯಾಗಿದೆ. ಇದನ್ನು ಅತ್ಯಂತ ಅಚ್ಚುಕಟ್ಟಾಗಿ ಮುಂದುವರಿಸಿಕೊಂಡು ಹೋಗುತ್ತಿರುವ ಸಂಶೋಧನಾ ಕ್ಷೇತ್ರದ ಭರವಸೆಯ ಬೆಳಕಾಗಿರುವ ಡಾ. ಅಮರೇಶ ಯತಗಲ್ ಅವರ ಗತಾನುಶೀಲ ಕೃತಿಯಲ್ಲಿ ೧೧ ಅಲಕ್ಷಿತ ಕ್ಷೇತ್ರದ ಸಂಶೋಧನ ಬರಹಗಳಿವೆ.

ಸಮಸ್ತ ಜೀವ ಸಂಕುಲಕ್ಕೆ ಅತ್ಯಂತ ಅವಶ್ಯವಾಗಿರುವ ‘ನೀರು’ ಸಂಗ್ರಹಕ್ಕಾಗಿ ನಮ್ಮ ಪ್ರಾಚೀನರು ಕೆರೆ-ಬಾವಿಗಳನ್ನು ನಿರ್ಮಿಸುತ್ತಿದ್ದರು. ಈ ಕೆರೆ-ಬಾವಿಗಳ ನಿರ್ಮಾಣದಲ್ಲಿಯೂ ಶಿಲ್ಪಕಲೆಯ ಕಲಾತ್ಮಕತೆಯನ್ನು ನಮ್ಮ ಪೂರ್ವಜರು ಮೆರೆದಿದ್ದಾರೆ. ‘ಮುದನೂರಿನ ಕೆರೆ-ಬಾವಿಗಳು’, ‘ಲಕ್ಕುಂಡಿಯ ಕೆರೆ ಬಾವಿಗಳು’ ಎಂಬ ಎರಡು ಲೇಖನಗಳಲ್ಲಿ ಡಾ. ಅಮರೇಶ ಯತಗಲ್ ಅವರು ಕೆಲವು ಅತ್ಯಪೂರ್ವ ವಿಚಾರಗಳನ್ನು ವಿವರಿಸುತ್ತಾರೆ. ಲಕ್ಕುಂಡಿಯ ಬಾವಿಗಳ ಫೋಟೊಗಳನ್ನು ಅಳವಡಿಸಿ ಅವುಗಳಿಗೆ ನೀಡಿದ ವಿವರಣೆಯಂತೂ ಅನನ್ಯವಾಗಿದೆ. ಮುದನೂರು ವಚನಕಾರ ದಾಸಿಮಯ್ಯನವರು ಹುಟ್ಟಿದ ಊರು. ಅವರ ವಚನಗಳಲ್ಲಿ ಬರುವ ನಿಸರ್ಗಕೇಂದ್ರಿತ ವಿಚಾರಗಳನ್ನು ಪ್ರಸ್ತುತಪಡಿಸುತ್ತಲೇ ಮುದನೂರಿನಲ್ಲಿರುವ ಕೆರೆ-ಬಾವಿ-ತೀರ್ಥಗಳ ವೈವಿಧ್ಯಮಯ ಸಂಗತಿಗಳನ್ನು ನೀಡಿದ್ದಾರೆ. ಕಳೆದ ಒಂಬತ್ತು ನೂರು ವರ್ಷಗಳಿಂದ ಅಸ್ತಿತ್ವದಲ್ಲಿರುವ ಈ ಕೆರೆ-ಬಾವಿ, ಲಕ್ಷö್ಮಣ ತೀರ್ಥಗಳು ಇಂದು ಅವಜ್ಞೆಗೊಳಗಾಗಿವೆ. ಆದ್ದರಿಂದ ಇವುಗಳ ಹೂಳು ತೆಗೆದು, ನವೀಕರಣಗೊಳಿಸಿದರೆ ನೀರಿನ ದೊಡ್ಡ ಸಂಪನ್ಮೂಲವೇ ದೊರೆಯುವುದು. ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾದರೆ ಈ ಭಾಗದ ರೈತಾಪಿ ಜನರ ಆರ್ಥಿಕ ಸ್ಥಿತಿಯೂ ಸುಧಾರಿಸುವುದೆಂಬುದರತ್ತ ನಮ್ಮ ಗಮನ ಸೆಳೆಯುತ್ತಾರೆ.

‘ವೀರಗಲ್ಲುಗಳು ಮತ್ತು ಮಹಾಸತಿಗಲ್ಲುಗಳು’ ಎಂಬ ಲೇಖನ ತುಂಬ ಸುದೀರ್ಘವಾಗಿದೆ. ಯುದ್ಧದಲ್ಲಿ ಭಾಗಿಯಾಗಿ ಮಡಿದ ವೀರನ ಸ್ಮಾರಕವಾಗಿ ನಿರ್ಮಿಸುತ್ತಿದ್ದ ವೀರಗಲ್ಲುಗಳಲ್ಲಿ ಎಷ್ಟೊಂದು ವೈವಿಧ್ಯಮಯ ಪ್ರಕಾರಗಳಿವೆ ಎಂಬುದನ್ನು ಲೇಖಕರು ತುಂಬ ಮನೋಜ್ಞವಾಗಿ ವಿವರಿಸಿದ್ದಾರೆ. ಯುದ್ಧದ ವೀರಗಲ್ಲುಗಳು, ತುರುಗೋಳ್ ವೀರಗಲ್ಲುಗಳು (ಅಂದರೆ ಊರಿನ ದನಕರುಗಳನ್ನು ಸಂರಕ್ಷಿಸುವ ವೀರನ ಸ್ಮಾರಕ), ಊರಳೆವು ಸಂಬಂಧದ ವೀರಗಲ್ಲುಗಳು (ಊರಿನ ಮಾನ ಕಾಪಾಡುವ ವೀರನ ಸ್ಮಾರಕ), ಆನೆಬೇಟೆ ವೀರಗಲ್ಲುಗಳು, ಹುಲಿಬೇಟೆಯ ವೀರಗಲ್ಲುಗಳು, ಹಂದಿಬೇಟೆಯ ವೀರಗಲ್ಲುಗಳು, ಆತ್ಮಬಲಿದಾನದ ವೀರಗಲ್ಲುಗಳು ಮೊದಲಾದವುಗಳ ಸರಳ ಸಂಕ್ಷಿಪ್ತ ವಿವರಣೆ ಇಲ್ಲಿದೆ. ಈ ವಿಚಾರಗಳು ಜನಸಾಮಾನ್ಯರಿಗೂ ತಿಳಿಯುವಂತೆ ಪ್ರಸ್ತುತಪಡಿಸಿರುವುದು ಡಾ. ಅಮರೇಶ ಯತಗಲ್ ಅವರ ಬರಹದ ಶಕ್ತಿ ಎನ್ನಬೇಕು.

‘ಮಾನ್ವಿ ತಾಲ್ಲೂಕಿನ ಇತಿಹಾಸ’ ಗಮನ ಸೆಳೆಯುವ ಬರಹವಾಗಿದೆ. ರಾಯಚೂರು ಜಿಲ್ಲೆಯ ಮಾನ್ವಿ ಇಂದು ತಾಲ್ಲೂಕು ಕೇಂದ್ರವಾಗಿ ಪ್ರಸಿದ್ಧವಾಗಿದೆ. ಆದ ಹಳೆಯ ಶಿಲಾಯುಗದಿಂದಲೂ ಮಾನ್ವಿಯಲ್ಲಿ ಇತಿಹಾಸದ ಕುರುಹುಗಳಿರುವುದನ್ನು ಲೇಖಕರು ವಿವರಿಸುತ್ತ ಈ ಭಾಗದ ಶಾಸನಗಳು, ಇಲ್ಲಿ ಆಳಿದ ರಾಷ್ಟçಕೂಟ, ಕಲ್ಯಾಣ ಚಾಲುಕ್ಯ ಮೊದಲಾದ ರಾಜಮನೆತನಗಳು ಮಾನ್ವಿ ತಾಲ್ಲೂಕಿನಲ್ಲಿ ಮಾಡಿದ ಸಾಧನೆಯ ಸಂಗತಿಗಳನ್ನು ಸಾಕ್ಷೀಕರಿಸಿದ್ದಾರೆ.

‘ಮುನ್ನೂರುಕಾಪು ಜನಾಂಗ’ ಈ ತೆಲಗು ನಾಡಿನಲ್ಲಿ ಆಗಿ ಹೋದ ಪ್ರಾಚೀನ ಜನಾಂಗವೊಂದರ ಸಮಗ್ರ ಇತಿಹಾಸ ನೀಡುವ ಸಂಶೋಧನ ಲೇಖನವಿದು. ಈ ಹಿಂದೆ ಡಾ. ಎಂ. ಬಿ. ನೇಗಿನಹಾಳ ಅವರು ಕನ್ನಡ ನಾಡಿನಲ್ಲಿ ಆಗಿ ಹೋದ ಕೆಲವು ಅಲಕ್ಷಿತ ಜನಾಂಗಗಳ, ‘ಗೊಲ್ಲ ಜನಾಂಗ’, ‘ಬೇಡ ಜನಾಂಗ’ದ ಪ್ರಾಚೀನತೆ ಕುರಿತು ಸಂಶೋಧನೆ ಮಾಡಿದ್ದರು. ಇದರ ಮುಂದುವರಿಕೆ ಭಾಗವೆಂಬಂತೆ ಡಾ. ಅಮರೇಶ ಯತಗಲ್ ಅವರು ಆಂಧ್ರಪ್ರದೇಶ ಮೂಲದ ‘ಕಾಪು ಜನಾಂಗ’ದ ಹುಟ್ಟು, ಬೆಳವಣಿಗೆ, ಸಾಧನೆಗಳ ಕುರಿತು ಅರ್ಥಪೂರ್ಣವಾದ ವಿವರಗಳನ್ನು ದಾಖಲಿಸಿದ್ದಾರೆ. ‘ಬಲಿಜನಾಯ್ಡು’ ಎಂದು ಕರೆಯುವ ಈ ಮುನ್ನೂರು ಕಾಪು ಜನಾಂಗ ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರದಲ್ಲಿ ಇಂದಿಗೂ ಹದಿನೈದು ಲಕ್ಷದಷ್ಟು ಜನಸಂಖ್ಯೆ ಹೊಂದಿದೆ ಎಂಬುದನ್ನು ಹೇಳುತ್ತಾರೆ. ಈ ಜನಾಂಗ ಪ್ರಾದೇಶಿಕವಾಗಿ ಬೇರೆ ಬೇರೆ ಹೆಸರುಗಳಿಂದ ಪ್ರಚಲಿತವಾಗಿರುವುದನ್ನು ಗುರುತಿಸುತ್ತ ಅವರಲ್ಲಿರುವ ೨೮ ಒಳಪಂಗಡಗಳ ಪಟ್ಟಿಯನ್ನೇ ನೀಡಿದ್ದಾರೆ.

‘ಸುರಪುರ ಸಂಸ್ಥಾನದ ಸೇವಾವರ್ಗಗಳು’ ಎಂಬ ಲೇಖನ ಈಗಿನ ಆಡಳಿತ ವ್ಯವಸ್ಥೆಗೆ ಒಂದು ಕೈಗನ್ನಡಿಯಾಗಿದೆ. ಪ್ರಜಾತಂತ್ರದ ವ್ಯವಸ್ಥೆಯಲ್ಲಿರುವ ಆಡಳಿತ ಸೇವೆಯಂತೆ ಸುರಪುರ ಸಂಸ್ಥಾನದಲ್ಲಿದ್ದ ಆಡಳಿತ ಸೇವಾವರ್ಗಗಳ ಸಮಗ್ರ ವಿವರಣೆ ಇಲ್ಲಿದೆ. ಲೆಕ್ಕಪತ್ರಗಳನ್ನು ನಿರ್ವಹಿಸುವವರು ಸಬ್ನವೀಸ್ ಆದರೆ, ಕುದುರೆಗಳ ತರಬೇತಿ ಮತ್ತು ಮಾರಾಟ ಮಾಡುವವರು ಹುದ್ದಾರ ಎಂದು ಕರೆಸಿಕೊಳ್ಳುತ್ತಿದ್ದರು. ಹೀಗೆ ಸುಬೇದಾರ, ಕಿಲ್ಲೇದಾರ್, ಮಹಲ್ವಾರ್ ಮೊದಲಾದವ ಕರ್ತವ್ಯನಿಷ್ಠೆ ಹೇಗಿತ್ತು, ಆಡಳಿತ ಸುಸೂತ್ರವಾಗಿ ಸಾಗಲು ದಂಡಿನವರು, ಜಟ್ಟಿಯವರು, ಹವಾಲ್ದಾರರು, ಗೌಡರು, ಗೊಂದಲಿಗರು, ಬಾಳಸಂತರು, ನಾಮಸೇವಾದವರು, ಶಿಲ್ಪಿಗಳು, ದಫ್ತರ್ದಾರರು, ಸಾತಾನಿಯರು, ಆಯಗಾರರು, ರಾಜ ವೈದ್ಯರು ಇವರೆಲ್ಲರ ಪಾತ್ರ ಏನಿತ್ತು ಎಂಬುದನ್ನು ಎಳೆ ಎಳೆಯಾಗಿ ಬಿಡಿಸಿಟ್ಟಿದ್ದಾರೆ.

‘ಸಂಗೊಳ್ಳಿ ರಾಯಣ್ಣನ ಆಸ್ತಿ ವಿವಾದ ಕುರಿತ ದಾಖಲೆಗಳು : ಒಂದು ಪರಿಶೀಲನೆ’ ಲೇಖನ ಗತಕಾಲದ ಇತಿಹಾಸದ ಆಕರಗಳನ್ನು ವರ್ತಮಾನದಲ್ಲಿ ಹೇಗೆಲ್ಲ ದುರುಪಯೋಗಪಡಿಸಿಕೊಳ್ಳುತ್ತಾರೆ ಎಂಬುದಕ್ಕೆ ಸಾಕ್ಷಿ ಒದಗಿಸುವ ಬರಹವಾಗಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ಕೆಚ್ಚೆದೆಯಿಂದ ಹೋರಾಡಿ ಬ್ರಿಟಿಷ್ ಸಾಮ್ರಾಜ್ಯ ಶಾಹಿಯನ್ನೇ ನಡುಗಿಸಿದ ಗಂಡುಗಲಿ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಕನ್ನಡಿಗರ ಸ್ಫೂರ್ತಿಯ ಚೇತನ. ಇತ್ತೀಚೆಗೆ ರಾಯಣ್ಣನ ಕುರಿತು ಪ್ರೊ. ಜ್ಯೋತಿ ಹೊಸೂರ ಅವರು ಸಂಶೋಧನಾತ್ಮಕ ಗ್ರಂಥವನ್ನು ಬರೆಯುವ ಮೂಲಕ ರಾಯಣ್ಣನ ವಂಶಸ್ಥರ ಮೇಲೆ ಬೆಳಕು ಚೆಲ್ಲುವ ಕಾರ್ಯ ಮಾಡಿದ್ದರು. ಡಾ. ಅಮರೇಶ ಯತಗಲ್ ಅವರು ರಾಯಣ್ಣನ ವಂಶಸ್ಥರ ವಿಷಯವಾಗಿ ಸೃಷ್ಟಿಯಾದ ಖೊಟ್ಟಿ ದಾಖಲೆಗಳನ್ನು ಆಮೂಲಾಗ್ರವಾಗಿ ಪರಿಶೀಲಿಸಿ ವಸ್ತುನಿಷ್ಠತೆಯನ್ನು ದಾಖಲಿಸುವ ಅವರ ಈ ಬರಹ ಸಂಶೋಧಕರ ನಿಷ್ಪಕ್ಷಪಾತ್ರ ದೃಷ್ಟಿಗೆ ನಿದರ್ಶನವಾಗಿದೆ.

‘ಹನುಮನಮೂರ್ತಿ ಕಣ್ತೆರೆದ ಪ್ರಸಂಗ: ಒಂದು ವಿಮರ್ಶೆ’ ಎಂಬ ಲೇಖನ ಸಂಶೋಧಕರಾದವರು ಸಮಾಜಮುಖಿಯಾಗಿ ಹೇಗೆಲ್ಲ ಕಾರ್ಯನಿರ್ವಹಿಸಬಹುದು, ಒಬ್ಬ ಸಂಶೋಧಕನಿಂದ ಸಮಾಜಕ್ಕೆ ಆಗುವ ಲಾಭಗಳೇನು ಎಂಬುದನ್ನು ತಿಳಿಸುತ್ತದೆ. ಬೆಳಗಾವಿ ಜಿಲ್ಲೆಯ ಖಾನಾಪೂರ ತಾಲೂಕಿನ ನಂದಗಡದಲ್ಲಿ ಬ್ರಿಟಿಷರು ಸಂಗೊಳ್ಳಿ ರಾಯಣ್ಣನನ್ನು ಗಲ್ಲಿಗೇರಿಸಿದ್ದರು. ಆ ಸ್ಥಳದಲ್ಲಿ ಒಂದು ಬೃಹತ್ ಆಲದ ಮರವಿದೆ. ಅದರ ಪಕ್ಕದಲ್ಲಿ ಒಂದು ಹನುಮನ ಮೂರ್ತಿ ಇದೆ. ಕೆಲವರು ಉದ್ದೇಶಪೂರ್ವಕವಾಗಿ ಈ ಹನುಮನಮೂರ್ತಿ ಕಣ್ತೆರೆದಿದೆ ಎಂದು ಹುಯ್ಯಲೆಬ್ಬಿಸಿದರು. ಬೆಳಗಾವಿ ಜಿಲ್ಲಾಧಿಕಾರಿಗಳು ಈ ಕುರಿತು ಸಂಶೋಧನೆ ಕೈಕೊಳ್ಳಲು ಡಾ. ಅಮರೇಶ ಯತಗಲ್ ಅವರಿಗೆ ವಿನಂತಿಸಿದ ಪರಿಣಾಮವಾಗಿ, ಕ್ಷೇತ್ರಕಾರ್ಯ ಮಾಡಿ, ಪೂರ್ವಾಪರ ಪರಿಶೀಲಿಸಿ, ಅದೊಂದು ಸುಳ್ಳಿನ ಕತೆ ಎಂಬುದನ್ನು ಸಿದ್ಧಪಡಿಸಿದರು. ಇದರಿಂದ ಜನಸಾಮಾನ್ಯರ ಸುಲಿಗೆ ತಪ್ಪಿತು ಎಂದೇ ಹೇಳಬೇಕು. ಸಾಮಾನ್ಯ ಜನರು ಇಂತಹ ಊಹಾಪೋಹಗಳಿಗೆ ಒಳಗಾಗಿ ಮೂಢನಂಬಿಕೆಯಿಂದ ನಡೆದುಕೊಳ್ಳುವ ಸಂದರ್ಭದಲ್ಲಿ ಈ ಕುರಿತು ಬೆಳಕು ಚೆಲ್ಲಿ ವಾಸ್ತವ ಸತ್ಯವನ್ನು ಅರುಹುವ ಕಾರ್ಯ ಮಾಡಿದ ಡಾ. ಅಮರೇಶ ಯತಗಲ್ ಅವರಿಗೆ ಬೆಳಗಾವಿ ಜಿಲ್ಲಾಡಳಿತ ಕೃತಜ್ಞತೆಯನ್ನು ಅರ್ಪಿಸಿದ್ದು ಗಮನಿಸುವ ಅಂಶ.

‘ಸಿಂದಗಿ ತಾಲೂಕಿನ ಸ್ವಾತಂತ್ರ್ಯ ಹೋರಾಟ’ ಇತ್ತೀಚೆಗೆ ಸ್ವಾತಂತ್ರ್ಯ ಸಂಗ್ರಾಮದ ೭೫ನೇ ವರ್ಷದ ವಿಜಯೋತ್ಸವ ನಿಮಿತ್ಯ ಕನ್ನಡಿಗರು ಪುನರಾವಲೋಕನ ಮಾಡಿಕೊಳ್ಳಬೇಕಾದ ಲೇಖನವಿದು. ಇಷ್ಟು ಸುದೀರ್ಘ ವರ್ಷಗಳ ತರುವಾಯ ಒಂದು ತಾಲ್ಲೂಕು ಕೇಂದ್ರವಾಗಿಟ್ಟುಕೊಂಡು ಸುದೀರ್ಘವಾದ ವಿವರಣೆ ನೀಡುವ ಡಾ. ಅಮರೇಶ ಯತಗಲ್ ಅವರ ಪ್ರಯತ್ನ ಮೆಚ್ಚುವಂತಹದು.

‘ಜಯಚಾಮರಾಜ ಒಡೆಯರ ಕಾಲದ ಆರೋಗ್ಯ ಸುಧಾರಣಾ ಕಾರ್ಯಗಳು’ ಲೇಖನದಲ್ಲಿ ಮೈಸೂರು ಸಂಸ್ಥಾನವನ್ನು ಆಳಿದ ಜಯಚಾಮರಾಜೇಂದ್ರ ಒಡೆಯರ್ ಅವರು ಸ್ವಾತಂತ್ರö್ಯ ಸಂಗ್ರಾಮದ ಅಂತಿಮ ಘಟ್ಟ (ಕ್ರಿ.ಶ. ೧೯೪೦-೧೯೪೭)ದಲ್ಲಿ ಮಾಡಿದ ಆರೋಗ್ಯ ಸುಧಾರಣೆಯ ಸಮಗ್ರ ವಿವರಗಳು ದೊರೆಯುತ್ತವೆ. ಮಲೇರಿಯಾ, ಕಾಲರಾ, ನಾರುಹುಣ್ಣು ರೋಗ, ಕುಷ್ಠರೋಗ, ಕ್ಷಯರೋಗದಂತಹ ಆ ಕಾಲದ ಭಯಂಕರ ರೋಗಗಳ ನಿವಾರಣೆಗಾಗಿ ಕೈಕೊಂಡ ಸುಧಾರಣಾ ಯೋಜನೆಗಳು ಇಂದಿನ ಪ್ರಜಾತಂತ್ರದ ವ್ಯವಸ್ಥೆಯ ರಾಜಕೀಯ ಧುರೀಣರಿಗೂ ಮಾರ್ಗದರ್ಶಿ ಸೂತ್ರಗಳಾಗಿವೆ. ಒಡೆಯರ್ ಅವರ ಗ್ರಾಮೀಣ ಜನರ ಆರೋಗ್ಯ ಕಾಳಜಿಯ ಮಹತ್ವ ಎಷ್ಟಿತ್ತು ಎಂಬುದಕ್ಕೆ ಈ ಲೇಖನ ಉಜ್ವಲ ನಿದರ್ಶನವನ್ನು ಒದಗಿಸುತ್ತದೆ.

‘ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆ ಮತ್ತು ಸಮಾಜ’ ಎಂಬ ಕೊನೆಯ ಲೇಖನ ಇಂದು ನಮ್ಮ ಜನರ ಅವಜ್ಞೆಯಿಂದ ಹಾಳಾಗುತ್ತಿರುವ ಪ್ರಾಚೀನ ಸ್ಮಾರಕಗಳನ್ನು ಉಳಿಸುವ ಬಗೆ ಹೇಗೆ ಎಂಬುದರತ್ತ ಗಮನ ಸೆಳೆಯುತ್ತದೆ. ಪ್ರಾಚೀನ ಸ್ಮಾರಕಗಳನ್ನು ಉಳಿಸುವುದರಿಂದಾಗುವ ಪ್ರಯೋಜನ ಮತ್ತು ಸಮಾಜ ಅದರಿಂದ ಕಲಿತುಕೊಳ್ಳಬಹುದಾದ ಪಾಠ ಏನು? ಎಂಬುದನ್ನು ಈ ಬರಹದಲ್ಲಿ ಸೂಕ್ಷö್ಮವಾಗಿ ವಿವರಿಸುವ ಪ್ರಯತ್ನ ಮಾಡಿದ್ದಾರೆ.

ಅನುಬಂಧದಲ್ಲಿ ಸಾಂಸ್ಕೃತಿಕ ಪದಕೋಶ ಕೊಟ್ಟಿರುವುದು ತುಂಬ ಪ್ರಯೋಜನಕಾರಿಯಾಗಿದೆ. ಆಕರ ಗ್ರಂಥಗಳ ವಿವರ, ವಕ್ತೃಗಳ ವಿವರ ಕೊಟ್ಟಿರುವುದು ಉಪಯುಕ್ತವಾಗಿದೆ.

ಖ್ಯಾತ ಪುರಾತತ್ವ ಸಂಶೋಧಕರಾದ ಡಾ. ಎಸ್. ಕೆ. ಜೋಶಿ ಅವರು ಈ ಕೃತಿಗೆ ಅಪೂರ್ವ ಮುನ್ನುಡಿ ತೋರಣ ಕಟ್ಟಿದ್ದಾರೆ, ವಿದ್ವಾಂಸರಾದ ಪ್ರೊ. ವಸಂತ ಕುಷ್ಟಗಿ ಅವರು ‘ನುಡಿ ಬಿನ್ನಾಣ’ ಬರೆದು ಕೃತಿಯ ಮಹತ್ವವನ್ನು ಸಾರಿದ್ದಾರೆ. ಬೆನ್ನುಡಿ ಬರೆದು ಹರಸಿದ ಪ್ರೊ. ವಿಷ್ಣುಕಾಂತ ಚಟಪಲ್ಲಿ ಅವರು ‘ಈ ಕೃತಿಯು ಸಮಾಜವನ್ನು ಹಲವು ದೃಷ್ಟಿಕೋನದಿಂದ ಸೆರೆ ಹಿಡಿಯುವ ಮೂಲಕ ಇತಿಹಾಸ ಮತ್ತು ಸಂಸ್ಕೃತಿಯ ವಿವಿಧ ಆಯಾಮಗಳ ಮೇಲೆ ಬೆಳಕನ್ನು ಚೆಲ್ಲುತ್ತದೆ’ ಎಂದು ಹೇಳಿದ್ದಾರೆ.

‘ಅಲಕ್ಷಿತ ಇತಿಹಾಸದ ಕುರಿತಾಗಿ ಸಂಶೋಧನೆಗಳು ಇತ್ತಿಚೆಗೆ ನಡೆಯುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ಏಕೆಂದರೆ ಇಂದು ಸ್ಥಳೀಯ ಇತಿಹಾಸವು ಹೆಚ್ಚು ಮಹತ್ವವನ್ನು ಪಡೆದುಕೊಳ್ಳುತ್ತಿದೆ. ಚಾರಿತ್ರಿಕವಾಗಿ ಅದು ಹೆಚ್ಚು ಪ್ರಯೋಜನಕಾರಿಯೂ ಹೌದು. ಈ ನಿಟ್ಟಿನಲ್ಲಿ ಆಲೋಚಿಸುವ ಸಂಶೋಧನ ಕೃತಿಯೇ ‘ಗತಾನುಶೀಲ’ನವಾಗಿದೆ’ ಎಂದು ಸಂಶೋಧಕರಾದ ಡಾ. ಅಮರೇಶ ಯತಗಲ್ ಅವರು ಹೇಳಿರುವುದು ಔಚಿತ್ಯಪೂರ್ಣವಾಗಿದೆ.

ಕೃತಿಯ ಶೀರ್ಷಿಕೆಯೇ ಎಲ್ಲರ ಗಮನ ಸೆಳೆಯುತ್ತದೆ. ಈ ಕೃತಿಯ ಮೂಲಕ ಇತಿಹಾಸದ ಆಕರಗಳ ಮೇಲೆ ಬೆಳಕು ಬೀರುವ ಮೂಲಕ ಕನ್ನಡ ಸಂಸ್ಕೃತಿಯ ನೈಜಾನುಸಂಧಾನವನ್ನು ಪೂರೈಸಿದ ಡಾ. ಅಮರೇಶ ಯತಗಲ್ ಅವರಿಗೆ ಅನಂತ ಅಭಿನಂದನೆಗಳು.

*ಪ್ರಕಾಶ ಗಿರಿಮಲ್ಲನವರ*
ಬೆಳಗಾವಿ
ಮೊ: ೯೯೦೨೧೩೦೦೪೧

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ 

  ಸೂರ್ಯ ಮುಳುಗಿದ ಮೇಲೆ ರಾತ್ರಿ ಕತ್ತಲೆಯನ್ನು ಕಿಂಚಿತ್ತು ಕಳೆಯುವುದು ಪುಟ್ಟ ದೀಪ ಸಾಗರಕೆ ಸೇತುವೆಯ ನೀ ಕಟ್ಟಲಾದೀತೆ ? ಅಳಿಲು ಸೇವೆಯೆ ಸಾಕು - ಎಮ್ಮೆತಮ್ಮ|| ಶಬ್ಧಾರ್ಥ ಕಿಂಚಿತ್ತು = ಕೊಂಚ. ಸಾಗರ...
- Advertisement -

More Articles Like This

- Advertisement -
close
error: Content is protected !!
Join WhatsApp Group