ಭಾಲ್ಕಿ – ರಾಜ್ಯ ಸರ್ಕಾರ ಸಂವೇದನೆಯನ್ನೇ ಕಳೆದುಕೊಂಡಿದ್ದು, ಸಂಪೂರ್ಣ ಮರಣಾವಸ್ಥೆಯಲ್ಲಿದೆ.ಮುಗ್ದ ಕೊರೊನಾ ರೋಗಿಗಳು ನರಳಾಡಿ ಸಾಯುತ್ತಿದ್ದರೂ ಸ್ಪಂದಿಸದ ಸ್ಥಿತಿ ಬಂದಿರುವುದು ನಿಜಕ್ಕೂ ದುರ್ದೈವ ಇದಕ್ಕೆ ಇಂದು ನಡೆದ ಕೆಡಿಪಿ ಸಭೆಯೇ ಸಾಕ್ಷಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಹೇಳಿದ್ದಾರೆ.
ಬೀದರ್ ಜಿಲ್ಲೆಯಲ್ಲಿ ಆಡಳಿತ ಸಂಪೂರ್ಣ ಸತ್ತು ಹೋಗಿದೆಯೆಂದು ಖಂಡ್ರೆ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಅಧ್ಯಕ್ಷತೆಯಲ್ಲಿಂದು ನಡೆದ ಪ್ರಗತಿ ಪರಿಶೀಲನಾ ಸಭೆಯನ್ನು ಕಾಟಾಚಾರಕ್ಕೆ ನಡೆಸಿದಂತಿತ್ತು.
ಜಿಲ್ಲೆಯಲ್ಲಿ ಕಳೆದ 2 ವಾರಗಳಿಂದ ಸರಾಸರಿ ಎಷ್ಟು ಪ್ರಕರಣ ಹೆಚ್ಚಳವಾಗಿದೆ. ದೈನಿಕ ಪ್ರಕರಣಗಳ ಸಂಖ್ಯೆ ಯಾವ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿದೆ, ಮರಣ ದರ ಎಷ್ಟು ಏರಿದೆ, ಈ ಸರಾಸರಿಯಂತೆ ಮುಂದಿನ ದಿನಗಳಲ್ಲಿ ಯಾವ ಪ್ರಮಾಣದಲ್ಲಿ ಪ್ರಕರಣ ಹೆಚ್ಚುತ್ತದೆ.
ಅದಕ್ಕೆ ಅನುಗುಣವಾಗಿ ಕೈಗೊಳ್ಳಬೇಕಾಗಿರುವ ಕ್ರಮಗಿಳೇನು ಎಂಬ ಯಾವ ವಿಚಾರವನ್ನೂ ಚರ್ಚಿಸದೆ, ಅನಾವಶ್ಯಕವಾದ ವಿಚಾರಗಳ ಬಗ್ಗೆ ಮಾತನಾಡಿ, ಕಾಲಹರಣ ಮಾಡಿ ಸಭೆ ಬರಖಾಸ್ತು ಮಾಡಿದ್ದು ನಿಜಕ್ಕೂ ಆಡಳಿತದ ನಿಷ್ಕ್ರಿಯತೆಯನ್ನು ಮತ್ತು ಬೇಜವಾಬ್ದಾರಿತನವನ್ನು ಎತ್ತಿ ತೋರಿಸುತ್ತದೆ ಎಂದು ಖಂಡ್ರೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದು ರಾಜಕೀಯ ಮಾಡುವ ಸಮಯವಲ್ಲ, ಎಲ್ಲರೂ ಒಗ್ಗೂಡಿ ಹೋರಾಡಿ ಕರೊನಾವನ್ನು ಮಣಿಸಬೇಕಾದ ಸಮಯ. ಆದರೆ, ಸರ್ಕಾರದ ಕಾರ್ಯವೈಖರಿ ಎಲ್ಲರೂ ಆಕ್ರೋಶಗೊಳ್ಳುವಂತೆ ಮಾಡುತ್ತಿದೆ. ಹಣ ಇದ್ದೋರಿಗೆ ಮಾತ್ರ ಚಿಕಿತ್ಸೆ ಸಿಗುತ್ತಿದೆ. ಬಡವರ ಬೀದಿ ಹೆಣವಾಗುತ್ತಿದ್ದಾರೆ.
ಈಗ ಬಹುತೇಕ ಬೀದರ್ ಜಿಲ್ಲೆಯಲ್ಲಿ ಪ್ರತಿ ನಿತ್ಯ 10ರಿಂದ 15 ಮಂದಿ ಸಾವಿಗೀಡಾಗುತ್ತಿದ್ದಾರೆ, ರೆಮೆಡಿಸಿವೀರ್ ಚುಚ್ಚುಮದ್ದು ಕಾಳಸಂತೆಯಲ್ಲಿ ಮಾರಾಟವಾಗುತ್ತಿದ್ದು, ಅಗತ್ಯ ಇರುವ ಬಡ ಮತ್ತು ಮಧ್ಯಮವರ್ಗದ ರೋಗಿಗಳಿಗೆ ಲಭಿಸುತ್ತಿಲ್ಲ. ಹೀಗಾಗಿ ಆಕ್ಸಿಜನ್ ಹಾಸಿಗೆ, ವೆಂಟಿಲೇಟರ್ ಮತ್ತು ಔಷಧ ಚಿಕಿತ್ಸೆ ಸಿಗದೆ ರೋಗಿಗಳು ಸಾವಿಗೀಡಾಗುತ್ತಿದ್ದಾರೆ. ಈ ಬಗ್ಗೆ ಹಲವು ಬಾರಿ ಸರ್ಕಾರದ ಗಮನ ಸೆಳೆದರೂ ಕ್ರಮ ಕೈಗೊಳ್ಳದಿರುವುದು ಸರ್ಕಾರಕ್ಕೆ ಜನರ ಕಾಳಜಿಯೇ ಇಲ್ಲವೇ ಎಂಬ ಅನುಮಾನ ಹುಟ್ಟಿಸಿದೆ. ಇದೇನು ಕೊಲೆಗಡುಕ ಸರ್ಕಾರವೇ ಎಂದು ಪ್ರಶ್ನಿಸಿದ್ದಾರೆ.
ತತ್ ಕ್ಷಣವೇ ಸರ್ಕಾರ ಕಾರ್ಯೋನ್ಮುಖವಾಗಿ ಬೀದರ್ ಜಿಲ್ಲೆಯಲ್ಲಿ ಆಕ್ಸಿಜನ್ ಕೊರತೆ ನೀಗಿಸದಿದ್ದರೆ, ಆಕ್ಸಿಜನ್ ಹಾಸಿಗೆಗಳ ಸಂಖ್ಯೆ ಹೆಚ್ಚಿಸದಿದ್ದರೆ, ತಾಲೂಕು ಹಾಗೂ ಹೋಬಳಿ ಮಟ್ಟದಲ್ಲಿ ಕೋವಿಡ್ ಚಿಕಿತ್ಸಾ ಕೇಂದ್ರ ತೆರೆಯದಿದ್ದರೆ ನಿತ್ಯ 40-50 ಜನ ಸಾವಿಗೀಡಾಗುವ ಸ್ಥಿತಿ ಎದುರಾಗಲಿದೆ ಎಂದು ಖಂಡ್ರೆ ಎಚ್ಚರಿಕೆ ನೀಡಿದ್ದಾರೆ.
ಕೂಡಲೇ ಸರ್ಕಾರ ಬಡ ಕೊರೊನಾ ರೋಗಿಗಳ ಜೀವ ರಕ್ಷಣೆಗೆ ಮುಂದಾಗಬೇಕು. ಅಗತ್ಯ ಔಷಧ, ಹಾಸಿಗೆ, ಆಕ್ಸಿಜನ್, ರೆಮೆಡಿಸಿವಿರ್ ಇತ್ಯಾದಿ ವ್ಯವಸ್ಥೆ ಮಾಡಬೇಕು, ಇಲ್ಲದಿದ್ದರೆ ಈ ಎಲ್ಲ ಮುಗ್ಧ ರೋಗಿಗಳ ಸಾವಿಗೆ ಬಿಜೆಪಿ ಸರ್ಕಾರವೇ ಹೊಣೆಯಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು ಈಶ್ವರ ಖಂಡ್ರೆ.
ವರದಿ: ನಂದಕುಮಾರ ಕರಂಜೆ
ಟೈಮ್ಸ್ ಆಫ್ ಕರ್ನಾಟಕ, ಬೀದರ