ಹಾಸನ ಜಿಲ್ಲೆ ಅರಕಲಗೋಡು ತಾಲ್ಲೂಕು ದೊಡ್ಡಬೊಮ್ಮತಿ ಗ್ರಾಮ ಪಂಚಾಯ್ತಿಗೆ ಸೇರಿದ ಅರಸಿಕಟ್ಟೆ ಕಾವಲ್ ಗ್ರಾಮದ ಅರಸೀಕಟ್ಟೆ ಪ್ರಸಿದ್ದಿ ಹೊಂದಿದ ಧಾರ್ಮಿಕ ಕ್ಷೇತ್ರ. ಅರಕಲಗೂಡಿನಿಂದ ಕಬ್ಬಳಿಗೆರೆ ಮಾರ್ಗ ಕೊಣನೂರಿಗೆ ಹೋಗುವ ರಸ್ತೆಯಲ್ಲಿ ಸಿಗುವ ನಾಲೆ ಏರಿಯ ಮಾರ್ಗಸೂಚಿ ಫಲಕದಿಂದ ಮೂರು ಕಿ.ಮೀ. ದೂರದಲ್ಲಿ ಅರಸಿಕಟ್ಟೆಯಮ್ಮ ದೇವಾಲಯವಿದೆ. ಇಲ್ಲಿಗೆ ಕೇವಲ ಅರಕಲಗೂಡು ತಾಲ್ಲೂಕಿನಿಂದ ಅಷ್ಟೇ ಅಲ್ಲ ಹಾಸನ, ಮಡಿಕೇರಿ, ಮೈಸೂರು, ಬೆಂಗಳೂರು ಹೀಗೆ ದೂರದ ಊರುಗಳಿಂದೆಲ್ಲಾ ಭಕ್ತರು ಬರುತ್ತಾರೆ. ಹಳ್ಳಿಗಳಿಂದ ನಗರಕ್ಕೆ ಉದ್ಯೋಗ ಹುಡುಕಿ ಹೋದ ಸಾವಿರಾರು ಜನರಿಗೆ ಅದರಲ್ಲೂ ಶಾಖಾಹಾರಿಗಳಿಗೆ ಇದೊಂದು ಆಕರ್ಷಣೆಯ ಪ್ರವಾಸಿ ತಾಣ. ಭಾನುವಾರ ರಜಾ ದಿನ ಇಲ್ಲಿ ಜನಸಾಗರ. ತಮ್ಮ ಕಷ್ಟ ಕಾರ್ಪಣ್ಯಗಳಲ್ಲಿ ಈ ದೇವತೆಗೆ ಹರಕೆ ಹೊತ್ತು ಅದನ್ನು ತೀರಿಸಲು ಇಲ್ಲಿಗೆ ಬಂದು ಅಟ್ಟುಂಡು ಹೋಗುತ್ತಾರೆ. ಎರಡು ಕಾಲಿನ ಬೇಟೆ ಎಂದರೇ ಕೋಳಿ. ನಾಲ್ಕು ಕಾಲು ಎಂದರೆ ಕುರಿ ಇಲ್ಲವೇ ಹಂದಿ ಒಪ್ಪಿಸುವುದು. ಬಡವರು ಜೋಡಿ ಕೋಳಿಯನ್ನು ನಾಲ್ಕು ಕಾಲು ಲೆಕ್ಕದಲ್ಲಿ ಒಪ್ಪಿಸುತ್ತಾರೆ.
ನಾನು ಹುಟ್ಟಿದ ಗೊರೂರಿನಲ್ಲಿ ವಾಸವಿದ್ದ 45 ವರ್ಷಗಳಲ್ಲಿ ಇಲ್ಲಿಗೆ ಹತ್ತಾರು ಬಾರಿ ಬಂದಿರಬಹುದಷ್ಟೇ. ನಾನು ಹಾಸನಕ್ಕೆ ಬಂದು 17 ವರ್ಷ ಕಳೆದಿದೆ. ನನ್ನ ಮಗನಿಗೆ ಬೆಂಗಳೂರಿನಲ್ಲಿ ಕೆಲಸ ಸಿಗಲಿ ಎಂದು ನನ್ನಾಕೆ ಹರಸಿಕೊಂಡು ಆ ಹರಕೆ ತೀರಿಸಲು ನಾವು ಒಂದು ಭಾನುವಾರ ಹೋಗಿದ್ದೆವು. ಹಾಗೆಯೇ ಬಂಧು ಬಳಗವನ್ನು ಆಹ್ವಾನಿಸಿದೆವು.
ಅರಸೀಕಟ್ಟೆಗೆ ಹೆಚ್ಚಾಗಿ ಜನರು ಕಾರು ಬೈಕಿನಲ್ಲೇ ಬರುತ್ತಾರೆ. ಕೊಣನೂರಿನಿಂದ ಇಲ್ಲಿಗೆ ಆಟೋಗಳಿವೆ. ಸೀಟಿಗೆ 30 ರೂ. ನೀವೇ ಕರೆದರೆ 150. ಒಟ್ಟಿನಲ್ಲಿ ಐದು ಸೀಟು ಆಗಬೇಕಷ್ಟೇ. ಹಿಂದೆ ನಾವು ಎಲ್ಲೋ ಒಂದು ಮರದ ಕೆಳಗೆ ಅಡಿಗೆ ಮಾಡಿಕೊಂಡು ಉಟ ಮಾಡಿ ಬರುತ್ತಿದ್ದವು. ಈಗ ಈ ಪ್ರದೇಶ ಸಾಕಷ್ಟು ಅಭಿವೃದ್ದಿ ಕಂಡಿದೆ. ಅರಸಿಕಟ್ಟೆಯಮ್ಮ ಇರುವುದು ಇಲ್ಲಿನ ಕೆರೆಯೊಂದರ ಏರಿಯ ಮೇಲೆ. ಹಿಂದೆ ಕೆರೆ ತುಂಬಾ ಹೂಳು ಗಲೀಜಿನಿಂದ ಕೂಡಿತ್ತು. ದೇಗುಲದ ಮುಂದೆ ಒಪ್ಪಿಸುತ್ತಿದ್ದ ಹರಕೆ ಪ್ರಾಣಿಗಳ ರಕ್ತ ಕೆರೆಗೆ ಸೇರುತ್ತಿತು. ಈಗ ಹರಕೆ ಒಪ್ಪಿಸುವ ಜಾಗವನ್ನು ದೇಗುಲದಿಂದ ಮುಂದೆ ಕೊಂಚ ದೂರದಲ್ಲಿ ಪ್ರತ್ಯೇಕ ಬಲಿಪೀಠ ಮಾಡಿ ದೇಗುಲ ಪರಿಸರ ಸ್ವಚ್ಛವಾಗಿರಿಸಿಕೊಳ್ಳಲು ಶ್ರಮಿಸಲಾಗಿದೆ.
ವಿಶಾಲವಾದ ಕೆರೆಯ ಹೂಳು ತೆಗೆಸಿ ಮದ್ಯೆ ಸಾಕಷ್ಟು ದೊಡ್ಡದಾಗಿ ಪರಗೋಲ ನಿರ್ಮಿಸುವ ಕೆಲಸ ನಡೆದಿದೆ. ಕೇವಲ ಒಂದು ಚಾಕು ಹಿಡಿದು ಕೋಳಿ ಕುರಿ ಕಟ್ ಮಾಡಿ ಕ್ಲೀನ್ ಮಾಡಿಕೊಡುವ ಪರಿಣಿತರು ಇಲ್ಲಿ ಸಿಗುತ್ತಾರೆ. ಕುರಿ ತಲೆ ಕೋಳಿಗಳನ್ನು ಸುಟ್ಟು ಕತ್ತರಿಸಿ ಕ್ಲೀನ್ ಮಾಡಿಕೊಡುವ ಅಂಗಡಿಗಳೂ ಇವೆ.
ನಾನು ಕಳೆದ ಆಗಸ್ಟ್ ನಲ್ಲಿ ಗುಜರಾಜ್ ಪ್ರವಾಸ ಮಾಡುತ್ತಾ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು ಹುಟ್ಟಿ ಬೆಳೆದ ಮನೆಯನ್ನು ವೀಕ್ಷಿಸುತ್ತಿದ್ದೆ. ಆಗ ನನಗೊಂದು ಕರೆ ಬಂತು. ಮಾಡಿದ್ದವರು ಅರಕಲಗೊಡು ಕ್ಷೇತ್ರದ ಮಾಜಿ ಶಾಸಕರು ಶ್ರೀ ಎ.ಟಿ. ರಾಮಸ್ವಾಮಿ ಸರ್.! ನನಗೆ ಒಂದು ಕ್ಷಣ ಶಾಕ್..! ‘ಅನಂತರಾಜು, ಆಗಸ್ಟ್ 15ರಂದು ಅರಸೀಕಟ್ಟೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಆಚರಿಸುತ್ತಿದ್ದೇವೆ. ನೀವು ಬರಬೇಕು.. ಇದು ನನಗೆ ಸಂತೋಷದ ವಿಷಯ. ಆದರೆ ಬರಲಾಗದ ಪರಿಸ್ಥಿತಿ. ‘ಸರಿ, ಹಾಗಾದರೇ ನವೆಂಬರ್ 1ಕ್ಕೆ ಬನ್ನಿ. ಅಂತೆಯೇ ನೆನ್ನೆ ನಾನು ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಜಿಲ್ಲಾಧ್ಯಕ್ಷರು ಬಿ.ಎನ್.ರಾಮಸ್ವಾಮಿ ಹೋದೆವು. ಅರೇ ಅರಸೀಕಟ್ಟೆ ಈಗ ಎಷ್ಟೊಂದು ಅಭಿವೃಧ್ದಿಯಾಗಿದೆ..! ನಾವು ಈ ಹಿಂದೆ ಕೊಣನೂರಿನಿಂದ ಕಬ್ಬಳಿಗೆರೆ ರಸ್ತೆ ಮಾರ್ಗ ಬಂದು ದೇವತೆಗೆ ಕೈಮುಗಿದು ಆ ಕಡೆ ಬದಿಯಲ್ಲಿ ನಾವು ಅಡಿಗೆ ಮಾಡಿಕೊಂಡು ಊಟ ಮಾಡಿಕೊಂಡು ಬಂದಿದ್ದವು ಅಷ್ಟೇ. ಈಗ ದೇವಸ್ಥಾನ ಹಿಂಭಾಗ ವಿಶಾಲ ಜಾಗದಲ್ಲಿ ಸಾಕಷ್ಟು ಅಭಿವೃದ್ಧಿಗೊಂಡಿರುವುದು ಗಮನಿಸಿದೆ. ಬೆಳಿಗ್ಗೆ 8.30 ಹೊತ್ತಿಗೆಲ್ಲಾ ನಾವು ಅರಸೀಕಟ್ಟೆಗೆ ಹೋದವಷ್ಟೇ. ನಮ್ಮನ್ನು ಸ್ವಾಗತಿಸಿದ ಎ.ಟಿ.ಆರ್ ಸರ್, ಬನ್ನಿ ತಿಂಡಿ ತಿನ್ನಿ ಎಂದು ಕರೆದೊಯ್ದರು. ಅತ್ತ ಆ ಜಾಗದಲ್ಲಿ ನನ್ನ ಮನ ಸೆಳೆದಿತ್ತು ನಕ್ಷತ್ರವನ. ನಕ್ಷಾತ್ರಾಕಾರದ ವಿನ್ಯಾಸದಲ್ಲಿ 27 ನಕ್ಷತ್ರಗಳನ್ನು ಪ್ರತಿನಿಧಿಸುವ ಧಾರ್ಮಿಕ ಮೌಲ್ಯಗಳುಳ್ಳ 27 ಬಗೆಯ ಗಿಡಗಳನ್ನು ನೆಟ್ಟು ಬೆಳೆಸಲಾಗುತ್ತಿದೆ. ಹಾಗೇ ಪಟ್ಟಿ ಮಾಡುತ್ತಾ ನಡೆದೆ. ಉತ್ತರಾಷಾಢ ನಕ್ಷತ್ರ-ಹಲಸು ಮರ, ಪೂರ್ವಾಷಾಢ-ಅಮೃತಬಳ್ಳಿ, ಮೂಲ ನಕ್ಷತ್ರ-ಕಾಯಿ ಧೂಪ. ಜ್ಯೇಷ್ಟ-ಬೂರುಗ, ಅನುರಾಧ-ರಂಜಲು, ವೈಶಾಖ-ಬೇಲ, ಸ್ವಾತಿ-ಹೊಳೆಮತ್ತಿ, ಚಿತ್ತ-ಬಿಲ್ವಪತ್ರೆ, ಹಸ್ತ-ಅಮಟಿ, ಉತ್ತರ ಪಲ್ಗುಣ -ಬಸರಿ, ಪೂರ್ವ ಪಲ್ಗುಣ -ಮುತ್ತುಗ, ಮಘ-ಆಲ, ಆಶ್ಲೇಷ-ನಾಗಸಂಪಿಗೆ, ಪುಷ್ಯ-ಅರಳಿ, ಪುನರ್ವಸು-ಬಿದಿರು, ಆದ್ರ್ರ-ಹಿಪ್ಪಲಿ, ಮೃಗಶಿರ-ಕಾಚು, ರೋಹಿಣ -ನೇರಳೆ, ಕೃತಿಕ-ಅತ್ತಿ, ಭರಣ -ನೆಲ್ಲಿ, ಅಶ್ವಿನಿ-ಕಾಸರಕ, ರೇವತಿ-ಹಿಪ್ಪೆ, ಉತ್ತರಭಾದ್ರ-ಮಾವು, ಪೂರ್ವಭಾದ್ರ-ಬೇವು, ಶತಾಭಿಷ-ಕದಂಬ, ಧನಿಷ್ಟ-ಬನ್ನಿ, ಶ್ರಾವಣ-ಎಕ್ಕ. ಅರಕಲಗೊಡು ಪ್ರಾದೇಶಿಕ ವಲಯ ಅರಣ್ಯ ಇಲಾಖೆಯ ಸಹಕಾರದಿಂದ ತಾ. 9-10-2020ರಲ್ಲಿ ನೆರವೇರಿಸಲಾಗಿದೆ. ಮಧ್ಯೆ ಗಣಪತಿ ಮೂರ್ತಿ ಪ್ರತಿಷ್ಠಾಪಿಸಿ ನಕ್ಷತ್ರ ವನಕ್ಕೆ ಭಕ್ತಿ ಭಾವುಕತೆ ಬಿಂಬಿಸಲಾಗಿದೆ. ‘ಅನಂತರಾಜು, ಇಲ್ಲಿ ಒಂದು ಗಿಡ ಹಾಳಾದರೂ ಕೂಡಲೇ ಆ ಜಾಗದಲ್ಲಿ ಮತ್ತೊಂದು ಗಿಡ ನೆಟ್ಟು ಪವಿತ್ರ ವನವಾಗಿ ಬೆಳೆಸಲಾಗುತ್ತಿದೆ.. ಎಂದರು ಎಟಿಆರ್ ಸರ್. 9.30ಕ್ಕೆ ರಾಷ್ಟ್ರಧ್ವಜ ಮತ್ತು ಕನ್ನಡ ಧ್ವಜಾರೋಹಣ ನೆರವೇರಿಸಿ ದೇವಾನಂದ ವರಪ್ರಸಾದ್ ನಾಡಗೀತೆಗಳನ್ನು ಹಾಡಿದರು. ಇಲ್ಲಿನ ಪರಗೋಲದಲ್ಲಿ ನಾವೆಲ್ಲಾ ಕುಳಿತಿರಲು ನಮ್ಮ ಕವಿಗಳನ್ನೆಲ್ಲಾ ಇಲ್ಲಿಗೆ ಕರೆಸಿ ಪ್ರಕೃತಿ ಮಧ್ಯೆ ಏಕೆ ಕವಿಗೋಷ್ಠಿ ಏರ್ಪಡಿಸಬಾರದು..? ಎಂಬ ಯೋಚನೆ ಬಂತು. ಪಕ್ಕದಲ್ಲೇ ಇದ್ದ ರಾಮನಾಥಪುರದ ದೇವಕಿ ಚಂದ್ರಶೇಖರ್ ಅವರಲ್ಲಿ ಪ್ರಸ್ತಾಪಿಸಿದೆ.
‘ಹೇ ಮಾಡಿ ಸಾರ್, ದಾಸೋಹ ವ್ಯವಸ್ಥೆ ಮಾಡಿಸೋಣ ಎಂದರು.
ನಾವು ಧ್ವಜಾರೋಹಣ ನೆರವೇರಿಸಿದ ಜಾಗದಲ್ಲಿ ಒಂದು ನವಗ್ರಹ ವನವಿದೆ. ನವಗ್ರಹಗಳನ್ನು ಪ್ರತಿನಿಧಿಸುವ ಧಾರ್ಮಿಕ ಮೌಲ್ಯಗಳುಳ್ಳ 9 ಗಿಡಗಳನ್ನು ನೆಟ್ಟು ಬೆಳೆಸಲಾಗಿದೆ. ಶನಿ ದೇವರಿಗೆ ಬನ್ನಿ ಮರ, ರಾಹು-ಗರಿಕೆ, ಕುಜ-ರಾಚು, ಚಂದ್ರ-ಮುತ್ತಗ, ಶುಕ್ರ-ಅತ್ತಿ, ಬುಧ-ಉತ್ತರಾಣ , ಗುರು-ಅರಳಿ, ಕೇತು-ದರ್ಭೆ ಎಲ್ಲಕ್ಕೂ ಮಧ್ಯೆ ಸೂರ್ಯನಿಗೆ ಎಕ್ಕ ಮರ ಬೆಳೆಸಿದ್ದಾರೆ. ಈ ಹಸಿರು ಪರಿಸರ ಪ್ರಕೃತಿ ಪ್ರಿಯರಿಗೆ ಇಷ್ಟವಾಗುತ್ತದೆ. ಇದೇ ಜಾಗದಲ್ಲಿ ಹರಕೆ ಒಪ್ಪಿಸಲು ಬರುವವರಿಗೆ ಅಡಿಗೆ ಮನೆ ಡೈನಿಂಗ್ ಹಾಲ್ ರೂಮು ಇತ್ಯಾದಿ ಸೌಕರ್ಯ ಮಾಡಲಾಗಿದೆ. ನಾನು ಕಾರ್ಯದರ್ಶಿ ಮಾದಾಪುರ ಕೃಷ್ಣೇಗೌಡರಲ್ಲಿ ಬಾಡಿಗೆ ಬಗ್ಗೆ ವಿಚಾರಿಸಿದೆ. ಕನಿಷ್ಟ 500 ರೂ.ನಿಂದ ಪ್ರಾರಂಭಿಸಿ ಮದುವೆ ಬೀಗರ ಊಟ ಕಾರ್ಯಕ್ರಮಗಳಿಗೆ 3500 ರೂ. ದರವಿದೆ. ಈ ವಿಚಾರದಲ್ಲಿ ಕೃಷ್ಣೇಗೌಡರ ಪೋನ್ ನಂ. 9480434806 ಮತ್ತು 9632765461 ನಂ.ಗೆ ಸಂಪರ್ಕಿಸಬಹುದಾಗಿದೆ. ಈ ಹಿಂದೆ ಅಶುಚಿಯಾಗಿದ್ದ ಸ್ಥಳ ಶುಚಿತ್ವದತ್ತ ಗಮನ ಹರಿಸಿ ಪವಿತ್ರ ಧಾರ್ಮಿಕ ಕ್ಷೇತ್ರವಾಗುತ್ತಾ ಪ್ರಗತಿ ಪಥದಲ್ಲಿ ಸಾಗಿದೆ.
–ಗೊರೂರು ಅನಂತರಾಜು, ಹಾಸನ.
ಮೊ: 9449462879
ವಿಳಾಸ: ಹುಣಸಿನಕೆರೆ ಬಡಾವಣೆ, 29ನೇ ವಾರ್ಡ್, ಶ್ರೀ ಶನೀಶ್ವರ ದೇವಸ್ಥಾನ ರಸ್ತೆ, ಹಾಸನ