ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಬೆಂಗಳೂರು ನಗರದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸಹಾಯಕ ಆಡಳಿತ ಅಧಿಕಾರಿಯಾಗಿ ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಕೇಂದ್ರ ಸಂಘದ ಖಜಾಂಚಿಗಳು ಆದ ಆರ್. ಶ್ರೀನಿವಾಸ್ ರವರ 60ರ ಸಂಭ್ರಮಾಚರಣೆಯನ್ನು ಇದೆ ಅಕ್ಟೋಬರ್ 26 ಗುರುವಾರ ಸಂಜೆ 4:30 ರಿಂದ ನಗರದ ಜೆಸಿ ರಸ್ತೆಯಲ್ಲಿರುವ ರವೀಂದ್ರ ಕಲಾಕ್ಷೇತ್ರದಲ್ಲಿ ಹಂಸ ಜ್ಯೋತಿ ಟ್ರಸ್ಟ್ ಮತ್ತು ಆರ್ ಶ್ರೀನಿವಾಸ್ ಅಭಿನಂದನ ಸಮಿತಿಯ ವತಿಯಿಂದ ಆಯೋಜಿಸಲಾಗಿದೆ.
39 ವರ್ಷಗಳ ದೀರ್ಘಕಾಲಿಕ ಸಾರ್ಥಕ ಸೇವೆ ಸಲ್ಲಿಸಿ ಇದೀಗ ನಿವೃತ್ತರಾಗುತ್ತಿರುವ ಸುಸಂದರ್ಭದಲ್ಲಿ ಶ್ರೀಯುತರನ್ನು ಅಭಿನಂದಿಸಲು ಹಿತೈಷಿ ಮಿತ್ರರು ಸೇರಿ ಅರ್ಥಪೂರ್ಣ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.
ಸಾಮಾಜಿಕ -ಧಾರ್ಮಿಕ -ಶೈಕ್ಷಣಿಕ ಅನೇಕ ಉತ್ತಮ ಕಾರ್ಯಕ್ರಮಗಳನ್ನು ರೂಪಿಸಿ ಯಶಸ್ವಿ ವ್ಯಕ್ತಿಯಾಗಿ ಸಾಧನೆ ಮಾಡಿರುವ ಶ್ರೀನಿವಾಸ್ ರಂಗಭೂಮಿ ಕಲಾವಿದರು ಹಾಗೂ ಕ್ರೀಡಾಪಟುವು ಸಹ ಆಗಿದ್ದಾರೆ.
ಅಭಿನಂದನಾ ಸಮಾರಂಭದ ಆರಂಭದಲ್ಲಿ ಹಿರಿಯ ರಂಗಭೂಮಿ ಕಲಾವಿದ ಎಂ.ಮುರಳಿಧರ ಪ್ರಧಾನ ನಿರ್ವಹಣೆ ಪರಿಕಲ್ಪನೆಯಲ್ಲಿ ವೈವಿಧ್ಯಮಯ ಗೀತಲಹರಿಯನ್ನು ಗಾಯಕರಾದ ರವೀಂದ್ರ ಸೊರಗಾವಿ ,ದಿವಾಕರ ಕಶ್ಯಪ್ ,ಸವಿತಾ ಗಣೇಶ ಪ್ರಸಾದ್ ಹಾಗೂ ಚಾಂದಿನಿ ಗರ್ತಿಕೆರೆ ನಡೆಸಿಕೊಡಲಿದ್ದಾರೆ.
ವಿದುಷಿ ರೂಪಶ್ರೀ ಮಧುಸೂದನ್ ನಿರ್ದೇಶನದ ನೃತ್ಯಗಂಗಾ ಪ್ರದರ್ಶನ ಕಲಾ ಕೇಂದ್ರದವರಿಂದ ವೈವಿಧ್ಯಮಯ ಶಾಸ್ತ್ರೀಯ ನೃತ್ಯ ಲಹರಿ ಹಾಗೂ ಅಂತರಾಷ್ಟ್ರೀಯ ಖ್ಯಾತಿಯ ಡೊಳ್ ಚಂದ್ರು ನೇತೃತ್ವದಲ್ಲಿ ಡೊಳ್ಳು ಪೂಜಾ ಹಾಗೂ ವೀರಭದ್ರ ,ಕುಣಿತ ,ಜಾನಪದ ನೃತ್ಯ ಲಹರಿ ನಡೆಯಲಿದೆ.
ಶ್ರೀನಿವಾಸ ಸಾಧನೆ ಪರಿಚಯಿಸುವ ಅಭಿನವ ಸವ್ಯಸಾಚಿ ಕಿರು ಚಿತ್ರ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವರಾದ ದಿನೇಶ್ ಗುಂಡೂರಾವ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಸಂಸ್ಕೃತಿ ಚಿಂತಕ ಡಾ.ಗುರುರಾಜ ಪೋಶೆಟ್ಟಿಹಳ್ಳಿ ಮತ್ತು ಪತ್ರಕರ್ತ ಮ.ಸ ನಂಜುಂಡಸ್ವಾಮಿ ಸಂಪಾದಕತ್ವದಲ್ಲಿ ಆರ್. ಶ್ರೀನಿವಾಸ್ ಅರವತ್ತು ಅಭಿನಂದನಾ ಗ್ರಂಥ ‘ಕೌಸ್ತುಭ’ವನ್ನು ವಿಧಾನ ಪರಿಷತ್ ಸದಸ್ಯ ಎಂ. ಆರ್. ಸೀತಾರಾಮ್ ಬಿಡುಗಡೆ ಮಾಡುವರು.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಕೇಂದ್ರ ಸಂಘದ ರಾಜ್ಯಾಧ್ಯಕ್ಷರಾದ ಸಿ. ಎಸ್. ಷಡಾಕ್ಷರಿ ಅಭಿನಂದನ ನುಡಿಗಳನ್ನು ಆಡುವರು.ಮುಖ್ಯಮಂತ್ರಿಗಳ ಗೌರವ ವೈದ್ಯಕೀಯ ಸಲಹೆಗಾರ ಡಾ||ಹೆಚ್. ರವಿಕುಮಾರ್ ಸಮಾರಂಭದ ಅಧ್ಯಕ್ಷತೆ ವಹಿಸುವರು.
ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಹೆಚ್. ಎಂ. ರೇವಣ್ಣ, ತುರುವೇಕೆರೆ ಶಾಸಕ ಎಂ. ಟಿ. ಕೃಷ್ಣಪ್ಪ, ಹಿರಿಯ ಪತ್ರಕರ್ತ ರವೀಂದ್ರ ಭಟ್ ,ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯದ ಆಯುಕ್ತ ಡಾ.ರಣದೀಪ್ ಮತ್ತು ನಿರ್ದೇಶಕಿ ಡಾ.ಎಂ. ಇಂದುಮತಿ ಕರ್ನಾಟಕ ರಾಜ್ಯ ವೈದ್ಯಾಧಿಕಾರಿಗಳ ಸಂಘದ ಅಧ್ಯಕ್ಷ ಡಾ|| ವಿವೇಕ ದೊರೈ ಭಾಗವಹಿಸುವರು .
ವಿಶೇಷ ಆಹ್ವಾನಿತರಾಗಿ ಹೆಚ್ಎನ್. ಶೇಷೇಗೌಡ, ಡಾ.ಎಲ್ ಭೈರಪ್ಪ ,ಬಿ .ಪಿ.ಮಂಜೇಗೌಡ ,ಎಚ್. ಕೆ. ರಾಮು ಮೊದಲಾದವರು ಉಪಸ್ಥಿತರಿರುವರು.
ಇದೇ ಸಂದರ್ಭದಲ್ಲಿ ಎ . ಪುಟ್ಟಸ್ವಾಮಿ, ಮ.ಸ ನಂಜುಂಡಸ್ವಾಮಿ ,ಪ್ರಕಾಶ್ ಗಿಡ್ಡೆ, ಖಜ ಮೋಹಿದೀನ್ ಮತ್ತು ಸುಗುಣ ಕೃಷ್ಣಪ್ಪರವರಿಗೆ ಗೌರವ ಸನ್ಮಾನ ಏರ್ಪಡಿಸಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.