ನಾವು ನಮ್ಮವರು
ಡಾ. ಸರಸ್ವತಿ ಪಾಟೀಲ ಅವರು ಒಬ್ಬ ಅತ್ಯಂತ ಪ್ರಬುದ್ಧ, ಗಂಭೀರ, ಸಂಶೋಧನಾತ್ಮಕ ನಿಲುವಿನ, ಸಮಚಿತ್ತದ ಮಹಿಳೆ ಎಂದರೆ ತಪ್ಪಾಗಲಾರದು. ಇವರು ಬಸವ ತಿಳಿವಳಿಕೆ ಮತ್ತು ಸಂಶೋಧನ ಕೇಂದ್ರದ ದತ್ತಿ ದಾಸೋಹಿಗಳು.ತಮ್ಮ ತಾಯಿ -ತಂದೆ, ಅತ್ತೆ -ಮಾವ, ಅವರ ಪತಿ ಡಾ. ಬಿ. ಆರ್. ಪಾಟೀಲರು ಹಾಗೂ ಅವರ ಪಿ. ಎಚ್. ಡಿ ಮಾರ್ಗದರ್ಶಕರ ಹೆಸರಿನಲ್ಲಿ ದತ್ತಿ ದಾಸೋಹದ ಸೇವೆಯನ್ನು ಮಾಡಿದ್ದಾರೆ.
ಡಾ. ಸರಸ್ವತಿ ಪಾಟೀಲ ಅವರ ತಾಯಿಯವರು ಶ್ರೀಮತಿ ಗೌರಮ್ಮ, ತಂದೆಯವರು ಶ್ರೀಯುತ ಬಿ. ಎಚ್.ಸಿಂದಗಿ, ನಿವೃತ್ತ ಉಪ ನಿರ್ದೇಶಕರು,ಕೃಷಿ ಇಲಾಖೆ. ಪರಿಶ್ರಮ ಜೀವಿಗಳು,ಶಿಕ್ಷಣ ಪ್ರೇಮಿಗಳು ತಮ್ಮ ಮಕ್ಕಳ ಜೊತೆಗೆ ಬೇರೆಯವರ ಮಕ್ಕಳನ್ನು ಮನೆಯಲ್ಲಿ ಇಟ್ಟುಕೊಂಡು ಶಿಕ್ಷಣ ಕೊಡಿಸಿದ ಮಹನೀಯರು.
ಅವರು ಶಿಕ್ಷಣ ಕಾಶಿ ಎಂದೇ ಕರೆಸಿಕೊಂಡಿರುವ ಧಾರವಾಡದಲ್ಲಿ ಹುಟ್ಟಿ ಬೆಳೆದರು. ಪ್ರಾಥಮಿಕ ಶಿಕ್ಷಣವನ್ನು ಪ್ರೆಸೆಂಟೇಶನ್ ಕಾನ್ವೆಂಟ್ ಸ್ಕೂಲ್ ನಲ್ಲಿ, ಮಾಧ್ಯಮಿಕ ಶಿಕ್ಷಣವನ್ನು ಯುನಿವರ್ಸಿಟಿ ಪಬ್ಲಿಕ್ ಸ್ಕೂಲ್ ನಲ್ಲಿ, ಬಿ.ಎಸ್ಸಿ. ಕರ್ನಾಟಕ ಕಾಲೇಜಿನಲ್ಲಿ,ಎಂ.ಸ್ಸಿ ಕರ್ನಾಟಕ ವಿಶ್ವವಿದ್ಯಾನಿಲಯದಲ್ಲಿ ಪಿ.ಎಚ್. ಡಿ. ಯನ್ನು ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದಲ್ಲಿ ಮುಗಿಸಿದರು.
ಅವರ ಸಂಶೋಧನಾ ಮತ್ತು ಬೋಧನಾ ಅನುಭವ ಮೂವತ್ತೆoಟು ವರ್ಷಗಳು. ಬಿ. ಎಸ್ಸಿ ಯಲ್ಲಿ ದಕ್ಷಿಣ ಫೆಲೋಶಿಪ್, ಎಂ. ಎಸ್ಸಿ ಯಲ್ಲಿ ಯೂನಿವರ್ಸಿಟಿ ಸ್ಟೂಡೆಂಟ್ ಶಿಪ್, ಪಿ. ಎಚ್. ಡಿ ಯಲ್ಲಿ ಯು. ಜಿ. ಸಿ. ಫೆಲೋಶಿಪ್ ಇವರಿಗೆ ದೊರಕಿವೆ.
ಅವರಿಗೆ ಸೆಮಿನಾರ್ ಮತ್ತು ಕಾನ್ ಫರೆನ್ಸ್ ಗಳಲ್ಲಿ ಮಂಡನೆ ಮಾಡಿದ ಅನೇಕ ಸಂಶೋಧನಾ ಲೇಖನಗಳಿಗೆ ಪ್ರಶಸ್ತಿಗಳು ದೊರಕಿವೆ. ಎಲ್ಸ್ವೇರ್ ಪ್ರಕಾಶನದ ವಿವಿಧ ನಿಯತಕಾಲಗಳಲ್ಲಿ ಪ್ರಕಟವಾದ ಆರು ಸಂಶೋಧನಾ ಲೇಖನಗಳಿಗೆ ನೂರು ನೂರು ಡಾಲರ್ಸ್ ಪ್ರಶಸ್ತಿಗಳು ಸಿಕ್ಕಿವೆ.
ಡಾ.ಸರಸ್ವತಿ ಪಾಟೀಲ ಅವರು ಕಲ್ಬುರ್ಗಿ ವಿಶ್ವವಿದ್ಯಾಲಯದ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಮಂಡಳಿ ಹಾಗೂ ಪರೀಕ್ಷಾ ಮಂಡಳಿಯ ಸದಸ್ಯರು ಹಾಗೂ ಅಧ್ಯಕ್ಷರಾಗಿ ನಿರಂತರ ಸೇವೆ ಸಲ್ಲಿಸಿದ್ದಾರೆ. 1910 ರವರೆಗೆ ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ ಹಾಗೂ ಆಂಧ್ರಪ್ರದೇಶ, ಮಹಾರಾಷ್ಟ್ರ, ಗುಜರಾತ್, ತಮಿಳುನಾಡು, ದೆಹಲಿ ವಿಶ್ವವಿದ್ಯಾಲಯಗಳ ಅಧ್ಯಯನ ಮಂಡಳಿ ಹಾಗೂ ಪರೀಕ್ಷಾ ಮಂಡಳಿಯ ಸದಸ್ಯರಾಗಿ ಕೆಲಸ ಮಾಡಿ ದ್ದಾರೆ. ಕರ್ನಾಟಕ ಪಬ್ಲಿಕ್ ಕಮಿಷನ್ ಹಾಗೂ ಭಾರತೀಯ ಆಡಳಿತ ಮಂಡಳಿ ಪರೀಕ್ಷೆಗಳಲ್ಲಿ ಪರೀಕ್ಷಕರಾಗಿ ಅನುಭವ ಮತ್ತು ಎರಡು ಸಲ ಐ. ಎ. ಎಸ್ ಪರ್ಸನಾಲಿಟಿ ಟೆಸ್ಟ ನಲ್ಲಿ ಸಂದರ್ಶನ ಕೊಟ್ಟ ಸುಯೋಗ ಇವರಿಗೆ ಒದಗಿ ಬಂದಿದೆ. ರಾಜ್ಯದ ಹಾಗೂ ಹೊರ ರಾಜ್ಯದ ಪ್ರೊಫೆಸರ್ ಆಯ್ಕೆಯ ಕಮಿಟಿಯಲ್ಲಿ ಸದಸ್ಯರು ಸಹ ಆಗಿದ್ದರು.
ಅವರು ಹದಿಮೂರು ಪಿ.ಎಚ್. ಡಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ, ಮೂವತ್ತೊಂದು ಎಂ.ಫಿಎಲ್ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದ್ದಾರೆ. ಎಂಬತ್ತಕ್ಕೂ ಹೆಚ್ಚು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸಂಶೋಧನಾ ಲೇಖನಗಳು ಪ್ರಕಟವಾಗಿವೆ. ಐವತ್ತಕ್ಕೂ ಹೆಚ್ಚು ಕಾನ್ಫರೆನ್ಸ್ ಗಳಲ್ಲಿ ಭಾಗವಹಿಸಿ ಸಂಶೋಧನಾ ಲೇಖನಗಳನ್ನು ಮಂಡಿಸಿದ್ದಾರೆ.
ಡಾ. ಸರಸ್ವತಿ ಪಾಟೀಲ ಅವರು ಐ. ಸಿ. ಎಂ. ಆರ್. ನವದೆಹಲಿಯಲ್ಲಿ ಆರು ತಿಂಗಳು ಸಂಶೋಧನಾ ತರಬೇತಿ ಮತ್ತು ಮೈಸೂರು ಯುನಿವರ್ಸಿಟಿಯಲ್ಲಿ 15 ದಿನಗಳ ಕಾಲ ಜೆನೆಲಿಕ್ಸ್ ತರಬೇತಿ ಪಡೆದಿದ್ದಾರೆ. ಅವರು ಕಲ್ಬುರ್ಗಿ ವಿಶ್ವವಿದ್ಯಾಲಯದ ಪ್ರಾಣಿಶಾಸ್ತ್ರ ಅಧ್ಯಯನ ಹಾಗೂ ಸಂಶೋಧನಾ ವಿಭಾಗದ ಅಧ್ಯಕ್ಷರಾಗಿ ಎರಡು ಅವಧಿಗಳ ಅನುಭವ, ವಿಶ್ವವಿದ್ಯಾಲಯ ಶೈಕ್ಷಣಿಕ ಮಂಡಳಿಯ ಸದಸ್ಯರಾಗಿ ಅನುಭವ, ಕಾಲೇಜ್ ಟೀಚರ್ಸ್ ಗಳಿಗೆ ಎರಡು ಸಲ ಯು. ಜಿ. ಸಿ ಓರಿಯೆಂಟೇಷನ್ ಕೋರ್ಸ್ ನಡೆಸಿದ ಅನುಭವ, ಕಲ್ಬುರ್ಗಿ ವಿಶ್ವವಿದ್ಯಾಲಯದ ಮಹಿಳಾ ಸಂಘಟನೆಯ ಸೆಕ್ರೆಟರಿ ಆಗಿ ಆರು ವರ್ಷ ಸೇವೆ, ಪ್ರಾಣಿ ಶಾಸ್ತ್ರ ಸಂಶೋಧನೆಗೆ ಸಂಬಧಿ ಸಿದ ಎಂಟು -ಹತ್ತು ಸೆಮಿನಾರ್ ಮತ್ತು ಕಾನ್ಫರೆನ್ಸ್ ನಡೆಸಿದ ಅನುಭವ ಇವರಿಗಿದೆ.
ಡಾ. ಸರಸ್ವತಿ ಪಾಟೀಲ್ ಅವರಿಗೆ ಚಿಕ್ಕಂದಿನಿಂದಲೂ ಕಥೆ ಕಾದಂಬರಿಗಳನ್ನು ಓದುವುದು, ಕನ್ನಡದ ಸಾಹಿತ್ಯದಲ್ಲಿ ಆಸಕ್ತಿ ಇತ್ತು. ಸುಮಾರು ಹದಿನೈದ ರಿಂದ ರಿಂದ ಇಪ್ಪತ್ತು ಕನ್ನಡ ವೈಜ್ಞಾನಿಕ ಲೇಖನಗಳು ಪ್ರಕಟವಾಗಿವೆ. ವೃತ್ತಿ ಜೀವನದಲ್ಲಿ ಇದ್ದಾಗಲೂ ಕಲಬುರ್ಗಿ ಆಕಾಶವಾಣಿಯಲ್ಲಿ ಪ್ರತಿವರ್ಷ ಒಂದು ಅಥವಾ ಎರಡು ವೈಜ್ಞಾನಿಕ ಭಾಷಣಗಳು ಮತ್ತು ಅನೇಕ ಸಲ ರಸಪ್ರಶ್ನೆ ನಡೆಸಿದ್ದಾರೆ. ಮೊದಲಿನಿಂದಲೂ ಕನ್ನಡ ಸಾಹಿತ್ಯ,ವಚನ ಸಾಹಿತ್ಯಗಳಲ್ಲಿ ಆಸಕ್ತಿ.ಎರಡು ಮೂರು ವರ್ಷಗಳಿಂದ ಅಕ್ಕನ ಅರಿವು ವಚನ ಅಧ್ಯಯನ ವೇದಿಕೆ ಹಾಗೂ ಬಸವಾದಿ ಶರಣರ ಚಿಂತನ ಕೂಟಗಳ ಸಕ್ರಿಯ ಸದಸ್ಯರಾಗಿ ಶರಣ ಸಾಹಿತ್ಯದಲ್ಲಿ ಲೇಖನಗಳನ್ನು ಬರೆಯುವ ಹಾಗೂ ಚಿಕ್ಕ ಪುಟ್ಟ ಉಪನ್ಯಾಸವನ್ನು ನೀಡುವ ಹವ್ಯಾಸವನ್ನು ಬೆಳೆಸಿಕೊಂಡಿದ್ದಾರೆ.ಇದಕ್ಕೆ ಮುಖ್ಯವಾಗಿ ಈ ಸಂಘಟನೆಗಳನ್ನು ಹುಟ್ಟು ಹಾಕಿದ ಡಾ. ಶಶಿಕಾಂತ ಪಟ್ಟಣ ಅವರ ಪ್ರೇರಣೆ ಮತ್ತು ಅನೇಕ ಸದಸ್ಯರ ಬೆಂಬಲವೇ ಕಾರಣ.
ಜೀವನದಲ್ಲಿ ಇಷ್ಟೊಂದು ಸಾಧನೆಗಳನ್ನು ಮಾಡಲು ಚಿಕ್ಕಂದಿನಿಂದ ತಂದೆ ತಾಯಿ, ಒಡಹುಟ್ಟಿದವರ ಪ್ರೇರಣೆ, ಅವರ ಸಂಶೋಧನಾ ಮಾರ್ಗದರ್ಶಕರಾದ ಪ್ರೊ. ಅಪ್ಪಾಸ್ವಾಮಿ ರಾವ್, ಪತಿ ಡಾ. ಬಿ. ಆರ್. ಪಾಟೀಲರ ಹಾಗೂ ಮಕ್ಕಳ ಪ್ರೋತ್ಸಾಹ, ಸಹಾಯ ಸಹಕಾರಗಳು ಕಾರಣವೆಂದು ಅವರು ಮನಸ್ಸು ತುಂಬಿ ಹೇಳುತ್ತಾರೆ.
ಡಾ. ಸರಸ್ವತಿ ಪಾಟೀಲ ಅವರು ಯಾವುದೇ ವಿದ್ಯಾರ್ಥಿಗೆ ಅದರಲ್ಲೂ ಪಿ.ಎಚ್. ಡಿ ಸಂಶೋಧನಾ ವಿದ್ಯಾರ್ಥಿಗಳಿಗೆ ಸಂಶೋಧನೆಗಾಗಲಿ ಸಮ್ಮೇಳನಕ್ಕಾಗಲಿ ಆರ್ಥಿಕ ಅಡಚಣೆ ಉಂಟಾದಾಗ ಅವರಿಗೆ ಆರ್ಥಿಕವಾಗಿ ಸಾಮಾಜಿಕವಾಗಿ ಬೆಂಬಲವನ್ನು ನೀಡುತ್ತಿದ್ದರು. ಪ್ರಸಂಗ ಬಂದಾಗ ಮನೆಯಲ್ಲಿ ನಾಲ್ಕಾರು ತಿಂಗಳು ಉಳಿಸಿಕೊಂಡು ಅನುಕೂಲ ಮಾಡಿಕೊಡುತ್ತಿದ್ದರು.ಅವರ ಹಳ್ಳಿಗಳಿಂದ ವಿಶ್ವವಿದ್ಯಾಲಯದ ಪ್ರವೇಶವನ್ನು ಅರಸಿ ಬಂದವರಿಗೆ ಬೇರೆ ವ್ಯವಸ್ಥೆಯಾಗುವವರೆಗೆ ಮನೆಯಲ್ಲಿ ಇರಿಸಿಕೊಳ್ಳುವುದು ಸಾಮಾನ್ಯವಾಗಿತ್ತು. ಸದಾ ಸಮಾಜ ಮುಖಿಯಾಗಿ ಕಾರ್ಯ ಮಾಡುತ್ತಿದ್ದ ಪತಿಗೆ ಕೈಜೋಡಿಸುತ್ತಿದ್ದರು ಹಾಗೂ ಸಹಕಾರ ನೀಡುತ್ತಿದ್ದರು. ಇದರ ಜೊತೆಗೆ ಇಂಗಳೇಶ್ವರ, ವಿಜಯಪುರದಲ್ಲಿಯ ಕಟ್ಟಡಗಳಿಗೆ ಆರ್ಥಿಕ ನೆರವು ನೀಡಿದ್ದಾರೆ.
ಅವರಿಗೆ ತಿಳಿವಳಿಕೆ ಬಂದಾಗಿನಿಂದ ಯೋಗ ಧ್ಯಾನದಲ್ಲಿ ಬಿಡುವಿನ ವೇಳೆಯನ್ನು ಕಳೆಯುತ್ತಾರೆ. ಬಸವಾದಿ ಶರಣರ ವಚನಗಳನ್ನು ಓದಿ ಅರ್ಥೈಸಿಕೊಳ್ಳುವುದು ಇವರಿಗೆ ಅತ್ಯಂತ ಪ್ರೀತಿಯ ಕೆಲಸ. ಸರ್ವಜ್ಞನ ವಚನಗಳು, ಜಾನಪದ ಸಾಹಿತ್ಯ, ವೈಚಾರಿಕ ಸಾಹಿತ್ಯವನ್ನು ಓದಿ ಮನನ ಮಾಡಿಕೊಳ್ಳುವುದರಲ್ಲಿ ಇವರಿಗೆ ಹೆಚ್ಚಿನ ಆಸಕ್ತಿ.
ಡಾ. ಸರಸ್ವತಿ ಪಾಟೀಲ ಅವರು ಕಲ್ಬುರ್ಗಿ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಹಾಗೂ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದರೆ ಅವರ ಪತಿ ಡಾ.ಬಿ. ಆರ್.ಪಾಟೀಲ ಅವರು ರಾಸಾಯನಶಾಸ್ತ್ರದ ಪ್ರಾಧ್ಯಾಪಕರು ಕುಲ ಸಚಿವರಾಗಿಯೂ( ಮೌಲ್ಯ ಮಾಪನ) ಸೇವೆ ಸಲ್ಲಿಸಿದ್ದಾರೆ. ತಂದೆ ಬಿ.ಹೆಚ್ ಸಿಂದಗಿ (ಉಕ್ಕಲಿ) ಅವರು ಕೃಷಿ ಇಲಾಖೆಯಲ್ಲಿ ಉಪನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದರು. ಆ ಕಾಲದಲ್ಲಿ ಉನ್ನತ ಶಿಕ್ಷಣ ಪಡೆಯಲು ತಾಯಿಯವರ ಪ್ರೇರಣೆ ಮುಖ್ಯ. ಇವರ ಮಾವನವರು ಆರ್ ಎಂ ಪಾಟೀಲ್ ( ಇಂಗಳೇಶ್ವರ-ಹೆಗಡಿಹಾಳ) ಅವರು ಸಮಾಜಮುಖಿ ವ್ಯಕ್ತಿತ್ವವನ್ನು ಹೊಂದಿದವರು. ಹಾಗೂ ಸಹಕಾರಿ ಧುರೀಣರು. ಮಗಳು ಡಾ. ಹರ್ಷ, ಅಳಿಯ ಡಾ. ಆನಂದ್ ಕನಕರೆಡ್ಡಿ. ಇಬ್ಬರೂ ಮಹಾಲಿಂಗಪುರದಲ್ಲಿ ಚಿಕ್ಕ ಮಕ್ಕಳ ತಜ್ಞರು ಮತ್ತು ಇವರ ಮಗ ಡಾ. ಆನಂದ ಹಾಗೂ ಸೊಸೆ ಡಾ. ರಶ್ಮಿ ವಿಜಯಪುರದಲ್ಲಿ ಹೆಸರಾಂತ ದಂತ ವೈದ್ಯರು. ಈಗ ಡಾ. ಸರಸ್ವತಿ ಪಾಟೀಲ ಅವರು ಮಕ್ಕಳು ಮತ್ತು ಮೊಮ್ಮಕ್ಕಳೊoದಿಗೆ ತುಂಬು ಕುಟುಂಬದ ಸಂತೃಪ್ತ ಜೀವನ ನಡೆಸುತ್ತಿದ್ದಾರೆ.
ಸುಧಾ ಪಾಟೀಲ
ವಿಶ್ವಸ್ಥರು
ಬಸವ ತಿಳಿವಳಿಕೆ ಮತ್ತು ಸಂಶೋಧನ ಕೇಂದ್ರ – ಪುಣೆ